ಉತ್ತರಕನ್ನಡ(ನ.03): ವಾರದ ಹಿಂದಿನ ಕ್ಯಾರ್‌ ಚಂಡಮಾರುತ ಹಾಗೂ ಈಗಿನ ಮಹಾ ಚಂಡಮಾರುತದ ಎಫೆಕ್ಟ್ ಮೀನುಗಾರಿಕಾ ವಹಿವಾಟು ವಲಯದಲ್ಲಿ ಭಾರಿ ಹಿನ್ನೆಡೆ ಸೃಷ್ಟಿಸಿದ್ದು, ಮೀನು ಪ್ರಿಯರಿಗೆ, ಮಾಂಸಾಹಾರಿ ಹೋಟೆಲ್‌ ಮಾಲಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.

ಕ್ಯಾರ್‌ ಚಂಡಮಾರುತ ಹಾಗೂ ಮಹಾ ಚಂಡಮಾರುತದ ದಿನಗಳಲ್ಲಿ ಮೀನುಗಾರಿಕಾ ಬೋಟಗಳು ಕಡಲಿಗೆ ಮೀನುಗಾರಿಕೆಗೆ ತೆರಳದಂತೆ ಹೊನ್ನಾವರ ಜಿಲ್ಲಾಡಳಿತ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಹೊನ್ನಾವರದಲ್ಲಿ ಸರಿಸುಮಾರು ಇನ್ನೂರಕ್ಕೂ ಹೆಚ್ಚು ಬೋಟ್‌ಗಳು ಬಂದರಿನಲ್ಲೇ ತಂಗಿವೆ. ಇದರ ಹಿನ್ನೆಲೆಯಲ್ಲಿ ಮೀನು ಕೊಳ್ಳಲು ಬಂದರಿಗೆ ಹೋಗುವವರಿಗೆ ಮೀನು ಸಾಕಷ್ಟುಲಭ್ಯತೆ ಇರದೇ ಬರಿಗೈಲೇ ಮರಳುತ್ತಿರುವದು ಸಾಮಾನ್ಯವಾಗಿದೆ.

ಪ್ರಸಕ್ತ ದಿನದ ಮೀನುಮಾರುಕಟ್ಟೆಯಲ್ಲಿ ತಾರಲೆ ಮೀನು, ಬಂಗುಡಿ ಮೀನು, ಪಾಪ್ಲೆಟ್‌ ದರಗಳು ತಾರಕ್ಕೇರಿದ್ದು, ಮೀನು ಮಾರುಕಟ್ಟೆಯಲ್ಲಿ 1 ಪಾಪ್ಲೆಟ್‌ ಮೀನಿಗೆ 160, 3 ಬಂಗುಡೆ ಮೀನಿಗೆ 100, 15 ತಾರಲೆ ಮೀನಿಗೆ 100 ದರ ಹೇಳುವುದರಿಂದ ಮೀನು ಖರೀದಿಸಲು ಹೋಗುವವರು ಹೌಹಾರುವಂತೆ ಮಾಡಿದೆ.

ಉಕ್ಕೇರುತ್ತಿರುವ ಸಮುದ್ರ : ಮೀನುಗಾರಿಕೆ ಬಂದ್‌

ಕ್ಯಾರ್‌ ಚಂಡಮಾರುತವಾಗಲಿ, ಮಹಾ ಚಂಡಮಾರುತವಾಗಲಿ ಕಡಲಿನಲ್ಲಿ ಅಲೆಯಬ್ಬರದ ಉಬ್ಬರ ಸೃಷ್ಟಿಸಿತೋ, ಬಿಟ್ಟಿತೋ. ಆದರೆ ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನಿನ ದರ ಉಬ್ಬರ ಸದ್ಯಕ್ಕೆ ಇಳಿಕೆಯಾಗಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆಯಾಗಿದೆ. ಮೀನೂಟದ ತಾಟಿನಲ್ಲಿ ದರ ಏರಿಕೆಯ ಚಂಡಮಾರುತ ಬೀಸಿದೆ ಎಂಬ ಮಾತು ಮೀನೂಟದ ಪ್ರಿಯರಿಂದ ಕೇಳಿಬಂದಿದೆ.

ಕರ್ನಾಟಕದ ಮೀನುಗಾರರಿಗೆ 'ಮಹಾ' ಸಮಸ್ಯೆ..! ಸಮುದ್ರದಲ್ಲೂ ಶುರುವಾಯ್ತು ಗಡಿ ಪ್ರಾಬ್ಲಮ್