ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿ.. ಇದರ ಬೆನ್ನಲ್ಲೇ ಅಕ್ಟೋಬರ್ 4ರವರೆಗೆ ಕರಾವಳಿ, ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಳೆಯ ನಡುವೆಯೂ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗುವ ಆತಂಕ.

ಬೆಂಗಳೂರು (ಸೆ.29): ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದರೂ ದಿಢೀರ್ ಹವಾಮಾನ ಬದಲಾವಣೆಯಿಂದಾಗ ಇಂದು ಬೆಂಗಳೂರಿನಲ್ಲಿ ಬೆಳಗ್ಗೆಯೇ ಭರ್ಜರಿ ಮಳೆ ಸುರಿದಿದೆ. ಬೆಳಗ್ಗೆ ನಾಲ್ಕೂವರೆ ಐದುಗಂಟೆಯಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದ ಹಲವೆಡೆ ಮರ ಧರೆಗುರುಳಿವೆ. ರಸ್ತೆ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆ ಮಳೆನೀರು ಮತ್ತೆ ರಸ್ತೆಗೆ ನುಗ್ಗಿದೆ. ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯ್ತು.

ಬೆಂಗಳೂರು ಅಲ್ಲದೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು ಇಂದಿನಿಂದ ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಅ.4ರ ವರೆಗಿನ ಮಳೆ ವರದಿ

ಇಂದಿನಿಂದ(ಸೆಪ್ಟೆಂಬರ್‌ 29) ಅ.4ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿ ಇರಲಿದೆ. ಈ ಜಿಲ್ಲೆಗಳಲ್ಲಿ ಸೆ.29 ಮತ್ತು 30ರಂದು ಈ ವಾತಾವರಣ ಇರಲಿದ್ದು, ನಂತರ ಅ.4ರವರೆಗೆ ಹಗುರ ಮಳೆಯಾಗಲಿದೆ.

ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಸೆ.4ರವರೆಗೂ ಈ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇರಲಿದೆ.

ಚಳಿಗಾಲದಲ್ಲೇ ಉಷ್ಣಾಂಶ ಹೆಚ್ಚಳ!

ನಗರದಲ್ಲಿಂದು ಮಳೆಯಾಗುತ್ತಿದ್ದರೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣತೆ ಏರುತ್ತಿದೆ. ಹವಾಮಾನ ತೀವ್ರ ಬದಲಾಗುತ್ತಿದ್ದು, ಈ ಬಾರಿ ಚಳಿಗಾಲದಲ್ಲೇ ಉಷ್ಣಾಂಶ ಹೆಚ್ಚುತ್ತಿರುವುದು ಇನ್ನು ಬೇಸಿಗೆಗೆ ಹೇಗೆಂಬ ಆತಂಕ ಶುರುವಾಗಿದೆ. ಈ ಬಾರಿಯೂ 'ಎಲ್ ನಿನೋ' (El Niño) ಪರಿಣಾಮದಿಂದ ಬರಗಾಲ, ಕಾಡ್ಗಿಚ್ಚು, ಸಾವು ನೋವು ಪ್ರವಾಹಗಳಿಂದಾಗಿ ಇನ್ನೂ ಹೆಚ್ಚಿನ ಅನಾಹುತ ಸಂಭವಿಸಲಿವೆ.