ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಭೂಕಂಪನದ ಅನುಭವವಾಗಿದೆ. ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ್ದು, ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ.

ಕೊಡಗು (ಮಾ.12): ಕರ್ನಾಟಕದ ಪ್ರವಾಸಿಗರ ಸ್ವರ್ಗ ಹಾಗೂ ಕನ್ನಡ ನಾಡಿನ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕೊಡಗು ಜಿಲ್ಲೆಯ ಮಡಿಕೇರಿಯ ಕೆಲವು ಭಾಗಗಳಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ಹಾಗೂ ಗ್ರಂಥಾಲಯದಲ್ಲಿದ್ದ ವಸ್ತುಗಳು ಗಡ-ಗಡ ಅಲುಗಾಡಿದ್ದು, ಜನರು ಭಯಭೀತರಾಗಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡಿನಲ್ಲಿ ಭೂಕಂಪನದ ಅನುಭವ ಆಗಿದೆ. ಜೊತೆಗೆ, ಜೋಡುಪಾಲ ಮತ್ತು ಮೊಣ್ಣಂಗೇರಿ ಭಾಗದಲ್ಲಿಯೂ ಭೂಕಂಪನದ ಅನುಭವ ಆಗಿದೆ. ಭೂಮಿ ದೊಡ್ಡದಾಗಿ ಗುಡುಗಿದ ಹಾಗೂ ನಡುಗಿದ ಅನುಭವ ಉಂಟಾಗಿದ್ದು ಮನೆಯಲ್ಲಿದ್ದ ಜನರು ಹೊರಗೆ ಓಡಿಬಂದಿದ್ದಾರೆ. ಈಗಾಗಲೇ ಕೆಲವು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು, ಇದೀಗ ಎಲ್ಲಿ ಗುಡ್ಡ ಕುಸಿಯುತ್ತದೆಯೋ, ಭೂಮಿ ಬಿರಿಯುತ್ತದೆಯೋ ಎಂಬ ಭಯದಿಂದಲೇ ಜೀವನ ಮಾಡುವಂತಾಗಿದೆ ಎಂದು ಜನರು ತಮ್ಮ ಭಯವನ್ನು ಹೇಳಿಕೊಂಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ ಮದೆನಾಡು ಪಂಚಾಯಿತಿ ಸಿಬ್ಬಂದಿ ಶಿಲ್ಪ ಮತ್ತು ವೆಂಕಮ್ಮ ಅವರು, ಇಂದು ಬೆಳಿಗ್ಗೆ 10.50ರ ಸಂಧರ್ಭದಲ್ಲಿ ಭೂಕಂಪನದ ಅನುಭವ ಆಗಿದೆ. ಗ್ರಂಥಾಲಯದಲ್ಲಿ ಕುಳಿತು ಬರೆಯುತ್ತಿದ್ದಾಗ ಭೂಮಿ ಕಂಪಿಸಿದ ಅನುಭವ ಆಗಿದ್ದು, ಪುಸ್ತಕಗಳ ರ್ಯಾಕ್‌ಗಳು ಅಲ್ಲಾಡಿದಂತಾಗಿವೆ. ಇದಾದ ನಂತರ ಏಕೆ ಇಂತಹ ಅನುಭವ ಆಗಿದೆ ಎಂದು ಪಂಚಾಯಿತಿ ಸಿಬ್ಬಂದಿ ಮಾತನಾಡಿಕೊಂಡು ಸುಮ್ಮನಾಗಿದ್ದಾರೆ. ಇದಾದ ನಂತರ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Delhi earthquake update: ರಿಕ್ಟರ್ ಮಾಪಕದಲ್ಲಿ ದಾಖಲಾಯ್ತು 4.0 ರಷ್ಟು ತೀವ್ರತೆ | Suvarna News

ಮಡಿಕೇರಿ ಸಮೀಪದ ದೇವಸ್ತೂರು ಭಾಗದಲ್ಲೂ ಇದೇ ಅನುಭವ ಆಗಿದೆ. ಮನೆಯಲ್ಲಿನ ವಸ್ತುಗಳು ಅಲ್ಲಾಡಿವೆ ಎಂದು ಜನರು ತಿಳಿಸಿದ್ದಾರೆ. ಈ ಗ್ರಾಮದ ಜನರು 2018ರಲ್ಲೂ ಇದೇ ಅನುಭವ ಅನುಭವ ಆಗಿತ್ತು ದಮದು ತಿಳಿಸಿದ್ದರು. ಇದಾದ ನಂತರ ಜಿಲ್ಲೆ ಹಲವೆಡೆ ಭೂಕಂಪನದ ಜೊತೆಗೆ ಭೂ ಕುಸಿತವೂ ಉಂಟಾಗಿತ್ತು ಎಂದು ಜನರು ಅನುಭವ ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆಯಿಂದ ಯಾವುದೇ ಹಾನಿಯಾಗಿಲ್ಲ. ಗೋಡೆಗಳಲ್ಲಿ ಬಿರುಕು, ಸಾಮಗ್ರಿ ಬೀಳುವುದು ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.