ಯುಪಿ, ಪಂಜಾಬ್‌ನಿಂದ ಕರ್ನಾಟಕಕ್ಕೆ ವಿದ್ಯುತ್ ಸಾಲ..!
ರಾಜ್ಯ ಸರ್ಕಾರ ಸದ್ಯ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಬಾಯಿಮಾತಿಗೆ ಹೇಳುತ್ತಿದ್ದರೂ ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್ ವ್ಯತ್ಯಯ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮುಂದುವರೆದಿದೆ.

ಬೆಂಗಳೂರು(ಅ.11): ರಾಜ್ಯದಲ್ಲಿ ಮುಂಗಾರು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ ಹಾಗೂ ಬೇಡಿಕೆಯಲ್ಲಿ ತೀವ್ರಗತಿಯ ಹೆಚ್ಚಳವಾಗಿರುವುದರಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಪ್ರತಿ ನಿತ್ಯ ಅಗತ್ಯಕ್ಕಿಂತ 40ರಿಂದ 50 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ ಎದುರಿಸುತ್ತಿದೆ.
ಈ ವರ್ಷ ಆಗಸ್ಟ್ ತಿಂಗಳಲ್ಲಿ 16,950 ಮೆ.ವ್ಯಾಟ್‌ನಷ್ಟು (2022ರ ಆಗಸ್ಟ್ ಬೇಡಿಕೆ 11286 ಮೆ.ವ್ಯಾ) ಗರಿಷ್ಠ ಬೇಡಿಕೆ ಕಂಡುಬಂದಿತ್ತು. ಇದೀಗ ಅಕ್ಟೋಬರ್‌ನಲ್ಲಿ ವಿದ್ಯುತ್ ಬೇಡಿಕೆ ಮತ್ತೆ 15000 ಮೆ.ವ್ಯಾಟ್‌ಗಿಂತಲೂ ಹೆಚ್ಚಳವಾಗುವ ಅಂದಾಜಿಸಲಾಗಿದೆ. 2022ರ ಅಕ್ಟೋಬರ್‌ನಲ್ಲಿ ನಿತ್ಯ 150 ಮೆ.ವ್ಯಾಟ್‌ನಷ್ಟು ಇರುತ್ತಿದ್ದ ಬೇಡಿಕೆ, ಈ ವರ್ಷ ಅ.1ರಿಂದ 6ರವರೆಗಿನ ಸರಾಸರಿ ಬೇಡಿಕೆ 250 ಮೆ.ವ್ಯಾಟ್ ದಾಟಿದೆ. 2024ರ ಮುಂಗಾರು ಹಂಗಾಮಿನ ವರೆಗು ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥತಿ ನಿಭಾಯಿಸಲು ಇಲಾಖೆಯು ಉತ್ತರ ಪ್ರದೇಶ, ಪಂಜಾಬ್‌ನಿಂದ ವಿನಿಮಯ ಯೋಜನೆಯಡಿ ವಿದ್ಯುತ್ ಪಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ.
ಕರ್ನಾಟಕದಲ್ಲಿ 3000 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ತೀರ್ಮಾನ: ಸಚಿವ ಜಾರ್ಜ್
ಇದು ಇಂಧನ ಇಲಾಖೆಯೇ ರಾಜ್ಯದಲ್ಲಿ ಸದ್ಯ ವಿದ್ಯುತ್ ಸ್ಥಿತಿಗತಿ ಬಗ್ಗೆ ಸಿದ್ಧಪಡಿಸಿರುವ ಅಂಕಿ ಅಂಶಗಳು. ಈ ಅಂಕಿ ಅಂಶಗಳ ಪ್ರಕಾರ ರಾಜ್ಯ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ವಿಚಾರದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಕಂಡುಬರುತ್ತಿರುವ ವಿದ್ಯುತ್ ವ್ಯತ್ಯಯ, ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಕ್ರಿಯೆಗೆ ಕಾರಣ ಬಯಲಾಗಿದೆ. ರಾಜ್ಯ ಸರ್ಕಾರ ಸದ್ಯ ವಿದ್ಯುತ್ ಕೊರತೆ ಇಲ್ಲ. ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಬಾಯಿಮಾತಿಗೆ ಹೇಳುತ್ತಿದ್ದರೂ ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್ ವ್ಯತ್ಯಯ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮುಂದುವರೆದಿದೆ.
ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ ಕೊನೆಯ ದಿನ: ಕಟ್ಟದಿದ್ರೆ ಗೃಹ ಜ್ಯೋತಿ ಯೋಜನೆ ಸಿಗಲ್ಲ..!
ಅಂಕಿ ಅಂಶಗಳ ಪ್ರಕಾರ, ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ ಪ್ರಸಕ್ತ ವರ್ಷ ಅಂದಾಜು 3000 ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದು ರಾಜ್ಯದ ವಾರ್ಷಿಕ ಬೇಡಿಕೆಯ ಶೇ.4ರಷ್ಟಾಗಿದೆ. ಮತ್ತೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಖರೀದಿಸುವ ರಾಜ್ಯಗಳಲ್ಲಿ ತೀವ್ರ ಮಳೆಯಿಂದಾಗಿ ತೇವಾಂಶದ ಕಲ್ಲಿದ್ದಲು ಸರಬರಾಜಾಗುತ್ತಿದ್ದು ಇದರಿಂದ ಆಗಾಗ ಸ್ಥಾವರಗಳು ಸ್ಥಿಗಿತಗೊಳ್ಳುತ್ತಿವೆ. ಇದರಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲೂ ಸರಾಸರಿ 1500ರಿಂದ 2000 ಮೆ.ವ್ಯಾಟ್‌ನಷ್ಟು ಉತ್ಪಾದನೆ ಕುಂಠಿತವಾಗಿದೆ. ಮತ್ತೊಂದೆಡೆ ಪವನ ಶಕ್ತಿ ಉತ್ಪಾದನೆಲ್ಲು ಕುಸಿತವಾಗಿದೆ. ಸೌರಶಕ್ತಿಯ ವಿದ್ಯುತ್ ಉತ್ಪಾದನೆ ಮಾತ್ರ ತಕ್ಕಮಟ್ಟಿಗಿದೆ.
ಕ್ರಿಯಾ ಯೋಜನೆ ಏನು?
ಇಲಾಖೆಯ ಮಾಹಿತಿ ಪ್ರಕಾರ, ವಿದ್ಯುತ್ ಕೊರತೆ ಪರಿಸ್ಥಿತಿ ನಿಭಾಯಿಸಲು ಕ್ರಿಯಾ ಯೋಜನೆ ರೂಪಿಸಿದ್ದು, ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಸಲು ಡೇ ಅಹೆಡ್ ಮಾರ್ಕೆಟ್ (ಡಿಎಎಂ) ಮತ್ತು ರಿಯಲ್ ಟೈಮ್ ಮಾರ್ಕೆಟ್ (ಆರ್‌ಟಿಎಂ) ಮಾದರಿಯಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ. ಉತ್ತರ ಪ್ರದೇಶದಿಂದ ವಿದ್ಯುತ್ ವಿನಿಮಯ ಒಪ್ಪಂದದ ಅನುಸಾರ ಈ ಅಕ್ಟೋಬರ್‌ನಿಂದ 2024 ರ ಮೇ ವರೆಗೆ ಹಗಲು ರಾತ್ರಿ 300ರಿಂದ 600 ಮೆ.ವ್ಯಾಟ್‌ನಷ್ಟು ವಿದ್ಯುತ್ ಪಡೆಯಲು ಮಾತುಕತೆ ನಡೆಸಿದೆ. ಈ ಅವಧಿಯಲ್ಲಿ ಪಡೆಯುವಷ್ಟು ಪ್ರಮಾಣದ ವಿದ್ಯುತ್‌ಅನ್ನು 2024ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಆ ರಾಜ್ಯಕ್ಕೆ ವಾಪಸ್ ನೀಡುವುದು ವಿನಿಮಯ ಯೋಜನೆಯ ಒಪ್ಪಂದವಾಗಿದೆ. ಅದೇ ರೀತಿ ಪಂಜಾಬ್ ರಾಜ್ಯದೊಂದಿಗೂ ನವೆಂಬರ್‌ನಿಂದ 2024ರ ಮೇ ವರೆಗೆ 500 ಮೆ.ವ್ಯಾಟ್ ಪ್ರಮಾಣದಲ್ಲಿ ವಿದ್ಯುತ್ ಪಡೆಯಲು ತೀರ್ಮಾನಿಸಲಾಗಿದೆ. ಜೊತೆಗೆ ಅಲ್ಪಾವಧಿಯ ಟೆಂಡರ್ ಮೂಲಕ ವಿದ್ಯುತ್ ಸಂಗ್ರಹಿಸಲು ಕೂಡ ಸರ್ಕಾರ ಮುಂದಾಗಿದೆ.