ಡಾ.ಬಿ.ಆರ್‌. ಅಂಬೇಡ್ಕರ್‌ ನಿಗಮದಿಂದ ನೀಡುವ ಸಾಲಕ್ಕೆ ಫಲಾನುಭವಿಯೊಬ್ಬರ ಅರ್ಜಿ ಶಿಫಾರಸು ಮಾಡಲು 2007ರಲ್ಲಿ 4,500 ರು. ಲಂಚ ಪಡೆದಿದ್ದ ಆರೋಪದಡಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಪಂಚಾಯತಿಯ ಮಾಜಿ ಕಾರ್ಯಕಾರಿ ಅಧಿಕಾರಿ ಬಿ.ವಿ. ರಮೇಶ್‌ಗೆ ಲೋಕಾಯುಕ್ತ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷ ಜೈಲು ಶಿಕ್ಷೆ ರದ್ದುಪಡಿಸಿದ ನ್ಯಾಯಮೂರ್ತಿ ಕೆ.ರಾಜೇಶ್‌ ರೈ ಅವರ ಪೀಠ ಈ ಆದೇಶ ಮಾಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು(ಆ.17): ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪ ಸಾಬೀತಾಗಬೇಕಾದರೆ ಆರೋಪಿಯಿಂದ ಲಂಚದ ಹಣ ವಶಪಡಿಸಿಕೊಂಡರಷ್ಟೇ ಸಾಲದು. ಆರೋಪಿಯು ಲಂಚಕ್ಕೆ ಬೇಡಿಕೆಯಿಟ್ಟಹಾಗೂ ಸ್ವೀಕರಿಸಿರುವುದನ್ನು ಸಮಂಜಸ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸುವುದು ಕಡ್ಡಾಯ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಡಾ.ಬಿ.ಆರ್‌. ಅಂಬೇಡ್ಕರ್‌ ನಿಗಮದಿಂದ ನೀಡುವ ಸಾಲಕ್ಕೆ ಫಲಾನುಭವಿಯೊಬ್ಬರ ಅರ್ಜಿ ಶಿಫಾರಸು ಮಾಡಲು 2007ರಲ್ಲಿ 4,500 ರು. ಲಂಚ ಪಡೆದಿದ್ದ ಆರೋಪದಡಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಪಂಚಾಯತಿಯ ಮಾಜಿ ಕಾರ್ಯಕಾರಿ ಅಧಿಕಾರಿ ಬಿ.ವಿ. ರಮೇಶ್‌ಗೆ ಲೋಕಾಯುಕ್ತ ನ್ಯಾಯಾಲಯ ವಿಧಿಸಿದ್ದ ನಾಲ್ಕು ವರ್ಷ ಜೈಲು ಶಿಕ್ಷೆ ರದ್ದುಪಡಿಸಿದ ನ್ಯಾಯಮೂರ್ತಿ ಕೆ.ರಾಜೇಶ್‌ ರೈ ಅವರ ಪೀಠ ಈ ಆದೇಶ ಮಾಡಿದೆ.

ದೈತ್ಯ ಕಂಪೆನಿಯಾದ ನಿಮಗೆ ಇದು ದೊಡ್ಡ ಮೊತ್ತವೇನಲ್ಲ: ಹೈಕೋರ್ಟ್‌

ಲಂಚ ಸ್ವೀಕಾರ ಪ್ರಕರಣ ಸಾಬೀತುಪಡಿಸಲು ತನಿಖಾಧಿಕಾರಿಗಳು ಆರೋಪಿಯಿಂದ ಹಣ ವಶಪಡಿಸಿಕೊಂಡಿದ್ದರಷ್ಟೇ ಸಾಲದು. ಆರೋಪಿಯು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮತ್ತು ಲಂಚ ಸ್ವೀಕರಿಸಿರುವುದನ್ನು ಸಮಂಜಸವಾದ ಸಾಕ್ಷ್ಯ ಒದಗಿಸಬೇಕಾಗುತ್ತದೆ. ಪ್ರಕರಣದಲ್ಲಿ ರಮೇಶ್‌ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಲಂಚ ಸ್ವೀಕರಿಸಿದ್ದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌(ತನಿಖಾಧಿಕಾರಿಗಳು) ಸಂಪೂರ್ಣವಾಗಿ ವಿಫಲವಾಗಿದೆ. ಖುದ್ದು ದೂರುದಾರನೇ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಸಾಕ್ಷ್ಯವಾಗಿ ಸಲ್ಲಿಸಿದ್ದ ಆಡಿಯೋ ಕ್ಲಿಪ್‌ ಸಹ ರಮೇಶ್‌ ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸುವುದಿಲ್ಲ. ಇತರೆ ಇಬ್ಬರು ಸಾಕ್ಷಿಗಳ ಹೇಳಿಕೆಯಿಂದ ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂಶ ಸ್ಪಷ್ಟಪಡುವುದಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಚ್‌, ರಮೇಶ್‌ ಅವರನ್ನು ಖುಲಾಸೆಗೊಳಿಸಿದೆ.

ಪ್ರಕರಣದ ವಿವರ:

ಶಿವಮೂರ್ತಿ ಎಂಬುವವರು ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಸಾಲದ ಅರ್ಜಿ ಸಲ್ಲಿಸಿದ್ದರು. ತಾಲೂಕು ಕಾರ್ಯಕಾರಿ ಅಧಿಕಾರಿಯಾಗಿದ್ದ ರಮೇಶ್‌ ಸಾಲದ ಅರ್ಜಿಯನ್ನು ನಿಗಮಕ್ಕೆ ಶಿಫಾರಸು ಮಾಡಬೇಕಿತ್ತು. ಹೀಗಾಗಿ ರಮೇಶ್‌ ಅವರನ್ನು ಭೇಟಿ ಮಾಡಿದ್ದ ಶಿವಮೂರ್ತಿ ತಮ್ಮ ಅರ್ಜಿ ಶಿಫಾರಸ್ಸಿಗೆ ಕೋರಿದ್ದರು. ಅದಕ್ಕೆ ರಮೇಶ್‌ 4,500 ರು. ನೀಡುವಂತೆ ಬೇಡಿಕೆ ಇಟ್ಟಿದ್ದರು. ಆ ಹಣ ನೀಡಲು ಒಪ್ಪದ ಶಿವಮೂರ್ತಿ, ಚಾಮರಾಜನಗರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು ಸೂಚನೆಯಂತೆ 2007ರ ನ.28ರಂದು ತಾಲೂಕು ಪಂಚಾಯತಿ ಕಚೇರಿಯಲ್ಲಿ ರಮೇಶ್‌ ಕೊಠಡಿಗೆ ಹೋಗಿದ್ದ ಶಿವಮೂರ್ತಿ 4,500 ರು. ಲಂಚ ನೀಡಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರಮೇಶ್‌ ಅವರ ಟೇಬಲ್‌ನ ಡ್ರಾಯರ್‌ನಿಂದ 4,500 ರು. ವಶಕ್ಕೆ ಪಡೆದು ಅವರನ್ನು ಬಂಧಿಸಿದ್ದರು ಎಂದು ಆರೋಪಿಸಲಾಗಿತ್ತು.

ಟ್ವೀಟರ್‌ಗೆ 50 ಲಕ್ಷ ರು. ದಂಡ ಆದೇಶಕ್ಕೆ ಹೈಕೋರ್ಟ್‌ ತಡೆ: ಯಾಕೆ ಗೊತ್ತಾ?

ಪ್ರಕರಣದಲ್ಲಿ ಚಾಮರಾಜನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯ ರಮೇಶ್‌ಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಸೆಕ್ಷನ್‌ 7, 13(1)(ಡಿ), 13(2) ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿ 2011ರ ಜು.23ರಂದು ಹೊರಡಿಸಿತ್ತು. ಈ ಆದೇಶ ರದ್ದು ಕೋರಿ 2011ರಲ್ಲಿ ರಮೇಶ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಇತ್ತೀಚೆಗೆ ಪುರಸ್ಕರಿಸಿದ ಹೈಕೋರ್ಟ್‌ ಈ ಆದೇಶ ಮಾಡಿದೆ.

ಮೇಲ್ಮನವಿದಾರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌, ಲಂಚ ಪ್ರಕರಣದಲ್ಲಿ ಆರೋಪಿಗಳನ್ನು ದೋಷಿಯಾಗಿ ಪರಿಗಣಿಸಲು ಕಳಂಕಿತ ಹಣ ವಶಪಡಿಸಿಕೊಂಡಿರುವುದಷ್ಟೇ ಸಾಕಾಗುವುದಿಲ್ಲ. ಲಂಚ ಪಾವತಿ ಅಥವಾ ಆರೋಪಿಯು ಸ್ವಯಂ ಪ್ರೇರಿತವಾಗಿ ಲಂಚ ಸ್ವೀಕರಿಸುವುದನ್ನು ಸಮಂಜಸವಾದ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಬೇಕಾಗುತ್ತದೆ. ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ಸೂಕ್ತ ಸಾಕ್ಷ್ಯಗಳೇ ಇಲ್ಲ. ದೂರುದಾರರು ಲೋಕಾಯುಕ್ತ ಪೊಲೀಸರಿಗೆ ನೀಡಿದ ದೂರಿನಿಂದ ಅರ್ಜಿದಾರರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಎಂಬುದು ತಿಳಿಯ್ತುದೆ. ಸ್ವತಃ ದೂರುದಾರರೇ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಮೇಲಾಗಿ ಆರೋಪಿಯಿಂದ ನಡೆಸಿ ಹಣ ವಶಪಡಿಸಿಕೊಂಡಿಲ್ಲ. ಅವರ ಟೇಬಲ್‌ ಡ್ರಾಯರ್‌ನಲ್ಲಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಹೀಗಿದ್ದರೂ ವಿಶೇಷ ನ್ಯಾಯಾಲಯ ಮೇಲ್ಮನವಿದಾರನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ. ಇದು ದೋಷಪೂರಿತ ಆದೇಶವಾಗಿದ್ದು, ಅದನ್ನು ರದ್ದುಪಡಿಸಬೇಕೆಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.