*  ಆರೋಗ್ಯ ಕಾರ್ಯಕರ್ತರಿಗೆ 3ನೇ ಡೋಸ್‌ ಲಸಿಕೆ ನೀಡಲು ಆಗ್ರಹ*  ಬೂಸ್ಟರ್‌ ಡೋಸ್‌ ನೀಡುವುದು ಒಳ್ಳೆಯದು: ಕೆಲ ಆರೋಗ್ಯ ತಜ್ಞರು*  ಕೇಂದ್ರ ಸರ್ಕಾರ ನಿರ್ಧರಿಸಬೇಕು, ರಾಜ್ಯ ಸರ್ಕಾರ ನಿರ್ಧರಿಸಲಾಗದು 

ಬೆಂಗಳೂರು(ಸೆ.20): ಕೇರಳದಲ್ಲಿ ಕೋವಿಡ್‌ ಮೂರನೇ ಅಲೆ ಪ್ರಬಲವಾಗಿರುವುದು, ಎರಡನೇ ಡೋಸ್‌ ಲಸಿಕೆ ಪಡೆದಿದ್ದವರಲ್ಲಿಯೂ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿರುವುದು, ವಿಶ್ವದ ಕೆಲ ದೇಶಗಳಲ್ಲಿ ಬೂಸ್ಟರ್‌ ಡೋಸ್‌ ನೀಡುತ್ತಿರುವುದು ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮ ರಾಜ್ಯದಲ್ಲೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ಲಸಿಕೆ ನೀಡಬೇಕು ಎಂಬ ಪ್ರಬಲ ಆಗ್ರಹ ವೈದ್ಯ ಲೋಕದಲ್ಲಿ ಕೇಳಿಬಂದಿದೆ.

ದೇಶದಲ್ಲಿ ಜನವರಿ 16ರಿಂದ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಪಡೆಯಲು ಅವಕಾಶ ಪಡೆದಿದ್ದಾರೆ. ಜನವರಿ, ಫೆಬ್ರವರಿಯಲ್ಲಿ ಲಸಿಕೆ ಪಡೆದಿದ್ದವರು ಮಾರ್ಚ್‌ ಹೊತ್ತಿಗೆ ಎರಡೂ ಡೋಸ್‌ ಕೂಡ ಪೂರ್ಣಗೊಳಿಸಿದ್ದಾರೆ. ಸೆಪ್ಟೆಂಬರ್‌ ಹೊತ್ತಿಗೆ ಇವರ ಎರಡೂ ಡೋಸ್‌ ಪೂರ್ಣಗೊಂಡು ಆರು ತಿಂಗಳು ದಾಟುತ್ತದೆ. ಆಕ್ಟೋಬರ್‌ ಹೊತ್ತಿಗೆ ಮೂರನೇ ಅಲೆ ಕಾಣಿಸಿಕೊಂಡರೆ ಮತ್ತು ಆ ವೇಳೆಗೆ ಆರೋಗ್ಯ ಸಿಬ್ಬಂದಿಯ ಪ್ರತಿಕಾಯ ಕ್ಷೀಣಗೊಂಡಿದ್ದರೆ ಅಪಾಯಕ್ಕೆ ಸಿಲುಕಬಹುದು. ಲಸಿಕೆ ಪಡೆದ ಬಳಿಕ ಪೂರ್ಣ ಪ್ರತಿಕಾಯ ಸೃಷ್ಟಿಗೆ ಹತ್ತರಿಂದ ಹದಿನಾಲ್ಕು ದಿನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೂಸ್ಟರ್‌ ಡೋಸ್‌ ಆದಷ್ಟು ಬೇಗ ನೀಡಿದರೆ ಒಳ್ಳೆಯದು ಎನ್ನುವುದು ಕೆಲ ಆರೋಗ್ಯ ತಜ್ಞರ ಅಭಿಪ್ರಾಯ.

ಸದ್ಯ ದೇಶದಲ್ಲಿ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌ ಲಸಿಕೆಯನ್ನು ವಿತರಿಸಲಾಗುತ್ತಿದ್ದು, ಇವೆಲ್ಲವೂ ಎರಡು ಡೋಸಿನ ಲಸಿಕೆಗಳು. ಈ ಲಸಿಕೆ ಪಡೆದವರಲ್ಲಿ ಎಷ್ಟು ಸಮಯ ಪ್ರತಿಕಾಯ ಇರುತ್ತದೆ ಎಂಬುದು ನಿಖರವಾಗಿ ಯಾರಿಗೂ ಗೊತ್ತಿಲ್ಲ. ಅಕ್ಟೋಬರ್‌ ಹೊತ್ತಿಗೆ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುತ್ತಿರುವ ಹಿನ್ನೆಲೆಯಲ್ಲಿ ಅಷ್ಟರೊಳಗೆ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

ಅಕ್ಟೋಬರ್‌ಗೆ 6 ತಿಂಗಳು:

ರಾಜ್ಯದಲ್ಲಿ ಮಾರ್ಚ್‌ 31ರ ಹೊತ್ತಿಗೆ 3.42 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ. ಅಕ್ಟೋಬರ್‌ ಆರಂಭದ ಹೊತ್ತಿಗೆ ಇವರ ಲಸಿಕೀಕರಣ ನಡೆದು ಆರು ತಿಂಗಳು ದಾಟಿರುತ್ತದೆ. ಅಂದರೆ, ರಾಜ್ಯದಲ್ಲಿನ ಅರ್ಧಕ್ಕಿಂತ ಹೆಚ್ಚು ಆರೋಗ್ಯ ಸಿಬ್ಬಂದಿಯ ಲಸಿಕೀಕರಣ ನಡೆದು ಆರು ತಿಂಗಳು ದಾಟಿರುತ್ತದೆ.

ಎರಡನೇ ಅಲೆ ಪ್ರಬಲವಾಗಿ ಬೀಸಿದ್ದ ಏಪ್ರಿಲ್‌, ಮೇ ತಿಂಗಳ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಯ ಪ್ರತಿಕಾಯಗಳು ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿದ್ದ ಕಾರಣ ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಾಣು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ತಂದಿರಲಿಲ್ಲ. ಆದರೆ, ಮೂರನೇ ಅಲೆ ಆರಂಭವಾಗುವ ವೇಳೆಗೆ ಈ ಪರಿಸ್ಥಿತಿ ಇರುವುದಿಲ್ಲ. ಹೀಗಾಗಿ, ಬೂಸ್ಟರ್‌ ಡೋಸ್‌ ಕೊಡಬೇಕು ಎನ್ನುವ ವಾದ ಪ್ರಬಲವಾಗುತ್ತಿದೆ.

ಕೇಂದ್ರ ಸರ್ಕಾರ ನಿರ್ಧರಿಸಬೇಕು:

ಸದ್ಯ ಲಸಿಕೆ ಪಡೆಯದಿರುವವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಬೂಸ್ಟರ್‌ ಡೋಸ್‌ ಬಗ್ಗೆ ಇನ್ನೊಂದು ತಿಂಗಳಲ್ಲಿ ತೀರ್ಮಾನ ಆಗಲಿದೆ. ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ನ ಅಗತ್ಯ ಬೀಳಬಹುದು. ಆದರೆ ಬೂಸ್ಟರ್‌ ಡೋಸ್‌ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲೇ ತೀರ್ಮಾನ ಆಗಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್‌ ಹೇಳುತ್ತಾರೆ.

3ನೇ ಡೋಸ್‌ನಿಂದ ಹಾನಿಯಿಲ್ಲ:

ಈವರೆಗೆ ಲಸಿಕೆ ಸಿಗದಿರುವವರಿಗೆ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಸಂಶಯವಿಲ್ಲ. ಅದರೆ ಬೂಸ್ಟರ್‌ ಡೋಸ್‌ ಪಡೆಯುವುದರಿಂದ ಯಾವುದೇ ಹಾನಿ ಆಗುವುದಿಲ್ಲ, ಬದಲಾಗಿ ಪ್ರಯೋಜನವಿದೆ. ಲಸಿಕೆಯ ಲಭ್ಯತೆಯನ್ನು ಗಮನಿಸಿ ಪ್ರತಿಕಾಯ ಕಡಿಮೆ ಇರುವ ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್‌ ಡೋಸ್‌ ನೀಡಿದರೆ ಒಳ್ಳೆಯದು. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡುವುದು ಸೂಕ್ತ ಎಂದು ಭಾರತೀಯ ವೈದ್ಯಕೀಯ ಸಂಘದ ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ.ಶ್ರೀನಿವಾಸ್‌ ಎಸ್‌. ಅಭಿಪ್ರಾಯ ಪಡುತ್ತಾರೆ.

ಧಾರವಾಡದಲ್ಲಿ ಲಸಿಕೆ ಕಿರಿಕ್ : ನೋ ವ್ಯಾಕ್ಸಿನ್ - ನೋ ರೇಷನ್

ಕೆಲವು ಆಸ್ಪತ್ರೆಯ ಮೂಲಗಳು ತಿಳಿಸುವಂತೆ ಹಲವು ಆರೋಗ್ಯ ಕಾರ್ಯಕರ್ತರು ಈಗಾಗಲೇ ಬೂಸ್ಟರ್‌ ಡೋಸ್‌ ಪಡೆದುಕೊಂಡಿದ್ದಾರೆ. ಒಂದು ವೇಳೆ ಸರ್ಕಾರದ ಕೋಟಾದಲ್ಲಿ ಲಸಿಕೆ ನೀಡಲು ಸಾಧ್ಯವಾಗದಿದ್ದರೆ ಹಣ ಪಾವತಿಸಿ ಲಸಿಕೆ ಪಡೆಯಲು ಅವಕಾಶ ನೀಡಬೇಕು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಈಗಲೇ ನೀಡಿದರೆ ಮುಂದೆ ಸಮಸ್ಯೆ ಕಡಿಮೆ:

ರಾಜ್ಯದಲ್ಲಿ ನಿತ್ಯ ಈಗ ಲಕ್ಷದಷ್ಟುಲಸಿಕೆ ನೀಡಲಾಗುತ್ತಿದೆ. ಆದರೆ ಪ್ರತಿದಿನ ಹತ್ತರಿಂದ ಹನ್ನೆರಡು ಮಂದಿ ಆರೋಗ್ಯ ಕಾರ್ಯಕರ್ತರಷ್ಟೇ ಮೊದಲ ಡೋಸ್‌ ಪಡೆಯುತ್ತಿದ್ದಾರೆ. ಒಂದು ವೇಳೆ ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲು ಮುಂದಾದರೂ ಸರ್ಕಾರಕ್ಕೆ ಲಸಿಕೆಯ ಹೆಚ್ಚಿನ ಹೊರೆ ಬೀಳಲಾರದು. ಕೆಲ ದೇಶಗಳಲ್ಲಿ ನಡೆಯುತ್ತಿರುವಂತೆ ಗಂಭೀರ ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಮತ್ತು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡುವ ಸ್ಥಿತಿ ಬಂದರೆ ಆಗ ಮತ್ತೆ ಲಸಿಕಾ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಆದ್ದರಿಂದ ಆದಷ್ಟುಬೇಗ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ಪಡೆಯುವ ಅವಕಾಶ ಸಿಗಬೇಕು ಎಂದು ಸಾಂಕ್ರಾಮಿಕ ರೋಗಗಳ ತಜ್ಞ ವೈದ್ಯರೊಬ್ಬರು ಅಭಿಪ್ರಾಯಪಡುತ್ತಾರೆ.