Asianet Suvarna News Asianet Suvarna News

ಕೊರೋನಾದಿಂದ ನಾನು ಪಾರಾಗಿದ್ದು ಹೀಗೆ; ವಿವರಿಸಿದ್ದಾರೆ ಡಾ ಮಲ್ಲಿಕಾರ್ಜುನ ಗುಮ್ಮಗೋಳ

ಮೊದಲ ಹಂತದ ಲಕ್ಷಣ ಕಾಣುತ್ತಿದ್ದಂತೇ ಆಸ್ಪತ್ರೆಗೆ ಹೋಗಬೇಕು. ನಿರ್ಲಕ್ಷ್ಯತನದಿಂದ ಕಾಯಿಲೆ ಬರಿಸಿಕೊಂಡು ವೈದ್ಯರ ಬಳಿಗೆ ಹೋಗದೆ, ಸೋಂಕು ಉಲ್ಬಣವಾದಾಗ ಆಸ್ಪತ್ರೆ ಮುಂದೆ ನಿಂತು ವೈದ್ಯರನ್ನು, ಸರ್ಕಾರವನ್ನು ತೆಗಳುವುದನ್ನು ಬಿಡಬೇಕು.

Dr Mallikarjuna Gummagola explains how he over come from covid 19 hls
Author
Bengaluru, First Published May 4, 2021, 5:58 PM IST

ನಾನು ಕೊರೋನಾ ಕಾಯಿಲೆಗೆ ತುತ್ತಾಗಿ ಗಂಭೀರ ಸ್ಥಿತಿಗೆ ತಲುಪಿದಾಗ ತನ್ನ ಅಂಗೈಯಲ್ಲಿ ಎತ್ತಿ ಹಿಡಿದು ಈ ಸರ್ಕಾರಿ ವೈದ್ಯಕೀಯ ವ್ಯವಸ್ಥೆ ನನ್ನನ್ನು ಬದುಕಿಸಿದೆ. ಕೃತಜ್ಞತೆ ಹೇಳಲು ನನಗೆ ಯಾವ ಪದಗಳೂ ಸಾಲುತ್ತಿಲ್ಲ. ಹಾಗಾದರೆ ನಾನು ಕಾಯಿಲೆಗೆ ಹೇಗೆ ತುತ್ತಾದೆ. ಅದರಿಂದ ಹೇಗೆ ಬದುಕಿ ಬಂದೆ ಎಂಬ ಸಂಕಟದ ಮತ್ತು ಸಂತಸದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ‘ಹೊಸ ವೈದ್ಯನಿಗಿಂತ ಹಳೆ ರೋಗಿಯ ಅನುಭವ ಬಹಳ ಮುಖ್ಯ’ ಎನ್ನುತ್ತಾರಲ್ಲ ಆದ್ದರಿಂದ. ನನ್ನ ಈ ಅನುಭವದಿಂದ ಒಂದಿಷ್ಟುಮುನ್ನೆಚ್ಚರಿಕೆ, ಸರ್ಕಾರದ ಶ್ರಮ, ವೈದ್ಯರ ಸೇವೆಯ ಪರಿಚಯ ಜನರಿಗೆ ಆಗಬಹುದು ಎಂಬುದು ನನ್ನ ನಂಬಿಕೆ.

ವೈದ್ಯರ ಕಾಳಜಿ

ಕೊರೋನಾ 2ನೇ ಅಲೆ ಆಗ ತಾನೇ ಆರಂಭಗೊಂಡಿತ್ತು. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೆ. ಚಟ ಮತ್ತು ಚಂಚಲ ಬುದ್ಧಿ ಮನುಷ್ಯನಿಗೆ ಗಂಡಾಂತರ ತರುತ್ತವೆ ಎನ್ನುತ್ತಾರಲ್ಲ, ಹಾಗೆ ನನಗೆ ಕಚೇರಿ ಅವಧಿಯಲ್ಲಿ ಚಹಾ ಕುಡಿಯುವ ಚಟವೇ ಕಂಟಕವಾಯಿತು. ಜನ ಕಿಕ್ಕಿರಿದು ತುಂಬಿರುತ್ತಿದ್ದ ಹತ್ತಿರದ ಹೊಟೇಲ್‌ಗೆ ಹೋಗಿ ಒಂದು ಬಜ್ಜಿ, ಒಂದು ಕಪ್‌ ಚಹಾ ಕುಡಿದು ಬಂದೆ. ಸಾಯಂಕಾಲದ ಹೊತ್ತಿಗೆ ಏನೋ ದೇಹದಲ್ಲಿ ಅಸಮತೋಲನದ ಅನುಭವ.

ಎರಡ್ಮೂರು ದಿನಗಳಲ್ಲಿ ನೆಗಡಿ, ಗಂಟಲು ಕೆರೆತ, ಸಣ್ಣಗೆ ಜ್ವರ, ಸುಸ್ತು, ಕೆಲಸ ಮಾಡಲಾಗದಂತಾಯಿತು. ಮಾತ್ರೆಗಳನ್ನು ನುಂಗಿದೆ. ಅಷ್ಟೇನೂ ಗುಣವೆನಿಸಲಿಲ್ಲ. ನೆಗಡಿ ಕೆಮ್ಮಾಗಿ ಕಫ ಬರತೊಡಗಿತು. ಇಷ್ಟೆಲ್ಲ ಆಗುವುದರೊಳಗಾಗಿ ಐದಾರು ದಿನಗಳು ಕಳೆದವು. ಕಫ ಮತ್ತು ಜ್ವರ ಹೆಚ್ಚಾಗತೊಡಗಿತು. ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದೆ.

ವಿದೇಶದಿಂದ ಆಕ್ಸಿಜನ್ ಕಂಟೈನರ್ ಆಗಮನ; ತಕ್ಷಣವೇ ದೆಹಲಿ ಸೇರಿ ಉತ್ತರ ಭಾರತಕ್ಕೆ ರವಾನೆ!

ತೀವ್ರ ನಿಗಾ ಘಟಕದ ವೈದ್ಯರು ನನ್ನನ್ನು ಪರೀಕ್ಷಿಸಿ, ಕೋವಿಡ್‌ ಟೆಸ್ಟ್‌ ಮಾಡಿಸಿ, ಅಗತ್ಯ ಔಷ​ಧಗಳನ್ನು ನೀಡಿದರು. 2 ದಿನಗಳಲ್ಲಿ ಟೆಸ್ಟ್‌ ವರದಿ ಪಾಸಿಟಿವ್‌ ಬಂದಿತು. ರೋಗಿ ಬಯಪಟ್ಟುಕೊಳ್ಳುತ್ತಾರೆ ಎಂಬ ಕಾರಣದಿಂದ ವೈದ್ಯರು ಕೊರೋನಾ ಬಗ್ಗೆ ಹೇಳದೆ ಫೋನ್‌ ಕರೆ ಮಾಡಿ, ‘ಹೇಗಿದ್ದೀರಾ, ಉಸಿರಾಟದ ತೊಂದರೆ ಇದೆಯೇ, ಈಗಾಗಲೆ ಯಾವ ಮಾತ್ರೆಗಳನ್ನು ತೆಗೆದುಕೊಂಡಿದ್ದೀರಿ, ಮನೆಯಲ್ಲಿ ಪ್ರತ್ಯೇಕವಾಗಿರಿ, ಹೊರಗೆ ಬರಬೇಡಿ, ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರವಿರಲಿ, ಮನೆಯ ವಿಳಾಸವನ್ನು ತಿಳಿಸಿ’ ಎಂದು ಕುಶಲೋಪರಿ ವಿಚಾರಿಸಿದರು.

ಆಕ್ಸಿಜನ್‌ 86ಕ್ಕೆ ಇಳಿದಿತ್ತು!

ಅದಾದ ಕೆಲವೇ ಹೊತ್ತಿನಲ್ಲಿ ಡಾ.ಸಂಗೀತಾ ಪಾಮಶೆಟ್ಟಿಎಂಬ ವೈದ್ಯರು ವಾಹನದಲ್ಲಿ ಔಷ​ಧ ತುಂಬಿಕೊಂಡು ನನ್ನ ಮನೆಗೆ ಬಂದರು. ನಗುಮೊಗದಿಂದ ನನ್ನನ್ನು ಮಾತನಾಡಿಸಿ, ಪರೀಕ್ಷಿಸಿ, ನಾನು ಐಸೋಲೇಷನ್‌ನಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ಮತ್ತಷ್ಟುಔಷಧ​ ನೀಡಿದರು. ಕೆಲವು ಸಲಹೆ ನೀಡಿ, ಉಸಿರಾಟ ತೊಂದರೆಯಾದರೆ ತಕ್ಷಣ ಆಸ್ಪತ್ರೆಗೆ ಬರಲು ಹೇಳಿ ಶುಭಕೋರಿ ತೆರಳಿದರು. ಇದಾದ ತಕ್ಷಣ ಜಿಲ್ಲಾಡಳಿತದಿಂದ ಫೋನ್‌ ಮುಖಾಂತರ ವಿಚಾರಣೆ: ಪ್ರಾಥಮಿಕ ಸಂಪರ್ಕ ಇದ್ದವರ ಮಾಹಿತಿ ಅಂದರೆ ಹೆಸರು, ವಿಳಾಸ, ಫೋನ್‌ ನಂಬರ್‌ ಪಡೆದರು.

ಸ್ವಲ್ಪ ಹೊತ್ತಿನ ನಂತರ ಅವರೂ ಸಹ ಮನೆಗೆ ಬಂದು ಪ್ರತ್ಯೇಕವಾಗಿರುವುದನ್ನು ಖಾತರಿಪಡಿಸಿಕೊಂಡರು. ಕುಶಲೋಪಚರಿಸಿ, ಕೆಲವು ಸಲಹೆಗಳನ್ನು ನೀಡಿ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿ ತೆರಳಿದರು. ಎರಡು ಮೂರು ದಿನಗಳ ನಂತರ ಮತ್ತೆ ಡಾ.ಸಂಗೀತಾ ಫೋನ್‌ ಮುಖಾಂತರ ‘ಆಕ್ಸಿಮಿಟರ್‌ ಮೂಲಕ ಆಕ್ಸಿಜನ್‌ ಲೆವಲ್‌ ಪರೀಕ್ಷಿಸಿಕೊಳ್ಳಿ. ಆಕ್ಸಿಜನ್‌ ಲೆವಲ್‌ 95ರ ಮೇಲೆ ಇರಬೇಕು’ ಎಂದು ಸಲಹೆ ನೀಡಿದರು. ಸಹೋದರ ಪ್ರಕಾಶ ಅಂಗಡಿ ಆಕ್ಸಿಮಿಟರ್‌, ಹಣ್ಣುಹಂಪಲು, ಮತ್ತಷ್ಟು ವಿಟಮಿನ್‌ ಔಷಧ​ ತಂದುಕೊಟ್ಟರು. ಆಕ್ಸಿಜನ್‌ ಪರೀಕ್ಷಿಸಿಕೊಂಡೆ. 86 ಎಂದು ತೋರಿಸಿತು!

ಕೊರೊನಾ ಸಂಕಷ್ಟ; ಭಾರತಕ್ಕೆ 37 ಕೋಟಿ ರೂ, ನೆರವು ಘೋಷಿಸಿದ ಸ್ಯಾಮ್ಸಂಗ್!

ಕೊರೋನಾ ಜತೆ ಸಂಗ್ರಾಮ

ಕಫ ಹೊರಗೆ ಬಾರದೆ ತೀವ್ರ ಕೆಮ್ಮು ಕಾಡುತ್ತಿತ್ತು. ಉಸಿರಾಟಕ್ಕೆ ತೊಂದರೆಯಾಗತೊಡಗಿತು. ಕರೋನಾ ನನ್ನ ಎದೆಯ ಮೇಲೆ ವಿವಸ್ತ್ರಳಾಗಿ ಕುಳಿತು, ತನ್ನ ಎರಡೂ ಕೈಗಳಿಂದ ಕುತ್ತಿಗೆಯನ್ನು ಹಿಚುಕುತ್ತಿದ್ದಾಳೆ. ನಾನು ಗೊರಗೊರ ಕೆಮ್ಮುತ್ತ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಅವಳನ್ನು ಕೆಳಗೆ ಹಾಕಿ ಮೇಲೆ ಕುಳಿತೆ. ‘ರೀ..ರೀ.. ಯಾಕರೀ ತ್ರಾಸ್‌ ಭಾಳ ಆಗತೈತೇನು’ ಎಂದು ನನ್ನ ಜೀವಧ್ವನಿ ಚೀರಿದಂತಾಯಿತು! ಕಣ್ಣಬಿಟ್ಟು ನೋಡುತ್ತೇನೆ, ನನ್ನ ಹೆಂಡತಿ ಕಿಟಕಿಯಲ್ಲಿ ನಿಂತು ಕಣ್ಣ ತುಂಬ ನೀರು ತುಂಬಿಕೊಂಡು ಅಳುತ್ತಿದ್ದಾಳೆ. ಸಮಯ ರಾತ್ರಿ 3.40 ಆಗಿದೆ. ಉಸಿರಾಟದ ತೊಂದರೆಯಿಂದ ಕೆಮ್ಮುತ್ತ ದಿಂಬನ್ನು ತೆಕ್ಕಿಹಾಕಿಕೊಂಡು ನಾನು ಹೊರಳಾಡುತ್ತಿರುವುದನ್ನು ನೋಡಿದ ಅವಳು, ಚಕ್ಕೆ, ಲವಂಗ, ಶುಂಟಿ, ಮೆಣಸು, ತುಳಸಿ, ಅಮೃತ ಬಳ್ಳಿ ಹಾಕಿ ಬಿಸಿಬಿಸಿ ಕಷಾಯ ತಂದುಕೊಟ್ಟಳು. ಉರಿಘಾಟು. ಕುಡಿದೆ. ಕೆಮ್ಮು ಕಡಿಮೆಯಾಯಿತು. ನನ್ನ ಹೆಬ್ಬೆರಳನ್ನು ಎತ್ತಿ ‘ಐ ಯಾಮ್‌ ಓಕೆ. ನೀನು ಹೋಗು ಮಲಗು’ ಎಂದು ಹೇಳಿದೆ. ಹೆಂಡತಿ ಹತ್ತಿರ ಇರುವಾಗ ಗಂಡಸು ಜಗತ್ತಿನ ಯಾವ ಶಕ್ತಿಯಿಂದಲೂ ಸೋಲನ್ನು ಒಪ್ಪಿಕೊಳ್ಳಲಾರ ಎನ್ನುವಂತೆ ನಾನು ‘ಕೊರೋನಾ, ಬಾ ನಿನ್ನನ್ನು ಬಡಿದು ಮಲಗಿಸುತ್ತೇನೆ’ ಎಂದು ಎದೆಸೆಟೆಸಿ ಎದ್ದು ಕುಳಿತೆ.

ಪ್ರಣಾಯಾಮ, ಧ್ಯಾನ

ಸತತ ಏಳು ದಿನಗಳ ಕಾಲ ವಿಪರೀತ ಜ್ವರ, ತಲೆ ನೋವು ಎಂಬ ಅಸ್ತ್ರಗಳನ್ನು ಕೊರೋನಾ ನನ್ನ ಮೇಲೆ ಬಿಟ್ಟಳು. ವೈದ್ಯರು ಕೊಟ್ಟಔಷಧ​, ಹೆಂಡತಿ ಕೈಯ ಕಷಾಯ, ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರ, ಬಿಸಿ ನೀರ ಆವಿ ಎಂಬ ಪ್ರತ್ಯಸ್ತ್ರಗಳನ್ನು ನಾನು ಬಿಡತೊಡಗಿದೆ. ಯಮನನ್ನು ಸೋಲಿಸಿ ತನ್ನ ಗಂಡ ಸತ್ಯವಾನನನ್ನು ಬದುಕಿಸಿಕೊಂಡ ಸಾವಿತ್ರಿಯ ಹಾಗೆ ನನ್ನ ಹೆಂಡತಿ ಶ್ರೀದೇವಿ ಯಮ ನನ್ನ ಕೋಣೆಯ ಒಳಗೆ ಬಾರದಂತೆ ಬಾಗಿಲಲ್ಲಿ ಅಡ್ಡಲಾಗಿ ನಿಂತಿದ್ದಾಳೆ! ನಾನು ಸ್ವರ್ಗ ಎಂದು ಕಟ್ಟಿಸಿಕೊಂಡ ನನ್ನ ಗ್ರಂಥಾಲಯದಲ್ಲಿ ದೇವ ಸಮಾನವಾದ ಪುಸ್ತಕಗಳನ್ನು ನೋಡುತ್ತ, ಆ ಪುಸ್ತಕಗಳನ್ನು ಓದಿದ, ಅದರಲ್ಲಿರುವ ವಿಷಯವನ್ನು ನೆನಪಿಸಿಕೊಳ್ಳುತ್ತಾ ಧ್ಯಾನಸ್ಥನಾದೆ.

ಕೊರೋನಾ ಓಡಿಸಲು ನಾನೇನು ಮಾಡಿದೆ ಗೊತ್ತಾ! ಅಜಿತ್ರೋಮೈಸಿನ್‌, ಪ್ಯಾರಸಿಟಮಲ್‌, ವಿಟಮಿನ್‌ ಸಿ, ಡಿ, ಕ್ಯಾಲ್ಸಿಯಂ, ಜಿಂಕ್‌ ಮಾತ್ರೆ, ಸಲ್ಬಿಟಮೋಲ್‌ ಸಿರಪ್‌ ಇಷ್ಟರಿಂದಲೇ ನನ್ನ ದೇಹದ ಒಳಹೊಕ್ಕ ಕೊರೋನಾ ಸತ್ತುಹೋಯಿತು. ಆಕ್ಸಿಜನ್‌ ಲೆವಲ್‌ ಕಡಿಮೆ ಇದ್ದರೂ ನನಗೆ ಉಸಿರಾಟ ಅಷ್ಟೇನೂ ತೊಂದರೆ ಎನಿಸಲಿಲ್ಲ. ಕಾರಣ ಮನೋಬಲ, ಸೂಕ್ತ ಚಿಕಿತ್ಸೆ, ಉತ್ತಮ ಆಹಾರ ಮತ್ತು ಪ್ರಾಣಾಯಾಮ. ಗಾಬರಿಯಾದಾಗಲೂ ಉಸಿರಾಟದ ತೊಂದರೆಯಾಗುತ್ತದೆ. ಆದ್ದರಿಂದ ನಾನು ಗಾಬರಿಗೊಳ್ಳಲಿಲ್ಲ.

ನಮ್ಮ ಲಸಿಕೆಗೂ ಅನುಮತಿ ಕೊಡಿ: ಭಾರತಕ್ಕೆ ಪೈಝರ್ ಕಂಪನಿ ಮೊರೆ!

ಸೋಂಕಿದ್ದಾಗ ಏನು ಮಾಡಬೇಕು?

ದಿನಕ್ಕೆ 5 ಸಲ ಬೋರಲು ಮಲಗಿಕೊಂಡು ಜೋರಾಗಿ ಉಸಿರಾಟ ಮಾಡಿದೆ. ಬಿಸಿನೀರಿಗೆ ನೀಲಗಿರಿ ಎಣ್ಣೆ/ ಅರಿಶಿಣ, ಬೆಳ್ಳುಳ್ಳಿ ಹಾಕಿ ಅದರ ಸ್ಟೀಮ್‌ ತೆಗೆದುಕೊಂಡೆ. ಚೆನ್ನಾಗಿ ತರಕಾರಿ, ಸೊಪ್ಪು, ಹಣ್ಣು, ಮೊಟ್ಟೆಆಹಾರ ಸೇವನೆ ಮಾಡಿದೆ. ಹಸಿವಾಗದಿದ್ದಾಗ ಮೊದಲ ದಿನ ಒಮ್ಮೆ ಊಟಕ್ಕಿಂತ ಮೊದಲು ಓಮಿಪ್ರಜೋಲ್‌, ಓಂಡನಸೆಟ್ರಾನ್‌ ಮಾತ್ರೆ ಸೇವಿಸಿದೆ. ಕೋಣೆಯಲ್ಲೇ ಅಲ್ಪ ವ್ಯಾಯಾಮ, ನಡಿಗೆ ಮಾಡಿದೆ. ನಿತ್ಯ ಸಿದ್ದೇಶ್ವರ ಸ್ವಾಮಿಗಳ, ಜಗ್ಗಿ ವಾಸುದೇವ ಅವರ ಪ್ರವಚನ, ಹಳೆಯ ಕನ್ನಡ, ಹಿಂದಿ ಚಿತ್ರಗೀತೆ ಕೇಳಿದೆ. ಇಷ್ಟದ ಪುಸ್ತಕ, ಪತ್ರಿಕೆ ಓದಿದೆ. ಟಿವಿ ನ್ಯೂಸ್‌ ಹೆಚ್ಚು ನೋಡದೆ, ಹಾಸ್ಯ ಕಾರ್ಯಕ್ರಮಗಳನ್ನು ನೋಡಿದೆ. ಶೇ.90ರಷ್ಟುಕಾಯಿಲೆಗಳು ಗುಣವಾಗಲು ಮನೋಬಲ, ಸಕಾರಾತ್ಮಕ ಚಿಂತನೆ ಮತ್ತು ಭರವಸೆಯ ಮಾತುಗಳೇ ಕಾರಣ ಎಂದು ವೈದ್ಯರು ಹೇಳುತ್ತಾರೆ. ನನಗೆ ಅದು ಸತ್ಯವೆನಿಸಿತು.

3 ಹಂತದಲ್ಲಿ ದಾಳಿ

ಎಚ್ಚರ! ನನ್ನ ಪ್ರಕಾರ ಕೊರೋನಾ 3 ಹಂತದಲ್ಲಿ ಪರಿಣಾಮ ಮಾಡುತ್ತದೆ. ಮೊದಲ 1-3 ದಿನ ನೆಗಡಿ, ಗಂಟಲು ಕೆರೆತ. 4-5ನೇ ದಿನ ಜ್ವರ ಕೆಮ್ಮು. 5-6ನೇ ದಿನದಿಂದ ತೀವ್ರ ಜ್ವರ ಕಫ, ಕೈಕಾಲು ನಡುಕ, ಉಸಿರಾಟದ ತೊಂದರೆ ಆಗುತ್ತದೆ. (ಬೇರೆ ಕಾಯಿಲೆ, ವಯಸ್ಸಾಗಿದ್ದರೆ) ಈ ಮೂರನೇ ಹಂತವೇ ಪ್ರಾಣಘಾತಕ. ಆದ್ದರಿಂದ ಮೊದಲ ಹಂತದ ಲಕ್ಷಣ ಕಾಣುತ್ತಿದ್ದಂತೇ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಔಷ​ಧದಿಂದ ಒಂದೇ ವಾರದಲ್ಲಿ ಮನೆಯಲ್ಲಿಯೇ ಗುಣವಾಗುತ್ತದೆ. ನಮ್ಮ ನಿರ್ಲಕ್ಷ್ಯತನದಿಂದ ನಾವು ಕಾಯಿಲೆ ಬರಿಸಿಕೊಂಡು ವೈದ್ಯರ ಬಳಿಗೆ ಹೋಗದೆ ಉಲ್ಬಣವಾದಾಗ ಆಸ್ಪತ್ರೆ ಮುಂದೆ ನಿಂತು ವೈದ್ಯರನ್ನು, ಸರ್ಕಾರವನ್ನು ತೆಗಳುವುದನ್ನು ಬಿಡಬೇಕು. ವ್ಯಾಟ್ಸ್‌ಆಪ್‌, ಫೇಸ್‌ಬುಕ್‌ ವಿಶ್ವವಿದ್ಯಾಲಯದ ಪಂಡಿತರ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ. ವೈದ್ಯರು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಸರ್ಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ. ನಾವು ಸುರಕ್ಷಾ ನಿಯಮ ಪಾಲಿಸೋಣ ಅಷ್ಟೆ.

- ಡಾ. ಮಲ್ಲಿಕಾರ್ಜುನ ಗುಮ್ಮಗೋಳ

ಧಾರವಾಡ

Follow Us:
Download App:
  • android
  • ios