ನಮ್ಮ ಲಸಿಕೆಗೂ ಅನುಮತಿ ಕೊಡಿ| ಭಾರತಕ್ಕೆ ಫೈಝರ್‌ ಕಂಪನಿ ಮೊರೆ| ಕೋವಿಡ್‌ ಚಿಕಿತ್ಸೆಗೆ 510 ಕೋಟಿ ಘೋಷಿಸಿದ ಸಂಸ್ಥೆ| ಸರ್ಕಾರ ಒಪ್ಪಿದರೆ ದೇಶಕ್ಕೆ ಲಭಿಸಲಿದೆ 4ನೇ ಲಸಿಕೆ

ನವದೆಹಲಿ(ಮೇ.04): ಕೊರೋನಾ 2ನೇ ಅಲೆಯಿಂದ ಇಡೀ ಭಾರತ ತತ್ತರಿಸಿರುವಾಗಲೇ, ಅಮೆರಿಕ ಹಾಗೂ ಬ್ರಿಟನ್‌ ಮತ್ತಿತರೆ ದೇಶಗಳಲ್ಲಿ ಬಳಕೆಯಾಗುತ್ತಿರುವ ತನ್ನ ಕೋವಿಡ್‌ ಲಸಿಕೆಗೆ ತ್ವರಿತ ಅನುಮತಿ ನೀಡುವಂತೆ ಅಮೆರಿಕದ ಔಷಧ ತಯಾರಿಕಾ ಕಂಪನಿ ಫೈಝರ್‌ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ. ಭಾರತದಲ್ಲಿ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಕೋವಿಡ್‌ ಚಿಕಿತ್ಸೆಗೆ 510 ಕೋಟಿ ರು. ಮೌಲ್ಯದ ಔಷಧಗಳನ್ನು ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದೆ.

"

ಒಂದು ವೇಳೆ, ಕೇಂದ್ರ ಸರ್ಕಾರವೇನಾದರೂ ಫೈಝರ್‌ ಕಂಪನಿಯ ಲಸಿಕೆಗೆ ಅನುಮತಿ ನೀಡಿದರೆ ಕೊರೋನಾಕ್ಕೆ ಭಾರತದಲ್ಲಿ 4ನೇ ಲಸಿಕೆ ಲಭ್ಯವಾದಂತಾಗಲಿದೆ. ಈಗಾಗಲೇ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯನ್ನು ಜನತೆಗೆ ನೀಡಲಾಗುತ್ತಿದೆ. ಇತ್ತೀಚೆಗಷ್ಟೇ ರಷ್ಯಾದ ಸ್ಪುಟ್ನಿಕ್‌ ಲಸಿಕೆಗೆ ಅನುಮತಿ ನೀಡಿದ್ದು, ಅದು ಈಗಾಗಲೇ ಭಾರತಕ್ಕೆ ಬಂದಿಳಿದಿದೆ.

ಹಲವು ತಿಂಗಳ ಹಿಂದೆಯೇ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೂ ನಮ್ಮ ಲಸಿಕೆ ಭಾರತದಲ್ಲಿ ನೋಂದಣಿಯಾಗಿಲ್ಲ. ತ್ವರಿತವಾಗಿ ಅನುಮತಿ ನೀಡುವಂತೆ ಭಾರತ ಸರ್ಕಾರದ ಜತೆ ಮಾತುಕತೆಯಲ್ಲಿ ತೊಡಗಿದ್ದೇವೆ ಎಂದು ಫೈಝರ್‌ ಕಂಪನಿಯ ಮುಖ್ಯಸ್ಥ ಆಲ್ಬರ್ಟ್‌ ಬೌರ್ಲಾ ಅವರು ಉದ್ಯೋಗಿಗಳಿಗೆ ರವಾನಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona