ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್: ಕಳ್ಳನಿಗೆ ಪಿಳ್ಳೆ ನೆವ ರಾಜ್ಯ ಸರ್ಕಾರದ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ
ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ಕೇಸ್ ವಾಪಾಸ್ ಪಡೆಯುವ ಸಂಪುಟ ನಿರ್ಣಯ ವಿಚಾರದಲ್ಲಿ ನಮ್ಮ ಸರ್ಕಾರ ಸಿಬಿಐಗೆ ವಹಿಸಿರುವುದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಹಾಗೇನಾದ್ರೂ ಆಗಿದ್ದರೆ ನ್ಯಾಯಾಲಯದಲ್ಲಿ ಇವರು ವಾದ ಮಾಡಬೇಕಿತ್ತಲ್ಲ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪ್ರಶ್ನಿಸಿದರು.
ಕಲಬುರಗಿ (ನ.25): ಡಿಕೆ ಶಿವಕುಮಾರ ವಿರುದ್ಧದ ಸಿಬಿಐ ಕೇಸ್ ವಾಪಾಸ್ ಪಡೆಯುವ ಸಂಪುಟ ನಿರ್ಣಯ ವಿಚಾರದಲ್ಲಿ ನಮ್ಮ ಸರ್ಕಾರ ಸಿಬಿಐಗೆ ವಹಿಸಿರುವುದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಹಾಗೇನಾದ್ರೂ ಆಗಿದ್ದರೆ ನ್ಯಾಯಾಲಯದಲ್ಲಿ ಇವರು ವಾದ ಮಾಡಬೇಕಿತ್ತಲ್ಲ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪ್ರಶ್ನಿಸಿದರು.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ವರ್ತಿಸುತ್ತಿದೆ. ಈ ವಿಚಾರದಲ್ಲಿ ತಪ್ಪು ಆಗಿದ್ದರೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಬೇಕಿತ್ತು. ಆಗ ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ? ನಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಕಾನೂನು ಪ್ರಕಾರವಾಗಿ ಕೆಲಸ ಮಾಡಿದ್ದೇವೆ. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ನ್ಯಾಯಾಲಯ ಅದನ್ನು ಐದೇ ನಿಮಿಷದಲ್ಲಿ ತಿರಸ್ಕಾರ ಮಾಡುತ್ತಿತ್ತು. ಈ ಹಿಂದೆಯೂ ಹಲವು ಸಿಬಿಐ ಕೇಸ್ ಗಳನ್ನು ಬೇರೆ ಬೇರೆ ಸರ್ಕಾರಗಳು ಹಿಂದೆ ಪಡೆಯಲು ಪ್ರಯತ್ನಿಸಿ ವಿಫಲವಾಗಿವೆ ಹಾಗಾಗಿ ಈ ವಿಚಾರದಲ್ಲೂ ಸಿಬಿಐ ತನಿಖೆಯೇ ಮುಂದುವರಿಯುತ್ತದೆ.ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದರು.
ಡಿಕೆಶಿ ಕೇಸ್ ಭವಿಷ್ಯ ಸಿಬಿಐ, ಕೋರ್ಟ್‌ಗೆ ಬಿಟ್ಟದ್ದು: ಸಚಿವ ಪರಮೇಶ್ವರ್
ಡಿಕೆ ಶಿವಕುಮಾರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಕಾರಣಕ್ಕಾಗಿ ಕೇಸ್ ಆಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಎಲ್ಲಿಂದ ಗಳಿಕೆಯಾಗಿದೆ? ಎಲ್ಲಿಂದ ಬಂತು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಉತ್ತರ ಕೊಡಬೇಕು ತಾನೇ? ಯಾಕೆ ಹೆದರಿಕೊಳ್ಳುತ್ತಿದ್ದಾರೆ? ಯಾಕೆ ಓಡಿ ಹೋಗುತ್ತಿದ್ದಾರೆ? ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರಗೆ ತಿರುಗೇಟು ನೀಡಿದರು.
ಇದೊಂದೇ ವಿಚಾರ ಅಲ್ಲ. ಜನಗಳಿಗೆ ಗ್ಯಾರಂಟಿ ಆಮಿಷೆ ತೋರಿಸಿ ಅಧಿಕಾರಕ್ಕೆ ಬಂದಾಗಿಂದಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಅದರ ಭಾಗವಾಗಿ ಡಿಕೆಶಿ ವಿರುದ್ಧ ಈ ಕೇಸನ್ನೂ ಸಿಬಿಐ ತನಿಖೆಯಿಂದ ಹಿಂಪಡೆಯಲು ಮುಂದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
ಒಲ್ಲದ ಮನಸ್ಸಿನಿಂದ ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆಯಿತಾ ಸಿದ್ದರಾಮಯ್ಯ ಸಂಪುಟ?
ಸೋಮಣ್ಣ ಅಸಮಾಧಾನ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ವಿ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸೋಮಣ್ಣ ಅವರು ಪದೇ ಪದೇ ಹೇಳುತ್ತಿದ್ದಾರೆ. ಸೋಮಣ್ಣ ಇಂದು, ಮುಂದು ಎಂದೆಂದೂ ನಮ್ಮ ಜೊತೆಯೇ ಇರುತ್ತಾರೆ. ಅವರ ನೋವು, ಅವರ ಅಳಲು ದೂರ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.