ಮೀಸಲಾತಿ ಹೆಚ್ಚಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ವಿವಿಧ ಮಠಾಧೀಶರಿಂದ ಅಭಿನಂದನೆ

ಪ್ರಜಾಪ್ರಭುತ್ವದಲ್ಲಿ ಸಮಾಜ ಮಾಡುವ ನಿರ್ಣಯಕ್ಕೆ ಸರ್ಕಾರಗಳು ಸ್ಪಂದಿಸಬೇಕು. ಈಗ ನಾವು ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

Various mutts swamijis congratulate CM Basavaraj Bommai for increasing reservation gvd

ಬೆಂಗಳೂರು (ಅ.09): ಪ್ರಜಾಪ್ರಭುತ್ವದಲ್ಲಿ ಸಮಾಜ ಮಾಡುವ ನಿರ್ಣಯಕ್ಕೆ ಸರ್ಕಾರಗಳು ಸ್ಪಂದಿಸಬೇಕು. ಈಗ ನಾವು ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡ ಸಮುದಾಯಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಸಮುದಾಯದ ವಿವಿಧ ಮಠಾಧೀಶರಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಹಳ ದಿನಗಳಿಂದ ಆಗಬೇಕಿದ್ದ ಕಾರ್ಯ ಈಗ ಆಗಿದೆ. ನಮ್ಮ ದೇಶದ ಸಂಸ್ಕೃತಿಯಲ್ಲಿ ಸ್ವಾಮೀಜಿಗಳಿಗೆ ಗೌರವ ಮತ್ತು ಮಹತ್ವ ಕೊಡುತ್ತೇವೆ. ಇದನ್ನು ಎಲ್ಲ ಸಮಾಜಗಳಲ್ಲೂ ಕಾಣಬಹುದು ಎಂದರು.

ದೇಶಕ್ಕೆ ಚಲನಶೀಲ ಸಂವಿಧಾನ ನೀಡಿದ ಡಾ.ಬಿ.ಆರ್‌.ಅಂಬೇಡ್ಕರ್‌, ಸಂವಿಧಾನಕ್ಕೆ ಹೊಸ ತಿದ್ದುಪಡಿ ಮತ್ತು ಅನುಚ್ಛೇದವನ್ನು ಸೇರಿಸುವ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಬದುಕು ಬದಲಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನ ಸ್ಪಂದಿಸಬೇಕು ಎನ್ನುವ ಭಾವನೆ ಅಂಬೇಡ್ಕರ್‌ ಹೊಂದಿದ್ದರು. ಆದ್ದರಿಂದಲೇ ಸ್ಪಂದನಾಶೀಲ ಸಂವಿಧಾನವನ್ನು ಅವರು ರಚಿಸಿದರು ಎಂದು ಹೇಳಿದರು.

ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

ಸಂವಿಧಾನ ರಚನೆ ಆದಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ತಲಾ 6 ಜಾತಿಗಳು ಮಾತ್ರವೇ ಇದ್ದವು. ಕ್ರಮೇಣ ಹೊಸ ಸಮುದಾಯಗಳು ಸೇರಿಕೊಂಡ ಕಾರಣ ಜನಸಂಖ್ಯೆ ಹೆಚ್ಚಳವಾಯಿತು. ವಿಶೇಷವಾಗಿ ಕರ್ನಾಟಕದಲ್ಲಿ ಎಸ್ಸಿ-ಎಸ್ಟಿಜನಾಂಗಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಹಿಂಜರಿತ, ವಿಳಂಬ, ಮುಂದೂಡಿಕೆ ನೆಪಗಳು ನೋಡಿಕೊಂಡೇ ಬಂದಿದ್ದೀವಿ. ಇಷ್ಟುವರ್ಷದ ಭಾವನೆಗಳಿಗೆ ಸ್ಪಂದಿಸಿದ ಎಲ್ಲಾ ಗುರುಗಳು ಹೋರಾಟ ಮಾಡಿದಾಗ ಇದಕ್ಕೆ ಬಲ ಬಂದಿತು ಎಂದು ತಿಳಿಸಿದರು.

ಅತ್ಯುತ್ತಮ ವರದಿ: ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕಾಗಿ ಪ್ರಸನ್ನಾನಂದಪುರಿ ಸ್ವಾಮೀಜಿ ಪಾದಯಾತ್ರೆ ಮಾಡಿದಾಗ ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ರಚನೆಯಾಯಿತು. ಆದರೆ, ಅವರಿಗೆ ಆರು ತಿಂಗಳ ಕಾಲಾವಕಾಶ ನೀಡಿದ್ದರಿಂದ ಕೆಲಸವೇ ಆಗಿರಲಿಲ್ಲ. ಬಳಿಕ ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಿತಿ ವರದಿ ನೀಡಲು ಆರು ತಿಂಗಳ ಕಾಲ ಹೆಚ್ಚಿನ ಸಮಯ ಕೊಡಿಸಿದೆ. ಬಳಿಕ ಬಹಳಷ್ಟುವಿಶ್ಲೇಷನೆ ಮಾಡಿ ಹಿಂದಿನ ಮತ್ತು ಇಂದಿನ ಪರಿಸ್ಥಿತಿ ಗಮನದಲ್ಲಿರಿಸಿ ಬೇರೆ ರಾಜ್ಯಗಳಲ್ಲಿ ಮೀಸಲಾತಿ ವಿಚಾರ ಏನಾಗಿದೆ ಹಾಗೂ ಸಂವಿಧಾನ ಏನು ಹೇಳಲಿದೆ ಎಂಬುದನ್ನು ಪರಾಮರ್ಶಿಸಿ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅತ್ಯುತ್ತಮ ವರದಿ ನೀಡಿದರು ಎಂದರು.

ಈ ವರದಿಯ ಅನುಷ್ಠಾನ ಹೇಗೆ ಎನ್ನುವುದಕ್ಕೆ ನ್ಯಾಯಮೂರ್ತಿ ಸುಭಾಷ್‌ ಅಡಿ ಅವರ ಸಮಿತಿ ರಚಿಸಲಾಯಿತು. ಈ ಸಮಿತಿಯು ನ್ಯಾಯಮೂರ್ತಿ ನಾಗಮೋಹನ ದಾಸ್‌ ವರದಿ ಅನುಷ್ಠಾನವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೀಸಲಾತಿಯನ್ನು ಶೇ.50ಕ್ಕಿಂತ ಹೆಚ್ಚಿಸಬಹುದು ಎಂದು ವರದಿ ನೀಡಿತು. ಹೀಗಾಗಿ ಇಂದು ಮೀಸಲಾತಿ ಹೆಚ್ಚಳದ ತೀರ್ಮಾನ ಸಾಧ್ಯವಾಗಿದೆ ಎಂದರು.

ರಾಜಕೀಯವಾಗಿ ಇತರೆ ಸಮುದಾಯಗಳು, ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೀಸಲಾತಿ ಹೆಚ್ಚಳದ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆದು ಸರ್ವ ಸಮ್ಮತವಾಗಿ ಒಪ್ಪಿಗೆ ಪಡೆಯಲಾಗಿದೆ. ಸಚಿವ ಸಂಪುಟದಲ್ಲಿ ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಮುಂದೆಯೂ ಅಷ್ಟೇ ಬದ್ಧತೆಯಿಂದ ನಾವು ಇದನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈಶ ಕೇಂದ್ರದಲ್ಲಿ ನಾಗಮಂಟಪ ಉದ್ಘಾಟನೆ ಮಾಡಿದ ಸಿಎಂ ಬೊಮ್ಮಾಯಿ

ಹೊಸದಕ್ಕೆ ಸವಾಲು ಹೆಚ್ಚಿರುತ್ತೆ: ಯಾವತ್ತಿಗೂ ಬದಲಾವಣೆ ಸುಲಭದಲ್ಲಿ ಆಗುವುದಿಲ್ಲ. ಹೊಸತನಕ್ಕೆ ಸಹಜವಾಗಿ ಸವಾಲುಗಳು ಹೆಚ್ಚು ಇರುತ್ತದೆ. ಆದರೆ ಬದಲಾವಣೆ ಮಾಡುವ ದಿಟ್ಟಹೆಜ್ಜೆ ಇಟ್ಟಾಗಲೇ ಮುಂದೆ ದಾರಿ ಕಾಣುವುದು. ಕೇವಲ ಊಹೆಗಳನ್ನು ಮಾಡಿಕೊಂಡೇ ಕೂತಿದ್ದಕ್ಕೆ ಇಷ್ಟುದಿನ ಏನೂ ಬದಲಾವಣೆ ಆಗಿರಲಿಲ್ಲ. ಈಗ ಅದನ್ನೆಲ್ಲಾ ಬಿಟ್ಟು ಸವಾಲುಗಳಿಗೆ ಪರಿಹಾರ ಹುಡುಕಿ ಮುಂದುವರಿಯುವುದಕ್ಕೆ ಬದ್ಧರಾಗಿದ್ದೇವೆ. ಇನ್ನು ಮುಂದೆ ಅವಕಾಶ ವಂಚಿತ ಹಾಗೂ ತುಳಿತಕ್ಕೆ ಒಳಪಟ್ಟವರಿಗೆ ನ್ಯಾಯ ಸಿಗಲಿದೆ ಎಂದರು.

ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಸಚಿವರಾದ ಆರ್‌.ಅಶೋಕ್‌, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು , ಆನಂದ ಸಿಂಗ್‌, ಶಂಕರ ಪಾಟೀಲ್‌ ಮುನೇನಕೊಪ್ಪ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios