ಬೆಂಗಳೂರು (ಅ.20): ಅತ್ಯಾಚಾರ ಪಿಡುಗನ್ನು ಸಾಮಾಜಿಕ ಕಾಯಿಲೆ ಎಂದು ಪರಿಗಣಿಸಿ ಉತ್ತರ ಹುಡುಕಬೇಕೇ ಹೊರತು ಘಟನೆಯನ್ನು ರಾಜಕಾರಣಗೊಳಿಸಿ ಸುಮ್ಮನಾಗುವುದಲ್ಲ ಎಂದು ಸಾಹಿತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಸವಿತಾ ಬನ್ನಾಡಿ ಕರೆ ನೀಡಿದ್ದಾರೆ.

ಕರ್ನಾಟಕ ಪತ್ರಕರ್ತೆಯರ ಸಂಘ ವೆಬಿನಾರ್‌ ಮಾಧ್ಯಮದ ಮೂಲಕ ಆಯೋಜಿಸಿದ್ದ ‘ಪ್ರಸ್ತುತ ಭಾರತದಲ್ಲಿ ಹೆಣ್ಣುಮಕ್ಕಳ ಸ್ಥಿತಿಗತಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ನಟ ವಿಜಯ್ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ ...

ಅತ್ಯಾಚಾರ ಎನ್ನುವ ಪದವೇ ಜೀವ ಹಿಂಡುವಂತದ್ದಾಗಿದೆ. ಈ ಸಾಮಾಜಿಕ ಕಾಯಿಲೆಯನ್ನು ಹತ್ತಿಕ್ಕಲು ಇಚ್ಛಾಶಕ್ತಿಯ ಅಗತ್ಯವಿದೆ. ಆಂತರಿಕ ಸಂಘರ್ಷ, ಕೋಮು ಸಂಘರ್ಷ, ಜಾತಿ ತಾರತಮ್ಯ ಸೇರಿದಂತೆ ಹಲವು ರೀತಿಯ ಪಿಡುಗುಗಳು ಮಹಿಳಾ ಸ್ಥಿತಿಗತಿ ಹಾಗೂ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಪಿಡುಗಿಗೆ ತಾರ್ಕಿಕ ಅಂತ್ಯ ಹಾಗೂ ಉತ್ತರ ಸಿಗದೇ ಇರುವುದು ಹತಾಶ ಮನಸ್ಥಿತಿಗೆ ಕಾರಣ. ಹೆಣ್ಣುಮಕ್ಕಳ ಮನಸ್ಥಿತಿಗಳ ಬಗೆಗಿನ ವಾಸ್ತವವನ್ನು ಮುಕ್ತವಾಗಿ ಮಾತನಾಡುವ ಮನಸುಗಳು ಬೇಕಾಗಿವೆ ಎಂದರು.

ಮಕ್ಕಳ ಹಕ್ಕುಗಳ ತಜ್ಞೆ ಕವಿತಾ ರತ್ನ ಮಾತನಾಡಿ, ಬಾಲ್ಯವಿವಾಹ ಕಾಯಿದೆಗೆ ತಿದ್ದುಪಡಿ, ಹೆಣ್ಣುಮಕ್ಕಳ ಮದುವೆ ವಯಸ್ಸು 18ರಿಂದ 21ಕ್ಕೆ ಏರಿಕೆ ತರುವ ಬಗ್ಗೆ ಚರ್ಚೆಗಳಾಗುತ್ತಿವೆ. ತಾವು ನಡೆಸಿದ ಅಧ್ಯಯನದಲ್ಲಿ ಇದಕ್ಕೆ ಬಹುತೇಕ ಹೆಣ್ಣುಮಕ್ಕಳ ಬೆಂಬಲ ಕಂಡುಬಂದಿದೆ. ಆರ್ಥಿಕ ಹಿಂದುಳುವಿಕೆಯೊಂದೇ ಬಡತನವಲ್ಲ. ಸಾಮಾಜಿಕ ಬಡತನ, ಸಾಂಸ್ಕೃತಿಕ ಬಡತನ, ಭೌಗೋಳಿಕ ಬಡತನ, ರಾಜಕೀಯ ಬಡತನ ಈ ಎಲ್ಲವೂ ಮಹಿಳೆಯರ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಾದದಲ್ಲಿ ಹಿರಿಯ ಪತ್ರಕರ್ತೆಯರಾದ ಸಿ.ಜಿ. ಮಂಜುಳಾ, ಆರ್‌.ಪೂರ್ಣಿಮಾ, ಎಂ.ಪಿ.ಸುಶೀಲಾ, ಕೆ.ಎಚ್‌.ಸಾವಿತ್ರಿ, ನಿರ್ಮಲಾ ಯಲಿಗಾರ್‌, ಕೆ.ವೈ.ಜಯಂತಿ ಮಾತನಾಡಿದರು. ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್‌, ಕಾರ್ಯದರ್ಶಿ ಮಾಲತಿ ಭಟ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.