'ಶಿವರಾಜ್‌ ಈಗ ಕ್ಯಾನ್ಸರ್‌ನಿಂದ ಗುಣಮುಖ..' ಹೊಸವರ್ಷಕ್ಕೆ ಶುಭಸುದ್ದಿ ನೀಡಿದ ಗೀತಾ ಶಿವರಾಜ್‌ಕುಮಾರ್‌!

ಶಿವರಾಜ್‌ಕುಮಾರ್ ಅವರು ಮೂತ್ರಕೋಶದ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಅವರು ಶೀಘ್ರದಲ್ಲೇ ಚಿತ್ರರಂಗಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

Geetha Shivarajkumar says Shivarajkumar Now Cancer free Good News in New Year san

ಬೆಂಗಳೂರು (ಜ.1): ಮೂತ್ರಕೋಶದ ಕ್ಯಾನ್ಸರ್‌ನಿಂದ ಶಿವರಾಜ್‌ಕುಮಾರ್‌ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ತಿಳಿಸಿದ್ದಾಗಿ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ತಿಳಿಸಿದ್ದಾರೆ. ಹೊಸ ವರ್ಷದಂದು ಎಲ್ಲರಿಗೂ ಶುಭಕೋರಿ ಶಿವರಾಜ್‌ಕುಮಾರ್‌ ಅವರ ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ 4 ನಿಮಿಷದ ವಿಡಿಯೋ ಪೋಸ್ಟ್‌ ಮಾಡಿ, ವೈದ್ಯರು ವಿವಿಧ ರಿಪೋರ್ಟ್‌ಗಳನ್ನು ಚೆಕ್‌ ಮಾಡಿ ಶಿವಣ್ಣ ಕ್ಯಾನ್ಸರ್‌ ಫ್ರೀ ಎಂದು ತಿಳಿಸಿರುವುದಗಿ ಹೇಳಿದ್ದಾರೆ. ಶಿವರಾಜ್‌ಕುಮಾರ್‌ ಕೂಡ ಮಾತನಾಡಿದ್ದು, ಆಪರೇಷನ್‌ನಿಂದ ಚೇತರಿಕೆ ಕಾಣುತ್ತಿದ್ದು, ಶೀಘ್ರದಲ್ಲೇ ಫೀಲ್ಡ್‌ಗೆ ಇಳಿಯುವುದಾಗಿ ತಿಳಿಸಿದ್ದಾರೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.ನೀವು ಮಾಡಿದ ಪ್ರಾರ್ಥನೆಯಿಂದ ಶಿವರಾಜ್‌ಕುಮಾರ್‌ ಅವರ ಎಲ್ಲಾ ರಿಪೋರ್ಟ್‌ಗಳು ನೆಗೆಟಿವ್‌ ಎಂದು ಬಂದಿದೆ.ಕೊನೆಯಲ್ಲಿ ನಾವು ಪೆಥಾಲಜಿಸ್ಟ್‌ ರಿಪೋರ್ಟ್‌ಗೋಸ್ಕರ ಕಾಯುತ್ತಿದ್ದೆವು. ಅದೂ ಕೂಡ ಬಂದಿದ್ದು, ಅದರಲ್ಲೂ ನೆಗೆಟಿವ್‌ ಎಂದಿದೆ. ಈಗ ಶಿವರಾಜ್‌ಕುಮಾರ್‌ ಅವರು ಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿ ಎಂದು ವೈದ್ಯರು ಅಧಿಕೃತವಾಗಿ ಹೇಳಿದ್ದಾರೆ. ನಿಮ್ಮ ಪ್ರಾರ್ಥನೆ, ಆಶೀರ್ವಾದದಿಂದ ಶಿವರಾಜ್‌ಕುಮಾರ್‌ ಅವರು ಇಷ್ಟು ಚೆನ್ನಾಗಿರಲು ಸಾಧ್ಯವಾಗಿದೆ. ಇದನ್ನ ನಾನು ಜೀವನದಲ್ಲಿ ಎಂದೂ ಮರೆಯೋದಿಲ್ಲ ಎಂದು ಗೀತಾ ಶಿವರಾಜ್‌ಕುಮಾರ್‌ ವಿಡಿಯೋದಲ್ಲಿ ಹೇಳಿದ್ದಾರೆ.

ಅದಾದ ಬಳಿಕ ಮಾತನಾಡಿರುವ ಶಿವರಾಜ್‌ಕುಮಾರ್‌, 'ನನಗೂ ಭಯ ಆಗುತ್ತೆ. ಮಾತಾಡುವಾಗ ಎಲ್ಲಿ ಎಮೋಷನಲ್‌ ಆಗ್ತೀನೋ ಅಂತಾ. ಹೊರಡಬೇಕಾದಾಗ ನಾನು ಭಾವುಕನಾಗಿದ್ದೆ. ನನಗೂ ಅಂಥ ಒಂದು ಭಯ ಇತ್ತು. ಆದರೆ, ಭಯ ನೀಗಿಸೋಕೆ ಅಂತಾನೆ ಅಭಿಮಾನಿ ದೇವರುಗಳಿರ್ತಾರೆ. ಸಹ ಕಲಾವಿದರು, ಸ್ನೇಹಿತರು, ಸಂಬಂಧಿಗಳು ಹಾಗೂ ವೈದ್ಯರು ಇರುತ್ತಾರೆ. ಬೆಂಗಳೂರಿನಲ್ಲಿ ನನಗೆ ಕಿಮೋಥೆರಪಿ ಮಾಡಿದ ಡಾಕ್ಟರ್‌ಗಳು, ನರ್ಸ್‌ಗಳು ನನ್ನನ್ನು ಚೆನ್ನಾಗಿ ನೋಡಿಕೊಂಡರು.

45 ಇಡೀ ಸಿನಿಮಾವನ್ನು ನಾನು ಕಿಮೋಥೆರಪಿ ಮಾಡಿಕೊಂಡೇ ಶೂಟಿಂಗ್‌ ಮಾಡಿದ್ದೆ.ಕ್ಲೈಮ್ಯಾಕ್ಸ್ ಫೈಟ್‌ಗಳನ್ನು ಹೇಗೆ ಮಾಡಿದ್ದೆನೋ ನನಗೆ ಗೊತ್ತಿಲ್ಲ. ಇದರ ಕ್ರೆಡಿಟ್‌ ರವಿವರ್ಮನಿಗೆ ಹೋಗಬೇಕು. ಅಮೆರಿಕಕ್ಕೆ ಹೋಗೋ ದಿನ ಹತ್ತಿರ ಬಂದಾಗ ಟೆನ್ಶನ್‌ ಕೂಡ ಜಾಸ್ತಿಯಾಗಿತ್ತು. ಈ ವೇಳೆ ನನ್ನ ಜೊತೆ ಇದ್ದ ಎಲ್ಲರಿಗೂ ನಾನು ಆಭಾರಿಯಾಗಿದ್ದಾನೆ. ಇನ್ನು ಗೀತಾ ಇಲ್ಲದೆ ನಾನಿಲ್ಲ. ಆಕೆಯಿಂದ ದೊಡ್ಡ ಬೆಂಬಲ ನನಗೆ ಸಿಕ್ಕಿದೆ. ಮಧು ಬಂಗಾರಪ್ಪ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಮಗು ನೋಡಿಕೊಂಡ ಹಾಗೆ ನೋಡಿಕೊಂಡಿದ್ದಾರೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಮಿಯಾಮಿ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ನಲ್ಲೂ ಚೆನ್ನಾಗಿ ನನ್ನ ನೋಡಿಕೊಂಡಿದ್ದಾರೆ ಎಂದಿದ್ದಾರೆ.

'ತುಂಬಾ ದೊಡ್ಡ ಆಪರೇಷನ್‌ ಆಗಿದೆ. ಹಾಗಂತ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ಹೇಳುತ್ತಿದ್ದಾರೆ. ಆದರೆ, ವಿಚಾರ ಅದಲ್ಲ. ಕ್ಯಾನ್ಸರ್‌ಗೆ ಒಳಗಾಗಿದ್ದ ಯೂರಿನಲ್‌ ಬ್ಲಾಡರ್‌ (ಮೂತ್ರಕೋಶ) ತೆಗೆದಿದ್ದಾರೆ. ಈಗ ಹೊಸ ಬ್ಲಾಡರ್‌ಅನ್ನು ಹಾಕಿದ್ದಾಗಿ ತಿಳಿಸಿದ್ದಾರೆ. ಇದೇ ನಡೆದಿರೋದು. ಗೊಂದಲ ಮಾಡಿಕೊಳ್ಳಬೇಡಿ. ವಿವರವಾಗಿ ಹೇಳೋಣ ಎಂದರೆ, ಎಲ್ಲರೂ ಗಾಬರಿಯಾಗುತ್ತಾರೆ ಅನ್ನೋ ಕಾರಣಕ್ಕೆ ಹೇಳಿಲ್ಲ. ಈ ಗಾಬರಿ ನನಗಿರಲಿ. ನಿಮ್ಮ ಹಾರೈಕೆ, ಪ್ರಾರ್ಥನೆಯಿಂದ ಚೇತರಿಕೆ ಕಾಣುತ್ತಿದ್ದೇನೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

'ಶಿವಣ್ಣನ ನೋವನ್ನು ಅವನು ತೆಗೆದುಕೊಂಡ' ನೀಮೋ ಸಾವಿಗೆ ಗೀತಾ ಭಾವುಕ ಪತ್ರ!

ಹೊಸ ವರ್ಷದಲ್ಲಿ ಮತ್ತೆ ಬರುತ್ತೇನೆ. ಮೊದಲ ಒಂದು ತಿಂಗಳು ದೊಡ್ಡ ವರ್ಕ್‌ ಮಾಡಬೇಡಿ ಎಂದಿದ್ದಾರೆ. ಆಮೇಲೆ ಎಂದಿನ ಹಾಗೆ ಇರಿ ಎಂದಿದ್ದಾರೆ. ನಿಮ್ಮ ಚಾಳಿ ಬಿಚ್ಚಿಕೊಳ್ಳಿ ಎಂದಿದ್ದಾರೆ. ನನ್ನ ಚಾಳಿಯನ್ನು ಖಂಡಿತಾ ಮುಂದುವರಿಸ್ತೇನೆ. ಬಿಡಲ್ಲ. ಐ ವಿಲ್‌ ಬಿ ಬ್ಯಾಕ್‌. ಶಿವಣ್ಣ ಆಗ ಹೇಗೆದ್ದೆನೋ, ಈಗಲೂ ಹಾಗೆ ಇದ್ದೇನೆ. ಡಬಲ್‌ ಪವರ್‌ ಇದ್ದೇ ಇರುತ್ತೆ. ಡಾನ್ಸಿಂಗ್‌, ಫೈಟಿಂಗ್‌, ಲುಕ್‌ಅನ್ನು ಡಬಲ್‌ ಪವರ್‌ ಇರುತ್ತೆ. ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲ್ಲ ಎಂದು ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

ಅಮೆರಿಕಾದ ಮಿಯಾಮಿಯಲ್ಲಿ ನಡೆದ ಸರ್ಜರಿ; ಯುದ್ದ ಗೆದ್ದ ಕರುನಾಡ ಶಿವ!


 

Latest Videos
Follow Us:
Download App:
  • android
  • ios