Asianet Suvarna News Asianet Suvarna News

INTERVIEW: ನಾಗಮಂಗಲ ಗಲಭೆಯ ನೈಜ ಆರೋಪಿಗಳನ್ನೇ ಬಿಟ್ಟಿದ್ದಾರೆ; ಡಾ ಅಶ್ವತ್ಥನಾರಾಯಣ

ನಾಗಮಂಗಲ ಗಲಭೆ ನೈಜ ಆರೋಪಿಗಳನ್ನೇ ಬಿಟ್ಟಿದ್ದಾರೆ. ಗೃಹ ಇಲಾಖೆ ಲೋಪದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಗುಪ್ತಚರ ಇಲಾಖೆ ವೈಫ್ಯಲವೂ ಇದಕ್ಕೆ ಕಾರಣ

Face to face interview with bjp former minister dr cn ashwath narayana rav
Author
First Published Sep 19, 2024, 12:12 PM IST | Last Updated Sep 19, 2024, 12:42 PM IST

ವಿಜಯ್ ಮಲಗಿಹಾಳ

ರಾಜ್ಯ ಬಿಜೆಪಿಯಲ್ಲಿ ಈಗ ವಿಚಿತ್ರ ಸನ್ನಿವೇಶ. ಒಂದೆಡೆ ಪ್ರಮುಖ ಪ್ರತಿಪಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಹಗರಣಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದೆ. ಮತ್ತೊಂದೆಡೆ ಪಕ್ಷದಲ್ಲೇ ಆಂತರಿಕ ತಿಕ್ಕಾಟವೂ ಮುಂದುವರೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಿರೋಧಿ ಧ್ವನಿಯೂ ಬಲವಾಗಿದೆ. ಇದರ ಮಧ್ಯೆಯೇ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಸಂಭವಿಸಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಗಲಭೆ ಸಂಬಂಧ ಬಿಜೆಪಿಯು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನೂ ರಚಿಸಿದೆ. ಒಟ್ಟಾರೆ, ಬಿಜೆಪಿಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಶ್ವತ್ಥನಾರಾಯಣ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..

ಮಂಡ್ಯದ ನಾಗಮಂಗಲ ಗಲಭೆಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟಕ್ಕೆ ಪ್ರಬಲ ಅಸ್ತ್ರ ಸಿಕ್ಕಿದಂತಾಯಿತಲ್ಲವೇ?

-ಅಸ್ತ್ರ ಎನ್ನುವುದಕ್ಕಿಂತ ವಾಸ್ತವತೆ. ಈ ಘಟನೆಯಿಂದ ಕಾಂಗ್ರೆಸ್‌ ಸರ್ಕಾರದ ಮನಸ್ಥಿತಿ, ಧೋರಣೆಗಳು ಹಾಗೂ ಹಿಂದು ವಿರೋಧಿ ನಿಲುವು ಸ್ಪಷ್ಟವಾಗಿ ಬಯಲಾಗಿದೆ. ಗಣೇಶೋತ್ಸವವನ್ನು ಒಂದು ಧರ್ಮದವರು ವಿರೋಧಿಸುತ್ತಾರೆ, ಆಡಚಣೆ ಮಾಡುತ್ತಾರೆ ಎಂದರೆ ಏನರ್ಥ? ನಾಗಮಂಗಲವು ಸಮಾಜ ವಿರೋಧಿ ಶಕ್ತಿಗಳ ಅಡಗುತಾಣವಾಗಿದೆ. ಸರ್ಕಾರ ತುಷ್ಟೀಕರಣ, ಓಲೈಕೆಯಲ್ಲಿ ತೊಡಗಿದೆ. ಪೊಲೀಸರು ಕ್ರಮ ಕೈಗೊಳ್ಳಲು ಅಡ್ಡಿಪಡಿಸಲಾಗುತ್ತಿದೆ.

INTERVIEW: 'ಬಾರಾ ಖೂನ್ ಮಾಫ್ ಆಗಬಾರದು'; ಛಲವಾದಿ ನೇಮಕಕ್ಕೆ ಸಿಟಿ ರವಿ ಪರೋಕ್ಷ ಅತೃಪ್ತಿ?

ಗಲಭೆ ಸಂಬಂಧ ಬಿಜೆಪಿ ರಚಿತ ಸತ್ಯಶೋಧನಾ ಸಮಿತಿ ಮುಖ್ಯಸ್ಥರಾಗಿರುವ ನೀವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಿರಲ್ಲ?

-ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇವೆ. ಗಲಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರನ್ನು ಬಿಟ್ಟು ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ನಿಜವಾದ ಆರೋಪಿಗಳನ್ನು ಬಿಟ್ಟು ಕೇರಳ ಮೂಲದವರನ್ನು ಆರೋಪಿಗಳನ್ನಾಗಿಸಲಾಗಿದೆ.

ಇದೊಂದು ಆಕಸ್ಮಿಕ ಘಟನೆ ಎಂದು ಗೃಹ ಸಚಿವರು ಹೇಳಿದ್ದಾರಲ್ಲ?

-ಇದು ಆಕಸ್ಮಿಕವಲ್ಲ. ಪೂರ್ವ ನಿಯೋಜಿತದಂತೆ ಕಾಣುತ್ತಿದೆ. ಮೆರವಣಿಗೆಯನ್ನು ಗುರಿಯಾಗಿಸಿ ಗಲಭೆ ಮಾಡಿದಂತಿದೆ. ನಿರಪರಾಧಿಗಳು ಆರೋಪಿಗಳಾಗಿದ್ದಾರೆ. ಇದು ಸರಿಯಲ್ಲ. ಯಾರು ಈ ಗಲಭೆಯಲ್ಲಿ ಭಾಗಿಯಾಗಿದ್ದರೋ ಅಂಥವರನ್ನು ಆರೋಪಿಗಳನ್ನಾಗಿ ಮಾಡಿ ಬಂಧಿಸಬೇಕು. ಗಲಭೆ ಸಂಬಂಧ ಸಾಕಷ್ಟು ವಿಡಿಯೋಗಳು, ಸಾಕ್ಷ್ಯಗಳು ಲಭ್ಯವಿದೆ. ಈ ಶನಿವಾರದೊಳಗೆ ಸತ್ಯ ಶೋಧನಾ ಸಮಿತಿಯ ವರದಿ ನೀಡಲಾಗುವುದು.

ಇಂಥ ಗಣೇಶೋತ್ಸವ ಗಲಾಟೆಗಳು ಶಿವಮೊಗ್ಗ, ಭದ್ರಾವತಿ, ಬಾಗಲಕೋಟೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಈಗ ಹಳೇ ಮೈಸೂರು ಭಾಗಕ್ಕೂ ವಿಸ್ತರಿಸಿದೆಯಲ್ಲ?

-ಗೃಹ ಇಲಾಖೆ ಲೋಪದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಗುಪ್ತಚರ ಇಲಾಖೆ ವೈಫ್ಯಲವೂ ಇದಕ್ಕೆ ಕಾರಣ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಸಮರವನ್ನೇ ಸಾರಿದಂತಿದೆ. ತುಂಬಾ ಅಕ್ರಮಣಕಾರಿಯಾಗಿ ಮುನ್ನುಗ್ಗುತ್ತಿರುವುದು ಯಾಕೆ?

-ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೆಟ್ಟ ಆಡಳಿತ ನೀಡುತ್ತಿದೆ. ಭ್ರಷ್ಟಾಚಾರ, ಜನರ ಬಗ್ಗೆ ನಿರ್ಲಕ್ಷ್ಯ, ಆಡಳಿತ, ಅಭಿವೃದ್ಧಿ ಕುಂಠಿತ, ತುಷ್ಟೀಕರಣ ಮೊದಲಾದವುಗಳು ಬಟಾಬಯಲಾಗಿವೆ. ಆಡಳಿತ ನಡೆಸುವಲ್ಲಿ ಸರ್ಕಾರ ಎಡವುತ್ತಿದೆ. ಎಲ್ಲಾ ಇಲಾಖೆಗಳ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು ಎಡವುತ್ತಿದ್ದಾರೆ. ಪ್ರತಿಪಕ್ಷವಾಗಿ ಬಿಜೆಪಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ.

ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸುವುದೇ ಬಿಜೆಪಿಯ ಏಕೈಕ ಗುರಿಯಂತೆ ಹೌದೇ?

-ಪ್ರತಿಪಕ್ಷವಾಗಿ ಬಿಜೆಪಿ ಪ್ರಬಲವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಸಾಕ್ಷ್ಯ ಸಮೇತ ನ್ಯಾಯಾಲಯದಲ್ಲಿ ವಾದ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ 89 ಕೋಟಿ ರು. ಲೂಟಿ ಆಗಿದೆ ಎಂದು ಸದನದಲ್ಲಿ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಬೇರೆ ನಿಗಮಗಳು, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಬರ ನಿರ್ವಹಣೆಯಲ್ಲಿ ಹಗರಣಗಳು ನಡೆದಿವೆ. ವರ್ಗಾವಣೆ ದಂಧೆ ನಡೆಯುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ. ಸರ್ಕಾರದ ಇಡೀ ವ್ಯವಸ್ಥೆಯೇ ಹದಗೆಟ್ಟಿದೆ. ನಾವು ಯಾರನ್ನೂ ಟಾರ್ಗೆಟ್‌ ಮಾಡಿಲ್ಲ. ಯಾರ ವಿರುದ್ಧವೂ ವೈಯಕ್ತಿಕ ದ್ವೇಷ, ವೈಮನಸ್ಸು ಇಲ್ಲ.

ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರದ ಗದ್ದುಗೆಗೆ ಏರಲು ಬಿಜೆಪಿ ಹವಣಿಸುತ್ತಿದೆಯೇ?

-ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಅವರವರೇ ಜಗಳ ಮಾಡಿಕೊಂಡು ಕಿತ್ತಾಡುತ್ತಿದ್ದಾರೆ. ನಾವು ಜಗಳ ಮಾಡಿಕೊಳ್ಳುವಂತೆ ಹೇಳಿದ್ದೇವಾ? 2028ರ ಚುನಾವಣೆ ಎದುರಿಸಲು ನಾವು ಸಿದ್ಧತೆ ನಡೆಸುತ್ತಿದ್ದೇವೆ. ಯಾರು ಬೇಕು ಎಂಬುದನ್ನು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಈ ಐದು ವರ್ಷ ನಾವು ಪ್ರಬಲ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತೇವೆ.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಮತ್ತೊಂದು ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆಯಲ್ಲ?

-ಆ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ವರಿಷ್ಠರು, ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ಸೂಕ್ತ ಕಾಲಕ್ಕೆ ತೀರ್ಮಾನಿಸುತ್ತಾರೆ.

ರಾಜ್ಯಪಾಲರನ್ನು ಬಿಜೆಪಿ ದಾಳವಾಗಿ ಬಳಕೆ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ?

-ಕುರುಡು ಹೇಳಿಕೆ ನೀಡುವುದು, ನಿರಾಧಾರ ಆರೋಪ ಮಾಡುವುದು ಕಾಂಗ್ರೆಸ್‌ನ ಗುಣ. ರಾಜ್ಯಪಾಲರು ಭ್ರಷ್ಟಾಚಾರದ ವಿಚಾರದಲ್ಲಿ ಸಂವಿಧಾನಾತ್ಮಕ ಕ್ರಮ ವಹಿಸಿದ್ದಾರೆ. ಈ ಕ್ರಮದ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರದ ಭ್ರಷ್ಟಾಚಾರ ನೋಡಿಕೊಂಡು ರಾಜ್ಯಪಾಲರು ವೀಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅಧಿಕಾರ ದುರ್ಬಳಕೆ ಮಾಡಿದರೆ ನೋಡಿಕೊಂಡು ಕೂರುವುದಕ್ಕೆ ಆಗುವುದಿಲ್ಲ.

ಹಿಂದಿನ ಸರ್ಕಾರಗಳ ಅವಧಿಯ ಹಗರಣಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೆದಕುತ್ತಿದೆಯಲ್ಲ?

-ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಎತ್ತಿ ತೋರುತ್ತಿರುವುದಕ್ಕೆ ಕಾಂಗ್ರೆಸ್ಸಿಗರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ ಅವಧಿಯ ತಪ್ಪುಗಳನ್ನು ಹುಡುಕಲು ಸಚಿವ ಸಂಪುಟ ಸಮಿತಿ, ಸಂಪುಟ ಉಪಸಮಿತಿ, ಆಯೋಗಗಳು, ಅಧಿಕಾರಿಗಳ ಸಮಿತಿಗಳನ್ನು ಮಾಡಿದ್ದಾರೆ. ಅವರ ಸರ್ಕಾರದಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಆದರೂ ನಮ್ಮ ವಿರುದ್ಧ ಏನಾದರೂ ಒಂದನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಯಾವ ನೈತಿಕತೆಯೂ ಇಲ್ಲ.

ರಾಜ್ಯಪಾಲರು ಬಿಜೆಪಿ ಹೈಕಮಾಂಡ್‌ ಏಜೆಂಟ್‌ ರೀತಿ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಸೂಚನೆ ಪಾಲಿಸುತ್ತಿದ್ದಾರಂತೆ?

-ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಭ್ರಷ್ಟರ ಮೇಲೆ ಐಟಿ, ಇಡಿ ದಾಳಿಗಳು ನಡೆಯುತ್ತಿವೆ. ರಾಜ್ಯಪಾಲರು ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ, ಹಗರಣಗಳ ವಿರುದ್ಧ ಕ್ರಮವಾಗುತ್ತಿದೆ. ಇದಕ್ಕೆ ರಾಜ್ಯಪಾಲರನ್ನು ಕೇಂದ್ರದ ಏಜೆಂಟ್‌ ಎನ್ನುವುದು ಎಷ್ಟು ಸರಿ? ವಿಧೇಯಕಗಳ ಲೋಪಗಳ ಬಗ್ಗೆ ಸ್ಪಷ್ಟನೆ ಕೇಳಿದರೆ, ಸರ್ಕಾರ ಸ್ಪಷ್ಟೀಕರಣ ನೀಡಬೇಕು. ರಾಜ್ಯಪಾಲರು ಸತ್ಯದ ಪರ, ನ್ಯಾಯದ ಪರ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ.

ಸರ್ಕಾರ ಉರುಳಿಸುವ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ಕೆಲವು ಶಾಸಕರನ್ನು ಸಂಪರ್ಕಿಸಿದ್ದಾರಂತೆ?

-ನಮಗೆ ಸರ್ಕಾರ ಉರುಳಿಸುವ ಯಾವ ಉದ್ದೇಶವೂ ಇಲ್ಲ. ಅಗತ್ಯವೂ ಇಲ್ಲ. ಜನ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ನಮಗೆ ಕೇವಲ 66 ಸ್ಥಾನ ನೀಡಿದ್ದಾರೆ. ಕಾಂಗ್ರೆಸ್‌ ಈ ರೀತಿಯ ಸುಳ್ಳು ಸುದ್ದಿ, ಸುಳ್ಳು ಆಪಾದನೆ ಮಾಡುವ ಮುಖಾಂತರ ಜನರ ದಾರಿ ತಪ್ಪಿಸುತ್ತಿದೆ ಅಷ್ಟೇ.

ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಹಂಚಿಕೆ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಸುವಂತೆ ಕಾಣುತ್ತಿದೆ?

-ಕೊಟ್ಟು ಪಡೆದುಕೊಳ್ಳುವ ಬಾಂಧವ್ಯ ಇರಬೇಕು. ಮಾತುಕತೆ, ಸಮಾಲೋಚನೆ, ಪರಸ್ಪರ ವಿಶ್ವಾಸ, ಸಂಬಂಧಗಳ ಆಧಾರದ ಮೇಲೆ ಒಗ್ಗಟ್ಟಿನಲ್ಲಿ ಮುಂದೆ ಹೋಗಬೇಕು. ಬಿಜೆಪಿಯ ಯೋಗೇಶ್ವರ್‌ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ದುಡಿದಿದ್ದಾರೆ. ಹೀಗಾಗಿ ಸಹಜವಾಗಿ ಟಿಕೆಟ್‌ ಕೇಳಿದ್ದಾರೆ. ಅವರಿಗೆ ಟಿಕೆಟ್‌ ಕೇಳುವ ಹಕ್ಕಿದೆ. ನಾವೂ ಒತ್ತಾಯ ಮಾಡುತ್ತೇವೆ. ಇದಕ್ಕೆ ಜೆಡಿಎಸ್ ವರಿಷ್ಠರು, ಕುಮಾರಸ್ವಾಮಿ ಸಹಮತ ನೀಡಬೇಕು. ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗಟ್ಟಿನಲ್ಲಿ ಎನ್‌ಡಿಎ ಮೈತ್ರಿ ಚುನಾವಣೆ ಎದುರಿಸಬೇಕು. ಟಿಕೆಟ್‌ ವಿಚಾರವನ್ನು ಎರಡೂ ಪಕ್ಷಗಳ ವರಿಷ್ಠರು ಚರ್ಚಿಸಿ ತೀರ್ಮಾನಿಸಲಿದ್ದಾರೆ.

ಬಿಜೆಪಿ ನಾಯಕರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್‌ ಮುಖಂಡರು ಇತ್ತೀಚಿನ ಸಭೆಯಲ್ಲಿ ಚಾಟಿ ಬೀಸಿದ್ದಾರಂತಲ್ಲ?

-ಆರ್‌ಎಸ್‌ಎಸ್‌ ಮುಖಂಡರ ಜತೆಗಿನ ಸಭೆ ಒಂದು ಒಳ್ಳೆಯ ಬೆಳವಣಿಗೆ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅದೊಂದು ಉತ್ತಮ ವೇದಿಕೆ. ಯಾರೇ ಆದರೂ ಬಹಿರಂಗವಾಗಿ ಅಸಮಾಧಾನ ಹೊರಹಾಕುವುದು ತಪ್ಪು. ಏನೇ ಇದ್ದರೂ ನಾಲ್ಕು ಗೋಡೆಗಳ ನಡುವೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಈ ನಿಟ್ಟಿನಲ್ಲಿ ಸಭೆಯಲ್ಲಿ ಉತ್ತಮ ಚರ್ಚೆಗಳು ನಡೆದಿವೆ. ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಹಿರಿಯರು ಸಲಹೆ-ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಅನೇಕ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರಂತೆ?

-ಸಭೆಯ ಎಲ್ಲ ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ವಿಜಯೇಂದ್ರ ಅವರಿಗೆ ವರಿಷ್ಠರು ಅವಕಾಶ ನೀಡಿದ್ದಾರೆ. ಅವರ ಪ್ರಯಾಣ ಈಗ ಆರಂಭವಾಗಿದೆ. ಇನ್ನೂ ದಾರಿ ಬಲು ದೂರವಿದೆ. ಕಲಿತುಕೊಂಡು ಮುನ್ನಡೆಯುತ್ತಾರೆ. ಒಮ್ಮೆಗೇ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗದು. ಅವರು ನಮ್ಮ ಜತೆಗೆ ಕೈಜೋಡಿಸಬೇಕು. ನಾವು ಅವರ ಜತೆಗೆ ಕೈ ಜೋಡಿಸಬೇಕು.

ನಿಮ್ಮ ಪ್ರಕಾರ ವಿಜಯೇಂದ್ರ ಅವರ ನಡೆ, ಧೋರಣೆ ಬದಲಾಗಬೇಕೆ?

-ಎಲ್ಲರೂ ಕೂಡಿಕೊಂಡು ಕೆಲಸ ಮಾಡಬೇಕು. ವ್ಯಕ್ತಿ ಆಧಾರಿತ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ವೈಯಕ್ತಿಕ ವಿಚಾರ ಬಿಟ್ಟು ಪಕ್ಷ ಸಂಘಟನೆಗಾಗಿ ಪ್ರಬಲ ಕಾರ್ಯ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು.

ಆರ್‌ಎಸ್‌ಎಸ್‌ ಮುಖಂಡರ ಸಭೆ ಬಳಿಕವೂ ಶಾಸಕ ರಮೇಶ್‌ ಜಾರಕಿಹೊಳಿ ವಿಜಯೇಂದ್ರ ನಾಯಕತ್ವ ಒಪ್ಪಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರಲ್ಲ?

-ಅದರ ಬಗ್ಗೆ ನಾನು ಈಗ ಮಾತನಾಡಲ್ಲ. ಒಳ್ಳೆಯ ಉದ್ದೇಶಕ್ಕಾಗಿ ಮಾತನಾಡಬೇಕೇ ಹೊರತು ಸ್ವಾರ್ಥಕ್ಕಾಗಿ ಮಾತನಾಡಬಾರದು.

ರಾಜ್ಯ ರಾಜಕಾರಣದಲ್ಲಿ ಒಕ್ಕಲಿಗರ ನಾಯಕತ್ವಕ್ಕೆ ಶೀತಲ ಸಮರ ನಡೆಯುತ್ತಿದೆ?

-ಶೀತಲ ಸಮರ ನಡೆಯಬಾರದು. ವಿಷಯಾಧಾರಿತವಾಗಿ ಹೋಗಬೇಕು. ಕಾಂಗ್ರೆಸ್‌ನಲ್ಲಿ ವಿಪರೀತ ಭ್ರಷ್ಟಾಚಾರ ಇದೆ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ, ಕೆಟ್ಟ ಆಡಳಿತ, ಜನ, ಅಭಿವೃದ್ಧಿ ವಿರೋಧಿಯಾಗಿದೆ. ಬಿಜೆಪಿಯಲ್ಲಿ ಬಹಳ ಪ್ರಗತಿಪರ ಮತದಾರರು ಇದ್ದಾರೆ. ಬಿಜೆಪಿಗೆ ಒಕ್ಕಲಿಗರ ಆಶೀರ್ವಾದವಿದೆ.

ಸಿಎಂ ಸಿದ್ದರಾಮಯ್ಯ ಎಚ್‌ಡಿಕೆ ಮುಖಾಮುಖಿ: ನೋಡದೇ ಮುಂದೆ ಸಾಗಿದ ಕುಮಾರಸ್ವಾಮಿ!

ನಿಮ್ಮ ಪಕ್ಷದ ಶಾಸಕ ಮುನಿರತ್ನ ಅವರು ಜಾತಿನಿಂದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ?

-ಮುನಿರತ್ನ ಅವರು ನಾನು ಹಾಗೆ ಹೇಳಿಲ್ಲ. ಅದು ನನ್ನ ಸಂಭಾಷಣೆ ಅಲ್ಲ ಎಂದಿದ್ದಾರೆ. ತನಿಖೆಯಲ್ಲಿ ಏನು ಬರಲಿದೆ ನೋಡೋಣ. ಯಾರೇ ಆಗಲಿ. ಯಾವುದೇ ಜಾತಿ ಅವಹೇಳನ ಮಾಡಬಾರದು. ಮನುಷ್ಯ ನಡವಳಿಕೆ ಇರಬೇಕು. ಈ ರೀತಿ ಯಾರೇ ಹೇಳಿದರೂ ಅದು ಖಂಡನಾರ್ಹ.

Latest Videos
Follow Us:
Download App:
  • android
  • ios