ವಿಜಯನಗರ: ಹಂಪಿಯಲ್ಲಿ ಯೋಗ ಮಾಡಿ ಸಂಭ್ರಮಿಸಿದ ಜಿ-20 ಪ್ರತಿನಿಧಿಗಳು!
ಹಂಪಿಯಲ್ಲಿ ಆಯೋಜಿಸಿರುವ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ 3ನೇ ಸಭೆಯ ಕೊನೆಯ ದಿನವಾದ ಬುಧವಾರ ಶ್ರೀಪಟ್ಟಾಭಿರಾಮ ದೇವಸ್ಥಾನದ ಪ್ರಾಂಗಣದಲ್ಲಿ ನೂರಾರು ವಿದೇಶಿ ಗಣ್ಯರು ಒಟ್ಟಾಗಿ ಯೋಗ ಅಭ್ಯಾಸ ನಡೆಸಿದರು.
ವಿಜಯನಗರ (ಜು.12): ಹಂಪಿಯಲ್ಲಿ ಆಯೋಜಿಸಿರುವ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ 3ನೇ ಸಭೆಯ ಕೊನೆಯ ದಿನವಾದ ಬುಧವಾರ ಶ್ರೀಪಟ್ಟಾಭಿರಾಮ ದೇವಸ್ಥಾನದ ಪ್ರಾಂಗಣದಲ್ಲಿ ನೂರಾರು ವಿದೇಶಿ ಗಣ್ಯರು ಒಟ್ಟಾಗಿ ಯೋಗ ಅಭ್ಯಾಸ ನಡೆಸಿದರು. ಬೆಳಗ್ಗೆ 6 ರಿಂದ 7:30ರ ವರೆಗೆ ಆಯುಷ್ ಇಲಾಖೆಯ ನುರಿಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಓಂಕಾರ, ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊಂಡ ಯೋಗದಲ್ಲಿ ಸರಳ ವ್ಯಾಯಾಮ ಮಾಡಿ ಸಂಭ್ರಮಿಸಿದರು. ಲಂಬಾಣಿ ಕಸೂತಿ ಕಲೆಯ ಗಿನ್ನಿಸ್ ದಾಖಲೆ ಕಾರ್ಯಕ್ರಮ, ತೆಪ್ಪದ ದೋಣಿ ವಿಹಾರ, ಹಂಪಿಯಲ್ಲಿ ಜಿ-20 ಪ್ರತಿನಿಧಿಗಳು ಸಸಿ ನೆಟ್ಟಿದ್ದು, ಇದೀಗ ಯೋಗದಲ್ಲಿ ಭಾಗಿಯಾಗಿ ಭಾರತದ ಸಂಸ್ಕೃತಿ ಪರಂಪರೆ ಇತಿಹಾಸಗೆ ಮಾರು ಹೋಗಿದ್ದಾರೆ. ಇನ್ನು ಯೋಗ ಕಾರ್ಯಕ್ರಮದಲ್ಲಿ 19 ರಾಷ್ಟಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಹಂಪಿ ವಾಸ್ತುಶಿಲ್ಪಕ್ಕೆ ಮನಸೋತ ಜಿ 20 ಪ್ರತಿನಿಧಿಗಳು: ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯಪಡೆ ಶೃಂಗದಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಗಳು, ಈ ನೆಲದ ಚರಿತ್ರೆಯಿಂದ ಪ್ರಭಾವಿತರಾಗಿದ್ದಾರೆ. ಸ್ಮಾರಕಗಳನ್ನು ಕಂಡು ಪುಳಕಿತರಾಗಿದ್ದಾರೆ. ಈ ಪ್ರತಿನಿಧಿಗಳಿಗೆ ಹಂಪಿಯ 25 ಗೈಡ್‌ಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಹಂಪಿ ಚರಿತ್ರೆ ಹಾಗೂ ಸ್ಮಾರಕಗಳ ಬಗ್ಗೆ ತಿಳಿಯಲು ವಿದೇಶಿ ಪ್ರತಿನಿಧಿಗಳಿಗೆ 25 ಗೈಡ್‌ಗಳನ್ನು ನಿಯೋಜಿಸಲಾಗಿದೆ. ಈ ಪ್ರವಾಸಿ ಮಾರ್ಗದರ್ಶಿಗಳು ಹಂಪಿ ನೆಲದ ಚರಿತ್ರೆಯನ್ನು ಪ್ರತಿನಿಧಿಗಳಿಗೆ ತಿಳಿಯಪಡಿಸುತ್ತಿದ್ದಾರೆ.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್ ಕಳವಳ
ಹಂಪಿ ಸ್ಮಾರಕಗಳು, ದೇವಾಲಯ, ಮಂಟಪಗಳನ್ನು ವೀಕ್ಷಣೆ ಮಾಡಿರುವ ವಿದೇಶಿ ಪ್ರತಿನಿಧಿಗಳು, ವಿಜಯನಗರ ಶೈಲಿಯ ವಾಸ್ತುಶಿಲ್ಪಗಳನ್ನು ಕಂಡು ಖುಷಿಯಾಗಿದ್ದಾರೆ. ಕಲ್ಲಿನತೇರು, ಸಪ್ತಸ್ವರ ಮಂಟಪ ವೀಕ್ಷಣೆ: ಹಂಪಿ ವಿಜಯ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನತೇರು, ಸಪ್ತಸ್ವರ ಮಂಟಪ, ಕಲ್ಯಾಣ ಮಂಟಪ, ಸರಸ್ವತಿ ಮಂಟಪಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಈ ಸ್ಮಾರಕಗಳನ್ನು ಕಂಡು ಪುಳಕಿತರಾದರು. ಸಪ್ತಸ್ವರ ಸಂಗೀತ ಮಂಟಪದ ನಾದವನ್ನೂ ಆಲಿಸಿದರು. ಕಲ್ಲಿನತೇರಿನ ಸ್ಮಾರಕದ ಮಹತ್ವದ ಕುರಿತು ಪ್ರವಾಸಿ ಮಾರ್ಗದರ್ಶಿಗಳಿಂದ ವಿವರಣೆ ಪಡೆದ ಪ್ರತಿನಿಧಿಗಳು, ಇದೊಂದು ಭವ್ಯ ಸ್ಮಾರಕ ಎಂದು ಉದ್ಗಾರ ತೆಗೆದರು.
ಶಿವಮೊಗ್ಗ ಏರ್‌ಪೋರ್ಟ್ ವೆಚ್ಚದಲ್ಲಿ ಅಕ್ರಮ ನಡೆದಿದ್ದರೆ ಕ್ರಮ: ಎಂ.ಬಿ.ಪಾಟೀಲ್
ಬಳಿಕ ವಿಜಯ ವಿಠ್ಠಲ ದೇಗುಲದ ಬಳಿ ಸಂಗೀತ, ನೃತ್ಯ ವೀಕ್ಷಿಸಿದರು. ಭಾರತೀಯ ಸಂಗೀತ, ನೃತ್ಯ ವೀಕ್ಷಿಸಿದ ಪ್ರತಿನಿಧಿಗಳು, ದೇಸಿ ಕಲೆಗೆ ಮಾರು ಹೋದರು. ಹಂಪಿಯ ಕಮಲ ಮಹಲ್, ರಾಣಿ ಸ್ನಾನಗೃಹ ಸೇರಿ ವಿವಿಧ ಸ್ಮಾರಕಗಳನ್ನೂ ವೀಕ್ಷಿಸಿದ ಪ್ರತಿನಿಧಿಗಳಿಗೆ ಪ್ರವಾಸಿ ಗೈಡ್‌ಗಳು ಮಾರ್ಗದರ್ಶನ ಮಾಡಿದರು. ವಿಶ್ವಪರಂಪರೆ ತಾಣವಾಗಿರುವ ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತೂ ಈ ತಂಡ ಮಾಹಿತಿ ಪಡೆದಿದೆ. ಪ್ರವಾಸಿಗರಿಗೂ ಖುಷಿ: ಜಿ-20 ಶೃಂಗ ಹಿನ್ನೆಲೆಯಲ್ಲಿ ಹಂಪಿಯನ್ನು ಶೃಂಗಾರ ಮಾಡಲಾಗಿದೆ. ಶ್ರೀವಿರೂಪಾಕ್ಷೇಶ್ವರ ರಥಬೀದಿಯನ್ನು ಸುಂದರಗೊಳಿಸಲಾಗಿದೆ. ದೇವಾಲಯ, ಮಂಟಪಗಳಿಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಇಡೀ ಹಂಪಿ ನವವಧುವಿನಂತೆ ಸಿಂಗಾರಗೊಂಡಿರುವುದರಿಂದ ಪ್ರವಾಸಿಗರೂ ಖುಷಿಯಾಗಿದ್ದಾರೆ. ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೂ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.