ಬೆಂಗಳೂರು (ಜೂ.02):  ರಾಜ್ಯಕ್ಕೆ ಜೂನ್ 3 ರಂದು ಮುಂಗಾರು ಪ್ರವೇಶವಾಗಲಿದ್ದು, ಜೂ. 2 ರಿಂದ 6  ರವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ  ಕರ್ನಾಟಕ ,ಕೇರಳ, ಕರಾವಳಿಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು ಭಾರಿ ಮಳೆಯಾಗಲಿದ್ದು,  ಜೂನ್ 2, 3 ಹಾಗೂ 4 ರಂದು ಯೆಲ್ಲೋ ಅಲರ್ಟ್( ಹವಾಮಾನ ಅಪಾಯಕಾರಿಯಾಗಿದ್ದು ಎಚ್ಚರಿಕೆಯಿಂದರಬೇಕೆಂದು ನೀಡುವ ಪ್ರಾಥಮಿಕ ಹಂತದ ಮುನ್ಸೂಚನೆ) ಘೋಷಣೆ ಮಾಡಲಾಗಿದೆ.

ಜೂ.3ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ: ಮುಂಗಾರು ಪೂರ್ವ ಭಾರೀ ಮಳೆ

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆ ಇದ್ದು,  ಬೆಳಗಾವಿ, ಧಾರವಾಡ, ಬಿಜಾಪುರ್, ಬಾಗಲಕೋಟೆ , ಕಲ್ಬುರ್ಗಿ, ಬೀದರ್, ಯಾದಗಿರಿ , ರಾಯಚೂರು ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಜೂನ್ 3 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಚನ್ನಬಸವನಗೌಡ.ಎಸ್.ಪಾಟೀಲ್ ಹೇಳಿದ್ದಾರೆ.