ಮೀಟರ್‌ ಹಾಕದೇ ಆಟೋ ಚಾಲಕರ ಸುಲಿಗೆ! ಕನಿಷ್ಠ ದರ ನಿಗದಿಯಾಗಿದ್ದರೂ ಕ್ಯಾರೇ ಎನ್ನದೇ ಪ್ರಯಾಣಿಕರ ನಿರಂತರ ಶೋಷಣೆ ಸಹಾಯವಾಣಿಗೆ ಒತ್ತಾಯ ಓಲಾ, ಉಬರ್‌ ಚೆಕ್‌ ಮಾಡಿ ಅಷ್ಟೇ ದರ ಕೊಡಿ ಎನ್ನುವ ಚಾಲಕರು ಇದರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರ

ಬೆಂಗಳೂರು (ಅ.10) : ‘ಮಿನಿಮಂ ಚಾಜ್‌ರ್‍ಗೆÜಲ್ಲಾ ಬರಕ್ಕಾಗಲ್ಲ. ಮೀಟರ್‌ ರೇಟ್‌ಗೆಲ್ಲಾ ವರ್ಕೌಟ್‌ ಆಗಲ್ಲ. ಬಾಡಿಗೆ ಕೊಡ್ತಿರಾ? ಮೀಟರ್‌ ಮೇಲೆ .50, .100 ಸೇರಿಸಿ ಕೊಡ್ತೀರಾ? ಟ್ರಾಫಿಕ್‌ ಜಾಸ್ತಿ .200/300 ಕೊಡಿ...’ ಇವು ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಆಟೋ ಚಾಲಕರಿಗಳಿಂದ ಕೇಳಿಬರುತ್ತಿರುವ ಮಾತುಗಳು.

ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್‌: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ

ಸದ್ಯ ನಗರದಲ್ಲಿ ಹೆಚ್ಚಿನ ಆಟೋ ಚಾಲಕರು ಮೀಟರ್‌ ಹಾಕುತ್ತಿಲ್ಲ. ಸರ್ಕಾರ ನಿಗದಿ ಪಡಿಸಿರುವ ದರ ಕನಿಷ್ಠ ದರ (0-2 ಕಿ.ಮೀ) .30 ಆ ಬಳಿಕ ಪ್ರತಿ ಕಿ.ಮೀ .15 ಇದೆ. ಆದರೆ, ಚಾಲಕರು ಕನಿಷ್ಠ 2 ಕಿ.ಮೀ ದೂರಕ್ಕೆ .60ರಿಂದ .70, 2ರಿಂದ 3 ಕಿ.ಮೀ. ದೂರಕ್ಕೆ .100, ಐದು ಕಿ.ಮೀಗಿಂತ ಹೆಚ್ಚಿನ ದೂರಕ್ಕೆ .120ರಿಂದ .150 ಕೇಳುತ್ತಿದ್ದಾರೆ. ಇನ್ನು ಬಡಾವಣೆಗಳಿಂದ ನಗರದ ಮಾರುಕಟ್ಟೆ, ಬಸ್‌, ರೈಲ್ವೆ ನಿಲ್ದಾಣ ಹಾಗೂ ಕೇಂದ್ರಗಳಿಗೆ ತೆರಳಬೇಕು ಎಂದರಂತೂ ಮೀಟರ್‌ಗಿಂತ ಮೂರು ಪಟ್ಟು ದರ ನೀಡಲೇಬೇಕಾಗಿದೆ. ಓಲಾ, ಊಬರ್‌ನಂತಹ ಆ್ಯಪ್‌ಗಳು ಮಾತ್ರವಲ್ಲದೇ ಬಹುತೇಕ ಆಟೋರಿಕ್ಷಾಗಳು ಪ್ರಯಾಣಿಕರ ಸುಲಿಗೆಗೆ ನಿಂತಿದ್ದು, ಸಾರ್ವಜನಿಕರು ಬೇಸತ್ತಿದ್ದಾರೆ.

2013ರ ಬಳಿಕ ಸಾರಿಗೆ ಇಲಾಖೆಯು ಕಳೆದ ವರ್ಷ (2021) ಡಿಸೆಂಬರ್‌ನಲ್ಲಿ ದರ ಪರಿಷ್ಕರಣೆ ಮಾಡಿತ್ತು. ಕನಿಷ್ಠ ದರ .25ರಿಂದ .30ಕ್ಕೆ, ಪ್ರತಿ ಕಿ.ಮೀ ದರ .13ರಿಂದ .15ಕ್ಕೆ ಏರಿಕೆ ಮಾಡಲಾಗಿತ್ತು. ಆದರೂ ಕೂಡಾ ಮೀಟರ್‌ಗಿಂತ ಅಧಿಕ ದರವನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಬೆಲೆ ಏರಿಕೆ ಸಮಸ್ಯೆ ಹೇಳುತ್ತಾರೆ, ‘ನಾನು ಬರಲ್ಲ. ಬೇರೆ ಆಟೋ ನೋಡಿಕೊಳ್ಳಿ’ ಎಂಬ ಉತ್ತರವನ್ನು ನೀಡುತ್ತಿದ್ದಾರೆ. ಬಹುತೇಕ ಆಟೋರಿಕ್ಷಾ ಚಾಲಕರು ಹೆಚ್ಚು ದರ ವಸೂಲಿಗೆ ನಿಂತಿರುವುದರಿಂದ ಪ್ರಯಾಣಿಕರು ಹೆಚ್ಚಿನ ದರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಓಲಾ, ಉಬರ್‌ ದರವನ್ನೇ ಕೊಡಿ!

ಮೀಟರ್‌ಗಿಂತ ಹೆಚ್ಚಿನ ದರ ಕೇಳಲು ಈ ಆ್ಯಪ್‌ ಆಧಾರಿತ ಆಟೋರಿಕ್ಷಾ ಸೇವೆಯು ಕಾರಣವಾಗಿದೆ. ಆಟೋ ನಿಲ್ದಾಣಗಳು, ರಸ್ತೆಗಳಲ್ಲಿ ಮೀಟರ್‌ಗಿಂತ ಹೆಚ್ಚಿನ ದರ ಕೇಳುವ ಆಟೋ ಚಾಲಕರು ಮೊದಲ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸುತ್ತಾರೆ. ಆ ಬಳಿಕ ಖುದ್ದು ಅವರೇ ‘ಓಲಾ, ಉಬರ್‌ ಆ್ಯಪ್‌ಗಳಲ್ಲಿ ಚೆಕ್‌ ಮಾಡಿ. ಅದರಲ್ಲಿ ಕೇಳುವಷ್ಟೇ ದರ ಕೊಡಿ’ ಎಂದು ಹೇಳುತ್ತಿದ್ದಾರೆ. ಇನ್ನು ಓಲಾ, ಉಬರ್‌ಗಳಲ್ಲಿ ದುಪ್ಪಟ್ಟು ದರ ಇರುತ್ತದೆ. ತುರ್ತು ಆಟೋರಿಕ್ಷಾ ಬೇಕು ಎಂದರೆ ಹೆಚ್ಚಿನ ದರ ನೀಡಲೇಬೇಕು. ಇನ್ನು ದಾರಿ ಮಧ್ಯೆ ವಾಗ್ವದಕ್ಕಿಂತ ಅನಿವಾರ್ಯವಾಗಿ ಆನ್‌ಲೈನ್‌ ಆ್ಯಪ್‌ಗಳ ಆಟೋರಿಕ್ಷಾ ಮೊರೆ ಹೋಗುತ್ತಿದ್ದೇವೆ ಎನ್ನುತ್ತಾರೆ ಶ್ರೀನಗರ ನಿವಾಸಿ ಆಕಾಶ್‌.

ಬೆಂಗಳೂರಿಗೆ ಕಾಲಿಟ್ಟಕೂಡಲೇ ಸುಲಿಗೆ

ರೈಲು ನಿಲ್ದಾಣಗಳು, ಮೆಜೆಸ್ಟಿಕ್‌ ಸುತ್ತಮುತ್ತ ಆಟೋರಿಕ್ಷಾ ಚಾಲಕರು ಬಾಯಿಗೆ ಬಂದಂತೆ ದರ ಕೇಳುತ್ತಾರೆ. ದೂರದ ಊರುಗಳಿಂದ ಬೆಂಗಳೂರಿಗೆ ಬಂದವರು 2-3 ಪಟ್ಟು ದರ ಕೇಳಿ ಬೆಚ್ಚಿಬೀಳುತ್ತಿದ್ದಾರೆ. ಬೆಳಗಿನ ಜಾವ, ರಾತ್ರಿಯಂತೂ 8-10 ಕಿ.ಮೀ ದೂರವಿದ್ದರೆ .400ರಿಂದ .500 ಬಾಡಿಗೆ ಕೇಳುತ್ತಾರೆ. ಮೆಜೆಸ್ಟಿಕ್‌ ಪಕ್ಕದ ಗಾಂಧಿನಗರಕ್ಕೆ, ಆನಂದ್‌ರಾವ್‌ ವೃತ್ತಕ್ಕೆ .100 -150 ಬಾಡಿಗೆ ಪಡೆದಿರುವ ನಿದರ್ಶನಗಳಿವೆ. ‘ಬೆಂಗಳೂರಿಗೆ ಬಂದ ಕೂಡಲೇ ಆಟೋರಿಕ್ಷಾ ಸುಲಿಗೆ ಆರಂಭ ಆಗುತ್ತದೆ. ಎಲ್ಲರೂ ಮಾತಾಡಿಕೊಂಡು ಯಾರೊಬ್ಬರೂ ಮೀಟರ್‌ ಹಾಕುವುದಿಲ್ಲ ಎನ್ನುತ್ತಾರೆ. ಹುಬ್ಬಳ್ಳಿಯಿಂದ ಬೆಂಗಳೂರು ಬರಲು ಕೆಎಸ್‌ಆರ್‌ಟಿಸಿ ಬಸ್‌ಗೆ .495 ಕೊಟ್ಟಿದ್ದೇನೆ. ಮೆಜೆಸ್ಟಿಕ್‌ನಿಂದ ಬನಶಂಕರಿಗೆ .500 ಬಾಡಿಗೆ ಕೇಳುತ್ತಿದ್ದಾರೆ. ಇದೊಂದು ಮಹಾಮೋಸ’ ಎಂದು ಪ್ರಯಾಣಿಕ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ಸಹಾಯವಾಣಿಗೆ ಒತ್ತಾಯ

ಆಟೋ ರಿಕ್ಷಾ ಹೆಚ್ಚು ದರ ವಸೂಲಿ ಕುರಿತು ಸಾರಿಗೆ ಇಲಾಖೆ ಬೀದಿಗಿಳಿದು ಕ್ರಮಕೈಗೊಳ್ಳುತ್ತಿಲ್ಲ. ಒಲಾ, ಊಬರ್‌ ಬಂದ ಬಳಿಕ ಚಾಲಕರು ಮೀಟರ್‌ ಹಾಕುವುದನ್ನೇ ಬಿಟ್ಟದ್ದಾರೆ ಎಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳೇ ಹೇಳುತ್ತಾರೆ. ‘ಸೂಕ್ತ ಸಹಾಯವಾಣಿಯೊಂದನ್ನು ಆರಂಭಿಸಬೇಕು. ಆಟೋರಿಕ್ಷಾ ನಂಬರ್‌ ನೀಡಿದರೆ ಕ್ರಮಕೈಗೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್‌!

ಮಾತುಕತೆ ನಡೆಸಿ ಮೀಟರ್‌ ದರವನ್ನು ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೆಚ್ಚಿಸಿದೆ. ಆ್ಯಪ್‌ ಆಧಾರಿತ ಆಟೋರಿಕ್ಷಾಗಳಿಂದ ಇತರೆ ಆಟೋರಿಕ್ಷಾ ಚಾಲಕರು ಮೀಟರ್‌ ಹಾಕುವುದನ್ನೇ ಬಿಟ್ಟಿದ್ದಾರೆ. ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ದೂರುಗಳು ಬರುತ್ತಿವೆ. ಒಕ್ಕೂಟದಿಂದ ಸಾಕಷ್ಟುಬಾರಿ ಚಾಲಕರಿಗೆ ತಿಳಿ ಹೇಳಿದರೂ ಪ್ರಯೋಜನವಾಗಿಲ್ಲ. ದರ ವಸೂಲಿಯಿಂದ ಆಟೋರಿಕ್ಷಾ ಗ್ರಾಹಕರಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಆಟೋ ಎಂದರೆ ಎಷ್ಟುಬಾಡಿಗೆ ಕೇಳುತ್ತಾರೋ ಎಂದು ಭಯಪಡುತ್ತಿದ್ದಾರೆ. ಸಾರಿಗೆ ಮತ್ತು ಅಳತೆ, ತೂಕ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ರಸ್ತೆಗಿಳಿದು ಕ್ರಮಕೈಗೊಳ್ಳಬೇಕು.

-ಡಿ.ರುದ್ರಮೂರ್ತಿ, ಪ್ರಧಾನ ಕಾರ್ಯದರ್ಶಿ, ಆಟೋ ರಿಕ್ಷಾ ಚಾಲಕರ ಒಕ್ಕೂಟ.