ವಿದ್ಯಾರ್ಥಿಗಳ ಓದುವ ಆಸಕ್ತಿ ಕುಂದಿಸಿದ ಶಕ್ತಿ ಯೋಜನೆ..!

ನಿಗದಿತ ಸಮಯಕ್ಕೆ ಬಸ್‌ಗಳಿದ್ದರೂ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಈಗಿರುವ ಬಸ್‌ಗಳು ಸಾಲುತ್ತಿಲ್ಲ. ವಿದ್ಯಾರ್ಥಿಗಳಿಗಾಗಿ ರಬಕವಿ-ಬನಹಟ್ಟಿಯಿಂದ ಜಮಖಂಡಿವರೆಗೆ ಬೆಳಗಿನ ಸಮಯದಲ್ಲಿ ವಿಶೇಷ ಬಸ್‌ ಓಡಿಸಬೇಕೆಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

Shakti Scheme has Dampened Students Interest in Reading in Karnataka grg

ಶಿವಾನಂದ ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜ.30):  ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಮಖಂಡಿ ಕಡೆಗೆ ತೆರೆಳಬೇಕಾದರೆ ಎರಡು ಗಂಟೆಗಳವರೆಗೂ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆಯಿಂದಲೇ ಬಸ್‌ನಲ್ಲಿ ಪ್ರಯಾಣಿಕರು ಜೋತುಬಿದ್ದು ಪ್ರಯಾಣಿಸುವ ಕಾರಣ ನಿಂತು ಹೋಗಲೂ ಜಾಗವಿಲ್ಲದೆ ವಿದ್ಯಾರ್ಥಿಗಳು ಬಸ್ ತಪ್ಪಿಸಿಕೊಂಡು ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗದೇ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ. ನಿಗದಿತ ಸಮಯಕ್ಕೆ ಬಸ್‌ಗಳಿದ್ದರೂ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಈಗಿರುವ ಬಸ್‌ಗಳು ಸಾಲುತ್ತಿಲ್ಲ. ವಿದ್ಯಾರ್ಥಿಗಳಿಗಾಗಿ ರಬಕವಿ-ಬನಹಟ್ಟಿಯಿಂದ ಜಮಖಂಡಿವರೆಗೆ ಬೆಳಗಿನ ಸಮಯದಲ್ಲಿ ವಿಶೇಷ ಬಸ್‌ ಓಡಿಸಬೇಕೆಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ತರಗತಿಗಳಿಗೆ ತೆರಳುವ ವಿದ್ಯಾರ್ಥಿಗಳು ದಿನಂಪ್ರತಿ ಒಂದೆರಡು ಕ್ಲಾಸ್‌ ತಪ್ಪಿಸಿಕೊಂಡು ಶಿಕ್ಷಕರಿಂದ ಶಿಕ್ಷೆಗೆ ಗುರಿಯಾಗುವುದು ಸಾಮಾನ್ಯವಾಗಿದ್ದರೆ, ಇತ್ತ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತಲು ನೂಕುನುಗ್ಗಲು ಉಂಟಾಗಿ ಬಸ್ ಹತ್ತಲು ಹರಸಾಹಸ ಪಡುವುದು ಸಾಮಾನ್ಯವಾಗಿದೆ.

ಬಾಗಲಕೋಟೆ: ಶಾಲಾ ವಾಹನ ಭೀಕರ ಅಪಘಾತ ನಾಲ್ವರು ಮಕ್ಕಳು ದುರ್ಮರಣ!

ತಾಲೂಕು, ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ಕಚೇರಿ, ಆಸ್ಪತ್ರೆ, ವ್ಯಾಪಾರಕ್ಕೆ ತೆರಳುವವರು ಬೆಳಗ್ಗೆಯೇ ಬಸ್ ನಿಲ್ದಾಣದಲ್ಲಿರುತ್ತಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬರಲಿದ್ದು, ಸಾರ್ವಜನಿಕರಿಗೂ ತೀವ್ರ ಸಮಸ್ಯೆಯಾಗಿದೆ. ವಯಸ್ಸಾದವರು ಸಾರಿಗೆ ಬಸ್‌ಗಳಿಲ್ಲದೆ ಖಾಸಗಿ ಟಂಟಂ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಬಸ್ ಸಂಖ್ಯೆ ಹೆಚ್ಚಿಸಲಿ: 

ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದ್ದು, ಬೆಳಗ್ಗೆ ಹಾಗೂ ಸಂಜೆ ಹೊತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ತಾಲೂಕು ಕೇಂದ್ರವಾಗಿರುವ ರಬಕವಿ-ಬನಹಟ್ಟಿ ನಗರಕ್ಕೆ ಜಮಖಂಡಿಯಿಂದ ಪ್ರತ್ಯೇಕ ಬಸ್ ವ್ಯವಸ್ಥೆಯಿಲ್ಲ. ಇದರಿಂದಾಗಿ ಸ್ಥಳೀಯ ಸಂಚಾರಕ್ಕೆ ಸಮಸ್ಯೆಯಾಗಿದೆ. ಘಟಕ ವ್ಯವಸ್ಥಾಪಕರು ಸಮಸ್ಯೆ ಅರಿತು ಪ್ರತಿ ಗಂಟೆಗೊಂದು ರಬಕವಿ-ಬನಹಟ್ಟಿಯಿಂದ ಜಮಖಂಡಿಗೆ ವಾಹನ ಸಂಚಾರ ವ್ಯವಸ್ಥೆ ಮಾಡಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ಭಿಕ್ಷುಕರ ಹಾವಳಿ: 

ಬಸ್ ನಿಲ್ದಾಣದಲ್ಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಅಶ್ಲೀಲ ಪದಗಳಿಂದ ಪ್ರಯಾಣಿಕರನ್ನು ನಿಂದಿಸುತ್ತ, ದಿನಂಪ್ರತಿ ಬೆಳಗಿನ ಜಾವ ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರು ಈ ಕುರಿತು ಕ್ರಮ ಜರುಗಿಸಬೇಕೆಂದು ಮುರಳೀಧರ ಕಾಬರಾ ಆಗ್ರಹಿಸಿದ್ದಾರೆ.

ಲೋಕಲ್ ಬಸ್‌ಗಾಗಿ ಬಹುದಿನಗಳ ಬೇಡಿಕೆಯಾಗಿದೆ. ಜಮಖಂಡಿವರೆಗೆ ಸಂಚರಿಸಲು ಹರಸಾಹಸ ಪಡುವಂತಾಗಿದೆ. ತಕ್ಷಣವೇ ಪ್ರತಿ ಗಂಟೆಗೊಂದು ಬಸ್ ಸಂಚಾರವಾಗಬೇಕು ಎಂದು ಬನಹಟ್ಟಿ ಪಾವರ್‌ಲೂಮ್ ಮಾಲಿಕರ ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ ಹೇಳಿದ್ದಾರೆ. 

ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಏರುಪೇರು; ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು

ಬಸ್‌ ಸಮಸ್ಯೆಯಿಂದ ವಿದ್ಯಾರ್ಥಿಗಳು ಪ್ರತಿದಿನ ತಡವಾಗಿ ತೆರಳುತ್ತಿರುವುದರಿಂದ ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗುತ್ತಿಲ್ಲ. ದಿನಂಪ್ರತಿ ತರಗತಿಗಳಿಂದ ದೂರ ಉಳಿದು ಬೋಧಕರ ಕೋಪಕ್ಕೆ ತುತ್ತಾಗಬೇಕಾಗಿದೆ. ತಕ್ಷಣ ತಾತ್ಕಾಲಿಕ ಬಸ್‌ಗಳ ವ್ಯವಸ್ಥೆಯಾಗಬೇಕು ಎಂದು ವಿದ್ಯಾರ್ಥಿನಿ ಜಗದಾಳ ದೀಪಾ ಪತ್ತಾರ ಹೇಳಿದ್ದಾರೆ. 

ಶಾಲಾ ಮಕ್ಕಳು ಬಸ್‌ನಲ್ಲಿ ಜೋತುಬಿದ್ದೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಮಕ್ಕಳು ಬರೋವರಿಗೆ ಪಾಲಕರಿಗೆ ಚಿಂತೆ ಎದುರಾಗಿದೆ. ಶಕ್ತಿ ಯೋಜನೆಗೆ ಪರ್ಯಾಯವಾಗಿ ವಿದ್ಯಾರ್ಥಿಗಳಿಗಾಗಿ ಸರ್ಕಾರ ಬೇರೆ ವ್ಯವಸ್ಥೆ ಮಾಡಬೇಕಿದೆ ಎಂದು ವಿದ್ಯಾರ್ಥಿನಿ ಪದ್ಮಾ ಬಬಲೇಶ್ವರ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios