Asianet Suvarna News Asianet Suvarna News

ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

ಸರ್ವಪಕ್ಷ ಸಭೆಯ ತೀರ್ಮಾನದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ಶಿಫಾರಸು ಆಧರಿಸಿ ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲು ಒಪ್ಪಿಗೆ ಪಡೆಯಲಾಗಿದೆ. 

increase in reservation gazette notification soon says cm basavaraj bommai gvd
Author
First Published Oct 9, 2022, 9:29 AM IST

ಬೆಂಗಳೂರು (ಅ.09): ಸರ್ವಪಕ್ಷ ಸಭೆಯ ತೀರ್ಮಾನದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ಶಿಫಾರಸು ಆಧರಿಸಿ ಪರಿಶಿಷ್ಟ ಜಾತಿಗೆ ಇರುವ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲು ಒಪ್ಪಿಗೆ ಪಡೆಯಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಆದೇಶ ಮಾಡಿ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಶನಿವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಳದ ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸುವ ಸಂಬಂಧ ವಿಧಿವಿಧಾನಗಳ ಬಗ್ಗೆ ಕಾನೂನು ಸಚಿವ, ಕಾನೂನು ಆಯೋಗ, ಸಂವಿಧಾನ ತಜ್ಞರು ಹಾಗೂ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಒಟ್ಟು ಮೀಸಲಾತಿ ಪ್ರಮಾಣ ಶೇ.50ರಷ್ಟು ದಾಟಿದ್ದು ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ. 

ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ

ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರವಿರುವ ಪರಿಶಿಷ್ಟ ಪಂಗಡಗಳ ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಅದಕ್ಕೆ ಮೀಸಲಾತಿ ನೀಡಬಹುದೆಂದು ಹೇಳಲಾಗಿದೆ. ನ್ಯಾಯಮೂರ್ತಿ ನಾಗಮೋಹನ ದಾಸ್‌ ಹಾಗೂ ನ್ಯಾಯಮೂರ್ತಿ ಸುಭಾಷ್‌ ಅಡಿ ಅವರು ಇದು ಏಕೆ ವಿಶೇಷ ಪ್ರಕರಣವಾಗಲಿದೆ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಹಾಗೂ ಸಾಮಾಜಿಕವಾಗಿ ಅಂಕಿ-ಅಂಶಗಳ ಸಮೇತವಾಗಿ ಇವೆಲ್ಲವೂ ಮುಖ್ಯವಾಹಿನಿಯಿಂದ ದೂರವಿದ್ದು, ಸಾಕಷ್ಟುಪ್ರಾತಿನಿಧ್ಯ ಇಷ್ಟುವರ್ಷಗಳಾದರೂ ದೊರೆತಿಲ್ಲ. ಹಾಗಾಗಿ ಇದು ವಿಶೇಷ ಪ್ರಕರಣವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.

ಪರಿಚ್ಛೇದ 9ರಲ್ಲಿ ರಕ್ಷಣೆ: ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌, ರಾಜಸ್ಥಾನ, ತಮಿಳುನಾಡು ರಾಜ್ಯಗಳಲ್ಲಿ ಬುಡಕಟ್ಟು ಜನಾಂಗ ಹಾಗೂ ಪರಿಶಿಷ್ಟಜಾತಿಗಳ ಮೀಸಲಾತಿ ಶೇ.50ನ್ನು ಮೀರಿದೆ. ಯಾವುದೇ ನ್ಯಾಯಾಲಯದ ಆದೇಶ ಇದರ ವಿರುದ್ಧ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಕ್ಕೆ ತಿದ್ದುಪಡಿ ತಂದು ಶೇ.50ಕ್ಕಿಂತ ಹೆಚ್ವು ಮೀಸಲಾತಿ ನೀಡಿ ಆದೇಶಿಸಿದೆ. ಇವೆರಡನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಯಾವುದೇ ವ್ಯತಿರಿಕ್ತ ತೀರ್ಪು ಇದುವರೆಗೆ ಬಂದಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಅದಕ್ಕೆ ಪರಿಚ್ಛೇದ 9 ರಲ್ಲಿ ರಕ್ಷಣೆ ಪಡೆಯಲು ಸಕಾರಣಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ನಾವು ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ನೀಡಿರುವ ಮೀಸಲಾತಿಯ ಹೆಚ್ಚಳವನ್ನು ರಕ್ಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಈಗಾಗಲೇ ಚರ್ಚೆಯಾಗಿದೆ. ಇನ್ನಷ್ಟುಚರ್ಚಿಸಿ ಎಲ್ಲಾ ವಿವರಗಳೊಂದಿಗೆ ಗೆಜೆಟ್‌ ಅಧಿಸೂಚನೆ ಹಾಗೂ ಪರಿಚ್ಛೇದ 9ರಲ್ಲಿ ಸೇರಿಸಲು ಶಿಫಾರಸು ಮಾಡುವುದಾಗಿ ಹೇಳಿದರು. ತಳಸಮುದಾಯಗಳಿಗೆ ಮೀಸಲಾತಿ ಪೂರ್ಣ ಪ್ರಮಾಣದಲ್ಲಿ ತಲುಪಿವಿಲ್ಲ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ವರದಿ ಹೇಳಿದೆ. ಇದಕ್ಕೆ ನ್ಯಾಯ ಒದಗಿಸಲು ತಜ್ಞರ ಸಮಿತಿ ರಚಿಸಿ, ಕೂಲಂಕಷವಾಗಿ ಪರಿಶೀಲಿಸಿ ಯಾರಿಗೆ ಒಳಮೀಸಲಾತಿ ಅಗತ್ಯವಿದೆ ಎಂಬುದರ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ

ಸಮಗ್ರ ಹಾಗೂ ಸಮರ್ಥ ವರದಿ: ಗೆಜೆಟ್‌ ಅಧಿಸೂಚನೆ ವಿಸ್ತೃತವಾಗಿ ಇರಲಿದೆ. ಇದುವರೆಗೆ ಮೀಸಲಾತಿ ಶೇ.50ರೊಳಗೆ ಇದ್ದರೂ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾಗಮೋಹನ ದಾಸ್‌ ವರದಿ ಸಮಗ್ರವಾಗಿದೆ ಹಾಗೂ ಸಮರ್ಥನೀಯವಾಗಿದೆ. ವಿಶೇಷ ಪ್ರಕರಣ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಗಟ್ಟಿಯಾದ ನೆಲೆಗಟ್ಟಿದೆ. ಇಂದಿರಾ ಸಹಾನಿ ಪ್ರಕರಣದ ಬೆಂಬಲವಿದೆ. ಹಿಂದಿನ ಪ್ರಕರಣಗಳನ್ನು ಗಮನಿಸಿ ಈ ಸಮುದಾಯಗಳಿಗೆ ತಕ್ಷಣದ ಸೌಲಭ್ಯ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಪರಿಚ್ಛೇದ 9 ಕ್ಕೆ ಸೇರಿಸಲು ತನ್ನದೇ ವಿಧಾನಗಳಿವೆ. ಸಂವಿಧಾನದ ತಿದ್ದುಪಡಿ ಯಾಗಬೇಕು. ಇದಕ್ಕೆ ಸಮಯವೂ ಬೇಕು ಎಂದು ಹೇಳಿದರು. ಇನ್ನು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ವರದಿ ಬಂದಾಗ ಸೂಕ್ತ ನಿರ್ಣಯ ತೆಗದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios