ಬರ ಪರಿಹಾರ ಅಕ್ರಮ ತಡೆಗೆ ‘ಫ್ರೂಟ್ಸ್’ ಮೂಲಕ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
ಬರ ಪರಿಹಾರ ಹಣ ವಿತರಣೆ ವೇಳೆ ಯಾವುದೇ ದುರುಪಯೋಗವಾಗದಂತೆ ತಡೆಯಲು ಈ ಬಾರಿ ‘ಫ್ರೂಟ್ಸ್’ ಎಂಬ ರೈತರ ಡೇಟಾ ಬೇಸ್ ( FRUITS-ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ) ಮೂಲಕ ಬರ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬೆಂಗಳೂರು (ನ.11): ಬರ ಪರಿಹಾರ ಹಣ ವಿತರಣೆ ವೇಳೆ ಯಾವುದೇ ದುರುಪಯೋಗವಾಗದಂತೆ ತಡೆಯಲು ಈ ಬಾರಿ ‘ಫ್ರೂಟ್ಸ್’ ಎಂಬ ರೈತರ ಡೇಟಾ ಬೇಸ್ ( FRUITS-ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ) ಮೂಲಕ ಬರ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಉಂಟಾಗಿರುವ ಬರ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹಿಂದೆ ಬರ ಪರಿಹಾರ ಹಣ ನೀಡುವ ಸಂದರ್ಭದಲ್ಲಿ ಸಾಕಷ್ಟು ದುರುಪಯೋಗವಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ.
ಹಿಂದೆ ಬರ ಪರಿಹಾರ ಹಣ ರೈತರಿಗೆ ಸಿಗದೆ ಬೇರೆಯವರೆ ಪಾಲಾಗಿದೆ. ಇಂತಹ ಅಕ್ರಮಗಳು ಮರುಕಳಿಸದಂತೆ ಎಚ್ಚರವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕೃಷಿ ಇಲಾಖೆಯ ರೈತರ ಡಾಟಾ ಬೇಸ್ ಮೂಲಕ ಬರ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೆ, FRUITS ಡೇಟಾ ಬೇಸ್ ನಲ್ಲಿ ಐಡಿ ಕ್ರಿಯೇಟ್ ಮಾಡದ ರೈತರಿಗೆ ಐಡಿ ಕ್ರಿಯೇಟ್ ಮಾಡಿಕೊಳ್ಳಲು ಜಾಗೃತಿ ಅಭಿಯಾನ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಮೀನು ಹಾಗೂ ಜಮೀನಿನ ಬೆಳೆ ವಿಸ್ತರಣೆ ಸೇರಿದಂತೆ ಎಲ್ಲವನ್ನೂ ಒದಗಿಸಲು ತಿಂಗಳಾಂತ್ಯದವರೆಗೆ (ನ.30) ಅವಕಾಶ ನೀಡಲಾಗುವುದು. ಬಳಿಕ ಪಾರದರ್ಶಕವಾಗಿ ಪರಿಹಾರವನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಚಿವ ಸತೀಶ್ ಕೋಪ ಶಮನಕ್ಕೆ ಡಿಕೆಶಿ ಬೆನ್ನಲ್ಲೇ ಡಿ.ಕೆ.ಸುರೇಶ್ ಯತ್ನ!
ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚನೆ: ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಈಗಾಗಲೇ 800 ಕೋಟಿ ರು. ಬಿಡುಗಡೆ ಮಾಡಿದೆ. ಇದರಡಿ ರೈತರು ಹಾಗೂ ಬರ ಪೀಡಿತರಿಗೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಇದಕ್ಕಾಗಿ ಅಗತ್ಯ ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದ್ದೇವೆ. ನೀರು ಲಭ್ಯತೆ ಇಲ್ಲದಿದ್ದರೆ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ನಿವಾರಿಸಲು ಸೂಚನೆ ನೀಡಲಾಗಿದೆ. ಜತೆಗೆ ಮೇವು ಸೇರಿದಂತೆ ಅಗತ್ಯ ಕೊರತೆಗಳನ್ನು ನೀಗಿಸಲು ಶಾಸಕರ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳಲ್ಲೀ ಕಾರ್ಯಪಡೆ ರಚಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಜನವರಿ ಒಳಗೆ 1800 ಗ್ರಾಮಗಳ ಘೋಷಣೆ: ತಾಂಡ, ಹಟ್ಟಿ ಹಾಗೂ ಊರಿನಿಂದ ಹೊರಗಡೆ ಇರುವ ವಸತಿ ಸ್ಥಳಗಳ ಪೈಕಿ 3,293 ವಸತಿ ಪ್ರದೇಶಗಳನ್ನು ಈವರೆಗೆ ಗ್ರಾಮಗಳಾಗಿ ಘೋಷಣೆ ಮಾಡಿಲ್ಲ. ಅವರಿಗೆಲ್ಲಾ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ಕಳೆದ 5 ವರ್ಷಗಳಲ್ಲಿ 1,300 ಕಡೆ ಮಾತ್ರ ಗ್ರಾಮಗಳಾಗಿ ಘೋಷಿಸಲಾಗಿದೆ. ಜನವರಿ ಒಳಗಾಗಿ ಉಳಿದ 1800 ವಸತಿ ಪ್ರದೇಶಗಳನ್ನು ಗ್ರಾಮಗಳಾಗಿ ಘೋಷಣೆ ಮಾಡಿ ಹಕ್ಕುಪತ್ರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್, ಎ.ಸಿ. ಕೋರ್ಟ್ ಪ್ರಕರಣಗಳಲ್ಲಿ ಸುಧಾರಣೆ: ರಾಜ್ಯಾದ್ಯಂತ ಎ.ಸಿ. ಹಾಗೂ ತಹಸೀಲ್ದಾರ್ ಕೋರ್ಟುಗಳಲ್ಲಿರುವ ಪ್ರಕರಣಗಳನ್ನು 90 ದಿನಗಳೊಳಗಾಗಿ ಇತ್ಯರ್ಥಪಡಿಸಬೇಕು ಎಂಬ ನಿಯಮ ಜಾರಿ ಮಾಡಿದ್ದರಿಂದ ಅರ್ಧದಷ್ಟು ಪ್ರಕರಣಗಳು ಇತ್ಯರ್ಥಗೊಂಡಿವೆ. ನಾವು ಅಧಿಕಾರಕ್ಕೆ ಬಂದಾಗಿ ಪ್ರತಿ ತಹಸೀಲ್ದಾರ್ ಬಳಿ ಸರಾಸರಿ 2,215 ರಷ್ಟಿದ್ದ ಪ್ರಕರಣ 750ಕ್ಕೆ ಕಡಿಮೆಯಾಗಿದೆ. ಎ.ಸಿ. ಕೋರ್ಟುಗಳಲ್ಲಿ 1 ವರ್ಷಕ್ಕಿಂತ ಹಳೆಯ 59,339 ಪ್ರಕರಣಗಳಲ್ಲಿ ಅರ್ಧದಷ್ಟು ಇತ್ಯರ್ಥಗೊಂಡಿವೆ. ಎ.ಸಿ. ಕೋರ್ಟುಗಳಲ್ಲಿ 6 ತಿಂಗಳಿಗಿಂತ ಹಳೆಯ ಯಾವುದೇ ಪ್ರಕರಣ ಇರಬಾರದು ಎಂದು ಸ್ಪಷ್ಟವಾಗಿ ಆದೇಶಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕೇಂದ್ರ ಸಚಿವರ ಭೇಟಿಗೆ ಅವಕಾಶ ನೀಡದ ಬಗ್ಗೆ ಕಿಡಿ: ರಾಜ್ಯದ ಬರ ಪರಿಹಾರ ಸಂಬಂಧ ಮನವಿ ಮಾಡಲು ಭೇಟಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹತ್ತು ಬಾರಿ ಪತ್ರ ಬರೆದರೂ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕೃಷ್ಣ ಬೈರೇಗೌಡ ಕಿಡಿ ಕಾರಿದರು. ಹಲವು ಬಾರಿ ಭೇಟಿಗೆ ಅವಕಾಶ ಕೇಳಿದರೂ ಸಚಿವರು ಅವಕಾಶ ನೀಡಿಲ್ಲ. 10 ಬಾರಿ ಪತ್ರವನ್ನೂ ಬರೆದಿದ್ದೇನೆ. ದೇಶದ ಯಾವ ಮೂಲೆಯಲ್ಲಿ ಭೇಟಿಗೆ ಅವಕಾಶ ನೀಡಿದರೂ ಬರಲು ತಯಾರಿರುವುದಾಗಿಯೂ ಹೇಳಿದ್ದೇನೆ. ಆದರೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀ ದೇವೀರಮ್ಮ ಜಾತ್ರಾ ಮಹೋತ್ಸವ: ಇಂದು ಮಧ್ಯರಾತ್ರಿಯಿಂದ ಬೆಟ್ಟವನ್ನೇರಿ ಹರಕೆ ತೀರಿಸುವ ಭಕ್ತರು
ಅಕ್ರಮ ತಡೆಗೆ ಡಿಜಿಟಲ್ ಸಾಗುವಳಿ ಚೀಟಿ: ರಾಜ್ಯದಲ್ಲಿ 57 ಸಾವಿರ ಬಗರ್ ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿ ಬಾಕಿಯಿದ್ದು ಡಿಸೆಂಬರ್ ಒಳಗಾಗಿ ಎಲ್ಲಾ ಕಡೆ ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡುತ್ತೇವೆ. ಜತೆಗೆ ಅಕ್ರಮಗಳನ್ನು ತಡೆಯಲು ಡಿಜಿಟಲ್ ಸಾಗುವಳಿ ಚೀಟಿ ತರುತ್ತೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. 4.38 ಎಕರೆ ಜಮೀನು ಇದ್ದವರೆಗೆ ಬಗರ್ ಹುಕುಂ ಜಮೀನು ನೀಡಲು ಅವಕಾಶವಿಲ್ಲ. ಎರಡು ಎಕರೆ ಜಮೀನು ಇದ್ದರೆ ಎರಡು ಎಕರೆ ನೀಡಲು ಅವಕಾಶವಿದೆ. ಆದರೆ ಸ್ವಂತ ಜಮೀನು ಹೊಂದಿರುವ ಆಸ್ತಿದಾರರೂ ಸಾಗುವಳಿ ಚೀಟಿ ಪಡೆಯುತ್ತಿದ್ದಾರೆ. ಇದನ್ನು ತಡೆಯಲು ಡಿಜಿಟಲ್ ಸಾಗುವಳಿ ಚೀಟಿ ತರುತ್ತೇವೆ. ಸರ್ಕಾರದಿಂದಲೇ ಕ್ರಯ ಮಾಡಿ ನೋಂದಣಿ ಮಾಡಿಕೊಡುತ್ತೇವೆ ಎಂದರು.