ನೀವು ಎಲ್ಲಿಗೆ ಹೋಗ್ತೀರೋ, ಬಿಡ್ತೀರೋ ಗೊತ್ತಿಲ್ಲ. ಆದರೆ, ಓಲಾ, ಉಬರ್‌ನಲ್ಲಿ ಆಟೋ ರೈಡ್‌ ಬುಕ್‌ ಮಾಡಿದ್ರೆ ಮಿನಿಮಮ್‌ ಚಾರ್ಜೇ 100 ರೂಪಾಯಿ. ಸಾಮಾನ್ಯ ಜನರ ರಕ್ತ ಹೀರುವ ಧನದಾಹಿ ಕಂಪನಿಗಳ ವಿರುದ್ಧ ಕೆಂಗಣ್ಣು ಬೀರಿರುವ ಕರ್ನಾಟಕ ಸಾರಿಗೆ ಇಲಾಖೆ, ಒಲಾ, ಊಬರ್‌ನೊಂದಿಗೆ ರಾಪಿಡೋ ಕಂಪನಿಗೂ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು (ಅ.7): ಪ್ರಯಾಣಿಕರ ಸುಲಿಗೆಗೆ ಇಳಿದಿದ್ದ ಟೆಕ್‌ ಅಗ್ರಿಗೇಟರ್‌ಗಳಾದ ಒಲಾ, ಉಬರ್‌ ಹಾಗೂ ರಾಪಿಡೋಗೆ ಕರ್ನಾಟಕ ಸಾರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಒಲಾ, ಉಬರ್‌ ತಮ್ಮ ಆಟೋ ರೈಡ್‌ಗಳ ಕನಿಷ್ಠ ಚಾರ್ಜ್‌ಅನ್ನು 100 ರೂಪಾಯಿ ಮಾಡಿವೆ. ಈ ಕುರಿತು ಪ್ರಯಾಣಿಕರಿಂದ ಸಾಕಷ್ಟು ದೂರು ದಾಖಲಾದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಈ ಕುರಿತು ವಿವರಣೆ ಕೋರಿ ಗುರುವಾರ ನೋಟಿಸ್‌ ನೀಡಲಾಗಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್‌ ತಿಳಿಸಿದ್ದಾರೆ. “ಅಗ್ರಿಗೇಟರ್‌ಗಳು ಅತಿಯಾದ ದರವನ್ನು ವಿಧಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ, ಅಗ್ರಿಗೇಟರ್‌ಗಳ ನಿಯಮಗಳ ವಿಷಯವು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಆದರೆ, ಪರಿಸ್ಥಿತಿಯ ಲಾಭ ಪಡೆದು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಇಲ್ಲಿ ಚಾಲಕರ ತಪ್ಪಿಲ್ಲ. ನಿಯಮ ಉಲ್ಲಂಘಿಸಿ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಅಗ್ರಿಗೇಟರ್‌ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ಆಯುಕ್ತರು ತಿಳಿಸಿದ್ದಾರೆ.

Scroll to load tweet…


ಸಾರಿಗೆ ಇಲಾಖೆಯ ನಿಯಮದ ಪ್ರಕಾರ ರಾಜ್ಯದಲ್ಲಿ ಆಟೋದಲ್ಲಿ ಕನಿಷ್ಠ ಚಾರ್ಜ್‌ 30 ರೂಪಾಯಿ. ಕಾಯುವಿಕೆಯ ಚಾರ್ಜ್ ಪ್ರತಿ 5 ನಿಮಿಷಕ್ಕೆ 5 ರೂಪಾಯಿಗಳಂತೆ ನಿಗದಿ ಪಡಿಸಿತ್ತು. ಆದರೆ, ಸಾರಿಗೆ ಇಲಾಖೆಯ ನಿಯಮಗಳು ತಮಗೆ ಲೆಕ್ಕಕ್ಕೆ ಇಲ್ಲ ಎನ್ನುವಂತೆ ವರ್ತನೆ ಮಾಡುತ್ತಿದ್ದ ಈ ಕಂಪನಿಗಳು, ಕನಿಷ್ಠ ಚಾರ್ಜ್‌ಅನ್ನು 100 ರೂಪಾಯಿ ಮಾಡಿದ್ದರು. ಆ್ಯಪ್ ಆಧಾರಿತ ಟ್ರಾನ್ಸ್‌ಪೋರ್ಟ್‌ ಸಂಸ್ಥೆಗಳು ಪ್ರಯಾಣಿಕರ ಬಳಿ ಸುಲಿಗೆಗೆ ಇಳಿದಿವೆ. ಈ ಹಿನ್ನಲೆಯಲ್ಲಿ ಆ್ಯಪ್ ಆಧಾರಿತ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ನಿರ್ಧಾರ ಮಾಡಿ ನೋಟಿಸ್‌ ಜಾರಿ ಮಾಡಿದೆ. ಈ ವಿಚಾರವಾಗಿ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದೆ.

ಕಳೆದ ವರ್ಷ, ಅಧಿಕಾರಿಗಳು ಮೂಲ ದರವಾಗಿ ₹ 30 (ಮೊದಲ ಎರಡು ಕಿಲೋಮೀಟರ್‌ಗಳಿಗೆ) ಮತ್ತು ನಂತರದ ಕಿಲೋಮೀಟರ್‌ಗಳಿಗೆ ₹ 15 ನಿಗದಿಪಡಿಸಿದ್ದರು. ಆದರೆ, ಆ ಬಳಿಕ ಅಗ್ರಿಗೇಟರ್‌ಗಳು ತಮ್ಮದೇ ಆದ ದರಗಳನ್ನು ನಿಗದಿಪಡಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಉದಾಹರಣೆಗೆ ಇನ್‌ಫೆಂಟ್ರಿ ರಸ್ತೆಯಿಂದ 2 ರಿಂದ 2.5 ಕಿ.ಮೀ ದೂರವಿರುವ ವಿಧಾನ ಸೌಧಕ್ಕೆ ಪ್ರಯಾಣಿಸಲು, ಓಲಾದಲ್ಲಿ (Ola) ₹113 (ರೈಡ್ ದರ ₹63 ಮತ್ತು ಪ್ರವೇಶ ಶುಲ್ಕ ₹50), ಉಬರ್‌ನಲ್ಲಿ (Uber) ₹107, ಮತ್ತು ರಾಪಿಡೋ (Rapido) ಆ್ಯಪ್ ₹78 ತೋರಿಸುತ್ತದೆ. ರಾಪಿಡೋ ಅಪ್ಲಿಕೇಶನ್ 3.5 ಕಿಮೀ ವರೆಗೆ ₹55 ಮತ್ತು 2 ಕಿಮೀ ನಂತರ ಚಾರ್ಜ್ ಮಾಡಿದ ನಂತರ ₹16.5 ಕಿಮೀ ತೋರಿಸುತ್ತದೆ. ಅಧಿಕಾರಿಗಳು ನಿಗದಿಪಡಿಸಿದ ದರಕ್ಕಿಂತ ರಾಪಿಡೊ ತೋರಿಸುವ ದರ ಹೆಚ್ಚಿದೆ.

ಬರೀ 20 ರೂಪಾಯಿ ಟಿಕೆಟ್‌, ಒಲಾ-ಉಬರ್‌ಗೆ ಟಾಂಗ್‌ ನೀಡಿದ ಬೆಂಗಳೂರು ಪ್ರಯಾಣಿಕ!

ಅಗ್ರಿಗೇಟರ್‌ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ''1ರಿಂದ 1.5 ಕಿ.ಮೀ.ವರೆಗಿನ ಅಲ್ಪ ದೂರದ ಪ್ರಯಾಣಕ್ಕೆ ಅಗ್ರಿಗೇಟರ್‌ಗಳು 100 ರೂಪಾಯಿ ಶುಲ್ಕ ವಿಧಿಸುವ ನಿದರ್ಶನವಿದೆ. ಅವರು ಪ್ರಯಾಣಿಕರನ್ನು ಸುಲಿಗೆಗೆ ಇಳಿದಿದ್ದರೂ, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರವಾಗಿದೆ. ಈ ಹಿಂದೆ ಚಾಲಕರು ದುಬಾರಿ ದರ ಕೇಳುತ್ತಿದ್ದರು ಆದರೆ ಈಗ ಈ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರನ್ನು ಲೂಟಿ ಮಾಡಲು ಆರಂಭಿಸಿವೆ' ಎಂದು ಪ್ರೇಮಲತಾ ಹೇಳಿದರು.

OTP ಜಗಳ: ತಮಿಳುನಾಡಲ್ಲಿ ಟೆಕ್ಕಿ ಕೊಂದ ಕ್ಯಾಬ್ ಡ್ರೈವರ್!

ಕ್ರಮ ಕೈಗೊಳ್ಳುವಂತೆ ತೇಜಸ್ವಿ ಸೂರ್ಯ ಆಗ್ರಹ: ಒಲಾ, ಉಬರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ತೇಜಸ್ವಿ ಸೂರ್ಯ (MP Tejasvi Surya), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj Bommai) ಹಾಗೂ ಸಚಿವ ಬಿ.ಶ್ರೀರಾಮುಲು ಅವರಿಗೆ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಕೊನೇ ಹಂತದ ಕನೆಕ್ಟಿವಿಟಿ ನೀಡುವುದು ಆಟೋಗಳು. ಆದರೆ, ಅಗ್ರಿಗೇಟರ್‌ಗಳು 100 ರೂಪಾಯಿ ಕನಿಷ್ಠ ದರ ವಿಧಿಸುತ್ತಿವೆ. ಸರ್ಕಾರದ ಪ್ರಕಾರ ಕನಿಷ್ಠ ದರ 30 ರೂಪಾಯಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ.