ಕುದೂರು :  ನೀರವ ಮೌನ. ಮನೆಯೊಳಗಿನ ಕೋಣೆಗಳಿಂದ ದುಃಖದ ಬಿಕ್ಕಳಿಗೆ ಸದ್ದು. ಗ್ರಾಮದಲ್ಲಿ ಯಾರನ್ನು ಮಾತನಾಡಿಸಿದರೂ ಕಂಬನಿ ಸುರಿಸುತ್ತಾ, ಮಾತನಾಡಲಾಗುತ್ತಿಲ್ಲ ಎಂದು ಉತ್ತರಿಸಲಾರದೆ ಮುಂದೆ ಹೋಗುತ್ತಿರುವ ಜನ.

-ಇದು ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ ಗ್ರಾಮದ ಸೋಮವಾರದ ಚಿತ್ರಣ. ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರ ಗ್ರಾಮದ ಪ್ರತಿ ಮನೆಯಲ್ಲೂ ಸಿದ್ದಗಂಗಾ ಶ್ರೀಗಳ ಫೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಗ್ರಾಮದ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಮಾಲೆ ಸಲ್ಲಿಸಿ ಕಂಬನಿ ಸುರಿಸುತ್ತಿದ್ದಾರೆ.

ತ್ರಿವಿಧ ದಾಸೋಹಿ, ನಡೆದಾಡುವ ಬಸವಣ್ಣ, ಕಲಿಯುಗದ ದೇವರೆಂದೇ ಹೆಸರಾಗಿ ಬಿರುದಿಗೆ ತಕ್ಕಂತೆ 111 ವರ್ಷ ಋುಷಿಯಂತೆ ಬದುಕಿದ ಸಿದ್ಧಗಂಗಾ ಶ್ರೀಗಳು ಜನಿಸಿದ್ದು ಇಂದಿನ ರಾಮನಗರ ಜಿಲ್ಲೆಯಲ್ಲಿರುವ ಮಾಗಡಿ ತಾಲೂಕಿನ ವೀರಾಪುರ ಎಂಬ ಕುಗ್ರಾಮ. ವೀರಾಪುರ ಅಂದು ಹೇಗಿತ್ತೋ ಇಂದಿಗೂ ಹಾಗೆಯೇ ಇದೆ. ಒಂದೆರೆಡು ಆಧುನಿಕ ಶೈಲಿ ಮನೆಗಳು, ಹಾಲಿನ ಡೇರಿ, ಶಾಲೆ ಇವಿಷ್ಟುಇತ್ತೀಚೆಗೆ ಆಗಿರುವುದನ್ನು ಬಿಟ್ಟರೆ ಸ್ವಾಮೀಜಿಯವರು ಇಲ್ಲಿ ಹುಟ್ಟಿದರು ಎಂದು ಹೇಳಲು ಒಂದೇ ಒಂದು ಕುರುಹೂ ಇಲ್ಲ.

ಸ್ವಾಮೀಜಿಯವರ ಅಕ್ಕನ ಸೊಸೆ ಮತ್ತು ಮೊಮ್ಮಕ್ಕಳು ಹಾಗೂ ಶ್ರೀಗಳ ಚಿಕ್ಕಪ್ಪ ದೊಡ್ಡಪ್ಪನ ಸಂಬಂಧಿಕರು ಗ್ರಾಮದಲ್ಲಿ ವಾಸವಾಗಿದ್ದಾರೆ. ವೀರಾಪುರ ಗ್ರಾಮದಲ್ಲಿ ಒಂದು ಪ್ರಾಥಮಿಕ ಶಾಲೆಯಿದ್ದು, ಅದೂ ಕೂಡಾ ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿತ್ತು. ಸಿದ್ಧಗಂಗಾ ಶ್ರೀಗಳ ಜನ್ಮಗ್ರಾಮದಲ್ಲಿ ಶಾಲೆ ಮುಚ್ಚುವುದು ಶೋಭೆಯಲ್ಲ ಎಂದು ಬೆರಳೆಣಿಕೆಯಷ್ಟುಮಕ್ಕಳನ್ನು ಇಟ್ಟುಕೊಂಡು ಶಾಲೆ ನಡೆಯುತ್ತಿದೆ. ಊರಿಗೆ ಒಂದು ಬಸ್ಸು ಬರುತ್ತದೆ ಅಷ್ಟೇ. ಅದು ಬಂದರೆ ಬಂತು. ಇಲ್ಲದಿದ್ದರೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೇಜವಾಬ್ದಾರಿ ಮಾರ್ಗವಾಗಿ ಕೆಲಸ ಮಾಡುತ್ತಿದೆ.

ವೀರಾಪುರ ಗ್ರಾಮದಿಂದ ಎಲ್ಲಿಗೆ ಹೋಗಬೇಕಾದರೂ ಆಟೋ, ಬೈಕ್‌ ಗಳನ್ನೇ ಅವಲಂಬಿಸಬೇಕು. ಇವೆರೆಡೂ ಸಿಗದೇ ಹೋದರೆ ನಡೆದು ಹೋಗುವುದು ಇಲ್ಲಿಯ ಜನರಿಗೆ ಸಾಮಾನ್ಯವಾಗಿದೆ. ರಾಜಕಾರಣಿಗಳ, ಉದ್ಯಮಿಗಳನ್ನು ಸಿದ್ಧಗಂಗಾ ಶ್ರೀಗಳು ಎಂದಿಗೂ ನನ್ನೂರಿಗೆ ಏನಾದರೂ ಮಾಡಿಕೊಡಿ ಎಂದು ಬೇಡಿಕೊಂಡವರಲ್ಲ. ಆದರೆ ಜನರಿಗೆ ಇಂದು ಇದ್ಯಾವುದೂ ಸಮಸ್ಯೆಯಲ್ಲ. ನಮ್ಮೂರಿನ ದೀಪ ಇಂದು ನಂದಿಹೋಯಿತು ಎಂಬ ಸಂಕಟ ಗ್ರಾಮದ ತುಂಬ ತುಂಬಿಕೊಂಡಿದೆ.