ತಳ ಜಾತಿಗಳ ಶಿಕ್ಷಣ, ಉದ್ಯೋಗಕ್ಕೆ ಒತ್ತು: ಸಿಎಂ
- ತಳ ಜಾತಿಗಳ ಶಿಕ್ಷಣ, ಉದ್ಯೋಗಕ್ಕೆ ಒತ್ತು: ಸಿಎಂ
- ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ಧ
- ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ
ಬೆಂಗಳೂರು (ಅ.10) : ವಾಲ್ಮೀಕಿ ಸಮುದಾಯದವರು ಶೂರರು, ಸ್ವಾಭಿಮಾನಿಗಳು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸೋತು ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರವು ತಳ ಸಮುದಾಯಗಳ ಉದ್ಯೋಗ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದವರು ವಿದ್ಯೆ, ಬುದ್ಧಿ, ಶಕ್ತಿ, ಸಾಹಸದಲ್ಲಿ ಕಡಿಮೆಯಿಲ್ಲ. ದೇವರಿಗೆ ಕಣ್ಣು ಅರ್ಪಿಸಿ ದೇವರನ್ನೇ ತನ್ನ ಕಡೆಗೆ ಸೆಳೆದುಕೊಂಡ ಬೇಡರ ಕಣ್ಣಪ್ಪನಂತಹ ಭಕ್ತ ಯಾರಿದ್ದಾರೆ. ನೀವು ಶೂರರು, ಸ್ವಾಭಿಮಾನಿಗಳು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸೋತು ಮೀಸಲಾತಿ ನೀಡಲಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮೀಸಲಾತಿ ಹೆಚ್ಚಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ವಿವಿಧ ಮಠಾಧೀಶರಿಂದ ಅಭಿನಂದನೆ
ಅಣ್ಣ-ತಮ್ಮಂದಿರಂತೆ ಬದುಕಿ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡೋಣ. ಸಮಾನ ಅವಕಾಶ ನೀಡುವುದೇ ರಾಮರಾಜ್ಯ. ವಾಲ್ಮೀಕಿ ಸೇರಿದಂತೆ ಬುದ್ಧ, ಬಸವ ಹಾಗೂ ಸಂವಿಧಾನದಲ್ಲಿಯೂ ಸಮಾನತೆ ಪ್ರತಿಪಾದಿಸಲಾಗಿದೆ. ಹೆಜ್ಜೆ ಮುಂದಿಟ್ಟಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಗೆ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಆಶಯವನ್ನು ಸಾಕಾರಗೊಳಿಸಬೇಕು. ಈ ನಿಟ್ಟಿನಲ್ಲಿ ವಿಧಾನ ಸೌಧದಿಂದ ಹೊರಡುವ ಪ್ರತಿ ಆದೇಶವೂ ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳಿಂದ ಕೂಡಿದ್ದು, ತಳ ಸಮುದಾಯಗಳ ಏಳಿಗೆಗೆ ಪೂರಕವಾಗಿರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಕನಸು ನನಸು ಮಾಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಮ್ಮ ಪರ ಕೆಲಸ ಮಾಡಲು ಆಶೀರ್ವಾದ ನೀಡಿ. 101 ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯ, 5 ಮೆಗಾ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. 28 ಸಾವಿರ ಕೋಟಿ ರುಪಾಯಿಯನ್ನು ಪರಿಶಿಷ್ಟಜಾತಿ ಮತ್ತು ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಲಾಗಿದೆ. ಮನೆ ನಿರ್ಮಾಣಕ್ಕೆ 2ಲಕ್ಷ ರು., 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ಕ್ಷೇತ್ರದ 100 ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರು. ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಅಂಬೇಡ್ಕರ್ ಸ್ಥಾನದಲ್ಲಿ ಕೆಲಸ- ಸ್ವಾಮೀಜಿ:
ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಅಂಬೇಡ್ಕರ್ ಸ್ಥಾನದಲ್ಲಿ ನಿಂತು ಕೆಲಸ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನ್ಯಾ.ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಆಯೋಗ ಮುಂದುವರೆಸಿದರು. ಇದೀಗ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ನ್ಯಾಯ ಕೊಡಿಸುವ ಬದ್ಧತೆ ಪ್ರದರ್ಶಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೀಘ್ರ ಗೆಜೆಟ್ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ
ಇದೇ ಸಂದರ್ಭದಲ್ಲಿ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಮುರುಗೇಶ್ ನಿರಾಣಿ, ಶಾಸಕ ರಾಜುಗೌಡ ಮತ್ತಿತರರು ಉಪಸ್ಥಿತರಿದ್ದರು.