* ಸಾರಿಗೆ ವ್ಯವಸ್ಥೆ ಖಾಸಗೀಕರಣಕ್ಕೆ ಬಿಜೆಪಿ ಷಡ್ಯಂತ್ರ* ವಾಪಸು ಕೆಲಸಕ್ಕೆ ಪಡೆಯಿರಿ* ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವೇತನ ಪರಿಷ್ಕರಣೆ ಆಗಿಲ್ಲ
ಬೆಂಗಳೂರು(ಜು.02): ಬಲ್ಕ್ ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ 25 ರು. ಹಣ ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರವು ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಿಕೊಡಲು ಷಡ್ಯಂತ್ರ ರೂಪಿಸಿದೆ ಎಂದು ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರವು ಈ ಹಗಲು ದರೋಡೆಯನ್ನು ಕೂಡಲೇ ನಿಲ್ಲಿಸುವಂತೆ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಕೂಡಲೇ ಸಾರಿಗೆ ಇಲಾಖೆಗೆ ನೀಡುವ ಡೀಸೆಲ್‌ಗೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
KSRTC ವರ್ಗ ಹೊಂದಿದವರ ಜಾಗಕ್ಕೆ ಸಿಬ್ಬಂದಿಯೇ ಇಲ್ಲ!
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಡೀ ದೇಶದಲ್ಲಿಯೇ ಅತ್ಯುತ್ತಮ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನುಳ್ಳ ರಾಜ್ಯ ಕರ್ನಾಟಕ. ರಾಜ್ಯದ ಕೆಎಸ್‌ಆರ್‌ಟಿಸಿಯ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್‌ಗಳಿವೆ. ಪ್ರತಿ ದಿನ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಜನಸಾಮಾನ್ಯರು ಸರ್ಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 1.3 ಲಕ್ಷ ನೌಕರರಿಗೆ ಸರ್ಕಾರದ ನಾಲ್ಕೂ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಪ್ರತಿ ದಿನ ಸುಮಾರು 20-25 ಕೋಟಿ ರು.ಗಳ ಆದಾಯವಿದೆ. ಇಷ್ಟಿದ್ದರೂ ಬಿಜೆಪಿ ಸರ್ಕಾರವು ಸಮರ್ಥವಾಗಿ ಸಾರಿಗೆ ವ್ಯವಸ್ಥೆಯನ್ನು ನಿಭಾಯಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಈ ನಿಗಮಗಳು ಖರೀದಿಸುವ ಪ್ರತಿ ಲೀಟರ್ ಡೀಸೆಲ… ಮೇಲೆ ಖಾಸಗಿಯವರಿಗಿಂತ 25 ರು.ಗಳಷ್ಟುಹೆಚ್ಚು ಸಂಗ್ರಹಿಸುತ್ತಿದೆ. ಖಾಸಗಿಯವರಿಗೆ ಪ್ರತಿ ಲೀಟರ್ ಡೀಸೆಲ… 88 ರು.ಗೆ ಲಭಿಸಿದರೆ, ಸರ್ಕಾರದ ನಿಗಮಗಳು 113 ರು. ಪಾವತಿಸಬೇಕಾಗಿದೆ. ಇದು ಮೋದಿ ಸರ್ಕಾರ ಜನ ಸಾಮಾನ್ಯರ ಸಾರಿಗೆಗೆ ಮಾಡುತ್ತಿರುವ ಕ್ಷಮಿಸಲಾಗದ ದ್ರೋಹ ಎಂದು ಕಿಡಿಕಾರಿದ್ದಾರೆ.
ನೌಕರರ ಶೋಷಣೆ:
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳು ಪ್ರತಿ ದಿನ ಸುಮಾರು 13 ಲಕ್ಷ ಲೀಟರ್ ಡೀಸೆಲ್ ಬಳಸುತ್ತವೆ. ಲೀಟರ್ ಮೇಲೆ 25 ರು. ಹೆಚ್ಚಿಗೆ ಪಾವತಿ ಸಬೇಕಾಗಿರುವುದರಿಂದ ಪ್ರತಿ ದಿನ 3.25 ಕೋಟಿ ರುಪಾಯಿ. ವರ್ಷಕ್ಕೆ 1187 ಕೋಟಿ ರು. ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದೆ. ಬಿಜೆಪಿ ಸರ್ಕಾರದ ಈ ನೀತಿಯಿಂದಾಗಿ ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆಯು ವಿಪರೀತ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಬಿಎಂಟಿಸಿಯಲ್ಲಿ ಡೀಸೆಲ್‌ಗೂ ಶುರುವಾಯಿತು ಹಾಹಾಕಾರ, ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಬಿಸಿ..?
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಈ ನೌಕರರು ರಾಜ್ಯದ ಇತರೆ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಗಳಿಗಿಂತ ಶೇ.40 ರಷ್ಟುಕಡಿಮೆ ಪಡೆಯುತ್ತಿದ್ದಾರೆ. ಕಾರ್ಮಿಕರನ್ನು 10-12 ಗಂಟೆಗಳಷ್ಟುಕಾಲ ದುಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಪಸು ಕೆಲಸಕ್ಕೆ ಪಡೆಯಿರಿ:
ಸರ್ಕಾರದ ಈ ಶೋಷಣೆಯನ್ನು ವಿರೋಧಿಸಿ ಕಳೆದ ವರ್ಷ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ವಜಾ ಮಾಡಿದ್ದ ಸಿಬ್ಬಂದಿಗಳಲ್ಲಿ 1500 ಜನರನ್ನು ಇದುವರೆಗೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ನೀಡಬೇಕಾದ ಸವಲತ್ತುಗಳನ್ನು ಕೂಡಲೆ ಬಿಡುಗಡೆ ಮಾಡಬೇಕು. ವಜಾ ಮಾಡಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.
