ಬಿಎಂಟಿಸಿಯಲ್ಲಿ ಡೀಸೆಲ್‌ಗೂ ಶುರುವಾಯಿತು ಹಾಹಾಕಾರ, ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಬಿಸಿ..?
* ಆರ್ಥಿಕ ಸಂಕಷ್ಟದ ಬೆನ್ನಲ್ಲೇ ಬಿಎಂಟಿಸಿಗೆ ಮತ್ತೊಂದು ಸಂಕಷ್ಟ
* ಬಿಎಂಟಿಸಿಯಲ್ಲಿ ಡೀಸೆಲ್ ಗೂ ಶುರುವಾಯಿತು ಹಾಹಾಕಾರ
* ಪ್ರಯಾಣಿಕರಿಗೆ ತಟ್ಟುತ್ತಾ ಡೀಸೆಲ್ ಕೊರತೆ ಬಿಸಿ..?
-ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜೂ.27): ಬೆಂಗಳೂರಿನ ಜೀವನಾಡಿ ಅಂದ್ರೆ ಅದು ಬಿಎಂಟಿಸಿ. ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಸರ್ಕಾರ ಕೈ ಹಿಡಿದು ನಡೆಸ್ತಿದೆ. ನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ಮೈಮೇಲೆ ಹಾಕೊಂಡಿರುವ ನಿಗಮ ಇಂದೊ ನಾಳೆಯೋ ಮುಳುಗುವ ಪರಿಸ್ಥಿತಿಯಲ್ಲಿದೆ. ಈಗಾಗಲೇ ತಾನು ದುಡಿದು ತನ್ನ ಹೊಟ್ಟೆ ತುಂಬಿಸಕ್ಕಾಗ್ದೆ ಇರೋ ಬಿಎಂಟಿಸಿ ಡೀಸೆಲ್ ಖರ್ಚಿಗೆ ಸರ್ಕಾರವೇ ಭರಿಸ್ತಿದೆ. ಇದೀಗ ನಿಗಮಕ್ಕೆ ಡೀಸೆಲ್ ಪೂರೈಕೆಯಾಗದೆ ಭಾರೀ ಸಂಕಷ್ಟಕ್ಕೀಡಾಗಿದೆ ನಿಗಮ. ಹೀಗೆ ಮುಂದುವರೆದಲ್ಲಿ ಬಸ್ ರಸ್ತೆಗಿಳಿಯುತ್ತೊ ಇಲ್ವೋ ಅನ್ನೋ ಟೆನ್ಷನ್ ಶುರುವಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳನ್ನೇ ನಂಬಿಕೊಂಡು ಸರಿಸುಮಾರು 30 ರಿಂದ 35 ಲಕ್ಷ ಜನ ಮನೆಯಿಂದ ಹೊರಗಡೆ ಬರುತ್ತಾರೆ. ಆದ್ರೆ ಈ ಬಸ್ ಸಂಚಾರಕ್ಕೆ ಅತ್ಯಗತ್ಯ ವಾಗಿ ಬೇಕಾಗಿರೋ ಡಿಸೇಲ್ ಕೊರತೆ ಈಗ ಎದುರಾಗಿದೆ.
ಕಳೆದ ಎರಡು ದಿನಗಳಿಂದ ಡಿಪೋಗಳಲ್ಲಿ ಡೀಸೆಲ್ ಪೂರೈಕೆ ಆಗ್ತಿಲ್ಲ. ನಗರದ ಬಹುತೇಕ ಡಿಪೋಗಳಲ್ಲಿ ಡೀಸೆಲ್ಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಡಿಪೊಗಳಿಗೆ ಇಂಧನ ಪೂರೈಕೆಯಾಗದೆ, ಖಾಸಗಿ ಪೆಟ್ರೋಲ್ ಬಂಕ್ಗಳ ಬಳಿ ಸಾಲುಗಟ್ಟಿ ನಿಲ್ಲುವಂತಾಗಿದೆ.ಸಗಟು ಖರೀದಿ ದರ ಪ್ರತಿ ಲೀಟರ್ ಡೀಸೆಲ್ಗೆ ₹119 ಇದೆ.ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್ಗೆ ₹87 ಇದೆ. ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿಸಿ ಬಸ್ಗಳ ಸಂಚಾರವನ್ನು ಸುಗಮ ಮಾಡಿಕೊಂಡಿದೆ.
ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೊಗಳಲ್ಲಿರುವ ಬಂಕ್ಗಳಿಗೆ ಪೂರೈಕೆ ಮಾಡುತ್ತಿದ್ದರು.ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸಿ ಬಿಎಂಟಿಸಿ ಕೈತೊಳೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆದುಕೊಂಡು ಬಂದಿದೆ.ಈಗ ಎರಡು ದಿನಗಳಿಂದ ಬಂಕ್ಗಳಿಗೆ ಪೂರೈಕೆ ಮಾಡುವುದನ್ನು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ. ಡಿಪೋಗಳ ಬಂಕ್ಗಳಲ್ಲಿ ಡೀಸೆಲ್ ಖಾಲಿಯಾಗಿ ಅನಿವಾರ್ಯವಾಗಿ ಖಾಸಗಿ ಪೆಟ್ರೋಲ್ ಮೊರೆ ಹೋಗಿರುವ ಬಸ್ಗಳು ಡಿಪೋ ಸಮೀಪದ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ಗಾಗಿ ಸಾಲುಗಟ್ಟಿ ನಿಲ್ಲುತ್ತಿವೆ.
ಸಮಸ್ಯೆ ಸರಿಪಡಿಸುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ರಾಜ್ಯದಲ್ಲಿರುವ ಎಲ್ಲ ತೈಲ ಕಂಪನಿಗಳು ಸಮನ್ವಯಕಾರರಿಗೆ ಬಿಎಂಟಿಸಿ ಪತ್ರ ಬರೆಯಲಾಗಿದೆ. ಸಮಸ್ಯೆ ಸರಿಪಡಿಸದಿದ್ದರೆ ಬಸ್ಗಳನ್ನು ರಸ್ತೆಗೆ ಇಳಿಸುವುದು ಕಷ್ಟವಾಗುವ ಸಾಧ್ಯತೆ ಇದೆ.. ಖಾಸಗಿ ಪೆಟ್ರೋಲ್ ಬಂಕ್ಗಳಿಗೆ ಬಸ್ಗಳು ಹೋದರೆ ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚಾಗಲಿದೆ.ಡೀಸೆಲ್ಗಾಗಿ ಪೆಟ್ರೋಲ್ ಬಂಕ್ಗಳ ಬಳಿ ಬಿಎಂಟಿಸಿ ಬಸ್ಗಳು ಕಾದು ನಿಂತರೆ ಬಸ್ಗಳ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಲಿದೆ.ಕೆಲವು ಡಿಪೊಗಳಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದಾಸ್ತಾನು ಇದ್ದರೆ, ಇನ್ನೂ ಕೆಲವು ಡಿಪೊಗಳಲ್ಲಿ ಡೀಸೆಲ್ ಖಾಲಿಯಾಗಿದೆ. ಆದರೆ ಸಮಸ್ಯೆ ಪರಿಹಾರವಾಗದಿದ್ದರೆ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ನಿಗಮದ ಬಸ್ಗಳಿಗೆ HPCL, bpcl ತೈಲ ಕಂಪೆನಿಗಳಿಂದ ಸಗಟು ವ್ಯಾಪಾರಿಗಳು ತೈಲ ಸರಬರಾಜು ಮಾಡ್ತಿದ್ವು. ಆದ್ರೆ ಬಲ್ಕ್ ಆಗಿ ತೈಲ ಖರೀದಿ ಮಾಡುವಾಗ 30 ರೂ ಜಾಸ್ತಿ ಹೊರೆಆಗ್ತಿತ್ತು. ಇದನ್ನು ತಪ್ಪಿಸಲು ನಿಗಮ ಚಿಲ್ಲರೆ ವ್ಯಾಪಾರಿಗಳ ಮೊರೆ ಹೋಗಿತ್ತು. ಆದ್ರೆ ಟ್ಯಾಂಕರ್ ಮೂಲಕ ತೈಲ ಪೂರೈಕೆ ಮಾಡ್ತಿದ್ದ ಚಿಲ್ಲರೆ ವ್ಯಾಪಾರಿಗಳಿಗೂ ಸರಿಯಾದ ಹಣ ನೀಡದೆ ಇದ್ದು ಇಂಧನ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಈಗಾಗಲೆ ತೈಲ ಕಂಪೆನಿಗಳಿಗೆ 70 ರಿಂದ 80 ಕೋಟಿ ಬಾಕಿ ಹಣ ಉಳಿಸಿಕೊಂಡಿರುವ ಬಾಕಿ ಹಣವನ್ನು ಕೂಡಲೆ ಪಾವತಿ ಮಾಡಿ ಸಮಸ್ಯೆ ಕೂಡಲೆ ಬಗೆಹರಿಸುವುದಾಗಿ ಬಿಎಂಟಿಸಿ ಎಂ.ಡಿ ಸತ್ಯವತಿ ತಿಳಿಸಿದ್ದಾರೆ.