ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ಚಾಮರಾಜನಗರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದೆ. ಪ್ರಾಥಮಿಕ ಹಂತದ ಸರ್ವೆಯಲ್ಲಿ ಈ ಸುಳಿವು ದೊರೆತಿದ್ದು, ನಿಕ್ಷೇಪದ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ನಡೆಯಲಿದೆ.
ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಅರಣ್ಯ ಸಂಪತ್ತಿನ ಖನಿಜವಾಗಿತ್ತು. ಇದೀಗ ಚಿನ್ನದ ನಿಕ್ಷೇಪವನ್ನು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಪತ್ತೆ ಮಾಡಿದೆ. ದೇಶದಲ್ಲಿ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿರುವ ಮಧ್ಯೆಯೇ ಚಿನ್ನದ ಗಣಿ ಪತ್ತೆಯಾಗಿದೆ. ಚಾಮರಾಜನಗರದಲ್ಲಿ ಭಾರತದ ಭೌಗೋಳಿಕ ನಕ್ಷೆಯಲ್ಲಿ ಮಿನರಲ್ ಆಂಶಗಳನ್ನು ಪತ್ತೆ ಮಾಡುವ ವೇಳೆ ಮಿನರಲೈಸೇಷನ್ ಮ್ಯಾಪ್ ನಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಗ್ಗೆ ಸರ್ವೇ ಕಾರ್ಯ ಕೂಡ ಆರಂಭವಾಗ್ತಿದೆ. ಅದೆಲ್ಲಿ ಅಂತೀರಾ ಈ ಕುರಿತು ಒಂದು ಸ್ಟೋರಿ ನೋಡಿ.
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ತಂಡ ಇತ್ತೀಚೆಗೆ ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಲಭ್ಯತೆ ಕುರಿತು ನಡೆಸಿದ ಪ್ರಾಥಮಿಕ ಹಂತದ ಸರ್ವೇಯಲ್ಲಿ, ಹನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಲಭ್ಯವಾಗಬಹುದು ಎಂಬ ಸುಳಿವು ದೊರಕಿದೆ.ಹನೂರು ತಾಲ್ಲೂಕಿನ ಅಜ್ಜೀಪುರ, ಕೌದಳ್ಳಿ, ಆಲತ್ತೂರು ಸೇರಿ ಹಲವು ಗ್ರಾಮಗಳಲ್ಲಿ ಚಿನ್ನ ಸಹಿತ ಹಲವು ಉಪಯುಕ್ತ ಖನಿಜಗಳು ಸಿಗುವ ಸಾಧ್ಯತೆ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಮೂರು ಗ್ರಾಮಗಳಲ್ಲಿ ಖುದ್ದು ಪರಿಶೀಲನೆ ನಡೆಸಿ ಚಿನ್ನದ ನಿಕ್ಷೇಪದ ಬಗ್ಗೆ ಉಪಕರಣಗಳ ಮೂಲಕ ಶೋದ ನಡೆಸಿದ್ದಾರೆ. ಈ ಮೂಲಕ ಈ ಮೂತು ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆಯಾಗಿದೆ. ಇದಾದ ನಂತರ ಚಿನ್ನದ ನಿಕ್ಷೇಪವಿರುವ ಕೋರ್ ಏರಿಯಾದಲ್ಲಿ ಎಷ್ಟು ಟನ್ ಚಿನ್ನ ಸಿಗುತ್ತದೆ ಹಾಗು ಯಾವ ಗ್ರೇಡ್ ಚಿನ್ನ ದೊರೆಯಿತ್ತದೆ ಎಂದು ತಿಳಿಯಲಿದೆ.
ಯಾವೆಲ್ಲ ಪ್ರದೇಶದಲ್ಲಿ ಪತ್ತೆ
ಜಿಎಸ್ಐ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳ ತಂಡ ರಾಜ್ಯದಾದ್ಯಂತ ಜಿಯಾಲಜಿಕಲ್ ಮ್ಯಾಪಿಂಗ್ ಹಾಗೂ ಭೂಮಿಯೊಳಗೆ ಖನಿಜಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದರಂತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ, ಕೌದಳ್ಳಿ, ದೊಡ್ಡ ಆಲತ್ತೂರು ಗ್ರಾಮಗಳಲ್ಲಿ ಪ್ರಾಥಮಿಕ ಹಂತದ ಜಿ-ಫೋರ್ ಸರ್ವೆಯಲ್ಲಿ ಚಿನ್ನದ ಲಭ್ಯತೆಯನ್ನು ಗುರುತಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ತಿಳಿಸಿದರು.6 ತಿಂಗಳು ಸಂಶೋಧನೆ ನಡೆಯಲಿದೆ. ಆ ಅವಧಿಯಲ್ಲಿ ಚಿನ್ನದ ಲಭ್ಯತೆ ಖಚಿತವಾದರೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಚಿನ್ನವಲ್ಲದೆ, ಬೆಳ್ಳಿ, ತಾಮ್ರ ಸಹಿತ ವಿರಳ ಲೋಹಗಳ ನಿಕ್ಷೇಪ ಪತ್ತೆಯೂ ನಡೆದಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರದ ಎನ್ಎಂಇಟಿ ಜಂಟಿ ಪ್ರಾಯೋಜಕತ್ವದಲ್ಲಿ ಸರ್ವೆ ನಡೆಯುತ್ತಿದೆ. ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲು ಕನಿಷ್ಟ ಎರಡು ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದರು.
ಚಿನ್ನದ ಗಣಿಕಾರಿಕೆ ನಡೆಯಬಹುದಾ?
ಒಟ್ನಲ್ಲಿ ಚಿನ್ನದ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ಗಣಿಕಾರಿಕೆ ಮಾತುಗಳು ಕೇಳಿ ಬರುತ್ತಿದೆ. ಈ ಚಿನ್ನದ ನಿಕ್ಷೇಪದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಚಿನ್ನದ ನಿಕ್ಷೇಪವಿರುವ ಸ್ಥಳದಲ್ಲಿ ಗಣಿಕಾರಿಕೆ ಆರಂಭವಾದರೆ ಸಾವಿರಾರು ಜನರಿಗೆ ಉದ್ಯೋಗವಕಾಶಗಳು ದೊರೆಯಲಿದೆ. ಅಲ್ಲದೆ ಚಾಮರಾಜನಗರ ಜಿಲ್ಲೆಗೆ ಚಿನ್ನದ ವೈಭವ ಬರಲಿದೆ. ಮಾತ್ರವಲ್ಲ ಹಲವು ಮಂದಿ ಭೂಮಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರಬಹುದು. ಪರ್ಯಾಯ ಪರಿಹಾರವೂ ದೊರಕಬಹುದು. ಕರ್ನಾಟಕದ ಕೆಜಿಎಫ್ ಚಿನ್ನದ ಗಣಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿತ್ತು ಈಗ ಚಾಮರಾಜನಗರ ಕೆಜಿಎಫ್ ನಂತೆ ಕರ್ನಾಟಕಕ್ಕೆ ಚಿನ್ನದ ವೈಭವವನ್ನು ಮರುಕಳಿಸಲಿದ್ದು ಚಾಮರಾಜನಗರ ಚಿನ್ನದ ನಾಡಾಗಲಿದೆ.


