KSRTC ವರ್ಗ ಹೊಂದಿದವರ ಜಾಗಕ್ಕೆ ಸಿಬ್ಬಂದಿಯೇ ಇಲ್ಲ!

ಕರಾವಳಿ ಜಿಲ್ಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚಾಲಕ, ನಿರ್ವಾಹಕರಿಲ್ಲದೆ ಹೆಚ್ಚಿನ ಬಸ್‌ ಸಂಚಾರವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಸುಮಾರು 130ಕ್ಕೂ ಅಧಿಕ ಚಾಲಕ, ನಿರ್ವಾಹಕ, ಮೆಕ್ಯಾನಿಕ್‌ಗಳ ವರ್ಗಾವಣೆ ಅನುಷ್ಠಾನಗೊಳಿಸುವಂತೆ ಕೇಂದ್ರ ಕಚೇರಿ ಸೂಚನೆ ನೀಡಿದೆ.

Lack of KSRTC Staff   in dakshina kannada gow

ಮಂಗಳೂರು (ಜೂನ್ 28): ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಕಳೆದ ಒಂದು ವರ್ಷದಿಂದ ಆದೇಶ ಬಂದು ಕಾಯುತ್ತಿರುವ ಸುಮಾರು 130ಕ್ಕೂ ಅಧಿಕ ಚಾಲಕ, ನಿರ್ವಾಹಕ, ಮೆಕ್ಯಾನಿಕ್‌ಗಳ ವರ್ಗಾವಣೆ ಅನುಷ್ಠಾನಗೊಳಿಸುವಂತೆ ಕೇಂದ್ರ ಕಚೇರಿ ಸೂಚನೆ ನೀಡಿದೆ. ವಿಚಿತ್ರ ಎಂದರೆ ಇಲ್ಲಿಂದ ವರ್ಗಾವಣೆಗೊಳ್ಳುವವರ ಜಾಗಕ್ಕೆ ಬದಲಿ ಯಾರೂ ಬರುತ್ತಿಲ್ಲ. ಇದರಿಂದಾಗಿ ಕರಾವಳಿ ಜಿಲ್ಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚಾಲಕ, ನಿರ್ವಾಹಕರಿಲ್ಲದೆ ಹೆಚ್ಚಿನ ಬಸ್‌ ಸಂಚಾರವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ಧರ್ಮಸ್ಥಳ ವ್ಯಾಪ್ತಿ ಹೊಂದಿರುವ ಪುತ್ತೂರು ವಿಭಾಗದಿಂದ 67, ಮಂಗಳೂರು, ಉಡುಪಿ ಹಾಗೂ ಕುಂದಾಪುರ ವ್ಯಾಪ್ತಿಯ ಮಂಗಳೂರು ವಿಭಾಗದಿಂದ 64 ಸಾರಿಗೆ ಸಿಬ್ಬಂದಿ ವಾಯುವ್ಯ ಹಾಗೂ ಈಶಾನ್ಯ ಅಂತರ್‌ ವಿಭಾಗಕ್ಕೆ ವರ್ಗಾವಣೆಗೊಳ್ಳುತ್ತಿದ್ದಾರೆ. ಕಳೆದ ವರ್ಷ ಕೆಎಸ್‌ಆರ್‌ಟಿಸಿ ಮುಷ್ಕರ ವೇಳೆ ಅಂತರ್‌ ನಿಗಮಗಳಿಗೆ ಸಿಬ್ಬಂದಿ ವರ್ಗಾವಣೆಯೂ ಮುಷ್ಕರ ನಿರತರ ಬೇಡಿಕೆ ಪಟ್ಟಿಯಲ್ಲಿತ್ತು. ಈ ಬೇಡಿಕೆಯನ್ನು ಈಡೇರಿಸುವುದಾಗಿ ಸಾರಿಗೆ ಇಲಾಖೆ ಭರವಸೆ ನೀಡಿತ್ತು. ಅದರಂತೆ ವರ್ಗಾವಣೆಗೊಳಿಸಿ ಆದೇಶವನ್ನೂ ಹೊರಡಿಸಲಾಗಿತ್ತು. ಆದರೆ ಇಲ್ಲಿ ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಕೈಗೂಡದ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ವಿಭಾಗದಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವರ್ಗಾವಣೆಯನ್ನು ಜಾರಿಗೆ ತಂದಿರಲಿಲ್ಲ.

ಬಿಎಂಟಿಸಿಯಲ್ಲಿ ಡೀಸೆಲ್‌ಗೂ ಶುರುವಾಯಿತು ಹಾಹಾಕಾರ, ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಬಿಸಿ..?

ವರ್ಗಾವಣೆ ಆದೇಶ ಬಂದು ಒಂದು ವರ್ಷ ಕಳೆದಿದ್ದು, ವರ್ಗಾವಣೆ ಪಟ್ಟಿಯಲ್ಲಿರುವ ಸಿಬ್ಬಂದಿ ಈಗ ಕೇಂದ್ರ ಕಚೇರಿಯ ಕದತಟ್ಟಿದ್ದಾರೆ. ಇದರ ಪರಿಣಾಮ ಜೂನ್‌ ಕೊನೆ ಅಥವಾ ಜುಲೈ ಪ್ರಥಮ ವಾರದಲ್ಲಿ ಅವರನ್ನು ಹಾಲಿ ಕರ್ತವ್ಯ ಸ್ಥಳದಿಂದ ಬಿಡುಗಡೆಗೊಳಿಸುವಂತೆ ಕೇಂದ್ರ ಕಚೇರಿಯೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈಗ ಕೇಂದ್ರ ಕಚೇರಿಯ ಆದೇಶವನ್ನು ಪಾಲಿಸದೆ ನಿರ್ವಾಹವಿಲ್ಲ, ಪಾಲಿಸಿದರೆ, ಪರ್ಯಾಯ ಸಿಬ್ಬಂದಿ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಇಲ್ಲ. ಇದು ಇಲ್ಲಿನ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಪೀಕಲಾಟಕ್ಕೆ ಕಾರಣವಾಗಿದೆ.

ಪುತ್ತೂರು ವಿಭಾಗದಲ್ಲಿ 67 ಮಂದಿಯಲ್ಲಿ 60 ಚಾಲಕ, ನಿರ್ವಾಹಕರು, 7 ಮಂದಿ ಮೆಕ್ಯಾನಿಕ್‌ ಸೇರಿದ್ದಾರೆ. ಮಂಗಳೂರು ವಿಭಾಗದ 64 ಮಂದಿಯಲ್ಲಿ 58 ಮಂದಿ ಚಾಲಕ ನಿರ್ವಾಹಕರು ಹಾಗೂ 6 ಮಂದಿ ಮೆಕ್ಯಾನಿಕ್‌ ಇದ್ದಾರೆ.

ಕರಾವಳಿಗೆ ಬರಲೊಪ್ಪುತ್ತಿಲ್ಲ: ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ನೈಋುತ್ಯ, ವಾಯುವ್ಯ ಹಾಗೂ ಈಶಾನ್ಯ ವಿಭಾಗಗಳಲ್ಲಿ ಅಂತರ್‌ ನಿಗಮ ವರ್ಗಾವಣೆ ಇದು. ಬೇರೆ ಎಲ್ಲ ವಿಭಾಗಗಳಲ್ಲಿ ಈಗಾಗಲೇ ಇದು ಜಾರಿಗೊಂಡರೂ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಬೇರೆ ಸಿಬ್ಬಂದಿ ಇಲ್ಲ ಎಂಬ ಕಾರಣಕ್ಕೆ ಒಂದು ವರ್ಷದಿಂದ ಬಾಕಿ ಇರಿಸಿದ್ದರು. ಕರಾವಳಿಗೆ ಬೇರೆ ನಿಗಮದಿಂದ ವರ್ಗಾವಣೆಗೊಂಡು ಯಾರೂ ಬರುತ್ತಿಲ್ಲ, ಮಾತ್ರವಲ್ಲ ಬರಲೂ ಒಪ್ಪುತ್ತಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಉತ್ತರ ಕರ್ನಾಟಕದಿಂದ ನೇಮಕಗೊಂಡರೂ ಕೆಲವೇ ವರ್ಷಗಳಲ್ಲಿ ತಮ್ಮ ತವರಿನ ಸಮೀಪದ ಊರುಗಳಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದು ಕರಾವಳಿಯಲ್ಲಿ ಕೆಎಸ್‌ಆರ್‌ಟಿಸಿ ಸಂಚಾರಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ ಹೇಳಲಾಗಿದೆ.

ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!

2ನೇ ವರ್ಗಾವಣೆ ಪಟ್ಟಿಸಿದ್ಧ: ಇದೇ ವೇಳೆ ಕೆಎಸ್‌ಆರ್‌ಟಿಸಿಯಲ್ಲಿ 2ನೇ ವರ್ಗಾವಣೆ ಪಟ್ಟಿಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಪುತ್ತೂರು ಹಾಗೂ ಮಂಗಳೂರು ವಿಭಾಗದಿಂದ 20ಕ್ಕೂ ಅಧಿಕ ಮಂದಿಯ ಹೆಸರು ಇದೆ ಎಂದು ಹೇಳಲಾಗಿದೆ. ಜನಪ್ರತಿನಿಧಿಗಳು, ಸಚಿವರ ಶಿಫಾರಸು ಮೇರೆಗೆ ನಡೆಯುವ ವರ್ಗಾವಣೆ ಇದಾಗಿದ್ದು, ಇದು ಕೂಡ ಕಾರ್ಯರೂಪಕ್ಕೆ ಬಂದರೆ ಕರಾವಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ್ನು ಹುಡುಕುವ ಪ್ರಮೇಯ ಬಂದರೂ ಅಚ್ಚರಿ ಇಲ್ಲ ಎಂದು ಬಸ್‌ ಯಾನಿಗಳು ಹೇಳುವಂತಾಗಿದೆ.

ಬೇರೆ ವಿಭಾಗಕ್ಕೆ ಬಸ್‌ ವರ್ಗಾವಣೆ: ಈಗಾಗಲೇ ವರ್ಗಾವಣೆ ಆದೇಶ ಪಡೆದಿರುವ ಸಿಬ್ಬಂದಿಯಿಂದ ತೆರವಾಗುವ ಖಾಲಿ ಸ್ಥಾನಕ್ಕೆ ಬೇರೆ ಕಡೆಯಿಂದ ಯಾರೂ ಆಗಮಿಸುತ್ತಿಲ್ಲ. ಹೊಸ ನೇಮಕಾತಿಗೆ ಅವಕಾಶ ಇಲ್ಲ ಎಂದು ಸರ್ಕಾರವೇ ಹೇಳಿದೆ. ಸದ್ಯದ ಮಟ್ಟಿಗೆ ಪರಿಸ್ಥಿತಿ ಸರಿದೂಗಿಸಲು ನಿವೃತ್ತ ಚಾಲಕ, ನಿರ್ವಾಹಕರನ್ನು ಕರ್ತವ್ಯಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಎರಡೂ ವಿಭಾಗಗಳಲ್ಲಿ ನಿವೃತ್ತರ ಸಂಖ್ಯೆ 10 ಮೀರುತ್ತಿಲ್ಲ. ನಿವೃತ್ತರಲ್ಲಿ ಬಹುತೇಕ ಮಂದಿ ಇಳಿವಯಸ್ಸಿನಲ್ಲಿ ಮತ್ತೆ ಕರ್ತವ್ಯಕ್ಕೆ ಬರಲು ಆಸಕ್ತಿ ತೋರಿಸುತ್ತಿಲ್ಲ.

ಈ ನಡುವೆ ಅಧಿಕಾರಿಗಳು ದೂರ ರೂಟ್‌ಗಳ ಬಸ್‌ಗಳನ್ನು ಬೇರೆ ವಿಭಾಗಗಳಿಗೆ ವರ್ಗಾವಣೆಗೊಳಿಸಲು ನಿರ್ಧರಿಸಿದ್ದಾರೆ. ಉದಾಹರಣೆಗೆ ಪುತ್ತೂರು ಮತ್ತು ಮಂಗಳೂರು ವಿಭಾಗದಿಂದ ಕಾರ್ಯಾಚರಿಸುವ ದೂರ ಊರಿನ ಬಸ್‌ಗಳನ್ನು ಅದೇ ಊರಿನ ಚಾಲಕ, ನಿರ್ವಾಹಕರಿಂದ ಓಡಿಸಲು ಚಿಂತನೆ ನಡೆಸುತ್ತಿದ್ದಾರೆ. ಪುತ್ತೂರು, ಧರ್ಮಸ್ಥಳ ರೂಟ್‌ಗಳ ಬಸ್‌ಗಳನ್ನು ಹರಿಹರ, ದಾವಣಗೆರೆ ವಿಭಾಗದ ಸಿಬ್ಬಂದಿ ಓಡಿಸುವಂತೆ ಪರ್ಯಾಯ ಮಾರ್ಗೋಪಾಯ ನಡೆಸಲಾಗುತ್ತಿದೆ. ಇದು ದೂರದ ರೂಟ್‌ಗಳಿಗೆ ಆಗಬಹುದು. ಆದರೆ ಕರಾವಳಿ ಜಿಲ್ಲೆಯಲ್ಲಿ ಗ್ರಾಮಾಂತರ ಸಾರಿಗೆಗಳೇ ಅಧಿಕ. ಹಾಗಿರುವಾಗ ಹಳ್ಳಿ ಕಡೆಗೆ ಸಂಚರಿಸುವ ಬಸ್‌ಗಳಲ್ಲಿ ಚಾಲಕ, ನಿರ್ವಾಹಕರು ಇಲ್ಲದೇ ಇದ್ದರೆ ಏನು ಮಾಡುವುದು ಎಂಬ ಪ್ರಶ್ನೆಗೆ ಅಧಿಕಾರಿಗಳಿಗೂ ಉತ್ತರ ಸಿಗುತ್ತಿಲ್ಲ.

ಒಂದು ವರ್ಷದಿಂದ ವರ್ಗಾವಣೆ ಆದೇಶಗೊಂಡು ಕಾಯುತ್ತಿರುವವರನ್ನು ಜುಲೈ ಪ್ರಥಮ ವಾರದೊಳಗೆ ಇಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕೇಂದ್ರ ಕಚೇರಿಯಿಂದ ಸೂಚನೆ ನೀಡಲಾಗಿದೆ. ಇವರಿಂದ ತೆರವಾಗುವ ಜಾಗಕ್ಕೆ ನಿವೃತ್ತರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ದೂರದೂರುಗಳ ಬಸ್‌ಗಳನ್ನು ಅಲ್ಲಿನ ವಿಭಾಗದಿಂದಲೇ ಇಲ್ಲಿಗೆ ಆಪರೇಟ್‌ ಮಾಡುವಂತೆ ತೀರ್ಮಾನಿಸಲಾಗುವುದು.

-ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು

Latest Videos
Follow Us:
Download App:
  • android
  • ios