ನವುಲೆಯ ಕೃಷಿ ಕಾಲೇಜಿನಲ್ಲಿ ಅಡಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಅಡಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಕೆಪೆಕ್ ಎಂ.ಡಿ. ಸಿ.ಎನ್. ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.
ಶಿವಮೊಗ್ಗ : ಜಿಡಿಪಿಗೆ ಮುಖ್ಯ ಕೊಡುಗೆ ಕೃಷಿ ಕ್ಷೇತ್ರದ್ದಾಗಿದ್ದು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕೆಂದು ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದರು.
ಇಲ್ಲಿನ ನವುಲೆಯ ಕೃಷಿ ಕಾಲೇಜಿನಲ್ಲಿ ಅಡಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ ಎಂಬ ವಿಷಯದ ಬಗ್ಗೆ ಏರ್ಪಡಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿ, ಕಾಳು ಮೆಣಸು ಸೇರಿದಂತೆ ಯಾವುದೇ ಸಾಂಬಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದಾಗ ಆರ್ಥಿಕತೆ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕಾಳು ಮೆಣಸನ್ನು ಪ್ಲಾಂಟೇಷನ್ ಬೆಳೆಯಾಗಿ ಬೆಳೆಯಲಾಗುತ್ತಿದೆ
ಗೋವಾದಿಂದ ಕನ್ಯಾಕುಮಾರಿವರೆಗೆ ಕಾಳು ಮೆಣಸನ್ನು ಪ್ಲಾಂಟೇಷನ್ ಬೆಳೆಯಾಗಿ ಬೆಳೆಯಲಾಗುತ್ತಿದೆ. ಅಡಕೆ ಮತ್ತು ಸಿಲ್ವರ್ ಓಕ್ ಮರಗಳಿಗೆ ಕಾಳು ಮೆಣಸು ಬಳ್ಳಿಯನ್ನು ಹಬ್ಬಿಸಬೇಕು. ಊರು-ಕೇರಿಗಳಲ್ಲಿ ನೂರಾರು ತಳಿಗಳನ್ನು ಬೆಳೆದು ರೈತರು ಪ್ರಸಿದ್ಧಪಡಿಸಿದ್ದಾರೆ. ಈ ತಳಿಗಳಿಗೆ ಟ್ಯಾಗ್‌ಲೈನ್ ನೀಡಿ, ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ. ಕಾಳು ಮೆಣಸಿನ ಪ್ರತಿ ತಳಿಗಳೂ ವಿಶೇಷವಾಗಿದ್ದು, ತಳಿಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಸಾವಯವವಾಗಿ ಬೆಳೆಯುವುದು ಮತ್ತು ಮಾರುಕಟ್ಟೆ, ರಫ್ತು ಇತರೆ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ಕೃಷಿಕ ಯೋಜನೆಯಡಿ ರೈತರಿಗೆ ಶೇ.50 ಸಬ್ಸಿಡಿ ಯೊಂದಿಗೆ ₹30 ಲಕ್ಷ ಸಾಲ ನೀಡಲಾಗುವುದು. ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ಪ್ರಾಜೆಕ್ಟ್ ವರದಿ ಸಿದ್ಧಪಡಿಸಲು ಮತ್ತು ಸಾಲ ಕೊಡಿಸುವಲ್ಲಿ ಸಹಾಯ ನೀಡಲಾಗುವುದು ಎಂದರು.
₹2.10 ಕೋಟಿ ವೆಚ್ಚದಲ್ಲಿ ಮೂಡಿಗೆರೆಯಲ್ಲಿ ಸಂಸ್ಕರಣಾ ಘಟಕ
₹2.10 ಕೋಟಿ ವೆಚ್ಚದಲ್ಲಿ ಮೂಡಿಗೆರೆಯಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದು, ಇಲ್ಲಿ ಕಾಳು ಮೆಣಸು ಬೆಳೆಗಾರರು ಉಚಿತವಾಗಿ ಸಂಸ್ಕರಣೆ ಮಾಡಿಕೊಳ್ಳಬಹುದು. ಹಾಗೂ ಕೆಪಿಕ್‌ಯಿಂದ ರೈತರಿಗೆ, ಬೆಳೆಗಾರರಿಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಐಸಿಎಆರ್-ಐಐಎಸ್‌ಆರ್ ನಿರ್ದೇಶಕರಾದ (ಕೊಝಿಕೊಡ್) ಡಾ.ಬಾಲಚಂದ್ರ ಹೆಬ್ಬಾರ್, ಆರ್.ದಿನೇಶ್, ಪ್ರಾಜೆಕ್ಟ್ ಕೋಆರ್ಡಿನೇಟರ್ ಡಾ.ಪ್ರಸಾದ್, ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ದೇವಿಕುಮಾರ್, ಶಶಾಂಕ್, ವಿವಿ ಶಿಕ್ಷಣ ನಿರ್ದೇಶಕ ಬಿ.ಹೇಮ್ಲಾನಾಯ್ಕ, ದುಷ್ಯಂತ ಕುಮಾರ್, ಕೃಷಿ ಕಾಲೇಜಿನ ಡೀನ್ ಡಾ.ತಿಪ್ಪೇಶ್, ಡೀನ್ ಡಾ.ವಿ.ಶ್ರೀನಿವಾಸ್ ಡಾ.ಪ್ರದೀಪ್, ಡಾ.ನಾಗರಾಜಪ್ಪ ಅಡಿವಪ್ಪರ್ ಇದ್ದರು.

