ಉಡುಪಿ(ನ.02): ಅರಬ್ಬಿ ಸಮುದ್ರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೀನುಗಾರರ ನಡುವೆ ನಡೆಯುವ ಗಡಿ ಜಗಳದ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮೀನುಗಾರರಿಗೆ ಭರವಸೆ ನೀಡಿದ್ದಾರೆ.

ಸಮುದ್ರದಲ್ಲಿ ಮಹಾರಾಷ್ಟ್ರದ ಮೀನುಗಾರರು ಕರ್ನಾಟಕದ ಮೀನುಗಾರರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಲ್ಪೆ ಮೀನುಗಾರರ ಸಂಘವು ಶುಕ್ರವಾರ ಸಚಿವರ ಸಾರ್ವಜನಿಕ ಭೇಟಿ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿತು. ಈ ಮನವಿಗೆ ಸ್ಪಂದಿಸಿದ ಸಚಿವರು, ಈ ಸಮಸ್ಯೆ ಪರಿಹಾರಕ್ಕೆ ಅಗತ್ಯವಿದ್ದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಧ್ಯೆ ಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಮಾರಣಾಂತಿಕ ಹಲ್ಲೆ ಮಾಡ್ತಾರೆ:

ಅರಬ್ಬಿ ಸಮುದ್ರದಲ್ಲಿ ದಡದಿಂದ 12 ನಾಟಿಕಲ್ ಮೈಲಿಯೊಳಗೆ ಮಾತ್ರ ರಾಜ್ಯಗಳ ಗಡಿಗಳಿದ್ದು, ಅದರ ಹೊರಗೆ ಮುಕ್ತ ಪ್ರದೇಶದಲ್ಲಿ ನಮ್ಮ ದೇಶದ ಯಾವ ರಾಜ್ಯದವರು ಬೇಕಾದರೂ ಮೀನುಗಾರಿಕೆ ಮಾಡಬಹುದು. ಆದರೆ ಈ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವ ಕರ್ನಾಟಕದ ಮೀನುಗಾರರ ಮೇಲೆ ಮಹಾರಾಷ್ಟ್ರದ ಮೀನುಗಾರರು ಮಾರಣಾಂತಿಕ ಹಲ್ಲೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೀನನ್ನೂ ಕದಿಯುತ್ತಾರೆ:

ಬೋಟ್‌ನಲ್ಲಿದ್ದ ಲಕ್ಷಾಂತರ ರು.ಗಳ ಮೀನು ಮತ್ತು ಬಲೆ ಇನ್ನಿತರ ಉಪಕರಣಗಳನ್ನು ಲೂಟಿ ಮಾಡುತ್ತಾರೆ. ಬೋಟ್‌ನ ಡಿಸೇಲ್ ಟ್ಯಾಂಕ್ ಮತ್ತು ಎಂಜಿನ್‌ಗಳಿಗೂ ಹಾನಿಯನ್ನುಂಟು ಮಾಡುತ್ತಾರೆ. ಆದ್ದರಿಂದ ಕರ್ನಾಟಕದ ಮೀನುಗಾರರು ಪ್ರಾಣಭಯದಿಂದ ಮೀನುಗಾರಿಕೆ ನಡೆಸಬೇಕಾಗಿದೆ. ಆದ್ದರಿಂದ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಮೀನುಗಾರರು ಒತ್ತಾಯಿಸಿದ್ದಾರೆ.

ಉಡುಪಿ: ಪಿಕ್‌ ಅಪ್ ಗೂಡ್ಸ್‌ನಲ್ಲಿತ್ತು 17 ಜಾನುವಾರು..! ಕರು ಸಾವು

ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಕಾರ್ಯದರ್ಶಿ ರವಿರಾಜ್ ತಾಂಡೇಲ, ಹರಿಯಪ್ಪ ಕೋಟ್ಯಾನ್, ಉಡುಪಿ ಶಾಸಕ ರಘುಪತಿ ಭಟ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಜಗದೀಶ್, ಕರಾವಳಿ ರಕ್ಷಣಾ ಪೊಲೀಸ್ ಎಸ್ಪಿ ಚೇತನ್ ಆರ್., ಉಡುಪಿ ಎಸ್ಪಿ ನಿಷಾ ಜೇಮ್ಸ್ ಉಪಸ್ಥಿತರಿದ್ದರು.