ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಅವಕಾಶ ನೀಡದಂತೆ ಹೈಕೋರ್ಟ್ ಮೊರೆ ಹೋದ ಅಂಜುಮನ್
ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಅಂಜುಮನ್ ಎ- ಇಸ್ಲಾಂ ಸಂಸ್ಥೆಯು ಧಾರವಾಡ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದೆ.
ಹುಬ್ಬಳ್ಳಿ (ಸೆ.14) : ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಅಂಜುಮನ್ ಎ- ಇಸ್ಲಾಂ ಸಂಸ್ಥೆಯು ಧಾರವಾಡ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದೆ.
ಈ ಅರ್ಜಿಯ ವಿಚಾರಣೆ ಪ್ರಾರಂಭವಾಗಿಲ್ಲ. ಆದರೆ ನಾಳೆ ಅಥವಾ ನಾಡಿದ್ದು ವಿಚಾರಣೆಗೆ ಬರುವ ಸಾಧ್ಯತೆಯುಂಟು. ಕಳೆದ ವರ್ಷ ಗಣೇಶೋತ್ಸವ(Hubballi eedgah ganeshotsav row) ಆಚರಣೆಗೆ ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಆಗಲೂ ಕೋರ್ಟ್ ಮೊರೆ ಹೋಗಲಾಗಿತ್ತು. ಆಗ ಕೋರ್ಟ್ ಪಾಲಿಕೆಯ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ, ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಗಣೇಶೋತ್ಸವ ಆಚರಿಸಲಾಗಿತ್ತು.
ಕಾಂಗ್ರೆಸ್ ಸದಸ್ಯರ ವಿರೋಧದ ನಡುವೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ!
ಇದೀಗ ಕಳೆದ ವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಮತ್ತೆ ಈ ವರ್ಷವೂ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿ ಠರಾವು ಪಾಸ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಇದೀಗ ಅಂಜುಮನ್ ಎ- ಇಸ್ಲಾಂ ಸಂಸ್ಥೆ ಕೋರ್ಟ್ ಮೊರೆ ಹೋಗಿದೆ. ಇದೀಗ ಕೋರ್ಟ್ ಏನು ಹೇಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಸಂಜೆಯೊಳಗೆ ತಿಳಿಸಲು ಮಹಾಮಂಡಳ ಗಡುವು:
ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸೆ. 14ರ ಸಂಜೆಯೊಳಗೆ ಅವಕಾಶ ನೀಡಬೇಕು ಎಂದು ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳದ ಪದಾಧಿಕಾರಿಗಳು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಮೇಯರ್ ವೀಣಾ ಬರದ್ವಾಡಗೆ ಗಡುವು ನೀಡಿದ್ದಾರೆ.
ಪಾಲಿಕೆಯ ಇಬ್ಬರು ಪ್ರಮುಖರನ್ನು ಬುಧವಾರ ಭೇಟಿ ಮಾಡಿದ ಮಹಾಮಂಡಳದ ಅಧ್ಯಕ್ಷ ಸಂಜು ಬಡಸ್ಕರ ನೇತೃತ್ವದ ನಿಯೋಗ ಕಳೆದ ಬಾರಿಗಿಂತ ಹೆಚ್ಚು ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಲು ಕಾಲಾವಕಾಶ ಬೇಕಾಗಿದೆ. ಹಾಗಾಗಿ ವಿಳಂಬ ಮಾಡದೇ ಅನುಮತಿ ನೀಡಬೇಕು ಎದು ತಿಳಿಸಿತು.
ಆ. 31ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಠರಾವು ಪಾಸ್ ಮಾಡಲಾಗಿದ್ದು, ಅದನ್ನು ಜಾರಿಗೊಳಿಸಬೇಕೆಂದು ಪದಾಕಾರಿಗಳು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಮೇಯರ್ ಈ ಬಗ್ಗೆ ಆಯುಕ್ತರ ಜತೆ ಚರ್ಚಿಸಿ ಸೆ. 14ರ ಸಂಜೆಯೊಳಗೆ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದರು. ತದನಂತರ ಈದ್ಗಾ ಮೈದಾನಕ್ಕೂ ತೆರಳಿದ ನಿಯೋಗವು ಗಣೇಶ ಸ್ಥಾಪನೆ ಮಾಡುವ ಜಾಗೆಯನ್ನು ಸಹ ಪರಿಶೀಲಿಸಿತು. ಬಡಸ್ಕರ ಅವರೊಂದಿಗೆ ಕಾರ್ಯದರ್ಶಿ ರಘು ಯಲ್ಲಕ್ಕನವರ, ರಮೇಶ ಕದಂ, ವಿಜಯ ಕ್ಷೀರಸಾಗರ ಸೇರಿದಂತೆ ಹಲವರಿದ್ದರು.
ಈದ್ಗಾ ಮೈದಾನದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ 3 ದಿನಗಳಿಗೆ ಅನುಮತಿ ನೀಡಿ ಈಗಾಗಲೇ ಪಾಲಿಕೆ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಮತ್ತು ಸುವ್ಯವಸ್ಥೆ ಕುರಿತಾಗಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಗಣೇಶ ಪ್ರತಿಷ್ಠಾಪಿಸಲು ಕೋರಿ 4 ಮನವಿಗಳು ಪರವಾಗಿ, ಗಣೇಶೋತ್ಸವಕ್ಕೆ ವಿರೋಧವಾಗಿ 24 ಮನವಿ ಸಲ್ಲಿಕೆಯಾಗಿವೆ.
ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತರು
ಮತ್ತೆ ಮುನ್ನಲೆಗೆ ಬಂದ ಈದ್ಗಾ ಮೈದಾನ ವಿವಾದ: ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆಗೆ ಮನವಿ
ನಮ್ಮ ಅಂಜುಮನ್ ಸಂಸ್ಥೆಯಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಯಾವುದೇ ಕಾರಣಕ್ಕೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದೆಂದು ಕೋರಿದ್ದೇವೆ. ಅರ್ಜಿ ವಿಚಾರಣೆಗೆ ಬಂದಿಲ್ಲ. ಒಂದೆರಡು ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.
- ಯೂಸೂಫ್ ಸವಣೂರು, ಅಧ್ಯಕ್ಷರು, ಅಂಜುಮನ್ ಇಸ್ಲಾಂ ಸಂಸ್ಥೆ