* ರಾಜ್ಯದ ಇತರೆಡೆಯೂ ಉತ್ತಮ ಮಳೆ* ವಿಜಯನಗರ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಕೃಷಿಗೂ ಹಾನಿ* ಹಲವು ಕಡೆಗಳಲ್ಲಿ ಸಾಧಾರಣ ಮಳೆ
ಬೆಂಗಳೂರು(ಜೂ.04): ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಮುಂಗಾರುಪೂರ್ವ ಉತ್ತಮವಾಗಿ ಸುರಿದಿದ್ದು ಕಲ್ಯಾಣ ಕರ್ನಾಟಕ ಭಾಗದ ನಾಲ್ಕೈದು ಜಿಲ್ಲೆಗಳಲ್ಲಿ ಅಬ್ಬರಿಸಿದೆ.
ಮಳೆ ಸಂಬಂಧಿ ಕಾರಣಗಳಿಗೆ 5 ವರ್ಷದ ಬಾಲಕಿ ಸೇರಿದಂತೆ ಐವರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿದ್ದು ವಿಜಯನಗರ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಕೃಷಿಗೂ ಹಾನಿಯಾಗಿದೆ. ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿದಿರುವ ಪರಿಣಾಮ ರಸ್ತೆಗಳು ಸೇತುವೆಗಳು ಜಲಾವೃತಗೊಂಡು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಕೆಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರಗಿಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಭಾರಿ ಮಳೆ ಸುರಿದಿದ್ದು ಜೇವರ್ಗಿಯಲ್ಲಿ ಮನೆ ಗೋಡೆ ಕುಸಿದು ಮಲಗಿದ್ದ 5 ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಕೊಪ್ಪಳ, ಬಳ್ಳಾರಿ, ವಿಜಯನಗರ, ಬೆಳಗಾವಿ, ಬಾಗಲಕೋಟೆ, ದಾವಣಗೆರೆ, ವಿಜಯಪುರ ಚಿತ್ರದುರ್ಗ, ದಾವಣಗೆರೆ, ಜಿಲ್ಲೆಗಳಲ್ಲಿ ಅತ್ಯುತ್ತಮ ಮಳೆ ಸುರಿದಿದ್ದರೆ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಕಲಬುರಗಿಯಲ್ಲಿ ಭಾರೀ ಮಳೆ: ಮನೆ ಗೋಡೆ ಬಿದ್ದು ಬಾಲಕಿ ಸಾವು
ಕೆಲ ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾನಿ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಯರ ಕೆರೆ ಪ್ರದೇಶದಲ್ಲಿನ ಹೊಲ-ಗದ್ದೆಗಳು ಜಲಾವೃತವಾಗಿದ್ದು ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿವೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಕಬ್ಬು, ಬಾಳೆ, ನವಣೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಜಲಾವೃತವಾಗಿವೆ. ಇನ್ನು ಮಹಾರಾಷ್ಟ್ರ ಮತ್ತು ವಿಜಯಪುರ ಜಿಲ್ಲೆಯ ವಿಜಯಪುರ, ತಿಕೋಟಾ ಸುತ್ತಮುತ್ತಲಿನ ಹಲವೆಡೆ ಬುಧವಾರ ರಾತ್ರಿಯಿಡೀ ಮಳೆ ಬಿದ್ದಿದ್ದರಿಂದಾಗಿ ಬೆಳ್ಳಂಬೆಳಗ್ಗೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ಡೋಣಿ ನದಿ ಉಕ್ಕಿ ಹರಿದು ರೈತರ ಹೊಲಗಳಿಗೆ ನುಗ್ಗಿ ಅಪಾರ ಹಾನಿ ಮಾಡಿದೆ.
ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶ: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ಈಗಾಗಲೇ ಕೇರಳ ಪ್ರವೇಶಿಸಿರುವ ನೈಋುತ್ಯ ಮುಂಗಾರು ಮಾರುತಗಳು ಇನ್ನೆರಡು ದಿನದಲ್ಲಿ ರಾಜ್ಯ ಪ್ರವೇಶಿಸುವ ಮೂಲಕ ಉತ್ತಮ ಮಳೆ ಸುರಿಸುವ ಲಕ್ಷಣಗಳು ಇವೆæ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಭಾಗ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜೂ.5ರವರೆಗೆ ವ್ಯಾಪಕ ಮಳೆಯಾಗಲಿದೆ. ಹೀಗಾಗಿ ಉಡುಪಿ, ದಕ್ಷಿಣ ಮತ್ತು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್, ಧಾರವಾಡ, ಕಲಬುರಗಿ ಜಿಲ್ಲೆಗಳಿಗೆ ಜೂ.5ರವರೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ರಾಜ್ಯದಲ್ಲಿ ಜೂನ್ ಮೊದಲ ವಾರಾಂತ್ಯಕ್ಕೆ ಮುಂಗಾರು ಪ್ರವೇಶ ಬಹುತೇಕ ಖಚಿತವಾಗಿದೆ. ಚಂಡಮಾರುತಗಳ ಸೃಷ್ಟಿಮತ್ತು ಹವಾಮಾನದಲ್ಲಿನ ಬದಲಾವಣೆಗಳಿಂದ ಜೂ.1ರಿಂದ ಆರಂಭವಾಗಬೇಕಿದ್ದ ಮುಂಗಾರು ಒಂದು ವಾರ ತಡವಾಗಲಿದೆ. ಆರಂಭದಲ್ಲಿ ರಾಜ್ಯದಲ್ಲಿ ಮಳೆ ಸಾಧಾರಣವಾಗಿ ಸುರಿಯಲಿದೆ. ನಂತರದ ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ 5 ದಿನ ಭಾರೀ ಮಳೆ : ಹಲವು ಜಿಲ್ಲೆಗಳಿಗೆ ಅಲರ್ಟ್
ಅರಬ್ಬಿ ಸಮುದ್ರದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಉಂಟಾಗಿದ್ದ ತೀವ್ರ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಮುಂದುವರಿದಿದೆ. ಇದರ ಜತೆಗೆ ನೈಋುತ್ಯ ಮಾರುತಗಳ ಆಗಮನದಿಂದ ಜೂ.6ರವರೆಗೂ ರಾಜ್ಯದಲ್ಲಿ ಅಲ್ಲಲ್ಲಿ ಸಾಧಾರಣ ಹಾಗೂ ಭಾರಿ ಮಳೆ ಬೀಳಲಿದೆ. ಜೂ.6ರನಂತರ ರಾಜ್ಯದಲ್ಲಿ ಮಳೆ ತಾತ್ಕಾಲಿಕವಾಗಿ ದುರ್ಬಲಗೊಳ್ಳಲಿದೆ ಎಂದು ಇಲಾಖೆ ಅಂದಾಜಿಸಿದೆ.
ನಾಳೆಯವರೆಗೆ ಯೆಲ್ಲೋ ಅಲರ್ಟ್:
ಕಳೆದ 24 ಗಂಟೆಯಲ್ಲಿ ಕೊಪ್ಪಳದಲ್ಲಿ ಅತ್ಯಧಿಕ 12 ಸೆಂ.ಮೀ, ಚಿಕ್ಕಮಗಳೂರಿನ ಯಗಟಿ ಮತ್ತು ತುಮಕೂರಲ್ಲಿ ತಲಾ 6 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಹಲವು ಕಡೆಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಇನ್ನು ಜಮೀನಿನಲ್ಲಿ ಕೆಲಸ ಮುಗಿಸಿ ಹಿಂದುರುಗುತ್ತಿದ್ದ ರಾಯಚೂರು ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದ ಚಂದ್ರಶೇಖರ ಓಂಕಾರಿ(58), ದೇವದುರ್ಗ ಇಂಗಳದಾಳ ಗ್ರಾಮದ ಕುರಿಗಾಯಿ ಬೂದೆಪ್ಪ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಾಳಗಿಯಲ್ಲಿ ಝಾಕೀರ್(25), ಸೈದಾಪುರದ ಸಮೀಪದ ಕಣೇಕಲ್ ಗ್ರಾಮದ ಶಿವಾರೆಡ್ಡಿ ಸಿಡಿಲಿಗೆ ಮೃತಪಟ್ಟಿದ್ದಾರೆ.
