Asianet Suvarna News Asianet Suvarna News

ಸುಪ್ರೀಂಕೋರ್ಟ್ ಆದೇಶಕ್ಕೂ ಮೊದಲೇ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ!

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಕೆಆರ್‌ಎಸ್‌ ಜಲಾಶಯದಿಂದ ನೀರನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಇದರ ಜೊತೆಯಲ್ಲೇ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಅರೆಖುಷ್ಕಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ನಾಲೆಗಳಿಗೂ ನೀರು ಹರಿಸುತ್ತಿದೆ.

Even before the Supreme Court order more water was released from KRS Dam to Tamil Nadu gvd
Author
First Published Aug 16, 2023, 9:49 AM IST

ಮಂಡ್ಯ (ಆ.16): ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಕೆಆರ್‌ಎಸ್‌ ಜಲಾಶಯದಿಂದ ನೀರನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಇದರ ಜೊತೆಯಲ್ಲೇ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಅರೆಖುಷ್ಕಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ನಾಲೆಗಳಿಗೂ ನೀರು ಹರಿಸುತ್ತಿದೆ. ಪ್ರಸ್ತುತ ಕೆಆರ್‌ಎಸ್‌ ಜಲಾಶಯದಲ್ಲಿ 112.32 ಅಡಿ ನೀರು ದಾಖಲಾಗಿದೆ. ಅಣೆಕಟ್ಟೆಗೆ 3960 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದರೆ, ಜಲಾಶಯದಿಂದ ಹೊರಕ್ಕೆ 7256 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 

ಇದರಲ್ಲಿ ನದಿಗೆ 5243 ಕ್ಯುಸೆಕ್‌, ವಿ.ಸಿ.ನಾಲೆಗಳಿಗೆ 1755 ಕ್ಯುಸೆಕ್‌, ಆರ್‌ಬಿಎಲ್‌ಎಲ್‌ ನಾಲೆಗೆ 50 ಕ್ಯುಸೆಕ್‌, ಎಲ್‌ಬಿಎಲ್‌ಎಲ್‌ ನಾಲೆಗೆ 58 ಕ್ಯುಸೆಕ್‌, ದೇವರಾಜ ಅರಸು ನಾಲೆಗೆ 100 ಕ್ಯುಸೆಕ್‌, ಎಂಸಿಸಿಡಬ್ಲ್ಯು ನಾಲೆಗೆ 50 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ನಡುವೆ ರಾತ್ರಿ ವೇಳೆ ನೀರು ಹರಿಸುವ ಪ್ರಮಾಣವನ್ನು ಹೆಚ್ಚಿಸುವ ಅಧಿಕಾರಿಗಳು ಬೆಳಗಿನ ವೇಳೆಗೆ ಸಾಮಾನ್ಯಸ್ಥಿತಿಗೆ ತಂದು ನಿಲ್ಲಿಸುವ ನಿದರ್ಶನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.

ಲಾಡ್ಜ್​ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ: ಸೂಸೈಡ್‌ಗೂ ಮುನ್ನ ಆತ ಮಾಡಿದ್ದೇನು ಗೊತ್ತಾ?

ಮುಂಗಾರು ವೈಫಲ್ಯಗೊಂಡಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಭರ್ತಿಯಾಗಲಿಲ್ಲ. ಈ ಬಾರಿ ಅಣೆಕಟ್ಟು ತುಂಬುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೊರತೆಯಿಂದ ನೀರಿಗೆ ಅಭಾವ ಎದುರಾಗಿದೆ. ಕೃಷಿ ಚಟುವಟಿಕೆ ಕುಂಠಿತಗೊಂಡಿದ್ದು, ಎಲ್ಲೆಡೆ ಬಿತ್ತನೆಗೆ ಹಿನ್ನಡೆಯಾಗಿದೆ. ಭತ್ತ, ಕಬ್ಬು ಬೆಳೆ ಬೆಳೆಯಲು ಸಿದ್ಧನಾಗಿದ್ದ ರೈತರಿಗೆ ಸರ್ಕಾರ ಅರೆಖುಷ್ಕಿ ಬೆಳೆಗಳನ್ನು ಬೆಳೆಯುವಂತೆ ಫರ್ಮಾನು ಹೊರಡಿಸಿದೆ. ಬೇರೆ ಬೆಳೆಗಳನ್ನು ಬೆಳೆದು ನಷ್ಟಅನುಭವಿಸಿದರೆ ಪರಿಹಾರ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ರೈತರು ಅರೆ ಖುಷ್ಕಿ ಬೆಳೆಗಳನ್ನು ಬೆಳೆಯುವ ಕಡೆ ಹೆಚ್ಚು ಆಸಕ್ತಿ ತೋರಿಸದೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗಿರುವಂತೆ ಕಂಡುಬರುತ್ತಿದ್ದಾರೆ.

ಸುಪ್ರೀಂ ಆದೇಶದಂತೆ ನೀರು ಬಿಡುಗಡೆ: ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಚ್‌ ಆದೇಶ ಮಾಡಿರುವುದರಿಂದ ಕೆಆರ್‌ಎಸ್‌ನಿಂದ ನೀರು ಹರಿಸುವುದು ಅನಿವಾರ್ಯವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಗಾರು ಮಳೆ ವೈಫಲ್ಯದಿಂದ ರಾಜ್ಯ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮಳೆ ಕಡಿಮೆಯಾಗಿದೆ, ನಾಲ್ಕೂ ಜಲಾಶಯಗಳ ಒಳ ಹರಿವು ಕೂಡ ಕಡಿಮೆಯಾಗಿದೆ. ಸಂಕಷ್ಟಪರಿಸ್ಥಿತಿ ನಿಭಾಯಿಸುವ ಶಕ್ತಿಯನ್ನು ದೇವರು ಕೊಡಬೇಕಿದೆ ಎಂದರು.

ನೀರಮಾನ್ವಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಭಯ ಭೀತರಾದ ಗ್ರಾಮಸ್ಥರು!

ತಮಿಳುನಾಡು ಮನವಿಗೆ ಕೇಂದ್ರ ಮನ್ನಣೆ ಕೊಡಲಿಲ್ಲವೆಂದು ತಮಿಳುನಾಡಿನವರು ಸುಪ್ರೀಂಕೋರ್ಚ್‌ ಮೆಟ್ಟಿಲೇರಿ ಆದೇಶ ಮಾಡಿಸಿದ್ದಾರೆ. ಈ ಹಿಂದೆಯೂ ಇಂತಹ ಸಂದರ್ಭ ಎದುರಾದಾಗ ನಮಗೂ ಅವರಿಗೂ ದೊಡ್ಡಮಟ್ಟದ ಹೋರಾಟ ನಡೆದಿದೆ. ಇದರ ನಡುವೆಯೂ ಕಾವೇರಿ ಕಣಿವೆ ಪ್ರದೇಶದ ನಾಲ್ಕು ಜಲಾಶಯಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ರೈತರಿಗೆ ಏನು ಕೊಡಲು ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು. ಕೃಷಿ ಸಚಿವರ ವಿರುದ್ಧ ಗವರ್ನರ್‌ಗೆ ಬಿಜೆಪಿ ದೂರು ನೀಡುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಬಿಜೆಪಿ ವಿರುದ್ಧ ಮಾತನಾಡಲು ಹಿಂದೇಟು ಹಾಕಿದ ಸಚಿವ ಚಲುವರಾಯಸ್ವಾಮಿ ಅವರು ಇವತ್ತು ಸ್ವಾತಂತ್ರ್ಯ ದಿನಾಚರಣೆ ಮಾಡಪ್ಪ. ನಿನಗೂ ಥ್ಯಾಂಕ್ಸ್‌, ಬಿಜೆಪಿಯವರಿಗೂ ಥ್ಯಾಂಕ್ಸ್‌ ಎಂದು ಹೇಳಿ ಹೊರಟರು.

Follow Us:
Download App:
  • android
  • ios