Asianet Suvarna News Asianet Suvarna News

ಮತ್ತೆ ಮುನ್ನಲೆಗೆ ಬಂದ ಈದ್ಗಾ ಮೈದಾನ ವಿವಾದ: ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಾಲಿಕೆಗೆ ಮನವಿ

ಕಳೆದ ವರ್ಷ ಸಾಕಷ್ಟುವಿರೋಧದ ನಡುವೆ ಇಲ್ಲಿನ ಈದ್ಗಾ ಮೈದಾನ (ರಾಣಿಚೆನ್ನಮ್ಮ ಮೈದಾನ)ದಲ್ಲಿ 3 ದಿನ ಗಣೇಶೋತ್ಸವ ಆಚರಿಸಿದ್ದ ಹಿಂದು ಪರ ಸಂಘಟನೆಗಳು ಈ ಸಲವೂ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿವೆ. 

hubballi various outfits seek nod to install ganesha idol at idgah maidan gvd
Author
First Published Aug 18, 2023, 5:48 PM IST

ಹುಬ್ಬಳ್ಳಿ (ಆ.18): ಕಳೆದ ವರ್ಷ ಸಾಕಷ್ಟುವಿರೋಧದ ನಡುವೆ ಇಲ್ಲಿನ ಈದ್ಗಾ ಮೈದಾನ (ರಾಣಿಚೆನ್ನಮ್ಮ ಮೈದಾನ)ದಲ್ಲಿ 3 ದಿನ ಗಣೇಶೋತ್ಸವ ಆಚರಿಸಿದ್ದ ಹಿಂದು ಪರ ಸಂಘಟನೆಗಳು ಈ ಸಲವೂ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿವೆ. ಈ ಸಲ 11 ದಿನದ ಗಣೇಶೋತ್ಸವ ಆಚರಿಸಲು ಯೋಚನೆ ನಡೆಸಿದ್ದು, ಈ ಕುರಿತು ಕೆಲ ಸಂಘಟನೆಗಳು ಈಗಾಗಲೇ ಅನುಮತಿ ಕೋರಿ ಮಹಾನಗರ ಪಾಲಿಕೆಗೆ ಮನವಿ ಕೂಡ ಸಲ್ಲಿಸಿವೆ. ಕಳೆದ ಸಲ ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಹಿಂದುಪರ ಸಂಘಟನೆಗಳು ಆಲೋಚಿಸಿದ್ದವು. ಅದರಂತೆ ಪಾಲಿಕೆಗೆ ಮನವಿ ಸಲ್ಲಿಕೆ ಮಾಡಿದ್ದವು. 

ಇದಕ್ಕೆ ಸಾಕಷ್ಟುವಿರೋಧ ಕೂಡ ವ್ಯಕ್ತವಾಗಿತ್ತು. ಆಗ ಮಹಾನಗರ ಪಾಲಿಕೆಯೂ ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿತ್ತು.ಈ ಸಂಬಂಧ ಕೆಲ ಮುಸ್ಲಿಂ ಸಂಘಟನೆಗಳು ಹೈಕೋರ್ಚ್‌ ಮೆಟ್ಟಿಲು ಕೂಡ ಏರಿದ್ದವು. ಆದರೆ, ಪಾಲಿಕೆ ಆಸ್ತಿಯಾಗಿರುವುದರಿಂದ ಗಣೇಶೋತ್ಸವ ಆಚರಿಸುವುದು ಬಿಡುವುದು ಅದರ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿತ್ತು. ಅದರಂತೆ ಮಹಾನಗರ ಪಾಲಿಕೆಯೂ ಸಮಿತಿ ವರದಿ ಹಾಗೂ ಪರ ವಿರೋಧ ಅಭಿಪ್ರಾಯ ಆಲಿಸಿ ಕೊನೆಗೆ 3ದಿನಗಳ ಕಾಲ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿತ್ತು. ಅದರಂತೆ 3 ದಿನಗಳ ಕಾಲ ಗಣೇಶೋತ್ಸವನ್ನು ಭಾರೀ ಪೊಲೀಸ್‌ ಭದ್ರತೆಯೊಂದಿಗೆ ಈದ್ಗಾ ಮೈದಾನದಲ್ಲಿ ಆಚರಿಸಲಾಗಿತ್ತು.

ಸೌಜನ್ಯ ಪ್ರಕರಣ ಮರು ತನಿಖೆಯಾಗಲಿ: ಪ್ರಮೋದ್‌ ಮುತಾಲಿಕ್‌

ನಿನ್ನೆ ಸಭೆ; ಇವತ್ತು ಮನವಿ: ಕಳೆದ ವರ್ಷ 3 ದಿನಗಳ ಮಟ್ಟಿಗೆ ಅಷ್ಟೇ ಗಣೇಶೋತ್ಸವ ಆಚರಿಸಲಾಗಿತ್ತು.ಈ ವರ್ಷ 11 ದಿನಗಳ ಕಾಲ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ರಾಣಿ ಚೆನ್ನಮ್ಮ ಗಜಾನನ ಉತ್ಸವ ಸಮಿತಿ ನಿರ್ಣಯ ಕೈಗೊಂಡಿದೆ. ಬುಧವಾರ ಈ ಸಂಬಂಧ ಇಲ್ಲಿನ ಮೂರು ಸಾವಿರ ಮಠದಲ್ಲಿ ಸಭೆ ನಡೆಸಿರುವ ಸಮಿತಿ ಅದಕ್ಕಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಈ ಸಲ 11ದಿನಕ್ಕೆ ಅನುಮತಿ ಪಡೆದು, ಪ್ರತಿ ದಿನ ಸಂಜೆ ಎರಡರಿಂದ ಮೂರು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಲಾಯಿತು. ಆ. 21ರಂದು ಪಾಲಿಕೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಹನುಮಂತಸಾ ನಿರಂಜನ ತಿಳಿಸಿದ್ದಾರೆ.

ಈ ನಡುವೆ ಕೆಲವೊಂದಿಷ್ಟು ಹಿಂದುಪರ ಸಂಘಟನೆಗಳು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಗಣೇಶೋತ್ಸವ ಆಚರಿಸಲು ಅನುಮತಿ ಕೋರಿವೆ. ಶ್ರೀರಾಮಸೇನೆ ಹಾಗೂ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಂಡಳದ ಕಾರ್ಯಕರ್ತರು ಪಾಲಿಕೆ ಆಯಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಈ ಸಲ 11 ದಿನಗಳ ಕಾಲ ಉತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಕೋರಿದೆ. ಒಂದು ವೇಳೆ ಅನುಮತಿ ಕೊಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. 

ಇಸ್ಲಾಂ ಧರ್ಮದವರೇನಾದರೂ ಅಡ್ಡಿಯುಂಟು ಮಾಡಿದರೆ ಅವರ ಪ್ರಾರ್ಥನೆಗೆ ನಾವು ಅಡ್ಡಿಯನ್ನುಂಟು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ಅನುಮತಿ ನೀಡುವುದನ್ನು ನಿರಾಕರಿಸಿದರೆ ಪರಿಣಾಮ ನೆಟ್ಟಗಿರಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್‌ ಇಲಾಖೆಯದ್ದು. ಅವರ ಕಡೆ ಆಗದಿದ್ದಲ್ಲಿ ನಾವು ಮಾಡಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಈ ವೇಳೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ವಿಭಾಗ ಅಧ್ಯಕ್ಷ ಗದಿಗೆಪ್ಪ ಕುರವತ್ತಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ರಾಜು ಗಾಡಗೋಳಿ,ಮಂಜು ಕಾಟಕರ, ಪ್ರವೀಣ ಮಾಳದಕರ ಸೇರಿದಂತೆ ಹಲವರಿದ್ದರು.

ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳದ ಕಾರ್ಯಕರ್ತರು ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ 3 ದಿನ ಅತ್ಯಂತ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲಾಗಿತ್ತು.ಅದರಂತೆ ಈ ಸಲವೂ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲಾಗುವುದು.ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತೇವೆ.ಈ ವರ್ಷ 11 ದಿನ ಆಚರಿಸಬೇಕೆಂದು ನಿರ್ಧರಿಸಿದ್ದೇವೆ. ಆದ ಕಾರಣ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕೆಂದು ಕೋರಿದೆ.

ಬಿಜೆಪಿ ಬಿಟ್ಟು ಜೆಡಿ​ಎಸ್‌ ಸೇರಿದ್ದ ಆಯನೂರು ಮಂಜುನಾಥ್‌ ಈಗ ಕಾಂಗ್ರೆಸ್‌ಗೆ?

ಈ ವೇಳೆ ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್‌, ಕಾರ್ಯದರ್ಶಿ ರಘು ಯಲ್ಲನವರ ಸೇರಿದಂತೆ ಹಲವರು ಮನವಿ ಸಲ್ಲಿಸಿದ್ದಾರೆ. ಇದೀಗ ಮಹಾನಗರ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಏನು ಮಾಡುತ್ತದೆ.ಈ ಸಲ ಗಣೇಶೋತ್ಸವಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ? ಕಳೆದ ಬಾರಿಯಂತೆ 3 ದಿನದ ಮಟ್ಟಿಗೆ ಮಾತ್ರ ಅನುಮತಿ ಸಿಗುತ್ತದೆಯೋ ಅಥವಾ 11 ದಿನ ಆಚರಣೆಗೆ ಅನುಮತಿ ಸಿಗುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಿದೆ.

Follow Us:
Download App:
  • android
  • ios