ಬೆಂಗಳೂರಿಗೆ ಬರ್ತಿದ್ದಾರೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ: ಯಾಕೆ ಗೊತ್ತಾ?
ಕಂಬಳಕ್ಕೆ ಭರದಿಂದ ಸಿದ್ದತೆಗಳು ನಡೆಯುತ್ತಿದ್ದು ನವೆಂಬರ್ 25,26 ರಂದು ರಾಜಧಾನಿಯಲ್ಲಿ ಕಂಬಳ ರಂಗೇರಲಿದೆ. ಇದರ ಜೊತೆಗೆ ರಾಜಧಾನಿಯಲ್ಲಿರುವ ಕರಾವಳಿ ಮಂದಿಗೆ ಗುಡ್ ನ್ಯೂಸ್ ಒಂದಿದೆ.
ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ನ.02): ಕಂಬಳಕ್ಕೆ ಭರದಿಂದ ಸಿದ್ದತೆಗಳು ನಡೆಯುತ್ತಿದ್ದು ನವೆಂಬರ್ 25,26 ರಂದು ರಾಜಧಾನಿಯಲ್ಲಿ ಕಂಬಳ ರಂಗೇರಲಿದೆ. ಇದರ ಜೊತೆಗೆ ರಾಜಧಾನಿಯಲ್ಲಿರುವ ಕರಾವಳಿ ಮಂದಿಗೆ ಗುಡ್ ನ್ಯೂಸ್ ಒಂದಿದೆ. ಹೌದು, ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಶಿರ್ಷಿಕೆಯೊಡನೆ ನಡೆಯುತ್ತಿರುವ ಕಂಬಳದ ಜೊತೆಗೆ ತುಳು ಸಮ್ಮೇಳನವೂ ಇದೇ ಸಂದರ್ಭದಲ್ಲಿ ಸೆಟ್ಟೇರಲಿದೆ. ಕಂಬಳ ನಡೆಯುವ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 24 ರಂದು ಅರಮನೆ ಮೈದಾನದಲ್ಲಿ ತುಳು ಸಮ್ಮೇಳನ ನಡೆಯಲಿದ್ದು ಕರಾವಳಿ ಭಾಗದ ಸೊಬಗನ್ನು ಬೆಂಗಳೂರಿನಲ್ಲಿ ತೆರೆದಿಡುವ ಸುಂದರ ಕಾರ್ಯಕ್ರಮಕ್ಕೆ ಅರಮನೆ ಮೈದಾನ ಸಾಕ್ಷಿಯಾಗಲಿದೆ.
ಕಂಬಳಕ್ಕೆ ಸಾಕಷ್ಟು ಗಣ್ಯರು, ಸಿನಿಮಾ ನಟರು ಭಾಗವಹಿಸಲಿದ್ದು ತುಳು ಸಮ್ಮೇಳನಕ್ಕೂ ಗಣ್ಯರ ದೊಡ್ಡ ಲಿಸ್ಟ್ ಕೂಡ ರೆಡಿಯಾಗಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ತುಳು ಸಮ್ಮೇಳನ ಉದ್ಘಾಟಿಸಲಿದ್ದು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ವೀಣಾ ಬನ್ನಂಜೆ ಪ್ರಧಾನ ಭಾಷಣಕಾರರಾಗಿ ಆಗಮಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ.
ದಲಿತ ಸಿಎಂ ಬಗ್ಗೆ ಚರ್ಚೆಯೇ ನಡೆದಿಲ್ಲ: ವಿಶೇಷ ಸಂದರ್ಶನದಲ್ಲಿ ಸಚಿವ ಮಹದೇವಪ್ಪ ಹೇಳಿದ್ದೇನು?
ತುಳುನಾಡಿನ ಸಾಧಕರಾಗಿರುವ ಡಾ.ದೇವಿಪ್ರಸಾದ್ ಶೆಟ್ಟಿ, ಡಾ.ಸುದರ್ಶನ್ ಬಲ್ಲಾಳ್, ಉದ್ಯಮಿ ಸರ್ವೋತ್ತಮ್ ಶೆಟ್ಟಿ, ಬಿ.ಆರ್ ಶೆಟ್ಟಿ ಸೇರಿದಂತೆ ಹಲವು ಸಾಧಕರಿಗೆ ಸನ್ಮಾನವೂ ನಡೆಯಲಿದೆ ಎಂದು ಬೆಂಗಳೂರು ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. ಇದರ ಜೊತೆಗೆ ಕರಾವಳಿ ಭಾಗದ ವಿಶೇಷ ಆಹಾರ, ಆಟೋಟಗಳು, ಸಾಂಸ್ಕೃತಿಕ ನೃತ್ಯವೈಭವಗಳು ರಾಜಧಾನಿಯ ಜನರಿಗೆ ಕರಾವಳಿ ಸಂಸ್ಕೃತಿಯ ರಸದೌತಣವನ್ನು ಉಣಬಡಿಸಲಿದೆ. ಜೊತೆಗೆ ಕಂಬಳ ಕೋಣಗಳನ್ನು ಸ್ವಾಗತಿಸುವ ಅಭೂತಪೂರ್ವ ಕಾರ್ಯಕ್ರಮವೂ ಅಂದು ರಂಗೇರಲಿದೆ.