ಕಾರವಾರ [ಅ.26]:  ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ, ಬಿರುಗಾಳಿಯಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಮೀನುಗಾರಿಕೆ ಸಂಪೂರ್ಣ ಬಂದ್‌ ಆಗಿದೆ.

ನಗರದ ಬೈತಖೊಲ್‌ ಬಂದರಿನಲ್ಲಿ ಜಟ್ಟಿಎತ್ತರದಲ್ಲಿ ಇದ್ದರೂ ಜಟ್ಟಿಗೆ ಕೆಲವೇ ಮೀಟರ್‌ ಕೆಳಗಿನವರೆಗೆ ಸಮುದ್ರದ ನೀರು ತುಂಬಿದೆ. ಸ್ಥಳೀಯ ಬೋಟ್‌ ಹೊರತಾಗಿ ಮಂಗಳೂರು, ಮಲ್ಪೆ ಹಾಗೂ ಹೊರ ರಾಜ್ಯದ ಮೀನುಗಾರಿಕಾ ಬೋಟ್‌ಗಳು ಬೈತಖೊಲ್‌ ಬಂದರಿಗೆ ಬಂದಿದ್ದರಿಂದ ಲಂಗರು ಹಾಕಲು ಸ್ಥಳಾವಕಾಶ ಇಲ್ಲದೇ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರದಲ್ಲಿ ಕೂಡಾ ಲಂಗರು ಹಾಕಿವೆ. ಒತ್ತೊತ್ತಾಗಿ ಬೋಟ್‌ ನಿಲ್ಲಿಸಿದ ಕಾರಣ ಅಲೆಯ ಅಬ್ಬರಕ್ಕೆ ಒಂದಕ್ಕೊಂದು ಬೋಟ್‌ ಹೊಡೆದುಕೊಳ್ಳುತ್ತಿವೆ. ಟ್ಯಾಗೋರ್‌ ತೀರದ ಹನುಮಾನ ಸ್ಟ್ಯಾಚ್ಯು ಎದುರಿನ ತೀರದಲ್ಲಿ ಸಮುದ್ರದ ನೀರು ಉಕ್ಕಿಹರಿದು ಸ್ವಲ್ಪ ಕಡಲ ಕೊರೆತ ಆಗಿದೆ. ಇಲ್ಲಿಯೇ ನಿಲ್ಲಿಸಿದ ಕೋಸ್ಟ್‌ಗಾರ್ಡ್‌ನ ಹೋವರ್‌ ಕ್ರಾಪ್ಟ್‌ ಸಮೀಪ ಕೂಡಾ ನೀರು ನುಗ್ಗಿದೆ.

ಹೈರಾಣಾದ ಮೀನುಗಾರರು:  ತಾಲೂಕಿನ ಮಾಜಾಳಿ ದಾಂಡೆಬಾಗದಲ್ಲಿ ಮೀನುಗಾರರಿಗೆ ಬೋಟ್‌, ಬಲೆ ಇತ್ಯಾದಿ ಇರಿಸಲು ಪ್ರತ್ಯೇಕ ಸ್ಥಳವಿಲ್ಲ. ಹೀಗಾಗಿ ತೀರದಲ್ಲಿಯೇ ಇರಿಸುತ್ತಾರೆ. ಆದರೆ ಭಾರಿ ಮಳೆ, ಬಿರುಗಾಳಿಯಿಂದ ಸಮುದ್ರ ಉಕ್ಕಿ ಹರಿದು ಬೋಟ್‌, ಬಲೆಗಳತ್ತ ಗುರುವಾರ ರಾತ್ರಿ ನುಗ್ಗಿದೆ. ಹೀಗಾಗಿ ಶುಕ್ರವಾರ ಬೋಟ್‌ ಮಾಲಿಕರು, ಸ್ಥಳೀಯ ಮೀನುಗಾರರು ತಮ್ಮ ತಮ್ಮ ಮೀನುಗಾರಿಕಾ ವಸ್ತುಗಳನ್ನು ರಕ್ಷಣೆ ಮಾಡಿಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೊದಲು ತೀರದಿಂದ ಬೋಟ್‌ ತಳ್ಳಲು ಯತ್ನಿಸಿದರು. ಆದರೆ ಮೇಲೆ ಹತ್ತಿಸಲು ಸಾಧ್ಯವಾಗದೆ ಕ್ರೇನ್‌, ಜೆಸಿಬಿ ಬಳಕೆ ಮಾಡಿ ಬೋಟ್‌ಗಳನ್ನು ಮೇಲೆ ತಂದರು. ಈ ಭಾಗದಲ್ಲಿ ಸಮುದ್ರ 4-5 ಮೀಟರ್‌ ದೂರ ಮುಂದೆ ಬಂದಿದೆ. ತೀರದಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಅಲೆಗಳ ಅಬ್ಬರಕ್ಕೆ ಸಮುದ್ರದ ಒಡಲಾಳದಲ್ಲಿ ಇದ್ದ ಕಸ ಕಡ್ಡಿ, ಪ್ಲಾಸ್ಟಿಕ್‌, ಬಾಟಲಿಗಳನ್ನು ತಡಕ್ಕೆ ತಂದು ಎಸೆದಿದೆ. ತೀರದ ಸಮೀಪ ಇರುವ ರಸ್ತೆಗಳಲ್ಲಿ ಕಸ-ಕಡ್ಡಿಗಳು, ಮರದ ರೆಂಬೆಕೊಂಬೆ ರಸ್ತೆಯ ಮೇಲೆ ಬಂದು ಬಿದ್ದಿದೆ. ಇತ್ತ ಕಾಳಿ ಹಾಗೂ ಅರಬ್ಬಿ ಸಮುದ್ರದ ಸಂಗಮ ಸ್ಥಳವಾದ ಕೋಡಿಭಾಗದಲ್ಲಿ ನದಿ, ಸಮುದ್ರದ ನೀರು ರಸ್ತೆಗೆ ನುಗ್ಗಿದೆ. ಕಾಳಿ ನದಿ ಕೂಡಾ ಉಕ್ಕಿ ಹರಿಯಲು ಆರಂಭಿಸಿದ್ದು, ನದಿಗುಂಟ ಆತಂಕ ಪ್ರಾರಂಭವಾಗಿದೆ.