ತುಮಕೂರು[ಜ.22]: ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಧರ್ಮಸ್ಥಳಕ್ಕೆ 75 ವರ್ಷಕ್ಕೂ ಹಿಂದಿನ ನಂಟು. ಧರ್ಮಸ್ಥಳದ ಈಗಿನ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ತಂದೆ ದಿ.ರತ್ನವರ್ಮ ಹೆಗ್ಗಡೆ ಹಾಗೂ ಅವರ ತಂದೆ ದಿ.ಮಂಜಯ್ಯ ಹೆಗ್ಗಡೆ ಕಾಲದಿಂದಲೂ ಸಿದ್ಧಗಂಗಾ ಶ್ರೀಗಳು ಧರ್ಮಸ್ಥಳ ಜೊತೆ ಸುದೀರ್ಘ ಅವಿನಾಭಾವ ಸಂಬಂಧ ಹೊಂದಿದ್ದರು. ಇದು ಈಗಲೂ ಹಾಗೆಯೇ ಮುಂದುವರಿದಿರುವುದು ವಿಶೇಷ.

ತಮ್ಮ ಊರಿನ ಹೆಸರನ್ನೇ ಬದಲಿಸಿದ ಗ್ರಾಮಸ್ಥರು

‘ದಿ.ರತ್ನವರ್ಮ ಹೆಗ್ಗಡೆ ಅವರ ಕಾಲದಲ್ಲಿ ಸಿದ್ಧಗಂಗಾ ಶ್ರೀಗಳು ಆಗಾಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರು. ಆಗ ಸಿದ್ಧಗಂಗಾ ಶ್ರೀಗಳನ್ನು ನೋಡಿದ್ದು ಬಿಟ್ಟರೆ ನೇರವಾದ ಭೇಟಿ ಆಗಿರಲಿಲ್ಲ. ಧರ್ಮಸ್ಥಳ ಕ್ಷೇತ್ರದಿಂದ ಉಜಿರೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ತೀರ್ಮಾನಿಸಿ, ಇದಕ್ಕೆ ಶಿಲಾನ್ಯಾಸ ನೆರವೇರಿಸಲು ಸಿದ್ಧಗಂಗಾ ಶ್ರೀಗಳನ್ನು ಕರೆಸಲು ನಿರ್ಧರಿಸಿದೆವು. ಅದಕ್ಕಾಗಿ ತುಮಕೂರು ಮಠಕ್ಕೆ ತೆರಳಿ ಆಹ್ವಾನಿಸಿದೆವು. 1969ರಲ್ಲಿ ಉಜಿರೆಗೆ ಆಗಮಿಸಿದ ಸಿದ್ಧಗಂಗಾ ಶ್ರೀಗಳು ಎಸ್‌ಡಿಎಂ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಅಚ್ಚರಿ ಎಂಬಂತೆ ಕೇವಲ ಒಂದೇ ವರ್ಷದಲ್ಲಿ ಯಾವುದೇ ವಿಘ್ನ ಇಲ್ಲದೆ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಂಡಿತ್ತು. ಈ ಸಂತಸದಲ್ಲಿ ಮತ್ತೆ ಸಿದ್ಧಗಂಗೆಗೆ ತೆರಳಿ, ಉದ್ಘಾಟನೆಗೆ ಕರೆದೆವು. 1970ರಲ್ಲಿ ಧರ್ಮಸ್ಥಳಕ್ಕೆ ಚಿತ್ತೈಸಿದ ಸಿದ್ಧಗಂಗಾ ಶ್ರೀಗಳು ಉಜಿರೆ ಕಾಲೇಜಿನ ಉದ್ಘಾಟನೆಯನ್ನು ನೆರವೇರಿಸಿದ್ದರು. ಅಂತಹ ಅಮೃತಹಸ್ತ ಅವರದಾಗಿತ್ತು. ಅವರೊಬ್ಬ ಸಿದ್ಧಪುರುಷರೇ ಸರಿ. ಧರ್ಮಸ್ಥಳದ ಲಕ್ಷದೀಪ ಸರ್ವಧರ್ಮ ಸಮ್ಮೇಳನಗಳಲ್ಲಿ ಸಿದ್ಧಗಂಗಾಶ್ರೀಗಳು ಒಮ್ಮೆ ಪಾಲ್ಗೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಡಾ.ಹೆಗ್ಗಡೆ.

ದಾಸೋಹಕ್ಕೆ ಧರ್ಮಸ್ಥಳ ಮಾದರಿ:

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಅನ್ನದಾನ ಪದ್ಧತಿಯನ್ನು ಸಿದ್ಧಗಂಗಾ ಶ್ರೀಗಳು ಬಹುವಾಗಿ ಮೆಚ್ಚಿಕೊಂಡಿದ್ದರು. ತುಮಕೂರಿನ ಮಠದಲ್ಲಿ ಅನ್ನದಾಸೋಹವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಲು ಧರ್ಮಸ್ಥಳ ಅನ್ನದಾನದ ವಿವರವನ್ನು ಸ್ವಾಮೀಜಿ ಪಡೆದುಕೊಂಡಿದ್ದರು. ಅದಕ್ಕಾಗಿ ಸಿದ್ಧಗಂಗೆಯಿಂದ ಸಿಬ್ಬಂದಿಯನ್ನು ಕಳುಹಿಸಿದ್ದರು. ಇದಕ್ಕಾಗಿ ಧರ್ಮಸ್ಥಳದಿಂದ ಅಗತ್ಯ ಪಾತ್ರೆಪರಿಕರಗಳನ್ನು ಕಳುಹಿಸಿಕೊಡಲಾಗಿತ್ತು ಎಂದು ಡಾ.ವೀರೇಂದ್ರ ಹೆಗ್ಗಡೆ ಮೆಲುಕು ಹಾಕುತ್ತಾರೆ.

ಆರಿದ ಊರ ದೀಪ : ಪ್ರತೀ ಮನೆಯಿಂದ ಕೇಳುತ್ತಿದೆ ಬಿಕ್ಕಳಿಕೆ ಸದ್ದು...

ಸಿದ್ಧಗಂಗಾ ಶ್ರೀಗಳಿಗೆ ಒಮ್ಮೆ ಕಾಲು ನೋವು ಬಾಧಿಸಿತ್ತು. ಆಗ ಸಿದ್ಧಗಂಗಾಶ್ರೀಗಳ ಕೋರಿಕೆ ಮೇರೆಗೆ ತುಮಕೂರಿಗೆ ಹಾಸನದ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಿಂದ ತಜ್ಞ ವೈದ್ಯರ ತಂಡವನ್ನು ಕಳುಹಿಸಿದ್ದೆವು. ಆದರೆ ಆಗ ಸಿದ್ಧಗಂಗಾ ಮಠದಲ್ಲಿ ಚಿಕಿತ್ಸೆಗೆ ಹೊಸತೊಂದು ಸವಾಲು ಎದುರಾಯಿತು. ಡಾ.ಶಿವಕುಮಾರ ಸ್ವಾಮೀಜಿ ಅವರು ಸ್ನಾನ, ಪೂಜೆ ನಂತರ ಯಾವುದೇ ರೀತಿಯ ಚಿಕಿತ್ಸೆಗೆ ಒಪ್ಪುವವರಲ್ಲ. ಚಿಕಿತ್ಸೆ ನೀಡಬೇಕಾದರೆ ಬೆಳಗ್ಗೆ ಎದ್ದು ನಿತ್ಯಾಹ್ನಿಕದ ಮೊದಲು ಆಗಬೇಕು ಎಂಬ ಷರತ್ತು ಎದುರಾಯಿತು. ಇದು ನಮ್ಮ ವೈದ್ಯರಿಗೆ ಕಠಿಣ ಸವಾಲು ಆಗಿತ್ತು. ಶಿವಕುಮಾರ ಸ್ವಾಮೀಜಿ ಅವರು ನಿತ್ಯ ಏಳುವುದು ನಸುಕಿನ ಮೂರು ಗಂಟೆಗೆ. ನಾಲ್ಕು ಗಂಟೆಗೆ ನಿತ್ಯಕರ್ಮಗಳನ್ನು ಪೂರೈಸಿ ಇಷ್ಟಲಿಂಗ ಪೂಜೆಗೆ ತೊಡಗುತ್ತಾರೆ, ಬೆಳಗಾದರೆ ಭಕ್ತರ ದರ್ಶನ, ಇತರೆ ಕಾರ್ಯಕ್ರಮ. ಹೀಗಾಗಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಬೇಕಾದರೆ ನಸುಕಿನ 3ರಿಂದ 4 ಗಂಟೆ ನಡುವೆ ಆಗಬೇಕು. ಈ ಸವಾಲನ್ನು ಒಪ್ಪಿಕೊಂಡ ವೈದ್ಯರ ತಂಡ ಕೆಲ ದಿನಗಳ ಕಾಲ ಅದೇ ಹೊತ್ತಿಗೆ ಚಿಕಿತ್ಸೆ ನೀಡಿ ಶ್ರೀಗಳು ಗುಣಮುಖರಾಗುವಂತೆ ನೋಡಿಕೊಂಡಿದ್ದರು ಎನ್ನುತ್ತಾರೆ ಡಾ.ಹೆಗ್ಗಡೆ.

ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಭೇಟಿ:

ಸಿದ್ಧಗಂಗಾ ಶ್ರೀಗಳು 30 ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಿರಿಷಷ್ಠಿ ಉತ್ಸವದ ಸಂದರ್ಭದಲ್ಲಿ ನಡೆದಿದ್ದ ಧರ್ಮ ಸಮ್ಮೇಳನಕ್ಕೆ ಆಗಮಿಸಿದ್ದರು ಎಂದು ದೇವಳದ ಮೂಲಗಳು ತಿಳಿಸಿವೆ.

ಸಾಹಿತ್ಯ ಸಮ್ಮೇಳನಕ್ಕೆ ಬಂದವರಿಗೆಲ್ಲಾ ದಾಸೋಹ

ಸಿದ್ಧಗಂಗಾಶ್ರೀಗಳು ಎರಡು-ಮೂರು ಸಲ ಧರ್ಮಸ್ಥಳಕ್ಕೆ ಹಾಗೂ ಒಮ್ಮೆ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು ಬಿಟ್ಟರೆ, ದ.ಕ. ಜಿಲ್ಲೆಯ ಬೇರೆ ಸ್ಥಳಗಳಿಗೆ ಭೇಟಿ ನೀಡಿದ ಬಗ್ಗೆ ವಿವರಗಳು ಲಭ್ಯ ಇಲ್ಲ. ಆದರೆ ಕರಾವಳಿ ಮೂಲದವರು ಸಿದ್ಧಗಂಗೆಯಲ್ಲಿ ಶ್ರೀಗಳ ಮುಂದಾಳತ್ವದಲ್ಲಿ ಯಶಸ್ವಿಯಾಗಿ ಸಾಹಿತ್ಯ ಸಮ್ಮೇಳನ ನಡೆಸಿದ್ದಾರೆ.

2003ರಲ್ಲಿ ಸಿದ್ಧಗಂಗಾ ಮಠದ ಆವರಣದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅನ್ನದಾಸæೂೕಹದ ಸಂಪೂರ್ಣ ಜವಾಬ್ದಾರಿಯನ್ನು ಡಾ.ಶಿವಕುಮಾರ ಸ್ವಾಮೀಜಿ ಅವರೇ ವಹಿಸಿ ಅಚ್ಚುಕಟ್ಟಾಗಿ ನಡೆಸಿದ್ದರು. ಅಂದು ಡಾ.ಪರಮೇಶ್ವರ್‌ ಮತ್ತು ಮಾಜಿ ಸಚಿವ ಜಯಚಂದ್ರ ಸರ್ಕಾರದ ಕಡೆಯಿಂದ ನೆರವು ನೀಡಿದ್ದರೆ, ಇಡೀ ಸಮ್ಮೇಳನದ ಯಶಸ್ಸಿಗೆ ಕಾರಣೀಭೂತರಾಗಿದ್ದು ಡಾ.ಶಿವಕುಮಾರ ಸ್ವಾಮೀಜಿ.

ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್‌. ಅನಂತಮೂರ್ತಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನ ಇದಾಗಿತ್ತು. ಆಗ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದವರು ಕರಾವಳಿಯ ಸಾಹಿತ್ಯ ಪರಿಚಾರಕ ಹರಿಕೃಷ್ಣ ಪುನರೂರು. ಮಂಗಳೂರಿನ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ದ.ಕ. ಜಿಲ್ಲಾ ಅಧ್ಯಕ್ಷರಾಗಿದ್ದರು. ಇಬ್ಬರೂ ಅದೇ ಪ್ರಥಮ ಬಾರಿಗೆ ಸಾಹಿತ್ಯ ಪರಿಷತ್ತಿನ ಅಧಿಕಾರ ವಹಿಸಿದ್ದರು. ಹಾಗಾಗಿ ಈ ಸಮ್ಮೇಳನ ಇನ್ನೂ ಇವರ ನೆನಪಿನಲ್ಲಿ ಉಳಿದುಕೊಂಡಿದೆ.

ಸಿದ್ದಗಂಗಾ ಶ್ರೀಗಳ ನಿಧನ: ಮುಸ್ಲಿಮ್ ಸಂಘಟನೆ ಸಂತಾಪ; ಭಾರತ ರತ್ನಕ್ಕೆ ಮನವಿ

ಅಂದು ಬೆಳಗ್ಗೆ ಸಾಹಿತ್ಯ ಸಮ್ಮೇಳನದ ಮೆರವಣಿಗೆ ನಡೆದು ಮಧ್ಯಾಹ್ನ ವೇಳೆಗೆ 40 ಸಾವಿರ ಮಂದಿ ಸೇರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಸೇರಿದ ಜನಸ್ತೋಮ 70 ಸಾವಿರ ದಾಟಿತ್ತು. ಇದನ್ನು ಕಂಡು ಸಂಘಟಕರಿಗೆ ಗಾಬರಿಯಾಗಿತ್ತು. ಆದರೆ ಒಂದಿನಿತೂ ವಿಚಲಿತರಾಗದೆ ಡಾ.ಶಿವಕುಮಾರ ಸ್ವಾಮೀಜಿಗಳು ಎಲ್ಲ ಸಾಹಿತ್ಯಾಭಿಮಾನಿಗಳಿಗೆ ಉಣಬಡಿಸಿದ್ದರು. ಸಮ್ಮೇಳನ ಮುಕ್ತಾಯದವರೆಗೆ ಅನ್ನದಾಸೋಹದ ಕೊರತೆಯೇ ಉಂಟಾಗಲಿಲ್ಲ ಎಂದು ನೆನಪಿಸುತ್ತಾರೆ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್‌ ಕಲ್ಕೂರ.

ತಮ್ಮ ಆತಿಥ್ಯದಲ್ಲಿ ನಡೆಯುವ ಸಮ್ಮೇಳನದ ವೇದಿಕೆಗೆ ಸ್ವಾಮೀಜಿ ಆಗಮಿಸದೆ ಅನ್ನದಾಸೋಹದ ಪೂರ್ತಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಸ್ವತಃ ಅವರೇ ಬಡಿಸುತ್ತಿದ್ದರು. ಹೀಗಾಗಿ ಅವರೊಬ್ಬ ವಿಶೇಷ ಪ್ರೇರಣೆಯ ವ್ಯಕ್ತಿಯಾಗಿದ್ದರು ಎನ್ನುತ್ತಾರೆ ಧರ್ಮದರ್ಶಿ ಹರಿಕೃಷ್ಣ ಪುನರೂರು.

'ಕಾಯಕಯೋಗಿ'ಯ 15 ನುಡಿಮುತ್ತುಗಳು: ಪಾಲಿಸಿದರೆ ಕೈಲಾಸವೇ ನಮ್ಮದು

ಮಠಗಳ ಆಶ್ರಯದಲ್ಲಿ ಸಾಹಿತ್ಯ ಜಾತ್ರೆ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಉಡುಪಿ ಮತ್ತು ಧರ್ಮಸ್ಥಳವನ್ನು ಸಾಹಿತ್ಯ ಸಮ್ಮೇಳನಗಳು ಆತಿಥ್ಯಕ್ಕೆ ಆಶ್ರಯಿಸಿದ್ದು ಇದೆ. ಆದರೆ ಹೊರ ಜಿಲ್ಲೆಗಳಲ್ಲಿ ಅಂದಿನ ಕಾಲದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಮಠಗಳ ಸುಪರ್ದಿಯಲ್ಲಿ ನಡೆಸಿದ್ದಿಲ್ಲ. ಬಹುಶಃ ಸಿದ್ಧಗಂಗೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ಬಳಿಕ ಬೆಳಗಾವಿ, ಚಿತ್ರದುರ್ಗ, ಗದಗ, ಶ್ರವಣಬೆಳಗೊಳಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಮಠಗಳ ಆಶ್ರಯದಲ್ಲಿ ಯಶಸ್ವಿಯಾಗಿ ನಡೆಯಿತು. ಸಿದ್ಧಗಂಗೆಯ ಸಾಹಿತ್ಯ ಸಮ್ಮೇಳನವೇ ಸಮ್ಮೇಳನಗಳ ದಾಸೋಹಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿತು ಎಂದರೆ ತಪ್ಪಲ್ಲ ಎನ್ನುತ್ತಾರೆ ಪ್ರದೀಪ್‌ ಕುಮಾರ್‌ ಕಲ್ಕೂರ.

ಮಂಗಳೂರಿನಲ್ಲಿ ಏಳು ವರ್ಷಗಳ ಹಿಂದೆ ಗೊ.ರು.ಚನ್ನಬಸಪ್ಪ ಅವರ ನೇತೃತ್ವದಲ್ಲಿ ಶರಣ ಸಾಹಿತ್ಯ ಪರಿಷತ್‌ ಹುಟ್ಟುಹಾಕಲಾಯಿತು. ಆಗ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಅದರ ಉದ್ಘಾಟನೆಗೆ ಕರೆಸಲು ಚಿಂತನೆ ನಡೆದಿತ್ತು. ಕೊನೆ ಗಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಕೊನೆಗೂ ಮಂಗಳೂರಿಗೆ ಕರೆಸಲು ಸಾಧ್ಯವೇ ಆಗಲಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ ಪ್ರದೀಪ್‌ ಕುಮಾರ್‌ ಕಲ್ಕೂರ.