ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಸೇರಿ ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಲ್ಲಿ ಔಷಧಿ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪದೋಷ ತನಿಖೆಗೆ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ (ಡಿ.19): ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಸೇರಿ ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಲ್ಲಿ ಔಷಧಿ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪದೋಷ ತನಿಖೆಗೆ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು. ಬಿಜೆಪಿಯ ಸಿ.ಟಿ.ರವಿ, ಭಾರತಿ ಶೆಟ್ಟಿ, ಎನ್.ರವಿಕುಮಾರ ಸೇರಿ ಹಲವು ಸದಸ್ಯರು ಗಮನ ಸೆಳೆಯುವ ಸೂಚನೆಯಡಿ ಮಾತನಾಡಿ, ಚಿಕ್ಕಮಗಳೂರ ಮೆಡಿಕಲ್ ಕಾಲೇಜಿನ ವ್ಯಾಪ್ತಿಯ ಜಿಲ್ಲಾಸ್ಪತ್ರೆಯಲ್ಲಿ ಜೀವರಕ್ಷಕ ಸೇರಿ ಇತರೆ ಔಷಧಿ ಖರೀದಿಸುವಲ್ಲಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾರೀ ಗೋಲ್‌ಮಾಲ್ ಆಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರೀದಿಸುವ ಔಷಧಿಗೂ, ಮೆಡಿಕಲ್ ಕಾಲೇಜ್‌ನಲ್ಲಿ ಖರೀದಿಸುವ ಔಷಧಿ ಒಂದೇ ಆಗಿದ್ದರೂ ದರ ಪಟ್ಟಿಯಲ್ಲಿ ಮಾತ್ರ ಭಾರೀ ವ್ಯತ್ಯಾಸ ಕಂಡು ಬಂದಿತ್ತು. ಕೆಲವೊಂದಿಷ್ಟು ಔಷಧಿಗೆ ನಿಗದಿಪಡಿಸಿದ್ದ ದರ ಶೇ.900ರಷ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಸಚಿವರು, ಔಷಧಿಗಳನ್ನು ಖರೀದಿಸುವಾಗ ಏಕರೂಪತೆ ಕಾಯ್ದುಕೊಳ್ಳಬೇಕು. ಆದರೆ ಔಷಧಿಗಳು ಆಯಾ ಕಂಪನಿ ಮತ್ತು ಒಟ್ಟು ಖರೀದಿ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದರು. ಇದಕ್ಕೆ ಆಕ್ಷೇಪಿಸಿದ ಸಿ.ಟಿ.ರವಿ, ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕೇವಲ 10 ರು.ಬೆಲೆಗೆ ಸಿಗುವ ಒಂದು ಮಾತ್ರೆಗೆ ಇಲ್ಲಿ 116 ರು.ಟೆಂಡರ್ ಆಗಿದೆ ಎಂದರು.
ಇದಕ್ಕೆ ದನಿಗೂಡಿಸಿದ ರವಿಕುಮಾರ್ ಹಾಗೂ ಭಾರತಿ ಶೆಟ್ಟಿ, ಇದರಲ್ಲಿ ದೊಡ್ಡ ಪ್ರಮಾಣದ ಲೂಟಿಯಾಗಿದೆ. ಕೂಡಲೇ ಇದನ್ನು ಗಂಭೀರವಾಗಿ ತನಿಖೆ ನಡೆಸಬೇಕು. ಅಲ್ಲದೇ ಕೊಡಗು, ಬಳ್ಳಾರಿ ಜಿಲ್ಲೆಗಳಲ್ಲಿಯೂ ಇದೇ ರೀತಿ ಟೆಂಡರ್ ಆಗಿದೆ. ಹೀಗಾಗಿ ಕೂಡಲೇ ಇದನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮೇಲ್ನೋಟಕ್ಕೆ ಲೋಪದೋಷಗಳು ಕಂಡು ಬರುತ್ತಿವೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದರೆ, ಸಮಗ್ರ ತನಿಖೆ ನಡೆಯಬೇಕು. ರಾಜ್ಯಾದ್ಯಂತ ಔಷಧಿ ಖರೀದಿ ಪ್ರಕ್ರಿಯೆ ಕುರಿತಂತೆ ತನಿಖೆ ನಡೆಸಿ ವರದಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯದ 3 ಕಡೆ ಕೌಶಲ್ಯಾಭಿವೃದ್ಧಿ ಕೇಂದ್ರ: ಸಚಿವ ಡಾ.ಶರಣಪ್ರಕಾಶ್
ಕೊಪ್ಪಳ, ಕಲಬುರಗಿ, ಮೈಸೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿಳಿಸಿದರು. ಬಿಜೆಪಿಯ ಭಾರತಿ ಶೆಟ್ಟಿ ಅವರು, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಮಂಡಳಿಯಿಂದ ನೀಡಲಾಗುತ್ತಿರುವ ತರಬೇತಿಯ ಪಠ್ಯದಲ್ಲಿ ಟೈಲರಿಂಗ್ ಹಾಗೂ ಪ್ಲಂಬ್ಲಿಂಗ್ ಸೇರಿಸಿಲ್ಲ. ಇದರಿಂದ ನಿರುದ್ಯೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು.
ಈ ಬಗ್ಗೆ ಉತ್ತರಿಸಿದ ಸಚಿವರು ಮಂಡಳಿಯಿಂದ ಯಾವ್ಯಾವ ಬಗೆಯ ತರಬೇತಿ ನೀಡಲಾಗುತ್ತಿದೆ ಎಂಬುದನ್ನು ತಿಳಿಸಿ, ನಿರುದ್ಯೋಗಿಗಳಿಗೆ ಕೌಶಲ್ಯ ಹೆಚ್ಚಿಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಯುವನಿಧಿ ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಬಳಸಿ ಮೂರು ಕಡೆಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲಾಗುವುದು. ಕೈಗಾರಿಕೆಗಳಿಗೆ ಯಾವ ಬಗೆಯ ಕೌಶಲ್ಯಗಳು ಬೇಕೋ ಅದಕ್ಕೆ ತಕ್ಕಂತೆ ತರಬೇತಿ ನೀಡಲಾಗುವುದು. ಟೈಲರಿಂಗ್ ತರಬೇತಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.


