ದಲಿತ ಸಿಎಂ ಬಗ್ಗೆ ಚರ್ಚೆಯೇ ನಡೆದಿಲ್ಲ: ವಿಶೇಷ ಸಂದರ್ಶನದಲ್ಲಿ ಸಚಿವ ಮಹದೇವಪ್ಪ ಹೇಳಿದ್ದೇನು?
ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಲೂ ತಾವು ಮಾಡುತ್ತಿರುವುದೇನು ಎಂದು ವಿವರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ.
ಎಸ್.ಗಿರೀಶ್ ಬಾಬು
ಅಂಬೇಡ್ಕರ್ ಹಾಗೂ ಬುದ್ಧನ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ದಲಿತ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ಮಿಂದೆದ್ದು ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಮುಖ ದಲಿತ ನಾಯಕ ಡಾ. ಎಚ್.ಸಿ. ಮಹದೇವಪ್ಪ. ದೇವೇಗೌಡ-ಜೆಎಚ್ ಪಟೇಲ್ ಸಂಪುಟದಲ್ಲೇ ಸಚಿವರಾಗಿದ್ದ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡು ಈ ಕಾರಣಕ್ಕಾಗಿಯೇ ಹಿಂದೊಮ್ಮೆ ಸಚಿವ ಸ್ಥಾನವನ್ನು ತ್ಯಜಿಸಿದ್ದವರು ಮಹದೇವಪ್ಪ. ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಮುಖ್ಯಮಂತ್ರಿ ಸಮ್ಮುಖ ನಡೆದ ದಲಿತ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದವರಲ್ಲಿ ಮಹದೇವಪ್ಪ ಕೂಡ ಒಬ್ಬರು. ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ ಈ ಸಭೆಯಲ್ಲಿ ನಿಜವಾಗಿಯೂ ನಡೆದಿದ್ದು ಏನು?, ಮುದ್ದೆ ಮಾತ್ರವಲ್ಲದೆ, ಅಲ್ಲಿ ಹುದ್ದೆಯ ಚರ್ಚೆ ನಡೆದಿದ್ದು ಸುಳ್ಳೆ? ಮುಖ್ಯಮಂತ್ರಿಗಳು ಸಭೆಗೆ ಏನಾದರೂ ಭರವಸೆ ನೀಡಿದರೆ?, ಇಷ್ಟಕ್ಕೂ ಈ ಸಭೆ ಏಕೆ ಈ ಪರಿ ಚರ್ಚೆ ಹುಟ್ಟುಹಾಕುತ್ತಿದೆ? ಗ್ಯಾರಂಟಿ ಯೋಜನೆಗಳಿಗಾಗಿ ದಲಿತರ ಹಣ ಬಳಕೆಯಾಗುತ್ತಿದೆ ಎಂಬ ಬಿಜೆಪಿ ಆರೋಪದಲ್ಲಿನ ತಥ್ಯವೇನು? ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಲೂ ತಾವು ಮಾಡುತ್ತಿರುವುದೇನು ಎಂದು ವಿವರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ.
ಸರ್ಕಾರಿ ಶಾಲೆಗಳಿಗಿನ್ನು ಉಚಿತ ವಿದ್ಯುತ್, ನೀರು: ಸಿದ್ದರಾಮಯ್ಯ ಘೋಷಣೆ
*ಗೃಹ ಸಚಿವರ ಮನೆಯಲ್ಲಿ ನೀವು ''ಮುದ್ದೆ'' ತಿಂದು ಬಂದಿದ್ದು, ರಾಜಕೀಯ ವಲಯದಲ್ಲಿ ದೊಡ್ಡ ಗದ್ದಲ ಹುಟ್ಟು ಹಾಕಿದೆ?
ನಿದ್ದೆ ಬರದಿದ್ದವರೂ ಏನೋ ಕೆರೆದು ಹುಣ್ಣು ಮಾಡಿಕೊಂಡರು ಅಂತಾರಲ್ಲ.. ಆ ರೀತಿ ನಡೀತಿದೆ ಇದು ಕೂಡ. ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ನಡೆಯಲಿಲ್ಲ. ಆದರೂ ಅದರ ಬಗ್ಗೆ ಜನ ಏಕೆ ಇಷ್ಟೊಂದು ಮಾತನಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
*ಮುಖ್ಯಮಂತ್ರಿಯವರು ಕೇವಲ ದಲಿತ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರೆ ಅದಕ್ಕೆ ಬೇರೆ ಅರ್ಥ...
(ಪ್ರಶ್ನೆ ತುಂಡರಿಸಿ) ಇಲ್ಲಿ ದಲಿತರು ಅಥವಾ ದಲಿತೇತರ ಸಚಿವರು ಎಂಬ ಪ್ರಶ್ನೆಯೇ ಬರುವುದಿಲ್ಲ. ಗೃಹ ಸಚಿವರಿಗೆ ನಮ್ಮೊಂದಿಗೆ ಡಿನ್ನರ್ ಮಾಡೋಣ ಅನಿಸಿದೆ. ಅದಕ್ಕೆ ಆಹ್ವಾನಿಸಿದ್ದರು. ನಾವು ಹೋಗಿ ಬಂದೆವು. ಆ ಸಭೆಗೆ ಯಾವುದೇ ಅಜೆಂಡಾ ಇರಲಿಲ್ಲ. ಅದು ಕೇವಲ ಗೆಳೆತನದ ಆಧಾರದ ಮೇಲೆ ನಡೆದ ಔತಣ ಕೂಟ. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಯಲಿಲ್ಲ.
*ಆದರೂ ಆ ಸಭೆ ರಾಜಕೀಯವಾಗಿ ದೊಡ್ಡ ಸಂದೇಶ ಕಳುಹಿಸಿದೆ?
ರಾಜಕೀಯವಾಗಿ ಒಳ್ಳೆ ಸಂದೇಶ ಹೋಗಿದ್ದರೆ ಸಂತೋಷವೇ.
*ಅದೇ ಯಾರಿಗೆ ಸಂದೇಶ ನೀಡುವ ಉದ್ದೇಶವಿತ್ತು?
ಸರ್ಕಾರದ ಶುಭ್ರತೆಗೆ, ಸರ್ಕಾರದ ಉತ್ತಮ ಕಾರ್ಯನಿರ್ವಹಣೆಗೆ... ಇಂತಹ ಸಂದೇಶ ಹೋಗಿದ್ದರೆ ಒಳ್ಳೆಯದೇ ಅಲ್ಲವೇ?
*ಪಕ್ಷದ ಒಬ್ಬ ನಿರ್ದಿಷ್ಟ ರಾಜಕಾರಣಿಗೆ ಸಂದೇಶ ನೀಡುವ ಸಭೆಯದು ಅಂತಾರಲ್ಲ?
ಕಾಮಾಲೆ ಕಣ್ಣಿಗೆ ಆ ತರಹ ಕಾಣ್ತಾ ಇದೆ. ನಮಗೆ ಉತ್ತಮ ಆಡಳಿತ ದೃಷ್ಟಿಯಿಂದ ಈ ಮೀಟಿಂಗ್ ಸಂದೇಶ ನೀಡಿದೆ ಅಂತ ಕಾಣ್ತಾ ಇದೆ. ಕಾಮಾಲೆ ಕಣ್ಣಿನವರಿಗೆ ಏನು ಮಾಡ್ತಿರಿ?
*ಸಭೆಯಲ್ಲಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ಯೆ ಇತ್ತಂತಲ್ಲ. ಆ ಬಗ್ಗೆಯೂ ಚರ್ಚೆಯಾಯಿತಂತೆ?
ಅಲ್ಲಿ ಮುದ್ದೆ ಬಿಟ್ಟರೆ ಬೇರೆ ಏನೂ ಚರ್ಚೆಯೇ ಆಗಿಲ್ಲ.
*ಸಂದರ್ಭ ನಿರ್ಮಾಣವಾದರೆ ದಲಿತ ನಾಯಕತ್ವದ ಪರ ನಿಲ್ಲುವೆ ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ಭರವಸೆ ನೀಡಿದರಂತೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿಪಿ ಟಿಎಸ್‌ಪಿ, ಪಿಟಿಸಿಎಲ್ ಸೇರಿದಂತೆ ಎಷ್ಟೊಂದು ದಲಿತ ಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ಇದು ಸ್ಪಷ್ಟವಾಗಿ ಅವರು ದಲಿತ ಪರ ಅಂತ ಹೇಳುವುದಿಲ್ಲವೇ? ಅಂತಹವರು ಪ್ರತ್ಯೇಕವಾಗಿ ದಲಿತ ಪರ ನಿಲ್ಲುತೇನೆ ಎಂದು ಹೇಳುವ ಅಗತ್ಯವೇನಿದೆ? ಅದಕ್ಕೆ ಅರ್ಥವೇನಿದೆ?
*ಆದರೆ, ಸಭೆ ನಂತರ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಚರ್ಚೆಗೆ ಬಂತು?
ಮೊದಲೇ ಹೇಳಿದೆನಲ್ಲ... ಸಭೆಯಲ್ಲಿ ಯಾವುದೇ ಹುದ್ದೆ ಬಗ್ಗೆ ಚರ್ಚೆಯಾಗಲಿಲ್ಲ. ಒನ್ಲಿ ಮುದ್ದೆ, ನೋ ಹುದ್ದೆ.
*ದಲಿತ ಮುಖ್ಯಮಂತ್ರಿ ಚರ್ಚೆ ಆರಂಭವಾದಾಗಲೆಲ್ಲ ಬೇರೆಯವರ ಹೆಸರು ಕೇಳಿ ಬರತ್ತೆ. ಹಿರಿತನ ಹೊಂದಿರುವ ಮಹದೇವಪ್ಪ...
(ಪ್ರಶ್ನೆ ತುಂಡರಿಸಿ) ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಅಂತಹ ಹುದ್ದೆಗಳು ಯಾವುದೇ ಜಾತಿ ಹೆಸರಿನಲ್ಲಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಎಲ್ಲ ಜಾತಿಗಳಲ್ಲೂ ಯೋಗ್ಯ, ದಕ್ಷ ಹಾಗೂ ಡೈನಾಮಿಕ್ ನಾಯಕರು ಇರುತ್ತಾರೆ. ಸಂದರ್ಭ ಹಾಗೂ ಅವಕಾಶ ಬಂದಾಗ ಕಾಂಗ್ರೆಸ್ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಆಂಧ್ರಪ್ರದೇಶದಲ್ಲಿ ದಲಿತರಾದ ದಾಮೋದರಂ ಸಂಜೀವಯ್ಯ, ರಾಜಸ್ಥಾನದಲ್ಲಿ ಜಗನ್ನಾಥ ಪಹಾಡಿಯಾ ಅವರು ಮುಖ್ಯಮಂತ್ರಿಗಳಾಗಿರಲಿಲ್ಲವೇ? ದಲಿತರ ಬಗ್ಗೆ ಮಾತನಾಡುವ ಬೇರೆ ಪಕ್ಷಗಳು ಏಕೆ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ? ಅದರಲ್ಲೂ ಬಿಜೆಪಿಯವರಿಗೆ ತುಂಬಾ ಅವಕಾಶವಿದ್ದರೂ ಅವರು ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ.
*ಅದು ಸರಿ ಸರ್, ಮಹದೇವಪ್ಪ ಅವರು ಉಪ ಮುಖ್ಯಮಂತ್ರಿ ಹುದ್ದೆ ಕ್ಲೇಮ್ ಮಾಡುತ್ತಿಲ್ಲ?
ಕರ್ನಾಟಕ ಶಂಕರಾನಂದ, ರಂಗನಾಥ್, ಬಿ ಬಸವಲಿಂಗಯ್ಯ, ಬಿ. ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ರಂತಹ ದೊಡ್ಡ ದೊಡ್ಡ ನಾಯಕರನ್ನು ಕಂಡಿದೆ. ರಾಜ್ಯದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಯಾಗಿದ್ದವರನ್ನು ಹಾಗೂ ಈ ನಾಯಕರನ್ನು ನಾಯಕತ್ವವನ್ನು ಹೋಲಿಸಿ ನೋಡಿ. ಆಗ ಮಹತ್ವ ಅರ್ಥವಾಗುತ್ತೆ. ಮುಖ್ಯಮಂತ್ರಿ ಆಗಿ ಬಿಟ್ಚರೆ ಏನು ಗ್ರೇಟ್ ಅಂತ ಅಲ್ಲ. ಮುಖ್ಯಮಂತ್ರಿ ಆಗಲಿಲ್ಲ ಅಂದರೆ ಕೈ ಕೆಳಗೆ ಇದ್ದ ಅಂತ ಅರ್ಥ ಅಲ್ಲ.
*ಹೋಗಲಿ, ಪವರ್ ಶೇರಿಂಗ್ ಹಾಗೂ ಅಧಿಕಾರ ಹಸ್ತಾಂತರ ವಿಚಾರವೂ ಪ್ರಸ್ತಾಪವಾಗುತ್ತಿದೆ?
ಮುಂದೆ ಏನಾಗಬೇಕು, ಏನಾಗಬಾರದು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡತ್ತೆ. ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ.
*ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ನೀವು ಹೇಳಿಕೆ ನೀಡಿದ್ದಿರಿ?
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಹುದ್ದೆ ಖಾಲಿ ಇಲ್ಲವಲ್ಲ.
*ಮೂರು ಉಪ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿಕೆಗಳು ಕೇಳಿ ಬಂದವು?
ಇವೆಲ್ಲ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕಾದ ವಿಚಾರಗಳು.
*ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗ ಈ ರೀತಿಯ ಬಣ ಮೇಲಾಟ ಸರಿಯೇ?
ಬಣ ಎನ್ನುವುದು ಏನೂ ಇಲ್ಲ. ಕಾಂಗ್ರೆಸ್‌ನಲ್ಲಿ ಇರೋದು ಒಂದೇ ಬಣ.
*ಜನರ ಕಣ್ಣಿಗೆ ಆ ರೀತಿ ಕಾಣುತ್ತಿಲ್ಲ. 2-3 ಬಣ ಸ್ಪಷ್ಟವಾಗಿ ಕಾಣುತ್ತಿದೆ?
(ಮೌನ)
*ಹೋಗ್ಲಿ, ಈ ರೀತಿ ಬೆಳವಣಿಗೆ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ ಅನ್ನಿಸೋದಿಲ್ವ?
ನಾವೆಲ್ಲ ಒಗ್ಗಟ್ಟಿರುವಾಗ ಇಂತಹ ಪ್ರಶ್ನೆಯೆಲ್ಲ ಅಪ್ರಸ್ತುತ.
*ಲೋಕಸಭಾ ಚುನಾವಣೆಗೆ ಹೈಕಮಾಂಡ್ ಕೆಲ ಸಚಿವರನ್ನು ಕಣಕ್ಕೆ ಇಳಿಸುತ್ತೆ ಅಂತಾರೆ?
ಅದು ನನಗೆ ಗೊತ್ತಿಲ್ಲ. ಹೈಕಮಾಂಡ್‌ಗೆ ಬಿಟ್ಟ ವಿಚಾರ.
*ನಿಮ್ಮ ಹೆಸರು ಕೇಳಿಬರುತ್ತಿದೆ?
ನಾನು ಲೋಕಸಭಾ ಚುನಾವಣಾ ಸ್ಪರ್ಧೆಗೆ ಆಕಾಂಕ್ಷಿಯಲ್ಲ.
*ನಿಮ್ಮ ಪುತ್ರ?
ಅದನ್ನು ಅವನನ್ನೇ ಕೇಳಬೇಕು.
*ಈ ಸರ್ಕಾರ ಒಂದೇ ರಾತ್ರಿಯಲ್ಲಿ ಬಿದ್ದುಹೋಗತ್ತೆ ಅಂತಾರೆ ರಮೇಶ್ ಜಾರಕಿಹೊಳಿ?
ಅಂತಹ ಕಾರ್ಯ ಮಾಡಲು ಹೋಗಿ ಈಗ ರಮೇಶ್ ಜಾರಕಿಹೊಳಿ ಏನಾಗಿದ್ದಾರೆ. ಅವರ ಪರಿಸ್ಥಿತಿ ಈಗ ಏನಾಗಿದೆ ಗೊತ್ತಲ್ಲ.
*ಹಿರಿತನ ಹೊಂದಿರುವ ನಿಮಗೆ ಸಮಾಜ ಕಲ್ಯಾಣ ಇಲಾಖೆ ಹೊಣೆ ಸಮಾಧಾನ ತಂದಿದೆಯೇ?
ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳು, ಕರ್ತವ್ಯ ಹಾಗೂ ಹೊಣೆಗಾರಿಕೆಯನ್ನು ನಿಭಾಯಿಸುವುದು ಸಮಾಜ ಕಲ್ಯಾಣ ಇಲಾಖೆಯ ಸಂವಿಧಾನಿಕ ಜವಾಬ್ದಾರಿ. ಇತ್ತೀಚೆಗೆ ಈ ಇಲಾಖೆಯನ್ನು ವಿಭಜಿಸಿ ಪರಿಶಿಷ್ಟ ಜಾತಿಗೆ ಒಂದು ಇಲಾಖೆ, ಪರಿಶಿಷ್ಟ ಪಂಗಡಕ್ಕೆ ಒಂದು ಇಲಾಖೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಇಲಾಖೆಗಳನ್ನು ಮಾಡಲಾಗಿದೆ. ಈ ಎಲ್ಲ ಇಲಾಖೆಗಳು ಬೇರೆ ಬೇರೆ ಇರೋದಕ್ಕಿಂತ ಒಟ್ಟಿಗೆ ಇದ್ದಿದ್ದರೆ ಚೆನ್ನಾಗಿ ಕೆಲಸ ಮಾಡಬಹುದಿತ್ತು.
*ಈ ವಿಭಜನೆಯಿಂದ ಇಲಾಖೆ ಮಹತ್ವ ಕುಸಿಯಿತೆ?
ಒಟ್ಟಿಗೆ ಇದ್ದರೆ ಮಹತ್ವ, ಬೇರೆಯಾದರೆ ಮಹತ್ವ ಇರಲ್ಲ ಎಂದು ಹೇಳಲು ಇಷ್ಟಪಡುವುದಿಲ್ಲ. ಇಲಾಖೆ ವಿಭಜನೆ ರಾಜಕೀಯ ತೀರ್ಮಾನ. ರಾಜಕೀಯ ಕಾರಣಕ್ಕಾಗಿ ಆಯಾ ಸಂದರ್ಭದಲ್ಲಿ ಸೂಕ್ತ ಎನಿಸಿದ ತೀರ್ಮಾನ ಕೈಗೊಂಡಿರುತ್ತಾರೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಎಷ್ಟೇ ಇಲಾಖೆಗಳಾದರೂ ಜನರಿಗೆ ಅವರ ಹಕ್ಕಗಳನ್ನು ನೀಡಲು ಅವಕಾಶ ಇದ್ದೆ ಇದೇಯಲ್ಲ.
*ಆದರೂ, ವಿಭಜಿತ ಇಲಾಖೆಗೆ ಮಹದೇವಪ್ಪ ಅವರು ಸಚಿವರಾಗಿದ್ದು...
ನಾನು ಖಾತೆಗಾಗಿ ಯಾರ ಬಳಿಯಾದರೂ ಹೋಗಿ ಗೋಗರೆದು... ಅದು ಕೊಡಿ, ಇದು ಕೊಡಿ ಅಂತ ಕೇಳುವುದನ್ನು ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಮಾಡಿಲ್ಲ. ದೊಡ್ಡದು ಕೊಟ್ಟರು ಸಂತೋಷಾನೂ ಇಲ್ಲ. ಕಡಿಮೆ ಕೊಟ್ಟರು ಅಂತ ಬೇಸರಾನೂ ಇಲ್ಲ. ನನಗೆ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು ಎಂಬುದು ನನ್ನ ನಿಲುವು. ಅದನ್ನು ಮಾಡುತ್ತಾ ಬಂದಿದ್ದೇನೆ.
*ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ಸರ್ಕಾರ ಅದನ್ನು ನಿಭಾಯಿಸಲು ದಲಿತರ (ಎಸ್‌ಇಪಿ ಟಿಎಸ್‌ಪಿ ಅಡಿ ಮೀಸಲಿಟ್ಟ) ಹಣ ಬಳಕೆ ಮಾಡುತ್ತಿದೆ ಅಂತ ಆರೋಪವಿದೆ?
ಇಂತಹ ಆರೋಪ ಮಾಡುವ ಬಿಜೆಪಿಯವರಿಗೆ ಸಂವಿಧಾನ ಬದ್ಧ ನಡವಳಿಕೆಯೇ ಗೊತ್ತಿಲ್ಲ. ಎಸ್‌ಇಪಿ ಟಿಎಸ್‌ಪಿ ಕಾಯ್ದೆಯ ಪರಿಕಲ್ಪನೆಯೇ ಅವರಿಗೆ ಇಲ್ಲ. ನಮ್ಮ ಸರ್ಕಾರ ಜಾರಿಗೆ ತಂದ ಈ ಕಾಯ್ದೆಯ ಅಡಿಯಲ್ಲಿ ದೊರಕಿದ ಹಣವನ್ನು ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಚುನಾವಣೆ ಸಮೀಪಿಸಿದಾಗ ಎಸ್‌ಇಪಿ ಟಿಎಸ್‌ಪಿಯ ಸುಮಾರು 10 ಸಾವಿರ ಕೋಟಿ ರು. ಅನ್ನು ಅನ್ಯ ಬಾಬ್ತಿಗೆ ನಗರಾಭಿವೃದ್ಧಿ, ನೀರಾವರಿ, ಸಣ್ಣ ನೀರಾವರಿ, ಲೋಕೋಪಯೋಗಿಯಂತಹ ಪ್ರಮುಖ ಇಲಾಖೆಗಳ ಮೂಲಕ ಡೈವರ್ಟ್ ಮಾಡಿದರು. ಹೀಗೆ ಮಾಡಲು ಅವರಿಗೆ ಅವಕಾಶ ದೊರಕಿದ್ದು ಕಾಯ್ದೆಯ 7ಡಿಯಿಂದಾಗಿ. ಈ ಉಪ ನಿಯಮದ ಪ್ರಕಾರ ತುರ್ತು ಕೆಲಸಕ್ಕಾಗಿ ಶೇ. 50ರಷ್ಟು ದಲಿತರು ಇರುವ ಪ್ರದೇಶಗಳಲ್ಲಿ ಕಾಮಗಾರಿಗೆ ಬಳಸಲು ಅವಕಾಶ ನೀಡುತ್ತದೆ. ಈ ನ್ಯೂನತೆ ಗೊತ್ತಾದ ನಂತರ ಕಾಯ್ದೆಯಲ್ಲಿನ 7ಡಿಯನ್ನು ತೆಗೆದುಹಾಕಲು ತೀರ್ಮಾನಿಸಿದ್ದೇವೆ. ಇನ್ನು ಇಂತಹ ದುರ್ಬಳಕೆ ಸಾಧ್ಯವಿಲ್ಲ.
*ಕಾಯ್ದೆಯ 7 ಡಿ ಮಾತ್ರವಲ್ಲದೆ, 7 ಬಿ ಹಾಗೂ 7ಸಿಯಲ್ಲೂ ಲೋಪವಿದೆ ಎಂದು ದಲಿತ ಸಂಘಟನೆಗಳು ಆರೋಪಿಸುತ್ತವೆ?
ದಲಿತರ ಹಕ್ಕುಗಳು ದುರ್ಬಳಕೆಯಾಗುವಂತಹ ಯಾವ್ಯಾವ ನ್ಯೂನತೆಯಿದೆಯೋ ಅವೆಲ್ಲವನ್ನು ಸರಿಪಡಿಸಲು ಸರ್ಕಾರ ಕಾರ್ಯ ಪ್ರವೃತವಾಗಿದೆ.
*ಆದರೆ, ಗ್ಯಾರಂಟಿ ಯೋಜನೆಗಳಿಗೆ 11 ಸಾವಿರ ಕೋಟಿ ರು. ದಲಿತ ಹಣ ಬಳಕೆಯಾಗಿದೆ ಎಂಬ ಆರೋಪವಿದೆಯಲ್ಲ?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಯ ದಲಿತ ಫಲಾನುಭವಿಗಳಿಗೆ ಈ ಹಣ ಬಳಕೆಯಾಗುತ್ತಿದೆ. ಎಷ್ಟು ಬಳಕೆಯಾಗುತ್ತದೆ ನೋಡಿ, ಉಳಿಕೆ ಹಣವನ್ನು ನಾವು ವಾಪಸ್ ಪಡೆಯುತ್ತೇವೆ. ಆದರೆ, ಶಕ್ತಿ ಯೋಜನೆಗೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಬಳಕೆಯಾಗುವ ಹಣದಲ್ಲಿ ದಲಿತರಿಗೆ ಎಷ್ಟು ವೆಚ್ಚವಾಗುತ್ತಿದೆ ಎಂಬು ಮಾಹಿತಿ ಸದ್ಯಕ್ಕೆ ಸಿಗುತ್ತಿಲ್ಲ. ಹೀಗಾಗಿ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಬಂದರೆ ಆ ಲೆಕ್ಕವೂ ಸಿಗುತ್ತದೆ. ಅದನ್ನು ಮಾಡುವಂತೆ ಒತ್ತಡ ಹಾಕುತ್ತಿದ್ದೇವೆ. ಒಟ್ಟಾರೆ ಈ ಹಣ ದಲಿತರಿಗೆ ಬಳಕೆಯಾಗುತ್ತದೆ. ಉಳಿಕೆಯಾದರೆ ಅದನ್ನು ವಾಪಸ್ ಪಡೆಯುತ್ತೇವೆ.
ಯುವಜನತೆಗೆ ಸಂವೇದನಾಶೀಲತೆ ಮೂಡಿಸಿದ್ದು ಪುನೀತ್ ರಾಜ್‌ಕುಮಾರ್: ಸಚಿವ ಮಹದೇವಪ್ಪ
* ದಲಿತ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣ ಶೇ. 3ರಷ್ಟು ಮಾತ್ರವಿದೆಯಲ್ಲ?
ಹೌದು, ಉತ್ತರ ಪ್ರದೇಶದಲ್ಲಿ ಶಿಕ್ಷೆ ಪ್ರಮಾಣ ಶೇ. 67ರಷ್ಟಿದೆ. ಆದರೆ, ಪ್ರಗತಿಪರ ಎನಿಸಿರುವ ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಕೇವಲ ಶೇ. 3ರಷ್ಟಿದೆ. ಪೊಲೀಸ್ ಇಲಾಖೆ ಅಡಿ ಕಾರ್ಯ ನಿರ್ವಹಿಸುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ಈ ಬಗ್ಗೆ ಕೇವಲ ತನಿಖೆ ಮಾಡಿ ಅದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಅಧಿಕಾರ ಮಾತ್ರ ಇರುವುದು ಇದಕ್ಕೆ ಕಾರಣ. ಈ ವಿಭಾಗಕ್ಕೆ ಪೊಲೀಸ್ ಠಾಣೆಯ ಅಧಿಕಾರ ನೀಡಿದರೆ, ಆಗ ತನಿಖೆ ಮಾಡಿ, ಎಫ್‌ಐಆರ್ ದಾಖಲಿಸಿ ಪ್ರಕರಣ ಇತ್ಯರ್ಥದವರೆಗೂ ನಿಗಾವಹಿಸುವ ಶಕ್ತಿ ದೊರೆಯುತ್ತದೆ. ಇದರಿಂದ ಶಿಕ್ಷೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಡಿಸಿಆರ್‌ಇ ಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಗೃಹ ಸಚಿವರೊಂದಿಗೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರ ಸಚಿವ ಸಂಪುಟಕ್ಕೆ ಶೀಘ್ರ ತಂದು ನಿರ್ಧಾರ ಪ್ರಕಟಿಸಲಾಗುವುದು.
* ಮುಖ್ಯಮಂತ್ರಿ ಆಯ್ಕೆಗೂ ಮುನ್ನ ದೆಹಲಿಯಲ್ಲಿ ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗಿತ್ತ?
ಈ ವಿಚಾರದ ಬಗ್ಗೆ ವೀರಪ್ಪ ಮೊಯ್ಲಿ ಅವರು ಏನು ಹೇಳಿದ್ದಾರೆ? ಪವರ್ ಶೇರಿಂಗ್ ವಿಷಯ ಪ್ರಸ್ತಾಪವೇ ಆಗಿಲ್ಲ ಎಂದು ಹೇಳಿದ್ದಾರಲ್ಲವೇ? ಪಕ್ಷದ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ ಹೇಳಿದ ಮೇಲೆ ಮುಗಿಯಿತಲ್ಲ. ವೈಯಕ್ತಿಕವಾಗಿ ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ.