ದಕ್ಷಿಣ ಆಫ್ರಿಕಾದಿಂದ ಮರಳಿದ ಬಳಿಕ ಮಹಾತ್ಮ ಗಾಂಧೀಜಿಯವರು ಡಿ.ವಿ. ಗುಂಡಪ್ಪನವರ ಆಹ್ವಾನದ ಮೇರೆಗೆ 1915ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದರು. ಈ ವೇಳೆ ಅವರು ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ, ಲಾಲ್‌ಬಾಗ್‌ನಲ್ಲಿ ಸನ್ಮಾನ ಸ್ವೀಕರಿಸಿದರು. ಅಂದಿನ ರೋಚಕ ಘಟನೆಗಳು ಇಲ್ಲಿವೆ.

ಮತ್ತೊಂದು ಅಕ್ಟೋಬರ್ ಬಂದಿದೆ. ಇದರ ಜೊತೆಗೆ ಮಹಾತ್ಮ ಗಾಂಧೀಜಿಯ ಮತ್ತೊಂದು ಜನ್ಮದಿನವೂ ಬಂದಿದೆ. ಗಾಂಧೀಜಿಯ ಬಗ್ಗೆ ಮಾತನಾಡಲು ಇದಕ್ಕಿಂತ ಉತ್ತಮ ಸಮಯ ಇನ್ನೇನು ಬೇಕು? ಅದರಲ್ಲೂ ಗಾಂಧೀಜಿ ಮೊದಲ ಬಾರಿಗೆ ಬೆಂಗಳೂರಿಗೆ ಯಾವಾಗ ಮತ್ತು ಹೇಗೆ ಬಂದರು ಎಂಬುದನ್ನು ತಿಳಿದುಕೊಳ್ಳಲು ಇದು ಸರಿಯಾದ ಸಂದರ್ಭ.

1914ರ ಜನವರಿ 21ರಂದು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವಲಸಿಗರ ಹಕ್ಕುಗಳಿಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ಅಂತ್ಯ ಹಾಡಿದ ಗಾಂಧೀಜಿ-ಸ್ಮಟ್ಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ಸರ್ಕಾರದ ವಿರುದ್ಧ ಗಾಂಧೀಜಿ ನಡೆಸಿದ್ದ 20 ವರ್ಷಗಳ ಅಹಿಂಸಾತ್ಮಕ ಹೋರಾಟಕ್ಕೆ ತೃಪ್ತಿಕರ ಅಂತ್ಯ ಸಿಕ್ಕಿತು. ಆರು ತಿಂಗಳ ಬಳಿಕ ಜೂನ್ 26ರಂದು ಇಂಡಿಯನ್ ರಿಲೀಫ್ ಆಕ್ಟ್ ದಕ್ಷಿಣ ಆಫ್ರಿಕಾದ ಕಾನೂನಿನ ಭಾಗವಾಯಿತು. ಇದರಿಂದ ಗಾಂಧೀಜಿ ತಮ್ಮ ಮಾರ್ಗದರ್ಶಕರಾಗಿದ್ದ ಭಾರತೀಯ ರಾಜಕಾರಣಿ ಹಾಗೂ ಸಮಾಜ ಸುಧಾರಕ ಗೋಪಾಲಕೃಷ್ಣ ಗೋಖಲೆ ಅವರ ಸಲಹೆಯನ್ನು ಪಾಲಿಸಿ ಭಾರತಕ್ಕೆ ಮರಳಲು ಸಾಧ್ಯವಾಯಿತು. ಭಾರತಕ್ಕೆ ಬಂದು ಸ್ವರಾಜ್ಯಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡೆಸುತ್ತಿದ್ದ ಹೋರಾಟದಲ್ಲಿ ಕೈಜೋಡಿಸುವುದು ಅವರ ಉದ್ದೇಶವಾಗಿತ್ತು.

ಡಿಸೆಂಬರ್‌ನಲ್ಲಿ ಭಾರತಕ್ಕೆ ಹೊರಡುವ ಹಡಗನ್ನು ಹತ್ತಿದ ಗಾಂಧೀಜಿ

ಜುಲೈ 28ರಂದು ಮೊದಲ ವಿಶ್ವಯುದ್ಧ ಆರಂಭವಾದ ಒಂದು ವಾರದ ಬಳಿಕ, ಆಗಸ್ಟ್ 4ರಂದು ಗಾಂಧೀಜಿ ಲಂಡನ್‌ಗೆ ತಲುಪಿದರು. ಅಲ್ಲಿಂದ ಭಾರತಕ್ಕೆ ಬರುವ ಮೊದಲು ಗೋಖಲೆ ಅವರನ್ನು ಭೇಟಿಯಾಗಬೇಕಿತ್ತು. ಬ್ರಿಟಿಷರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವು ನೀಡಿದರೆ, ಭಾರತದ ಸ್ವರಾಜ್ಯದ ಬೇಡಿಕೆಗೆ ಅದು ಸಹಾಯವಾಗಬಹುದು ಎಂದು ಗಾಂಧೀಜಿ ಅಂದು ನಂಬಿದ್ದರು. ಈ ಕಾರಣದಿಂದ ಗಾಯಗೊಂಡ ಬ್ರಿಟಿಷ್ ಸೈನಿಕರ ಆರೈಕೆಗಾಗಿ ಅವರು ಇಂಡಿಯನ್ ವಾಲಂಟೀರ್ ಆಂಬ್ಯುಲೆನ್ಸ್ ಕಾರ್ಪ್ಸ್‌ ಅನ್ನು ಸ್ಥಾಪಿಸಿದರು. ಕೊನೆಗೆ ಡಿಸೆಂಬರ್‌ನಲ್ಲಿ ಭಾರತಕ್ಕೆ ಹೊರಡುವ ಹಡಗನ್ನು ಹತ್ತಿದ ಗಾಂಧೀಜಿ, 1915ರ ಜನವರಿ 9ರಂದು ಬಾಂಬೆಗೆ ತಲುಪಿದರು. ದುರಂತವೆಂದರೆ, 45 ವರ್ಷದ ಗಾಂಧೀಜಿಗಿಂತ ಕೇವಲ ಮೂರು ವರ್ಷ ದೊಡ್ಡವರಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರು ತೀವ್ರ ದಣಿವಿನಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ ಫೆಬ್ರವರಿ 19ರಂದು ನಿಧನರಾದರು! ಸ್ನೇಹಿತನನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಗೋಖಲೆ ಅವರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಗಾಂಧೀಜಿ ನಿರ್ಧರಿಸಿದರು. ಯಾವುದೇ ರಾಜಕೀಯ ಹೋರಾಟ ಆರಂಭಿಸುವ ಮೊದಲು ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರು ದೇಶಾದ್ಯಂತ ಪ್ರವಾಸ ಆರಂಭಿಸಿದರು.

ಗಾಂಧೀಜಿ ಪ್ರವಾಸ ಎಲ್ಲೆಲ್ಲಿ?

ಅಹಮದಾಬಾದ್, ಪೂನಾ, ಕಲ್ಕತ್ತಾ, ರಂಗೂನ್, ಶಾಂತಿನಿಕೇತನ ಮತ್ತು ದೆಹಲಿಗೆ ಭೇಟಿ ನೀಡಿದ ಬಳಿಕ ಏಪ್ರಿಲ್ 17ರಂದು ಗಾಂಧೀಜಿ ಮದ್ರಾಸ್‌ಗೆ ಬಂದರು. ಮದ್ರಾಸ್‌ನ ಗೋಖಲೆ ಕ್ಲಬ್ ನೀಡಿದ ಆಹ್ವಾನದ ಮೇರೆಗೆ ಅವರು ಅಲ್ಲಿಗೆ ತೆರಳಿದ್ದರು. ಪ್ರಭಾವಿ ಪತ್ರಕರ್ತ ಮತ್ತು ಪ್ರಕಾಶಕರಾಗಿದ್ದ ಜಿಎ ನಟೇಸನ್ ಈ ಕ್ಲಬ್‌ನ ಪ್ರಮುಖ ಸದಸ್ಯರಾಗಿದ್ದರು. 1909ರಲ್ಲಿ ನಟೇಸನ್ ಇಂಡಿಯನ್ ಸೌತ್ ಆಫ್ರಿಕಾ ಲೀಗ್‌ ಅನ್ನು ಸ್ಥಾಪಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದ ಭಾರತೀಯರ ಹೋರಾಟಕ್ಕೆ ಹಣ ಮತ್ತು ಬೆಂಬಲ ಒದಗಿಸುವ ಉದ್ದೇಶ ಈ ಸಂಘಟನೆಯದ್ದಾಗಿತ್ತು. ಈ ವೇಳೆಗೆ ನಟೇಸನ್ ಗಾಂಧೀಜಿಯ ಆಪ್ತರಾಗಿದ್ದರು.

ಗಾಂಧೀಜಿಯನ್ನು ಬೆಂಗಳೂರಿಗೆ ಆಹ್ವಾನಿಸಿದ್ದು ಯಾರು?

ದಕ್ಷಿಣ ಆಫ್ರಿಕಾದ ಹೋರಾಟಕ್ಕೆ ನಟೇಸನ್ ಅವರ ಮೂಲಕ ಉದಾರವಾಗಿ ಹಣ ನೀಡಿದ ಭಾರತೀಯ ರಾಜಮನೆತನದವರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರೂ ಒಬ್ಬರಾಗಿದ್ದರು. ಹೀಗಾಗಿ ಮೈಸೂರಿನ ಲೇಖಕ, ಕವಿ, ತತ್ವಜ್ಞಾನಿ ಹಾಗೂ ಗೋಖಲೆ ಅವರ ಕಟ್ಟಾ ಅನುಯಾಯಿಯಾಗಿದ್ದ ಡಿವಿ ಗುಂಡಪ್ಪ (ಡಿವಿಜಿ) ಅವರು ಗಾಂಧೀಜಿಯನ್ನು ಬೆಂಗಳೂರಿಗೆ ಆಹ್ವಾನಿಸಿದಾಗ, ಗಾಂಧೀಜಿ ಅದನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸುವುದು ಮತ್ತು ಮೈಸೂರು ಸೋಶಿಯಲ್ ಸರ್ವಿಸ್ ಲೀಗ್‌ ಅನ್ನು ಆರಂಭಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

ಮೇ 8ರ ಬೆಳಗ್ಗೆ ಗಾಂಧೀಜಿ ಮತ್ತು ಕಸ್ತೂರಬಾ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಬಂದಿಳಿದರು. ಅವರು ಮೊದಲ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸಿದ್ದರು. ಅವರೊಂದಿಗೆ ಬಂದಿದ್ದ ನಟೇಸನ್‌ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಅವರು ಮೊದಲ ದರ್ಜೆಯಲ್ಲೇ ಪ್ರಯಾಣಿಸಿದ್ದರು. ಸರಳವಾಗಿ ಬಟ್ಟೆ ಧರಿಸಿದ್ದ ಈ ದಂಪತಿಯನ್ನು ರೈಲು ನಿಲ್ದಾಣದಲ್ಲಿದ್ದ ಸ್ವಾಗತ ಸಮಿತಿಯವರು ಮೊದಲಿಗೆ ಗುರುತಿಸಲಿಲ್ಲ. ಗುರುತಿಸಿದ ಬಳಿಕ ಅಲ್ಲಿದ್ದವರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

ಆನಂದರಾವ್ ಸರ್ಕಲ್‌ನಲ್ಲಿ ವಾಸ್ತವ್ಯ ಮಾಡಿದ್ದ ಗಾಂಧೀಜಿ!

ಗೌರವಾನ್ವಿತ ಅತಿಥಿಗಳನ್ನು ಕರೆದುಕೊಂಡು ಹೋಗಲು ಬೆಂಗಳೂರು ಮುನ್ಸಿಪಾಲಿಟಿಯ ಅಧ್ಯಕ್ಷ ಕೆಪಿ ಪುಟ್ಟಣ್ಣ ಚೆಟ್ಟಿ ಅವರ ಅಲಂಕೃತ ಕುದುರೆ ಗಾಡಿಯನ್ನು ಸಿದ್ಧಪಡಿಸಲಾಗಿತ್ತು. ಉತ್ಸಾಹಗೊಂಡಿದ್ದ ಯುವಕರು ಕುದುರೆಗಳನ್ನು ಗಾಡಿಯಿಂದ ಬಿಚ್ಚಿ ತಾವೇ ಗಾಡಿಗೆ ನೊಗ ಹಾಕಿಕೊಂಡು ಎಳೆಯಲು ಮುಂದಾದರು. ಆದರೆ ಗಾಂಧೀಜಿ ಇದಕ್ಕೆ ಒಪ್ಪಲಿಲ್ಲ. ತಮ್ಮ ವಸತಿ ಎಷ್ಟು ದೂರವಿದೆ ಎಂದು ಅವರು ಕೇಳಿದರು. ಬೆಂಗಳೂರಿನ ಖ್ಯಾತ ನ್ಯಾಯಾಧೀಶರೊಬ್ಬರ ಆನಂದರಾವ್ ಸರ್ಕಲ್‌ನಲ್ಲಿದ್ದ ಮನೆಯಲ್ಲಿ ಅವರ ವಾಸ್ತವ್ಯ ವ್ಯವಸ್ಥೆ ಮಾಡಲಾಗಿತ್ತು.

'ಅರ್ಧ ಮೈಲಿ' ಎಂದು ಉತ್ತರ ಬಂತು.

ಹಾಗಾದರೆ ನಾವೆಲ್ಲರೂ ನಡೆದುಕೊಂಡೇ ಹೋಗೋಣ' ಎಂದು ಗಾಂಧೀಜಿ ನಗುತ್ತಾ ಹೇಳಿದರು.

ಅದೇ ಬೆಳಗ್ಗೆ ಕಾಲೇಜಿಯೇಟ್ ಹೈಸ್ಕೂಲ್‌ನಲ್ಲಿ ಗಾಂಧೀಜಿ ಗೋಖಲೆ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಇದೇ ಶಾಲೆ ಇಂದು ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ಆರ್ಟ್ಸ್ ಕಾಲೇಜಾಗಿದೆ. ಗಾಂಧೀಜಿ ಅನಾವರಣಗೊಳಿಸಿದ ಆ ಭಾವಚಿತ್ರ ಈಗ ಡಿವಿಜಿ ಅವರು 1945ರಲ್ಲಿ ಸ್ಥಾಪಿಸಿದ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್‌ನಲ್ಲಿ ಇದೆ. ಅದೇ ಸಂಜೆ ಬೆಂಗಳೂರಿನ ಮುನ್ಸಿಪಾಲಿಟಿ ವತಿಯಿಂದ ಗಾಂಧೀಜಿ ಅವರನ್ನು ಗೌರವಿಸಲು ಲಾಲ್‌ಬಾಗ್ ಗ್ಲಾಸ್ ಹೌಸ್‌ನಲ್ಲಿ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಡುವಿಲ್ಲದ ಆ ದಿನ ಕೊನೆಗೊಂಡಿದ್ದು ಮೈಸೂರು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಭೇಟಿಯಾಗುವುದರೊಂದಿಗೆ. ನಂತರ ಕಸ್ತೂರಬಾ ಮತ್ತು ಗಾಂಧೀಜಿ ಮದ್ರಾಸ್‌ಗೆ ವಾಪಸ್ ತೆರಳಿದರು. ಆತಿಥೇಯರು ಎಷ್ಟೇ ಮನವಿ ಮಾಡಿದರೂ ಅದನ್ನು ಲೆಕ್ಕಿಸದೆ, ಅವರು ಮೂರನೇ ದರ್ಜೆಯ ರೈಲು ಬೋಗಿಯಲ್ಲೇ ಪ್ರಯಾಣಿಸಿದರು.

(ರೂಪಾ ಪೈ ಅವರು ತಮ್ಮ ತವರು ಬೆಂಗಳೂರಿನೊಂದಿಗೆ ದೀರ್ಘಕಾಲದ ನಂಟು ಹೊಂದಿರುವ ಲೇಖಕಿ.)