Asianet Suvarna News Asianet Suvarna News

ಸಚಿವ ಸತೀಶ್‌ ಕೋಪ ಶಮನಕ್ಕೆ ಡಿಕೆಶಿ ಬೆನ್ನಲ್ಲೇ ಡಿ.ಕೆ.ಸುರೇಶ್ ಯತ್ನ!

ಬೆಳಗಾವಿ ರಾಜಕಾರಣದಲ್ಲಿ ಮಧ್ಯಪ್ರವೇಶದ ನೆಪದಲ್ಲಿ ಮುನಿಸಿಕೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಇದೀಗ ಸಂಸದ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್ ಪ್ರವೇಶ ಮಾಡಿದ್ದಾರೆ. 

MP DK Suresh attempt to calm the anger of Minister Satish Jarkiholi gvd
Author
First Published Nov 11, 2023, 8:27 PM IST

ಬೆಂಗಳೂರು (ನ.11): ಬೆಳಗಾವಿ ರಾಜಕಾರಣದಲ್ಲಿ ಮಧ್ಯಪ್ರವೇಶದ ನೆಪದಲ್ಲಿ ಮುನಿಸಿಕೊಂಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗೆ ಇದೀಗ ಸಂಸದ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ ಡಿ.ಕೆ. ಸುರೇಶ್ ಪ್ರವೇಶ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆನ್ನಲ್ಲೇ ಅವರ ಸಹೋದರ ಸಂಸದ ಡಿ.ಕೆ.ಸುರೇಶ್‌ ಕೂಡ ಗುರುವಾರ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ‌ನಡೆಸಿದರು. ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಡಿ.ಕೆ ಸುರೇಶ್, ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಸಹಜವಾಗಿಯೇ ಇದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಆದರೆ, ಈ ಭೇಟಿ ಬಳಿಕ ಇಬ್ಬರೂ ನಾಯಕರು ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ಕಾರ್ಯಾಧ್ಯಕ್ಷರು. ಜೊತೆಗೆ ಸರ್ಕಾರದಲ್ಲಿ ಮಹತ್ತರವಾದ ಖಾತೆ ಹೊಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ಮಳೆಯಿಂದ ಹಲವು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಆ ರಸ್ತೆಗಳ ದುರಸ್ತಿ, ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೇಳುವ ಸಲುವಾಗಿ ಅವರನ್ನು ಬೇಟಿ ಮಾಡಿದ್ದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ ಅನುಮೋದನೆ ಕೊಟ್ಟ ತಕ್ಷಣ ನನ್ನ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದರು.

ಸತೀಶ್‌ ಜಾರಕಿಹೊಳಿ ಮಾತನಾಡಿ, ಡಿ.ಕೆ.ಸುರೇಶ್‌ ಅವರ ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ. ಅವರು ತಮ್ಮ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲು ಬಂದಿದ್ದರು. ಸಕಾರಾತ್ಮಕವಾಗಿ ಸ್ಪಂಧಿಸಲಾಗಿದೆ. ನಮ್ಮ ಇಲಾಖೆಯಲ್ಲಿ ರಸ್ತೆ, ಮೇಲ್ಸೇತುವೆ ಸೇರಿದಂತೆ ದೊಡ್ಡ ದೊಡ್ಡ ಕಾಮಗಾರಿಗಳು ಬರುತ್ತವೆ. ಇದರಿಂದ ಸರ್ಕಾರದಲ್ಲಿರುವವರು, ವಿರೋಧ ಪಕ್ಷದಲ್ಲಿರುವವರು ಬಂದು ತಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸುವುದು ಸ್ವಾಭಾವಿಕ ಎಂದರು. ಆದರೆ, ಮೂಲಗಳ ಪ್ರಕಾರ ಬೆಳಗಾವಿ ರಾಜಕಾರಣದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಮುನಿದಿರುವ ವಿಚಾರ ಹೈಕಮಾಂಡ್‌ ತಲುಪಿದ್ದು, ಈ ಹಿನ್ನೆಲೆಯಲ್ಲಿ ಸತೀಶ್‌ ಅವರ ಬೇಸರ ವಿಚಾರ ಬೆಳದಂತೆ ನೋಡಿಕೊಳ್ಳಲು ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸತೀಶ್‌ ಅವರ ಮನವೊಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಸತೀಶ್‌ ಹೇಳಿಕೆ ತಪ್ಪಲ್ಲ: ಮುಂದಿನ ದಿನಗಳಲ್ಲಿ ನಾನೂ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಇದೇ ವೇಳೆ ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಸಿಎಂ ಆದರೂ ಕೂಡ ನಾನು ಸ್ವಾಗತ ಮಾಡ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು ಅಂತ ಆಸೆ ಪಟ್ಟವನು ನಾನು.‌ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಸಿಎಂ ಆಕಾಂಕ್ಷಿ ಅಂತ ಸತೀಶ್ ಹೇಳಿದ್ದಾರೆ.‌ ಅದರಲ್ಲಿ ತಪ್ಪೇನೂ ಇಲ್ಲ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಯಾರೂ ಆಗಬಾರದು ಎನ್ನುವ ಹಾಗಿಲ್ಲ. ಶಾಸಕರಾದವರಿಗೆ ಮಂತ್ರಿ ಆಗುವ ಆಸೆ, ಮಂತ್ರಿ ಆದವರಿಗೆ ಮುಖ್ಯಮಂತ್ರಿ ಆಗಬೇಕು ಅಂತ ಆಸೆ. ಏನೂ ಇಲ್ಲದವರಿಗೆ ಶಾಸಕರಾಗಬೇಕು ಅಂತ ಆಸೆ. ಇದೊಂದು ಸೈಕಲ್, ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

Follow Us:
Download App:
  • android
  • ios