ಬೆಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಲು ಎಲ್ಲೂ ಹೋಗಬೇಕಿಲ್ಲ, ಮನೆ ಬಾಗಿಲಿಗೆ ಬರಲಿದೆ ವ್ಯಾನ್, ಅತೀ ಸುಲಭವಾಗಿ ಪಾಸ್‌ಪೋರ್ಟ್ ಈಗ ಮನೆಬಾಗಿಲಲ್ಲೇ ಸಿಗುವ ವಿನೂತನ ಯೋಜನೆ ಬೆಂಗಳೂರಿನಲ್ಲಿ ಆರಂಭಗೊಂಡಿದೆ. 

ಬೆಂಗಳೂರು (ಡಿ.13) ಹೊಸದಾಗಿ ಪಾಸ್‌ಪೋರ್ಟ್ ಮಾಡಿಸುವುದು, ನವೀಕರಣ, ವಿಳಾಸ, ಹೆಸರು ಸೇರಿದಂತೆ ಕೆಲ ತಿದ್ದುಪಡಿ-ಬದಲಾವಣೆಗಳಿಗೆ ಇದೀಗ ಪಾಸ್‌ಪೋರ್ಟ್ ಕೇಂದ್ರಕ್ಕೆ ಹೋಗಬೇಕಿಲ್ಲ. ನಿಮ್ಮ ಮನೆಬಾಗಿಲಲ್ಲೇ ಎಲ್ಲವೂ ಸಾಧ್ಯ. ಬೆಂಗಳೂರಿನ ರೀಜನಲ್ ಪಾಸ್‌ಪೋರ್ಟ್ ಕೇಂದ್ರ ಕಚೇರಿ ಹೊಸ ಹಾಗೂ ವಿನೂತನ ಪ್ರಯತ್ನ ಆರಂಭಿಸಿದೆ. ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಆ್ಯಪ್ಲಿಕೇಶನ್ ಅಥವಾ ನವೀಕರಣ ಸೇರಿದಂತೆ ಯಾವುದೇ ಕಾರ್ಯಕ್ಕೆ ಅರ್ಜಿ ಸಲ್ಲಿಸಿದ್ದರೆ, ನಿಗದಿತ ದಿನಾಂಕದಂದು ಪಾಸ್‌ಪೋರ್ಟ್ ಮೊಬೈಲ್ ವ್ಯಾನ್ ಮನೆ ಬಾಗಿಲಿಗೆ ಬರಲಿದೆ. ಅಲ್ಲೇ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ವಿಶೇಷ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಸ್‌ಪೋರ್ಟ್ ಕೇಂದ್ರದ ರಶ್ ತಗ್ಗಿಸಲು ಪ್ರಯತ್ನ

ಬೆಂಗಳೂರಿನ ಪಾಸ್‌ಪೋರ್ಟ್ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸ್‌ಪೋರ್ಟ್ ವಿಚಾರಗಳಿಗೆ ಜನರು ಆಗಮಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ. ಇದರಿಂದ ಪಾಸ್‌ಪೋರ್ಟ್ ಕೇಂದ್ರದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಈ ರಶ್ ಕಡಿಮೆ ಮಾಡಲು ಹಾಗೂ ಜನರು ಹೆಚ್ಚು ಹೊತ್ತು ಕಾಯುವುದನ್ನು ತಪ್ಪಿಸಲು ಮೊಬೈಲ್ ವ್ಯಾನ್ ಪಾಸ್‌ಪೋರ್ಟ್ ಕೇಂದ್ರ ಆರಂಭಿಸಿದೆ.

ಬೆಳಗ್ಗೆ 10 ಗಂಟೆಯಿಂದೆ ಸಂಜೆ 4 ಗಂಟೆ ವರೆಗೆ ಸೇವೆ

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಈ ಮೊಬೈಲ್ ವ್ಯಾನ್ ಪಾಸ್‌ಪೋರ್ಟ್ ಕೇಂದ್ರ ಸೇವೆ ನೀಡಲಿದೆ. ಆರಂಭಿಕ ಹಂತದಲ್ಲಿ ಕೆಲ ವಲದಲ್ಲಿ ಸೇವೆ ನೀಡಲಾಗುತ್ತಿದೆ. ಹಂತ ಹಂತವಾಗಿ ಈ ಸೇವೆ ವಿಸ್ತರಣೆ ಮಾಡಲಾಗುತ್ತದೆ. ಸದ್ಯ ಮೊಬೈಲ್ ವ್ಯಾನ್ ಪಾಸ್‌ಪೋರ್ಟ್ ಕೇಂದ್ರ ದಿನಕ್ಕೆ 40 ರಿಂದ 50 ಅರ್ಜಿಗಳನ್ನು ಪರಿಶೀಲಿಸಿ, ಕೆಲಸ ಕಾರ್ಯ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ.

ಕಳೆದೊಂದು ವರ್ಷದಿಂದ ಪಾಸ್‌ಪೋರ್ಟ್ ಕೇಂದ್ರದಲ್ಲಿ ಭಾರಿ ಜನಸಂದಣಿಯಾಗುತ್ತಿದೆ. ಈ ರಶ್ ತಗ್ಗಿಸಲು ಹೆಚ್ಚುವರಿ ಕೆಲಸ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಜಿಟಲೈಜ್ ಪ್ರಕ್ರಿಯೆ, ತ್ವರಿತ ಪ್ರತಿಕ್ರಿಯೆ ಸೇರಿದಂತೆ ಹಲವು ರೀತಿಯಲ್ಲಿ ಸುಧಾರಣೆ ಮಾಡಲಾಗಿದೆ. ಇದರ ಜೊತೆಗೆ ಮೊಬೈಲ್ ಮ್ಯಾನ್ ಆರಂಭಿಸಲಾಗಿದೆ. ಜನರು ಪಾಸ್‌ಪೋರ್ಟ್ ಕೇಂದ್ರಕ್ಕೆ ಬಂದು ಜನಸಂದಣಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ವಿಳಂಬವಾಗಲಿದೆ. ಮೊಬೈಲ್ ವ್ಯಾನ್ ಮೂಲಕ ಸುಲಭವಾಗಿ ಪಾಸ್‌ಪೋರ್ಟ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಿದೆ. ಇದರಿಂದ ಕೇಂದ್ರಗಳ ರಶ್ ಕಡಿಮೆಯಾಗಲಿದೆ. ಜನರಿಗೂ ಅನುಕೂಲವಾಗಲಿದೆ ಎಂದು ರೀಜನಲ್ ಪಾಸ್‌ಪೋರ್ಟ್ ಆಫೀಸ್ ಅಧಿಕಾರಿ ಹೇಳಿದ್ದಾರೆ.

ಮೇ ತಿಂಗಳಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಪಾಸ್‌ಪೋರ್ಟ್ ವ್ಯಾನ್ ಪ್ರಕ್ರಿಯೆ ಆರಂಭಿಸಲಾಗಿದೆ. ಇದೀಗ ರೀಜನಲ್ ಪಾಸ್‌ಪೋರ್ಟ್ ಕೇಂದ್ರಗಳು ಈ ಯೋಜನೆ ಆರಂಭಿಸುತ್ತಿದೆ. ದೇಶದಲ್ಲಿ ಇದುವರೆಗೆ ಮೊಬೈಲ್ ವ್ಯಾನ್ ಪಾಸ್‌ಪೋರ್ಟ್ ಕೇಂದ್ರದ ಮೂಲಕ 6 ಲಕ್ಷ ಇ ಪಾಸ್‌ಪೋರ್ಟ್ ನೀಡಲಾಗಿದೆ. ಪ್ರತಿ ತಿಂಗಳಲ್ಲಿ ಸರಿಸುಮಾರು 90,000 ಪಾಸ್‌ಪೋರ್ಟ್ ನೀಡಲಾಗುತ್ತಿದೆ.