ಮಂತ್ರಾಲಯದ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಮೇವಿನ ಬಣಿವೆಗಳು ಭಸ್ಮವಾಗಿದ್ದು, ಯಾವುದೇ ಜಾನುವಾರುಗಳಿಗೆ ಹಾನಿಯಾಗಿಲ್ಲ.
ರಾಯಚೂರು (ಆ.12): ಮಂತ್ರಾಲಯದ ಪ್ರಸಿದ್ಧ ರಾಯರ ಮಠದ ಗೋಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಗೋಶಾಲೆಯಲ್ಲಿ ಸಂಗ್ರಹಿಸಿಡಲಾಗಿದ್ದ ಕೆಲವು ಮೇವಿನ ಬಣಿವೆಗಳು ಹೊತ್ತಿ ಉರಿದು ಭಸ್ಮವಾಗಿವೆ.
ನೂರಾರು ಹಸುಗಳಿರುವ ಈ ಗೋಶಾಲೆಯಲ್ಲಿ ಘಟನೆ ಸಂಭವಿಸಿದ್ದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಅದೃಷ್ಟವಶಾತ್, ಯಾವುದೇ ಗೋವುಗಳಿಗೆ ಪ್ರಾಣಹಾನಿಯಾಗಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗೋಶಾಲೆಯ ವಿದ್ಯುತ್ ವ್ಯವಸ್ಥೆಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಮೇವಿನ ಬಣಿವೆಗಳಿಗೆ ಬೆಂಕಿ ತಗುಲಿದೆ.
ಇದನ್ನೂ ಓದಿ: ಮಂತ್ರಾಲಯ ಶ್ರೀಮಠದಲ್ಲಿ ಮೊದಲ ಬಾರಿಗೆ ಪುಷ್ಕರಣಿಯಲ್ಲಿ ರಾಯರ ಅದ್ಧೂರಿ ತೆಪ್ಪೋತ್ಸವ
ಕ್ಷಣಮಾತ್ರದಲ್ಲಿ ಬೆಂಕಿಯ ಜ್ವಾಲೆಗಳು ಗೋಶಾಲೆಯ ಒಂದು ಭಾಗವನ್ನು ಆವರಿಸಿತು. ಗೋಶಾಲೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಂತ್ರಾಲಯ ರಾಯರ ಹುಂಡಿ ಎಣಿಕೆ: ಕೇವಲ 35 ದಿನಗಳಲ್ಲಿ ₹5.46 ಕೋಟಿ ಸಂಗ್ರಹ!
ಈ ಹಿಂದೆ ತುಂಗಭದ್ರಾ ನದಿಯ ಪ್ರವಾಹದ ನೀರು ಮಂತ್ರಾಲಯಕ್ಕೆ ನುಗ್ಗಿದಾಗ ಗೋಶಾಲೆಯೂ ನಾಶವಾಯಿತು. ಕಟ್ಟಿಹಾಕಲಾಗಿದ್ದ 60 ಕ್ಕೂ ಹೆಚ್ಚು ಹಸುಗಳು ಮತ್ತು ಕರುಗಳು ಮೃತಪಟ್ಟಿದ್ದವು. ಕಟ್ಟಿಹಾಕದೆ ಉಳಿದ ಪ್ರಾಣಿಗಳು ಸುರಕ್ಷಿತವಾಗಿ ಪಾರಾಗಿದ್ದವು. ಗೋಶಾಲೆಯ ಆವರಣ ಗೋಡೆಯೂ ಎಲ್ಲವೂ ನಾಶವಾಗಿತ್ತು. ಬಳಿಕ ಗೋಶಾಲೆಯನ್ನು ಪುನರ್ನಿರ್ಮಿಸಲಾಗಿತ್ತು. ಇದೀಗ ಮತ್ತೆ ಅಗ್ನಿ ಅವಘಡ ದುರಂತ ಸಂಭವಿಸಿದೆ.
