ಮಂಗಳೂರು: ಎತ್ತಿನಹೊಳೆ ಬಗ್ಗೆ ಪ್ರಶ್ನಿಸಬೇಡಿ: ಉತ್ತರಿಸಲಾಗದೇ ವೀರಪ್ಪ ಮೊಯಿಲಿ ಸಿಡಿಮಿಡಿ!
ಬಯಲುಸೀಮೆಗೆ ನಿರುಣಿಸುವ ಬಹುಕೋಟಿ ಎತ್ತಿನಹೊಳೆ ಯೋಜನೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ ವೇಳೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉತ್ತರಿಸಲಾಗದೇ ಸಿಡಿಮಿಡಿಗೊಂಡು ಮುಖ ತಿರುಗಿಸಿದ ಘಟನೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಸೆ.23): ಬಯಲುಸೀಮೆಗೆ ನಿರುಣಿಸುವ ಬಹುಕೋಟಿ ಎತ್ತಿನಹೊಳೆ ಯೋಜನೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ ವೇಳೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉತ್ತರಿಸಲಾಗದೇ ಸಿಡಿಮಿಡಿಗೊಂಡು ಮುಖ ತಿರುಗಿಸಿದ ಘಟನೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ(Veerappa Moily) ಸುದ್ದಿಗೋಷ್ಟಿ ನಡೆಸಿದರು. ಕಾವೇರಿ ವಿವಾದ(Cauvery dispute)ದ ಪ್ರಶ್ನೆಗಳ ಮಧ್ಯೆ ಬಹುಕೋಟಿ ಎತ್ತಿನಹೊಳೆ ಯೋಜನೆ(Yettinhole project)ಯ ಬಗ್ಗೆಯೂ ಮೊಯಿಲಿಗೆ ಪತ್ರಕರ್ತರು ಪ್ರಶ್ನೆ ಮಾಡಿದರು. ನೀವು ತರಾತುರಿಯಲ್ಲಿ ಆವತ್ತು ಆರಂಭಿಸಿದ ಎತ್ತಿನಹೊಳೆ ಯೋಜನೆಯಿಂದ ಒಂದು ಹನಿ ನೀರು ಕೂಡ ಬಯಲು ಸೀಮೆಗೆ ಹೋಗಿಲ್ಲ. ಇದರಿಂದ ಕರಾವಳಿಗೂ ಬರ ಬಂದಿದೆ. ಆದರೆ ಸಾವಿರಾರು ಕೋಟಿ ಖರ್ಚಾಗಿದೆ. ಈಗಲಾದರೂ ಯೋಜನೆ ನಿಲ್ಲಿಸ್ತೀರಾ ಅಂತ ಪತ್ರಕರ್ತರು ಪ್ರಶ್ನಿಸಿದರು.
ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಆಕ್ರೋಶ
ಆದರೆ ಈ ಪ್ರಶ್ನೆಗೆ ಉತ್ತರ ಕೊಡಲಾಗದೇ ತಡವರಿಸಿದ ವೀರಪ್ಪ ಮೊಯಿಲಿ ಸಿಡಿಮಿಡಿಗೊಂಡು, ಎತ್ತಿನ ಹೊಳೆ ಮುಗಿದ ಅಧ್ಯಾಯ, ಅದರ ಬಗ್ಗೆ ಈಗ ಪ್ರಶ್ನೆ ಕೇಳಬೇಡಿ ಅಂತ ಜಾರಿಕೊಂಡರು. ಆದರೂ ಪತ್ರಕರ್ತರು ಬಿಡದೇ, ಯಾಕೆ ನಿಮ್ಮನ್ನ ಪ್ರಶ್ನೆ ಮಾಡಬಾರದು? ಆ ಯೋಜನೆಗೆ 23 ಸಾವಿರ ಕೋಟಿ ಖರ್ಚು ಮಾಡಿದ್ದೀರಲ್ವಾ ಅಂತ ಮತ್ತೆ ಪ್ರಶ್ನಿಸಿದರು. ಆಗ ಬಿಜೆಪಿಯವರು ಯೋಜನೆ ಯಾಕೆ ನಿಲ್ಲಿಸಿಲ್ಲ, ನಾವು ಯಾಕೆ ನಿಲ್ಲಿಸಬೇಕು? ಈಗ ನಾನು ಉತ್ತರ ಕೊಡಲ್ಲ, ಎಲ್ಲಿ ಕೊಡ ಬೇಕೋ ಅಲ್ಲಿ ಕೊಡ್ತೇನೆ ಅಂತ ಜಾರಿಕೊಂಡ ಅವರು, ಯೋಜನೆ ವೈಫಲ್ಯದ ಬಗ್ಗೆ ಉತ್ತರ ಕೊಡಿ ಅಂದಾಗ ಪತ್ರಕರ್ತರ ವಿರುದ್ದವೇ ಸಿಡಿಮಿಡಿಗೊಂಡು ಮುಖ ತಿರುಗಿಸಿ ಸುಮ್ಮನಾದರು.
2013ರಲ್ಲಿ ಮೊಯಿಲಿ ಚಿಕ್ಕಬಳ್ಳಾಪುರ ಸಂಸದರಾಗಿದ್ದಾಗ ಯೋಜನೆಗೆ ತರಾತುರಿಯಲ್ಲಿ ಶಿಲಾನ್ಯಾಸ ಮಾಡಿದ್ದು, ಬಿಜೆಪಿ ಕಾಂಗ್ರೆಸ್ ಸರ್ಕಾರಗಳು ಕೋಟಿ ಕೋಟಿ ಹಣ ಸುರಿದಿದ್ದು ಬಿಟ್ಟರೆ ಒಂದು ಹನಿ ನೀರು ಬಯಲು ಸೀಮೆಗೆ ಹರಿದಿಲ್ಲ. ಸದ್ಯ ಈ ಬಗ್ಗೆ ಪ್ರಶ್ನೆ ಮಾಡಿದರೆ ಮೊಯಿಲಿ ಬಳಿ ಉತ್ತರವಿಲ್ಲ.
ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತ ಕರ್ನಾಟಕ! ವಕೀಲರ ವಾದ ಇಲ್ಲಿದೆ ನೋಡಿ...
'ಮಳೆ ಬಂದರೆ ಕಾವೇರಿ ವಿಚಾರ ತಣ್ಣಗಾಗುತ್ತೆ'
ಇನ್ನು ಇದೇ ವೇಳೆ ಕಾವೇರಿ ವಿವಾದದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಒಂದು ಮಳೆ ಬಂದರೆ ಕಾವೇರಿ ವಿಚಾರ ತಣ್ಣಗಾಗುತ್ತೆ ಅಂತ ಉತ್ತರ ನೀಡಿದರು. ಈಗ ನಮ್ಮ ಸರ್ಕಾರ ಇರುವಾಗ ವಿರೋಧ ಮಾಡಲು ಆಗಲ್ಲ. ನಮ್ಮ ಸರ್ಕಾರ ಕೋರ್ಟ್ ಮೂಲಕ ಸಮಸ್ಯೆ ಸರಿ ಮಾಡಲು ಯತ್ನಿಸ್ತಿದೆ. ಬಿಜೆಪಿಯವರು ಈಗ ವಿರೋಧ ಪಕ್ಷದಲ್ಲಿ ಇದ್ದು ವಿರೋಧಿಸ್ತಾ ಇದಾರೆ. ನಮ್ಮ ಸರ್ಕಾರ ಈ ರಾಜ್ಯದ ಜನರ ಪರವಾಗಿಯೇ ಕೆಲಸ ಮಾಡಲಿದೆ. ಕರ್ನಾಟಕ ಕಾವೇರಿ ವಿಚಾರದಲ್ಲಿ ಸೋಲಲು ಅನೇಕ ಕಾರಣಗಳಿವೆ. ನಾವು ಕಾವೇರಿ ನೀರನ್ನು ಗರಿಷ್ಠವಾಗಿ ಉಪಯೋಗ ಮಾಡಿಲ್ಲ. ಆ ಕಾಲದ ಆಡಳಿತಗಾರರು ಮಾಡಿದ ತಪ್ಪಿನಿಂದ ಹೀಗಾಗ್ತಿದೆ. ಯಗಚಿ ಅಣೆಕಟ್ಟು ಮಾಡೋದನ್ನೂ ಅನೇಕರು ತಡೆದಿದ್ದರು. ಇದರಿಂದ ನಮಗೆ ಸಿಗಬೇಕಾದ ನೀರಿನ ಪಾಲು ಸಿಗಲಿಲ್ಲ ಎಂದರು.