ಕೊಡಗು ಜಿಲ್ಲೆಯ ಮದೆನಾಡು, ಜೋಡುಪಾಲ ಸೇರಿದಂತೆ ಹಲವೆಡೆ ಬುಧವಾರ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. 2018ರಲ್ಲೂ ಇದೇ ರೀತಿ ಆಗಿ ಭಾರೀ ಹಾನಿಯಾಗಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಣ್ಣ ಪ್ರಮಾಣದ ಕಂಪನದಿಂದ ಯಾವುದೇ ತೊಂದರೆಯಾಗಿಲ್ಲ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.12): ಕಳೆದ ಐದಾರು ವರ್ಷಗಳಿಂದ ಭೂಕುಸಿತ, ಪ್ರವಾಹದಿಂದ ನಲುಗಿರುವ ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಭೂಮಿ ಕಂಪಿಸಿದೆ. ಇದು ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ತಂದಿಟ್ಟಿದೆ.
ಮಡಿಕೇರಿ ತಾಲೂಕಿನ ಮದೆನಾಡು, ಎರಡನೇ ಮೊಣ್ಣಂಗೇರಿ, ಜೋಡುಪಾಲ, ಬೆಟ್ಟತ್ತೂರು ಹಾಗೂ ದೇವಸ್ತೂರುಗಳಲ್ಲಿ ಬುಧವಾರ ಬೆಳಿಗ್ಗೆ 10.50 ರ ವೇಳೆಯಲ್ಲಿ ಭೂ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆಯ ಭೂಕಂಪನ ಆಗಿದ್ದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಭೂಕಂಪನ ಆಗಿರುವುದನ್ನು ಖಚಿತಪಡಿಸಿದೆ. ಭೂಕಂಪನ ಆಗಿರುವುದನ್ನು ಅನುಭವಿಸಿದವರು ತೀವ್ರ ಆತಂಕಗೊಂಡಿದ್ದಾರೆ.
ಕೊಡಗಿನಲ್ಲಿ ಭೂಕಂಪದ ಅನುಭವ; ಮದೆನಾಡಿನ ಮನೆ, ಮಂಟಪಗಳೆಲ್ಲಾ ಗಡ-ಗಡ!
ಮದೆನಾಡು ಗ್ರಾಮ ಪಂಚಾಯಿತಿಯ ಗ್ರಂಥಾಲಯದ ನಿರ್ವಾಹಕಿ ಹಾಗೂ ಸಿಬ್ಬಂದಿಗಳು ಸ್ವತಃ ನಾವೇ ಭೂಮಿ ಕಂಪಿಸಿದ್ದನ್ನು ಅನುಭವಿಸಿದ್ದೇವೆ. ಗ್ರಂಥಾಲಯದಲ್ಲಿ ಏನನ್ನೋ ಬರೆಯುತ್ತಾ ಕುಳಿತಿದ್ದಾಗ ಜೋರಾಗಿ ಗುಡುಗಿದ ಶಬ್ಧ ಕೇಳಿತು. ಇದರ ಬೆನ್ನಲ್ಲೆ ಭೂಮಿ ನಡುಗಿದ ಅನುಭವಾಯಿತು. ಭೂಮಿ ಕಂಪಿಸಿರುವ ಬಗ್ಗೆ ತಾವು ಇಬ್ಬರು ಪರಸ್ಪರ ಪ್ರಶ್ನೆ ಮಾಡಿಕೊಂಡೆವು ಎಂದು ವೆಂಕಮ್ಮ ಮತ್ತು ಶಿಲ್ಪಾ ಹೇಳಿದ್ದಾರೆ. ತಕ್ಷಣವೇ ಪಂಚಾಯಿತಿಗೆ ಹೋಗಿ ಅಲ್ಲಿಯೂ ಸಿಬ್ಬಂದಿಯೊಂದಿಗೆ ಮಾತನಾಡಿದೆವು. ಅವರಿಗೂ ಈ ಅನುಭವವಾಗಿದೆ. ಅಷ್ಟರಲ್ಲಿ ನಮ್ಮೂರು ಎನ್ನುವ ವಾಟ್ಸಾಪ್ ಗುಂಪಿನಲ್ಲೂ ಭೂಕಂಪಿಸಿರುವ ಬಗ್ಗೆ ಮಾಹಿತಿ ಬಂದಿದೆ ಎಂದಿದ್ದಾರೆ.
ಪಂಚಾಯಿತಿಯ ಗ್ರಂಥಾಲಯದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ವಾಹನಗಳ ಓಡಾಟದಿಂದ ಹಾಗೆ ಆಗಿರಬಹುದೇನೋ ಎಂದುಕೊಳ್ಳೋಣ ಎಂದರೆ, ಆ ಸಮಯದಲ್ಲಿ ಯಾವುದೇ ವಾಹನಗಳು ಓಡಾಡಿಲ್ಲ. ಹೀಗಿರುವಾಗ ಗುಡುಗಿನ ಶಬ್ಧದೊಂದಿಗೆ ಭೂಮಿ ಕಂಪಿಸಿರುವುದು ಆತಂಕ ತಂದೊಡ್ಡಿದೆ ಎನ್ನುತ್ತಾರೆ ಜನರು.
Kodagu News: ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!
2018 ರಲ್ಲಿಯೂ ಇದೇ ಭಾಗಗಳಲ್ಲಿ ಮಳೆಗಾಲಕ್ಕೂ ಮುಂಚಿತವಾಗಿ ಭೂ ಕಂಪನವಾಗಿತ್ತು. ಆದರೆ ಅದ್ಯಾವುದೂ ಗಮನಕ್ಕೆ ಬಂದಿರಲಿಲ್ಲ. ಅತೀ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿತ್ತು. ನಂತರ ಮಳೆಗಾಲದಲ್ಲಿ ಸುರಿದ ತೀವ್ರ ಮಳೆಗೆ ಮಡಿಕೇರಿ ತಾಲ್ಲೂಕಿನ ಹಲವೆಡೆ ಅಂದರೆ ಬರೋಬ್ಬರಿ 30 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಹಾಗೂ ಪ್ರವಾಹ ಎದುರಾಗಿತ್ತು. ಇದರಿಂದ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಸಾವಿರಾರು ಜನರು ಮನೆ ಮಠ ಕಳೆದುಕೊಂಡಿದ್ದರು.
ಹೀಗಾಗಿಯೇ ಬುಧವಾರ ಕೊಡಗಿನಲ್ಲಿ ಭೂಮಿ ಕಂಪಿಸಿರುವ ವಿಷಯ ನಮಗೆ ತೀವ್ರ ಆತಂಕ ತಂದೊಡ್ಡಿದೆ. 2018 ರಲ್ಲಿಯೂ ಇದೇ ರೀತಿ ಆಗಿ ನಾವು ಮನೆ ಮಠಗಳನ್ನುಕಳೆದುಕೊಂಡೆವು ಎನ್ನುತ್ತಾರೆ ಗ್ರಂಥಾಲಯ ಸಿಬ್ಬಂದಿ ಶಿಲ್ಪಾ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ವಿಪ್ಪತ್ತು ನಿರ್ವಹಣಾ ಅಧಿಕಾರಿ ಅನನ್ಯವಾಸುದೇವ ಅವರು ಭೂಮಿ ಕಂಪಿಸಿರುವುದು ನಿಜ.
ಮದೆನಾಡು ಗ್ರಾಮ ಭೂಕಂಪನದ ಕೇಂದ್ರಬಿಂದುವಾಗಿದ್ದು 1.6 ತೀವ್ರತೆಯಲ್ಲಿ ಭೂಕಂಪನವಾಗಿದೆ. ಇದರಿಂದ ಬೆಟ್ಟತ್ತೂರು, ಜೋಡುಪಾಲ ಮತ್ತು ದೇವಸ್ತೂರು ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಕೆಲವರಿಗೆ ಆಗಿದೆ. ಬೆಟ್ಟಗುಡ್ಡ ಪ್ರದೇಶ ಆಗಿರುವುದರಿಂದ ಹೆಚ್ಚಿನ ಜನರಿಗೆ ಭೂಮಿ ಕಂಪಿಸಿದ ಬಗ್ಗೆ ಗಮನಕ್ಕೆ ಬಂದಿಲ್ಲ. ಅಷ್ಟಕ್ಕೂ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದರಿಂದ ಯಾವುದೇ ಸಮಸ್ಯೆಗಳು ಎದುರಾಗಿಲ್ಲ.
ಇದರಿಂದ ಜನರು ಕೂಡ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ 2018 ರಲ್ಲಿಯೂ ಇದೇ ರೀತಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿತ್ತು. ಬಳಿಕ ಜಿಲ್ಲೆಯಲ್ಲಿ ಘೋರ ದುರಂತಗಳು ಎದುರಾಗಿದ್ದವು. ಇದು ಜನರ ಆತಂಕಕ್ಕೆ ಕಾರಣವಾಗಿದೆ.
