SL Bhyrappa: ಅಗಲಿದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ (SL Bhyrappa) ಇಂದು  ಮಧ್ಯಾಹ್ನ 12:30ಕ್ಕೆ ಮೈಸೂರಿನ (Mysuru) ಚಾಮುಂಡಿ ಬೆಟ್ಟದ (Chamundi hill) ತಪ್ಪಲಿನ ರುದ್ರ ಭೂಮಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. 

ಮೈಸೂರು: ಅಗಲಿದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ (SL Bhyrappa) ಇಂದು ಮಧ್ಯಾಹ್ನ 12:30ಕ್ಕೆ ಮೈಸೂರಿನ (Mysuru) ಚಾಮುಂಡಿ ಬೆಟ್ಟದ (Chamundi hill) ತಪ್ಪಲಿನ ರುದ್ರ ಭೂಮಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. ಪತ್ನಿ ಸರಸ್ವತಿ, ಕುಟುಂಬಸ್ಥರು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಗಣ್ಯರು ಸರಸ್ವತಿ ಪುತ್ರನಿಗೆ ಕಣ್ಣೀರಿನ ವಿದಾಯ ಹೇಳಿದರು.

ಭಾರವಾದ ಮನಸ್ಸಿನಿಂದ ತಂದೆಯ ಚಿತೆಗೆ ಅಗ್ನಿ ಸ್ಪರ್ಶ 

ಅಂತಿಮ ವಿಧಿ ವಿಧಾನ ಪುತ್ರರಾದ ರವಿಶಂಕರ್‌, ಉದಯ್‌ ಶಂಕರ್‌ ನೆರವೇರಿಸಿದ್ದು, ಭೈರಪ್ಪನವರ ಇಚ್ಛೆಯಂತೆ ಅಂತ್ಯ ಸಂಸ್ಕಾರದಲ್ಲಿ ಉದಯೋನ್ಮುಖ ಲೇಖಕಿ ಸಹನಾ ವಿಜಯ್‌ಕುಮಾರ್ ಸಹ ಉಪಸ್ಥಿತರಿದ್ದರು. ಅಂತಿಮ ವಿಧಿವಿಧಾನಗಳ ಬಳಿಕ ಪುತ್ರರ ಜೊತೆಗೆ ಸಹನಾ ವಿಜಯ್‌ಕುಮಾರ್ ಭೈರಪ್ಪ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಇಂದು ಬೆಳಗ್ಗೆ ಭೈರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಿತು. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಗುರುವಾರ ಮೈಸೂರಿಗೆ ತರಲಾಗಿದ್ದು, ನಗರದ ಕಲಾಮಂದಿರ ಬಳಿಯ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭೈರಪ್ಪ ಅವರ ಪಾರ್ಥೀವ ಶರೀರಕ್ಕೆ ಕೇಂದ್ರ ಸರ್ಕಾರದ ಪರವಾಗಿ ಜೋಷಿಯವರು ಅಂತಿಮ ನಮನ, ಗೌರವಾರ್ಪಣೆ ಸಲ್ಲಿಸಿದ್ದಾರೆ. ಪತ್ರಕರ್ತರಾದ ವಿಶ್ವೇಶ್ವರ ಭಟ್, ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರು, ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು, ಸರ್ಕಾರಿ ಉನ್ನತ ಅಧಿಕಾರಿಗಳು ಭೈರಪ್ಪನವರಿಗೆ ಪುಷ್ಪ ನಮನ ಸಲ್ಲಿಸಿ ಅಗಲಿದ ಹಿರಿಯ ಸಾಹಿತಿಗೆ ವಿದಾಯ ಹೇಳಿದರು. 

ಭೈರಪ್ಪಗೆ ಸಿಎಂ ಸೇರಿ ಹಲವು ಗಣ್ಯರಿಂದ ಅಂತಿಮ ನಮನ

ಕನ್ನಡದ ಆಸ್ಮಿತೆಯಾಗಿದ್ದ ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌.ಎಸ್‌. ಭೈರಪ್ಪ ಸೆಪ್ಟೆಂಬರ್‌ 24ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್‌, ಉದಯ್‌ ಶಂಕರ್‌ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಿ ಗೌರವ ಸಲ್ಲಿಸಿದರು.