ಜುಲೈ ತಿಂಗಳಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಗೆ 5.46 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಭಕ್ತರು 127 ಗ್ರಾಂ ಚಿನ್ನ ಮತ್ತು 1,820 ಗ್ರಾಂ ಬೆಳ್ಳಿಯನ್ನು ಸಹ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಈ ಮೊತ್ತವು ಶ್ರೀಮಠದ ಜನಪ್ರಿಯತೆ ಮತ್ತು ಭಕ್ತರ ಶ್ರದ್ಧೆಯನ್ನು ಪ್ರತಿಬಿಂಬಿಸುತ್ತದೆ.
ರಾಯಚೂರು, (ಜು.30): ಕಲಿಯುಗ ಕಾಮಧೇನು ಎಂದೇ ಖ್ಯಾತವಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಗೆ ಜುಲೈ ತಿಂಗಳಲ್ಲಿ ಭಕ್ತರಿಂದ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಕೇವಲ 35 ದಿನಗಳಲ್ಲಿ ರಾಯರ ಹುಂಡಿಗೆ 5 ಕೋಟಿ 46 ಲಕ್ಷ 6 ಸಾವಿರ 555 ರೂಪಾಯಿ ಜಮಾ ಆಗಿದ್ದು, ಈ ವರ್ಷದಲ್ಲಿ ಇದುವರೆಗಿನ ಅತೀ ಹೆಚ್ಚು ಕಾಣಿಕೆಯಾಗಿದೆ. ಜೊತೆಗೆ, ಭಕ್ತರು 127 ಗ್ರಾಂ ಚಿನ್ನ ಮತ್ತು 1,820 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ ಎಂದು ಮಂತ್ರಾಲಯ ಮಠದ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
ಶ್ರೀಮಠದಲ್ಲಿ ಬೆಳಗ್ಗೆಯಿಂದ ಆರಂಭವಾದ ಹುಂಡಿ ಎಣಿಕೆ ಕಾರ್ಯ ಸಂಜೆ 6 ಗಂಟೆಯ ವೇಳೆಗೆ ಮುಕ್ತಾಯಗೊಂಡಿತು. ಈ ಬಾರಿಯ ಕಾಣಿಕೆಯು ಜೂನ್ ತಿಂಗಳ 5 ಕೋಟಿ 28 ಲಕ್ಷ 39,538 ರೂಪಾಯಿಯ ದಾಖಲೆಯನ್ನು ಮುರಿದಿದೆ. ಕರ ಸೇವಕರು, ಭಕ್ತರು ಮತ್ತು ಮಠದ ಸಿಬ್ಬಂದಿ ಈ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ತುಂಗಾತೀರದಲ್ಲಿ ನೆಲೆಸಿರುವ ರಾಯರ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕಾಣಿಕೆಯ ಮೊತ್ತವು ಶ್ರೀಮಠದ ಜನಪ್ರಿಯತೆ ಮತ್ತು ಭಕ್ತರ ಶ್ರದ್ಧೆಯನ್ನು ತೋರಿಸುತ್ತದೆ. ಈ ಕಾಣಿಕೆಯು ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ ಎಂದು ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.
