ಸಾಮಾಜಿಕ ಮಾಧ್ಯಮ ಟ್ವೀಟರ್‌ಗೆ (ಈಗ ‘ಎಕ್ಸ್‌’ ಕಾರ್ಪ್‌) 50 ಲಕ್ಷ ರು. ದಂಡ ವಿಧಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠ ಆ.30ರವರೆಗೆ ತಡೆಯಾಜ್ಞೆ ನೀಡಿ ಗುರುವಾರ ಮಧ್ಯಂತರ ಆದೇಶ ಮಾಡಿದೆ. 

ಬೆಂಗಳೂರು (ಆ.10): ಸಾಮಾಜಿಕ ಮಾಧ್ಯಮ ಟ್ವೀಟರ್‌ಗೆ (ಈಗ ‘ಎಕ್ಸ್‌’ ಕಾರ್ಪ್‌) 50 ಲಕ್ಷ ರು. ದಂಡ ವಿಧಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠ ಆ.30ರವರೆಗೆ ತಡೆಯಾಜ್ಞೆ ನೀಡಿ ಗುರುವಾರ ಮಧ್ಯಂತರ ಆದೇಶ ಮಾಡಿದೆ. ಕೇಂದ್ರ ಸರ್ಕಾರ 2021 ಮತ್ತು 2022ರ ಅವಧಿಯಲ್ಲಿ ಕೆಲವೊಂದು ಆಯ್ದ ವೈಯಕ್ತಿಕ ಟ್ವೀಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿದ್ದ ಆದೇಶವನ್ನು ಕಾಲಮಿತಿಯೊಳಗೆ ಪಾಲಿಸಲು ವಿಫಲವಾದ ಆರೋಪದ ಮೇಲೆ ಏಕಸದಸ್ಯ ಪೀಠ 50 ಲಕ್ಷ ರು. ದಂಡ ವಿಧಿಸಿತ್ತು. 

ಇದನ್ನು ಪ್ರಶ್ನಿಸಿ ‘ಎಕ್ಸ್‌’ ಕಾರ್ಪ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ತಡೆ ಆದೇಶ ಮಾಡಿತು. ಜತೆಗೆ, ಏಕ ಸದಸ್ಯ ನ್ಯಾಯಪೀಠ ವಿಧಿಸಿರುವ ದಂಡದ ಮೊತ್ತದ ಪೈಕಿ 25 ಲಕ್ಷ ರು.ಗಳನ್ನು ಒಂದು ವಾರದಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಮೇಲ್ಮನವಿದಾರ ಕಂಪನಿಗೆ ನಿರ್ದೇಶಿಸಿ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.

Kolar: ಕೆಸರನಹಳ್ಳಿ, ಕೇತಗಾನಹಳ್ಳಿ ಗ್ರಾ.ಪಂ.ಗಳು ಬಿಜೆಪಿಯ ವಶ: ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ

ದಂಡ ಕಟ್ಟದೇ ಸುಮ್ಮನಿದ್ದ ಟ್ವೀಟರ್‌: ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಸೂಚನೆ ಪ್ರಶ್ನಿಸಿದ್ದ ಟ್ವೀಟರ್‌ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ 50 ಲಕ್ಷ ರು. ದಂಡ ವಿಧಿಸಿದ್ದ ಏಕ ಸದಸ್ಯ ನ್ಯಾಯಪೀಠ, ಆ.14ರೊಳಗೆ ಆ ದಂಡ ಮೊತ್ತ ಪಾವತಿಸಬೇಕು ಎಂದು ಹೇಳಿತ್ತು. ಅದರಂತೆ ಈವರೆಗೆ ದಂಡ ಪಾವತಿಸಿಲ್ಲ. ಮೇಲ್ಮನವಿ ವಿಚಾರಣೆ ನಡೆಸುವ ಮುನ್ನ ಅದರ ವಿಚಾರಣಾ ಮಾನ್ಯತೆ ನಿರ್ಧರಿಸಬೇಕಿದೆ ಎಂದು ವಿಭಾಗೀಯ ಪೀಠ ಮೌಖಿಕವಾಗಿ ನುಡಿಯಿತು. ಅದಕ್ಕೆ ಉತ್ತರಿಸಿದ ಎಕ್ಸ್‌ ಕಾರ್ಪ್‌ ಪರ ವಕೀಲರು, ಪ್ರಕರಣದಲ್ಲಿ ನಮ್ಮ ಮೇಲಿನ ನಂಬಿಕೆ ಸಾಬೀತುಪಡಿಸುವ ನಿಟ್ಟಿನಲ್ಲಿ ದಂಡದಲ್ಲಿ ಅರ್ಧಭಾಗ ಅಂದರೆ 25 ಲಕ್ಷ ರು. ಅನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, 25 ಲಕ್ಷ ರು. ರೇವಣಿ ಇಡುವಂತೆ ಸೂಚಿಸಿರುವ ಈ ಆದೇಶವನ್ನು ಟ್ವಿಟರ್‌ ಪರವಾಗಿ ನ್ಯಾಯವಿದೆ ಎಂಬುದಾಗಿ ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿತು .ಹಾಗೆಯೇ, ಪ್ರತಿವಾದಿಯಾಗಿರುವ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದ ನ್ಯಾಯಪೀಠ, ಮೇಲ್ಮನವಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಒಂದೊಮ್ಮೆ ಮಧ್ಯಂತರ ತಡೆಯಾಜ್ಞೆ ತೆರವು ಮಾಡಲು ಕೇಂದ್ರ ಸರ್ಕಾರ ಬಯಸಿದಲ್ಲಿ ಆ ಸಂಬಂಧವೂ ಸೂಕ್ತ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತು.

ಪ್ರಕರಣದ ಹಿನ್ನೆಲೆ: ಅನೇಕರು ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಹಿನ್ನೆಲೆಯಲ್ಲಿ ಒಟ್ಟು 1,474 ವ್ಯಕ್ತಿಗತ ಖಾತೆಗಳು ಮತ್ತು 175 ಟ್ವೀಟ್‌ಗಳನ್ನು ನಿರ್ಬಂಧಿಸಲು ಟ್ವೀಟರ್‌ ಕಂಪನಿಗೆ ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಹೊರಡಿಸಿತ್ತು. 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ ಲಿಂಕ್‌ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಟ್ವೀಟರ್‌ಗೆ ನಿರ್ದೇಶಿಸಿತ್ತು. ಈ ಪೈಕಿ 39 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಟ್ವೀಟರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದೆ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಳೆದ ಒಂದು ವರ್ಷದಿಂದ ಕೋರ್ಟ್‌ನ ಅಮೂಲ್ಯ ಸಮಯ ವ್ಯರ್ಥ ಮಾಡಿದ ಟ್ವೀಟರ್‌ ನಡೆ ನ್ಯಾಯಸಮ್ಮತವಾಗಿಲ್ಲ ಎಂದು ಹೇಳಿದ್ದ ಏಕ ಸದಸ್ಯ ಪೀಠ, 50 ಲಕ್ಷ ರು. ದಂಡ ವಿಧಿಸಿ 2023ರ ಜು.30ರಂದು ಆದೇಶಿಸಿತ್ತು.

150 ರು. ತಲುಪಿದ್ದ ಟೊಮೆಟೋ ಬೆಲೆ 70 ರು.ಗೆ ಇಳಿಕೆ: ಗ್ರಾಹಕರು ಫುಲ್ ಖುಷ್

25 ಲಕ್ಷ ರು ದೊಡ್ಡ ಮೊತ್ತವೆ?: ಟ್ವೀಟರ್‌ಗೆ ಹೈಕೋರ್ಟ್‌: ಒಂದು ವಾರದಲ್ಲಿ 25 ಲಕ್ಷ ರು. ಠೇವಣಿ ಇಡಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಟ್ವೀಟರ್‌ (ಎಕ್ಸ್‌ ಕಾರ್ಪ್‌) ವಕೀಲರ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರತಿಕ್ರಿಯಿಸಿ, ದೈತ್ಯ ಕಂಪೆನಿಯಾದ ನಿಮಗೆ ಇದು ದೊಡ್ಡ ಮೊತ್ತವೇನಲ್ಲ. ಎಕ್ಸ್‌ ಕಾರ್ಪ್‌ ವಾರಕ್ಕೆ ಹಲವು ಕೋಟಿ ವ್ಯವಹಾರ ನಡೆಸುತ್ತಿದೆ. ಈ ಹಣವನ್ನು ಒಂದೇ ದಿನದಲ್ಲಿ ಪಾವತಿಸಬಹುದು. ಒಂದು ವಾರ ಸಾಕು ಎಂದು ಮೌಖಿಕವಾಗಿ ಹೇಳಿತು.