ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಮೆರಿಕನ್ ಯುವತಿಯೊಬ್ಬರು ಅಸ್ವಸ್ಥರಾದಾಗ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಸಿಪಿಆರ್ ನೀಡಿ ಪ್ರಾಣ ಉಳಿಸಿದ್ದಾರೆ. ವಿಮಾನ ಇಳಿಯುವವರೆಗೂ ಯುವತಿಯ ಆರೈಕೆ ಮಾಡಿ, ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ. ಸಮಯೋಚಿತ ಸೇವೆಗೆ ವ್ಯಾಪಕ ಪ್ರಶಂಸೆ
ಬೆಳಗಾವಿ (ಡಿ.13): ಗೋವಾ–ನವದೆಹಲಿ ನಡುವಿನ ವಿಮಾನ ಪ್ರಯಾಣದ ವೇಳೆ ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಗೋವಾ ಪ್ರಭಾರಿ ಕಾರ್ಯದರ್ಶಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಯುವ ಅಮೆರಿಕನ್ ಮಹಿಳೆಯೊಬ್ಬರ ಪ್ರಾಣವನ್ನು ಉಳಿಸಿದ್ದಾರೆ.
ಅಮೆರಿಕನ್ ಪ್ರಜೆಗೆ ಸಿಪಿಆರ್ ಮಾಡಿ ಮರುಜೀವ:
ಗೋವಾದಿಂದ ನವದೆಹಲಿಗೆ ಹೊರಟ ತಕ್ಷಣವೇ ಆ ಯುವತಿ ತೀವ್ರವಾಗಿ ನಡುಗತೊಡಗಿ ಅಚೇತನಗೊಂಡಿದ್ದು, ನಾಡಿ ಕೂಡ ನಿಲ್ಲುವ ಹಂತಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಡಾ. ಅಂಜಲಿ ಅವರು ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಶನ್ (ಸಿಪಿಆರ್) ನಡೆಸಿ ಯುವತಿಗೆ ಜೀವ ತುಂಬಿದರು.
ಸುಮಾರು ಅರ್ಧ ಗಂಟೆಯ ನಂತರ ಯುವತಿ ಮತ್ತೊಮ್ಮೆ ಕುಸಿದುಬಿದ್ದಾಗ ಮತ್ತೆ ನಾಡಿ ನಿಲ್ಲುವ ಪರಿಸ್ಥಿತಿ ಎದುರಾದರೂ, ಡಾ. ಅಂಜಲಿ ಅವರ ನಿರಂತರ ಪ್ರಯತ್ನಗಳಿಂದ ಆಕೆಯ ನಾಡಿ ಪುನಃ ಚೇತರಿಸಿಕೊಂಡಿತು.
ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆಗೆ ಪ್ರಶಂಸೆ:
ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನದ ಉಳಿದ ಪ್ರಯಾಣಾವಧಿಯಲ್ಲೆಲ್ಲಾ ರೋಗಿಯ ಪಕ್ಕದಲ್ಲೇ ನಿಂತು ಆಕೆಯ ಸ್ಥಿತಿಯನ್ನು ನಿಕಟವಾಗಿ ಗಮನಿಸಿದರು. ವಿಮಾನ ಇಳಿಯುವಾಗ ರನ್‌ವೇಯಲ್ಲಿ ಆಂಬ್ಯುಲೆನ್ಸ್ ಸಿದ್ಧವಾಗಿರುವಂತೆ ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿದರು. ನವದೆಹಲಿಗೆ ವಿಮಾನ ಇಳಿದ ತಕ್ಷಣವೇ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ವ್ಯವಸ್ಥೆ ಮಾಡಿದರು.
30 ಸಾವಿರ ಅಡಿ ಎತ್ತರದಲ್ಲಿ ಅಮೂಲ್ಯ ಜೀವವನ್ನು ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರ ಸಮಯೋಚಿತ ಕ್ರಮ ಹಾಗೂ ಮಾನವೀಯ ಸೇವೆಯನ್ನು ವಿಮಾನದ ಪೈಲಟ್, ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಮನಃಪೂರ್ವಕವಾಗಿ ಪ್ರಶಂಸಿಸಿದರು


