Asianet Suvarna News Asianet Suvarna News

ಮಾರ್ಚ್ ಅಂತ್ಯಕ್ಕೆ 5 ಸಾವಿರ ಬಸ್ ಸಾರ್ವಜನಿಕ ಸೇವೆಗೆ: ಸಚಿವ ರಾಮಲಿಂಗಾರೆಡ್ಡಿ

ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ  ಕನಿಷ್ಠ 5 ಸಾವಿರ ಬಸ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ

Five thousand buses for public service by the end of March says Minister Ramalinga Reddy gow
Author
First Published Feb 4, 2024, 12:12 PM IST

ಗದಗ (ಫೆ.4): ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯವಾಗಿ  ಮಾರ್ಚ್‌ ಅಂತ್ಯಕ್ಕೆ 5800 ಬಸ್‌ಗಳ ಖರೀದಿ ಮಾಡುವ ಗುರಿ ಹೊಂದಲಾಗಿದೆ. ಹೀಗಾಗಿ ಕನಿಷ್ಠ 5 ಸಾವಿರ ಬಸ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ಶನಿವಾರ ಸಂಜೆ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್‌ಗಳ ಲೋಕಾರ್ಪಣೆ, ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ, ನಗದು ರಹಿತ ಟಿಕೆಟ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಸದ್ಯದಲ್ಲಿಯೇ 325 ನೂತನ ಬಸ್ ಖರೀದಿಗೆ ಟೆಂಡರ್ ಜರುಗಿಸಿ ಬಸ್ ಖರೀದಿಸಾಗುವುದು ಎಂದರು.

ವಿದ್ಯಾರ್ಥಿಗಳ ಓದುವ ಆಸಕ್ತಿ ಕುಂದಿಸಿದ ಶಕ್ತಿ ಯೋಜನೆ..!

ಈ ಮೂಲಕ ರಾಜ್ಯದ ಜನತೆಗೆ ಗುಣಮಟ್ಟದ ಸೇವೆ ಒದಗಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಶಕ್ತಿ ಯೋಜನೆ ಜಾರಿಯಿಂದಾಗಿ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಸಮಸ್ಯೆಯಾಗಿತ್ತು. ಅದನ್ನು ನೀಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಅಗತ್ಯ ನೆರವು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅ‍ವರು, ಕಳೆದ 7 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ನಾನು ಸಚಿವನಾದ ನಂತರ 9 ಸಾವಿರ ಹುದ್ದೆ ನೇಮಕಾತಿಗೆ ಅನುಮತಿ ನೀಡಿದ್ದು, ನೇಮಕಾತಿ ವಿಷಯದಲ್ಲಿ ಆಯಾ ವಿಭಾಗೀಯ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಗದಗ ನಗರದಲ್ಲಿ 100 ಎಕರೆಗೂ ಅಧಿಕ ಜಮೀನು ನೀಡಿದರೆ ಪ್ರಸಕ್ತ ಸಾಲಿನಲ್ಲಿಯೇ ಟ್ರಕ್ ಟರ್ಮಿನಲ್ ಮಂಜೂರು ಮಾಡಲಾಗುವುದು. ಮುಂಬರುವ ಬಜೆಟ್‌ನಲ್ಲಿ ಈ ವಿಷಯ ಅಳವಡಿಸಲಾಗುವುದು. ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದ ವೇಳೆಯಲ್ಲಿಯೇ ಪ್ರತಿ ಜಿಲ್ಲೆಯಲ್ಲಿಯೂ ಡ್ರೈವಿಂಗ್ ಲೈಸೆನ್ಸ್ ನೀಡುವ ಕ್ಯಾಂಪ್ ಮಾಡಲಾಗುತ್ತಿತ್ತು. ಈಗ ಮತ್ತೆ ಅದನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಶಕ್ತಿ ಯೋಜನೆ: 248 ಕೋಟಿ ಸ್ತ್ರೀಯರಿಂದ ಉಚಿತ ಬಸ್‌ ಪ್ರಯಾಣ

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನಗದು ರಹಿತ ಟಿಕೆಟ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪುಸ್ತಕ ವ್ಯವಸ್ಥೆ, ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವಸ್ತುಗಳು ಇಲ್ಲೆ ಸಿಗುವಂತಾಗಬೇಕು. ವಿಮಾನ ನಿಲ್ದಾಣದಲ್ಲಿ ಸಿಗುವ ಎಲ್ಲ ವ್ಯವಸ್ಥೆಗಳು ಸಿಗುವಂತಾ ಮಾದರಿ ಬಸ್ ನಿಲ್ದಾಣವನ್ನಾಗಿ ಸಾರಿಗೆ ಇಲಾಖೆ ಅಭಿವೃದ್ಧಿ ಪಡಿಸಬೇಕು.

ಸಾರಿಗೆ ಇಲಾಖೆಯಿಂದ ಗದಗ ನಗರಕ್ಕೆ ಕಡಿಮೆ ಕೆಲಸ ಆಗಿದೆ. ನಗರದಲ್ಲಿ ಟ್ರಕ್ ಟರ್ಮಿನಲ್ ಆಗಬೇಕಿತ್ತು. ಭೂಸ್ವಾಧೀನ ಪ್ರಕ್ರಿಯೆ ಹಲವು ಕಾರಣಗಳಿಂದ ನಿಂತಿದೆ. ಟ್ರಕ್ ಟರ್ಮಿನಲ್ ಅನ್ನು ಆದಷ್ಟು ಬೇಗ ಮಂಜೂರು ಮಾಡಬೇಕು. ಗದಗ ನಗರದಲ್ಲಿ ಕೆಲವಡೆ ಮಿನಿ ಬಸ್ ನಿಲ್ದಾಣಗಳನ್ನು ಮಂಜೂರು, ವಿಭಾಗೀಯ ಚಾಲಕ ತರಬೇತಿ ಕೇಂದ್ರ, ಅಶ್ವಮೇಧ ಬಸ್ ವ್ಯವಸ್ಥೆ, ಇನ್ನೂ ಹೆಚ್ಚಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.

ವಾಕರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾತನಾಡಿ, ಶಕ್ತಿ ಯೋಜನೆ ಯಶಸ್ವಿಯಾಗಿದೆ. ಹುಬ್ಬಳ್ಳಿ ವಿಭಾಗದ 6 ಜಿಲ್ಲೆಯಲ್ಲಿ 34 ಕೋಟಿ ಜನ ಸಂಚರಿಸಿದ್ದಾರೆ. ರಾಜ್ಯದಲ್ಲಿ ಹೊಸ ಬಸ್ ಖರೀದಿಗೆ ಸರ್ಕಾರ 500 ಕೋಟಿ ಮೀಸಲಿಟ್ಟಿದೆ. ಅದರಲ್ಲಿ ವಾಕರಸಾ ಸಂಸ್ಥೆಗೆ ರು. 150 ಕೋಟಿ ಕೊಟ್ಟಿದೆ. ಅದರಲ್ಲೂ ಮೊದಲ ಹಂತದ 20 ಕೋಟಿ ವೆಚ್ಚದಲ್ಲಿ 50 ಬಸ್ ಖರೀದಿಸಲಾಗಿದೆ. ಅಪಘಾತ ರಹಿತ ಸೇವೆ ನಮ್ಮ ಸಂಸ್ಥೆಯ ಉದ್ದೇಶ ಆಗಿದೆ. ಅಪಘಾತ ರಹಿತ ಸೇವೆ ಸಲ್ಲಿಸಿದ 48 ಜನರಿಗೆ ಇಂದು ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 48 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಗುರಣ್ಣ ಬಳಗಾನೂರ, ಎಸ್.ಎನ್.ಬಳ್ಳಾರಿ ಮುಂತಾದವರು ಹಾಜರಿದ್ದರು.

Follow Us:
Download App:
  • android
  • ios