Asianet Suvarna News Asianet Suvarna News

INTERVIEW: 'ಬಾರಾ ಖೂನ್ ಮಾಫ್ ಆಗಬಾರದು'; ಛಲವಾದಿ ನೇಮಕಕ್ಕೆ ಸಿಟಿ ರವಿ ಪರೋಕ್ಷ ಅತೃಪ್ತಿ?

ಎಲ್ಲಿವರೆಗೆ ಜಾತಿಯ ಕಾರಣಕ್ಕೆ ನೋಡುವಂಥ ಪ್ರವೃತ್ತಿ ಇರುತ್ತದೆಯೋ ಅಲ್ಲಿವರೆಗೆ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ.ಎಂದ ಸಿಟಿ ರವಿ

face to face interview with ct ravi after Chalavadi Narayanaswamy has been elected as the LoP rav
Author
First Published Jul 25, 2024, 9:47 AM IST | Last Updated Jul 25, 2024, 9:55 AM IST

ವಿಜಯ್ ಮಲಗಿಹಾಳ

ಬಿಜೆಪಿಯ ಸೈದ್ಧಾಂತಿಕ ‘ಫೈರ್‌ ಬ್ರ್ಯಾಂಡ್‌’ ಎಂದೇ ಗುರುತಿಸಿಕೊಂಡಿರುವ ಸಿ.ಟಿ.ರವಿ ಅವರು ರಾಜಕೀಯದ ಹಾವು-ಏಣಿಯಾಟದಲ್ಲಿ ಈಗ ತುಸು ಕೆಳಗೆ ಬಂದಿದ್ದಾರೆ. ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಉನ್ನತ ಸ್ಥಾನವನ್ನೂ ಅಲಂಕರಿಸಿದ್ದರು. ಇದೀಗ ಮೊದಲ ಬಾರಿಗೆ ರಾಜಕಾರಣದ ಹಿಂಬಾಗಿಲು ಎಂದೇ ಕರೆಸಿಕೊಳ್ಳುವ ಮೇಲ್ಮನೆ ಪ್ರವೇಶಿಸಿದ್ದಾರೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿ ವಿಫಲರಾದರೂ ಪಕ್ಷ ಸಂಘಟನೆಯಿಂದ ಹಿಂದೆ ಸರಿಯಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ದಾಖಲೆ ಎಂಬಂತೆ ರಾಜ್ಯ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದರು. ಇನ್ನೇನು ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನ ಸಿಗಬಹುದು ಎಂಬ ಹೊತ್ತಿನಲ್ಲಿ ಆ ಸ್ಥಾನವೂ ಕೈತಪ್ಪಿ ಹೋಗಿದೆ. ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..

ಹಲವು ಬಾರಿ ವಿಧಾನಸಭೆ ಸದಸ್ಯರಾಗಿದ್ದ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿದ್ದೀರಿ. ಹೇಗೆ ಅನಿಸುತ್ತಿದೆ?

-ವಿಧಾನಸಭೆಗೂ ಮತ್ತು ವಿಧಾನಪರಿಷತ್ತಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಸಚಿವನಾಗಿ ಪರಿಷತ್‌ ಕಲಾಪದಲ್ಲಿ ಭಾಗಿಯಾಗಿದ್ದೆ. ಪರಿಷತ್ತು ಪ್ರಬುದ್ಧರ ವೇದಿಕೆ ಎಂಬ ಮಾತು ಒಂದು ಕಾಲದಲ್ಲಿ ಇತ್ತು. ಆದರೆ, ಅದು ಈಗ ಅದನ್ನು ಕಳೆದುಕೊಂಡಿದೆ. ಎಲ್ಲ ರಾಜಕೀಯ ಪಕ್ಷಗಳಿಂದ ಬೇರೆ ಬೇರೆ ಕಾರಣಕ್ಕೆ ರಿಯಲ್ ಎಸ್ಟೇಟ್‌ನವರು, ಆರ್ಥಿಕವಾಗಿ ಬಲಾಢ್ಯರಾಗಿರುವವರು, ಜಾತಿ ಬಲದಲ್ಲಿ ಮೇಲಿರುವವರು ಪರಿಷತ್‌ ಪ್ರವೇಶಿಸಿದ್ದಾರೆ. ಅದರ ನಡುವೆಯೂ ಪರಿಷತ್ತಿಗೆ ತನ್ನದೇ ಆದ ಘನತೆ ಇದೆ. ಆದರೆ, ಇನ್ನಷ್ಟು ಫಲಪ್ರದದಾಯಕ ಚರ್ಚೆ ನಡೆಯಬೇಕು. ರಾಜಕೀಯ ಆಸಕ್ತಿಯನ್ನೂ ಮೀರಿ ರಾಜ್ಯ ಮತ್ತು ಸಮಾಜದ ಹಿತಾಸಕ್ತಿಯ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು. ಆದರೆ, ಅದು ಅಷ್ಟು ಸುಲಭವಲ್ಲ.

 

ಛಲವಾದಿ ನಾರಾಯಣಸ್ವಾಮಿ ಮೇಲ್ಮನೆ ಪ್ರತಿಪಕ್ಷದ ನಾಯಕರಾಗಿ ನೇಮಕ!

ಪರಿಷತ್ತನ್ನು ಹಿರಿಯರ ಮನೆ ಎಂದು ಹೇಳುತ್ತಾರೆ. ನಿಜವಾಗಿಯೂ ಆ ರೀತಿ ಇದೆಯೇ?

-ನಾನು ಇದೇ ಮೊದಲ ಬಾರಿಗೆ ಪರಿಷತ್ತಿನ ಕಲಾಪದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದೇನೆ. ಈಗಷ್ಟೇ ಒಂದು ವಾರವಾಗಿದೆ. ಹೀಗಾಗಿ, ಇಷ್ಟು ಕಡಮೆ ಅವಧಿಯಲ್ಲಿ ಮೌಲ್ಯಮಾಪನ ಮಾಡಲು ಆಗುವುದಿಲ್ಲ. ಆದರೆ, ಯಾವ ಉದ್ದೇಶಕ್ಕಾಗಿ ಪರಿಷತ್ತನ್ನು ಸ್ಥಾಪಿಸಲಾಗಿತ್ತೋ ಆ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮಗೆಲ್ಲರಿಗೂ ಇದೆ

ನೀವು ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿದ್ದಿರಿ. ಈ ಬಾರಿ ಸೋತ ಬೆನ್ನಲ್ಲೇ ವಿಧಾನಪರಿಷತ್ ಪ್ರವೇಶಿಸುವ ಅನಿವಾರ್ಯತೆ ಅಥವಾ ಆಸಕ್ತಿ ಇತ್ತೇ?

-ಅನಿವಾರ್ಯತೆ ಎಂದು ನಾನು ಭಾವಿಸುವುದಿಲ್ಲ. ಒಬ್ಬ ಕಾರ್ಯಕರ್ತನ ನೆಲೆಯಲ್ಲಿ ಪಕ್ಷದ ಯಾವುದೇ ಜವಾಬ್ದಾರಿ ಇಲ್ಲದಿದ್ದರೂ ಲೋಕಸಭಾ ಚುನಾವಣೆ ವೇಳೆ ಹೆಚ್ಚು ಪ್ರವಾಸ ಮಾಡಿದ ಎರಡನೆಯ ವ್ಯಕ್ತಿ ನಾನು ಎಂಬುದನ್ನು ಪಕ್ಷದ ವರದಿ ಹೇಳಿದೆ. ನನ್ನನ್ನು ಸಕ್ರಿಯವಾಗಿ ಇಟ್ಟುಕೊಳ್ಳುವ ಕೆಲಸ ಮಾಡಿದ್ದೆ. ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಸಕ್ತಿ ಇತ್ತೇ ಹೊರತು ವಿಧಾನಪರಿಷತ್ ಪ್ರವೇಶಿಸುವ ಬಗ್ಗೆ ಅಲ್ಲ. ಯಾವುದೋ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಟಿಕೆಟ್ ಸಿಗಲಿಲ್ಲ. ಈಗ ಪಕ್ಷ ನನಗೆ ವಿಧಾನಪರಿಷತ್ ಸದಸ್ಯತ್ವದ ಅವಕಾಶ ಕೊಟ್ಟಿದೆ. ಬಹುಶಃ ಅದು ಪಕ್ಷದ ತೀರ್ಮಾನ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿವರೆಗೆ, ವಿಧಾನಸಭೆಯಿಂದ ವಿಧಾನಪರಿಷತ್ತಿನವರೆಗೆ, ಸಚಿವ ಸ್ಥಾನದವರೆಗೆ ಏನು ಕೊಟ್ಟಿದೆಯೋ ಅದು ಪಕ್ಷದ ನಿರ್ಧಾರ. ಪಕ್ಷ ನಿಷ್ಠೆಯಿಂದ ಕೆಲಸ ಮಾಡುವುದಷ್ಟೇ ನನ್ನ ಕೆಲಸ.

ವಿಧಾನಸಭಾ ಚುನಾವಣೆ ಎದುರಿಸುವ ಸಾಮರ್ಥ್ಯ ಅಥವಾ ಅವಕಾಶ ಇಲ್ಲದವರಿಗೆ ವಿಧಾನಪರಿಷತ್ತಿನ ಅವಕಾಶ ಕಲ್ಪಿಸಬೇಕಲ್ಲವೇ? ನಿಮ್ಮಂಥ ಬಲಾಢ್ಯರು ಪರಿಷತ್ ಪ್ರವೇಶಿಸಿದರೆ ಬಲ ಇಲ್ಲದ ಮುಖಂಡರು, ಕಾರ್ಯಕರ್ತರ ಕತೆ ಏನು?

-ನಿಜ. ಜನಸಾಮಾನ್ಯರ ನಡುವೆ ಸಾಮರ್ಥ್ಯ ಮತ್ತು ಅವಕಾಶ ಇದ್ದವರು ವಿಧಾನಪರಿಷತ್ ಪ್ರವೇಶಿಸುವುದು ಕಡಮೆ. ಯಡಿಯೂರಪ್ಪ, ಈಶ್ವರಪ್ಪ, ಸದಾನಂದಗೌಡರೂ ಹಿಂದೆ ಪರಿಷತ್ತಿಗೆ ಬಂದಿದ್ದರು. ಅವರೆಲ್ಲ ಸಾಂದರ್ಭಿಕವಾಗಿ ಬಂದಿರಬಹುದು. ನನ್ನನ್ನೂ ಸಂದರ್ಭ ಇಲ್ಲಿಗೆ ಕರೆದುಕೊಂಡು ಬಂದಿದೆ. ಆದರೆ, ನನಗೆ ಹಪಾಹಪಿತನ ಇಲ್ಲ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಉನ್ನತ ಹುದ್ದೆಗೇರಿದ್ದ ನೀವು ಇದೀಗ ಪರಿಷತ್ ಸದಸ್ಯರಾಗಿದ್ದು ರಾಜಕೀಯ ಹಿನ್ನಡೆ ಅಲ್ಲವೇ?

-ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನೂ ನಾನು ಬಯಸಿರಲಿಲ್ಲ. ಆ ಸ್ಥಾನದಿಂದ ನನ್ನನ್ನು ತೆಗೆದಾಗ ‘ನನ್ನ ತಪ್ಪೇನು? ತಪ್ಪಿದ್ದರೆ ಹೇಳಿ ತಿದ್ದಿಕೊಳ್ಳುವೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಕೇಳಿದ್ದೆ. ‘ಕೆಲವೊಮ್ಮೆ ಸಮಯ ಈ ರೀತಿ ಬರುತ್ತದೆ. ನಾನು ಎಂಟು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲದೆ ಇದ್ದೆ. ನಿಮಗೆ ಆ ರೀತಿಯಂತೂ ಆಗುವುದಿಲ್ಲ’ ಎಂಬ ಮಾತನ್ನು ನಡ್ಡಾ ಹೇಳಿದ್ದರು. ನಾನು ಕಾರ್ಯಕರ್ತ ಎಂಬ ಭಾವ ಶಾಶ್ವತವಾದದ್ದು. ನನಗೆ ಪಕ್ಷ ಯಾವುದೇ ಅನ್ಯಾಯ ಮಾಡಿಲ್ಲ. ಇದೊಂದು ತಾತ್ಕಾಲಿಕ ಹಿನ್ನಡೆ ಅಷ್ಟೇ.

ಹಿಂದೆ ಮುಖ್ಯಮಂತ್ರಿ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ನಿಮ್ಮ ಹೆಸರು ಬಲವಾಗಿ ಕೇಳಿಬಂದಿತ್ತು. ನಂತರ ಆಗಿದ್ದೇ ಬೇರೆ. ಯಾಕೆ ಹೀಗೆ?

-ನನಗೂ ಗೊತ್ತಿಲ್ಲ. ಯಾವುದೇ ಪ್ರಮುಖ ಹುದ್ದೆಗಳ ಪ್ರಸ್ತಾಪ ವೇಳೆ ಆರಂಭದಲ್ಲಿ ನನ್ನ ಹೆಸರು ಕೂಡ ಶಬ್ದ ಮಾಡುತ್ತದೆ. ಆದರೆ, ಬ‍ಳಿಕ ನನಗೆ ಸ್ಥಾನ ಸಿಕ್ಕುವುದಿಲ್ಲ. ಬಹುಶಃ ನನ್ನ ಯೋಗ್ಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಗತ್ಯ ಇರಬೇಕು ಎಂದು ಭಾವಿಸುತ್ತೇನೆ. ಅಥವಾ ಯೋಗ ಕೂಡಿ ಬಂದಿಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಯೋಗ್ಯತೆಯ ಕೊರತೆ ಇದೆ ಎಂದರೆ ಅದನ್ನು ತುಂಬಿಸಿಕೊಳ್ಳಬೇಕಾದದ್ದು ನನ್ನ ಕೈಯಲ್ಲಿದೆ. ಆದರೆ, ಯೋಗ ನನ್ನ ಕೈಯಲ್ಲಿಲ್ಲ.

ಇತ್ತೀಚೆಗೆ ಬಿಜೆಪಿಯಲ್ಲಿ ಸೈದ್ಧಾಂತಿಕವಾಗಿ ಗಟ್ಟಿ ಹಿನ್ನೆಲೆ ಇರುವವರು, ಹಿಂದುತ್ವದ ಪ್ರಬಲ ಪ್ರತಿಪಾದಕರು ಅಪಥ್ಯ ಎಂಬಂತೆ ಆಗುತ್ತಿದೆಯಲ್ಲ?

-ನಮ್ಮ ಪಕ್ಷ ಮತ್ತು ಸರ್ಕಾರ ಒಂದು ಸಿದ್ಧಾಂತಕ್ಕೆ ಬದ್ಧವಾಗಿಯೇ ಕೆಲಸ ಮಾಡುತ್ತಿವೆ. ಸಿದ್ಧಾಂತ ಇಲ್ಲದಿದ್ದರೆ ಆತ್ಮ ಕಳೆದುಕೊಂಡಂತೆ. ಸೈದ್ಧಾಂತಿಕ ಪ್ರತಿಪಾದನೆ ಉಳಿದವರಲ್ಲೂ ಬರುವಂತೆ ನೋಡಿಕೊಳ್ಳಬೇಕು. ಸೈದ್ಧಾಂತಿಕ ಪ್ರತಿಪಾದಕರು ಅಪಥ್ಯ ಎಂಬುದನ್ನು ಒಪ್ಪುವುದಿಲ್ಲ. ಮೊದಲೇ ಹೇಳಿದಂತೆ ತಾತ್ಕಾಲಿಕ ಹಿನ್ನಡೆ ಎದುರಾಗುತ್ತವೆ. ಇದೊಂದು ಅಗ್ನಿಪರೀಕ್ಷೆಯ ಸಮಯ. ಅಗ್ನಿಪರೀಕ್ಷೆ ಬರುವಂಥದ್ದೇ ಸಾಮರ್ಥ್ಯ ಮತ್ತು ನಿಷ್ಠೆಯನ್ನು ಪರೀಕ್ಷೆ ಮಾಡುವುದಕ್ಕಾಗಿ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಡುವೆ ಕಂದಕ ನಿರ್ಮಾಣವಾಗುತ್ತಿದೆಯೇ?

-ಇದು ಕಪೋಲಕಲ್ಪಿತವಾದದ್ದು. ಮೋದಿ ಅವರು ಕೂಡ ಸಂಘ ಪರಿವಾರದ ಸ್ವಯಂಸೇವಕ. ಸಂಘಕ್ಕೆ ರಾಷ್ಟ್ರೀಯ ಅಜೆಂಡಾ ಇದೆ. ಅದು ಯಾವತ್ತೂ ವ್ಯಕ್ತಿ ವಿರುದ್ಧ ಕೆಲಸ ಮಾಡುವುದಿಲ್ಲ. ಕಂದಕ ನಿರ್ಮಾಣವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಘ ಪರಿವಾರ ನೀಡಿದ ಸಂಸ್ಕಾರದಿಂದಲೇ ಮೋದಿ ಅವರು ಈ ಎತ್ತರಕ್ಕೆ ಬೆಳೆದದ್ದು.

ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನಿಮ್ಮ ಹಾಗೂ ರವಿಕುಮಾರ್‌ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಕೊನೆಗೆ ಪಕ್ಷಕ್ಕೆ ಆರು ವರ್ಷಗಳ ಹಿಂದೆ ವಲಸೆ ಬಂದ ಛಲವಾದಿ ನಾರಾಯಣಸ್ವಾಮಿ ಅವರ ಪಾಲಾಯಿತಲ್ಲ?

-ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಸಮಾಜದ ದೃಷ್ಟಿಯಿಂದ ಸಾಮಾಜಿಕ ನ್ಯಾಯ ನೀಡಬೇಕು ಎಂಬ ಉದ್ದೇಶದಿಂದ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ನ್ಯಾಯ ಕೊಡಲೇಬೇಕು. ಹಾಗಂತ ಸಹಜ ನ್ಯಾಯಕ್ಕೆ ಧಕ್ಕೆ ಆಗಬಾರದು. ಈ ಸಹಜ ನ್ಯಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಾರೆ ಎಂಬ ವಿಶ್ವಾಸ ಇಟ್ಟುಕೊಂಡು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾಡಿದ ನಿರ್ಧಾರವನ್ನು ಸ್ವಾಗತಿಸುತ್ತೇನೆ.

ಸಹಜ ನ್ಯಾಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದ್ದರೇ ಈ ನೇಮಕ ಆಗುತ್ತಿತ್ತೇ?

-ಕೆಲವೊಮ್ಮೆ ಯುದ್ಧನೀತಿಯ ತಂತ್ರಗಾರಿಕೆ ಬಗ್ಗೆ ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಲು ಆಗುವುದಿಲ್ಲ. ಎಲ್ಲಿವರೆಗೆ ಜಾತಿಯ ಕಾರಣಕ್ಕೆ ನೋಡುವಂಥ ಪ್ರವೃತ್ತಿ ಇರುತ್ತದೆಯೋ ಅಲ್ಲಿವರೆಗೆ ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಆದರೆ, ನಮ್ಮಂಥವರು ಬಂದಾಗಲೇ ಪ್ರಶ್ನೆಯಾಗಿ ಕಾಡಬಾರದು. ಸಿ.ಟಿ.ರವಿ ಬಂದಾಗ ಸಾಮಾಜಿಕ ನ್ಯಾಯ, ಮತ್ತೊಬ್ಬರು ಬಂದಾಗ ಬಾರಾ ಖೂನ್ ಮಾಫ್‌ ಎಂದು ಆಗಬಾರದು.

ಪಕ್ಷ ಸೇರ್ಪಡೆಯಾಗಿ ಆರು ವರ್ಷಗಳಲ್ಲಿಯೇ ಹಲವಾರು ಉನ್ನತ ಸ್ಥಾನಗಳನ್ನು ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡಲಾಗಿದೆ. ಪಕ್ಷದಲ್ಲಿ ಬೇರೆ ಪರಿಶಿಷ್ಟರ ನಾಯಕರು ಇಲ್ಲವೇ?

-ಈಗ ನೇಮಕ ಆಗಿದೆ. ಆ ಸ್ಥಾನಕ್ಕೆ ಚ್ಯುತಿ ತರಲು ಬಯಸುವುದಿಲ್ಲ. ನಕಾರಾತ್ಮಕವಾಗಿ ಮಾತನಾಡಲು ಬಯಸುವುದಿಲ್ಲ. ನಮ್ಮ ಪಕ್ಷವೇ ಅವರಿಗೆ ಎಲ್ಲ ಸ್ಥಾನಮಾನಗಳನ್ನು ನೀಡಿದೆ. ಹಾಗಾಗಿ ಈ ಸಂದರ್ಭ ಪಕ್ಷ ತೆಗೆದುಕೊಂಡಿರುವ ತೀರ್ಮಾನ ಸಮಯೋಚಿತ ಎಂದಷ್ಟೇ ಭಾವಿಸುತ್ತೇನೆ.

ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿಯಲ್ಲಿನ ಒಕ್ಕಲಿಗ ನಾಯಕತ್ವ ಮಂಕಾದಂತೆ ಕಾಣುತ್ತಿದೆ?

-ಜೆಡಿಎಸ್ ಎನ್‌ಡಿಎ ಭಾಗವಾಗಿದೆ. ತಕ್ಷಣಕ್ಕೆ ಆ ರೀತಿಯ ಅಭಿಪ್ರಾಯಕ್ಕೆ ಬರಬಾರದು. ಈ ಪ್ರಶ್ನೆ ಉದ್ಭವಿಸುವುದಿಲ್ಲ. ನಾವೆಲ್ಲ ಜಾತಿ ಕಾರಣಕ್ಕೆ ಬೆಳೆದವರಲ್ಲ. ನಮ್ಮನ್ನು ಪಕ್ಷ ಬೆಳೆಸಿದ್ದು ನಮ್ಮ ನಿಷ್ಠೆ, ಸ್ವಭಾವ ಮತ್ತು ಪರಿಶ್ರಮ ಕಾರಣಕ್ಕೆ. ಉಭಯ ಪಕ್ಷಗಳು ಎನ್‌ಡಿಎ ಭಾಗವಾಗಿದ್ದರೂ ಕಾರ್ಯವಿಧಾನದಲ್ಲಿ ಅಗಾಧವಾದ ವ್ಯತ್ಯಾಸವಿದೆ. ನಮ್ಮದು ವ್ಯಕ್ತಿ ಕೇಂದ್ರಿತ ವ್ಯವಸ್ಥೆಯಲ್ಲ.

ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿಯ ಒಕ್ಕಲಿಗ ನಾಯಕತ್ವದ ಭಾಗವಾಗಿ ನಿಮ್ಮ ಪಕ್ಷದ ವರಿಷ್ಠರು ಪರಿಗಣಿಸುತ್ತಿದ್ದಾರಂತೆ? ಬಿಜೆಪಿಯ ಒಕ್ಕಲಿಗ ನಾಯಕರನ್ನು ಕಡೆಗಣಿಸುತ್ತಿದ್ದಾರಂತೆ?

-ಕುಮಾರಸ್ವಾಮಿ ಈಗ ಎನ್‌ಡಿಎ ನಾಯಕರು. ಬಿಜೆಪಿಗೆ ಸೇರಿದರೆ ಆಗ ಬಿಜೆಪಿ ನಾಯಕರು. ನಾಯಕತ್ವ ರೂಪುಗೊಳ್ಳುವುದು ಜನಸಮೂಹದ ಮೂಸೆಯಲ್ಲಿ. ಯಾರೋ ಕೊಡುವುದು ಅಥವಾ ಕಿತ್ತುಕೊಳ್ಳುವುದು ಅಲ್ಲ. ಪಕ್ಷ ಅಧಿಕಾರವನ್ನು ಕೊಡಬಹುದು. ನಾಯಕತ್ವ ಕೊಡುವುದು ಜನರು. ಯಾರು ಜನಪರ ಕೆಲಸ ಮಾಡುತ್ತಾರೋ ಅವರನ್ನು ನಾಯಕನನ್ನಾಗಿ ಗುರುತಿಸುತ್ತಾರೆ. ಆಕಾಶ ನೋಡುವುದಕ್ಕೆ ನೂಕು ನುಗ್ಗಲು ಬೇಕಾಗಿಲ್ಲ.

ಜೆಡಿಎಸ್‌ ಜತೆಗಿನ ಮೈತ್ರಿ ಬಿಜೆಪಿಗೆ ಹೆಚ್ಚು ಅನುಕೂಲವಾಗಿರುವುದರಿಂದಲೇ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆಯಲ್ಲವೇ?

-ಮೈತ್ರಿಯಿಂದಾಗಿ ಬಿಜೆಪಿಯಿಂದ ಜೆಡಿಎಸ್‌ಗೆ, ಜೆಡಿಎಸ್‌ನಿಂದ ಬಿಜೆಪಿಗೆ ಪರಸ್ಪರ ಎರಡೂ ಪಕ್ಷಗಳಿಗೂ ಅನುಕೂಲವಾಗಿದೆ. ಕಳೆದ ವಿಧಾನಸಭಾ ಚುನಾವಣೆ ನಂತರ ನಡೆದ ಬೆಳವಣಿಗೆಗಳು, ಜೆಡಿಎಸ್‌ ಪಕ್ಷವನ್ನು ಮುಗಿಸಲು ನಡೆಸಿದ ಕಾಂಗ್ರೆಸ್ಸಿನ ಒಂದು ಬಣದ ಯತ್ನ. ಅದರ ನಡುವೆ ಬಿಜೆಪಿಯಿಂದ ಜೆಡಿಎಸ್‌ಗೆ ರಕ್ಷಣೆ ಸಿಕ್ಕಂತಾಗಿದೆ. ನಮ್ಮ ಪಕ್ಷ 1998ರಿಂದಲೂ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರುತ್ತಲೇ ಬಂದಿದೆ.

ಒಂದೇ ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಜೆಪಿಗೆ ಪ್ರಬಲ ಅಸ್ತ್ರಗಳು ಸಿಕ್ಕಂತಾಗಿವೆ?

-ಕಾಂಗ್ರೆಸ್ ಪಕ್ಷ ತನ್ನ ತಪ್ಪುಗಳ ಭಾರದಿಂದ ಕುಸಿದು ಹೋಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಹಗರಣದ ಮಸಿ ಅಂಟಿಕೊಂಡಿದೆ. ಹಗರಣದ ಪಾತ್ರದಾರರು ಎಂದರೆ ಸಂಪುಟದ ಸಚಿವರು ಮತ್ತು ಮುಖ್ಯಮಂತ್ರಿಗಳು. ಇನ್ನೂ ಹತ್ತು ಹಲವು ಹಗರಣಗಳು ಹೊರಬರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಪ್ರಶ್ನಾತೀತವಾಗಿ ಉಳಿದಿಲ್ಲ.

 

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ರಾಜ್ಯ ಬಿಜೆಪಿಯ ಕೆಲವು ನಾಯಕರು ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಯಸುವುದಿಲ್ಲ. ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಅನುಮಾನವಿದೆ?

-ಈ ಅನುಮಾನ ನಮಗೂ ಇದೆ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಇದರಲ್ಲಿ ಎರಡು ಮಾತಿಲ್ಲ. ಹಗರಣಗಳ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಕಾರ್ಯಕರ್ತರು ಮತ್ತು ಜನರು ಬಯಸುತ್ತಿದ್ದಾರೆ ಎಂಬುದನ್ನು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕ ಅಶೋಕ್ ಅವರಿಗೆ ನಾವು ಹೇಳಿದ್ದೇವೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಇ.ಡಿ. ಅಧಿಕಾರಿಗಳು ಬಂಧಿತರ ಮೇಲೆ ಒತ್ತಡ ಹೇರುತ್ತಿದ್ದಾರಂತೆ?

-ಇದು ತಪ್ಪಿಸಿಕೊಳ್ಳುವ ತಂತ್ರ ಅಷ್ಟೇ. ಯಾರದ್ದೋ ಹೆಸರು ಹೇಳಿದಾಕ್ಷಣ ಅವರು ಅಪರಾಧಿ ಆಗುವುದಿಲ್ಲ. ಅದಕ್ಕೆ ಬೇಕಾದಂಥ ಸಾಂದರ್ಭಿಕ ಸಾಕ್ಷಿ, ದಾಖಲೆಗಳು ಇರಬೇಕಾಗುತ್ತದೆ.

ಜಾರಿ ನಿರ್ದೇಶಾನಲಯದ (ಇ.ಡಿ)ವಿರುದ್ಧವೇ ಎಫ್ಐಆರ್‌ ದಾಖಲಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿರುವಂತಿದೆ?

-ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರದ ಮಾದರಿಯಲ್ಲಿ ಇ.ಡಿ ಅಧಿಕಾರಿಗಳನ್ನು ಬೆದರಿಸಲು ಹೊರಟಿದ್ದಾರೆ. ಕುತಂತ್ರದ ಭಾಗವಿದು. ಹಿಂದೆಯೂ ಬರ ಪರಿಹಾರ ಬಿಡುಗಡೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ರಾಜ್ಯ ಸರ್ಕಾರ ಪದೇ ಪದೇ ಈ ರೀತಿ ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದ ಮೇಲೆ ಗೌರವ ಇದ್ದಿದ್ದರೆ ಇಂಥ ಕೆಲಸ ಮಾಡುತ್ತಿರಲಿಲ್ಲ.

Latest Videos
Follow Us:
Download App:
  • android
  • ios