ನಾವು ಹೈಕೋರ್ಟ್​ಗೆ ಸಂಪುಟ ಸಭೆ ತೀರ್ಮಾನವನ್ನು ಸಲ್ಲಿಸುತ್ತೇವೆ. ಶಾಸಕರೊಬ್ಬರ ಮೇಲಿನ ತನಿಖೆಗೆ ಮೊದಲು ಸ್ಪೀಕರ್‌ ಅನುಮತಿ ಪಡೆದುಕೊಳ್ಳಬೇಕು ಎಂಬುದು ವ್ಯವಸ್ಥೆಯಲ್ಲಿರುವ ನಿಯಮ. ಡಿ.ಕೆ.ಶಿವಕುಮಾರ್‌ ವಿರುದ್ಧ ತನಿಖೆಗೆ ನೀಡುವ ವೇಳೆ ಈ ನಿಯಮ ಪಾಲನೆ ಮಾಡಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 

ಬೆಂಗಳೂರು(ನ.25):  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಾನೂನುಬಾಹಿರವಾಗಿ ಸಿಬಿಐ ತನಿಖೆಗೆ ನೀಡಿರುವ ಪ್ರಕರಣ ಹಿಂಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದೆ. ಸಂಪುಟ ಸಭೆಯ ತೀರ್ಮಾನವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಮುಂದೆ ನ್ಯಾಯಾಲಯ ಹಾಗೂ ಸಿಬಿಐ ಏನು ಮಾಡುತ್ತವೆ ಎಂಬುದು ವ್ಯವಸ್ಥೆಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್‌ ಮೇಲಿನ ಸಿಬಿಐ ತನಿಖೆ ಹಿಂಪಡೆಯುವ ಕುರಿತು ಗೃಹ ಇಲಾಖೆಯು ಪ್ರಸ್ತಾವನೆ ಮಂಡಿಸಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿತ್ತು. ಇದನ್ನು ನ್ಯಾಯಾಲಯ ಒಪ್ಪುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಎಜಿ ಒಪ್ಪಿಗೆ ನಂತರವೇ ಡಿಕೆಶಿ ಕೇಸ್‌ ಸಿಬಿಐಗೆ: ಯಡಿಯೂರಪ್ಪ

ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಲು ಮೌಖಿಕ ಆದೇಶ ಕೊಟ್ಟಿದ್ದರು. ಅದು ಕಾನೂನು ಬಾಹಿರ ಹಾಗೂ ರಾಜಕೀಯ ಪ್ರೇರಿತ ಆಗಿರಲಿಲ್ಲವೇ? ನಾವು ತನಿಖೆ ಹಿಂಪಡೆಯುವ ನಿರ್ಧಾರವನ್ನು ಕಾನೂನಿನ ಚೌಕಟ್ಟಿನಲ್ಲಿ ಮಾಡಿದ್ದೇವೆ. ನಮ್ಮ ಇತಿ ಮಿತಿಗಳಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ನಾವು ಹೈಕೋರ್ಟ್​ಗೆ ಸಂಪುಟ ಸಭೆ ತೀರ್ಮಾನವನ್ನು ಸಲ್ಲಿಸುತ್ತೇವೆ. ಶಾಸಕರೊಬ್ಬರ ಮೇಲಿನ ತನಿಖೆಗೆ ಮೊದಲು ಸ್ಪೀಕರ್‌ ಅನುಮತಿ ಪಡೆದುಕೊಳ್ಳಬೇಕು ಎಂಬುದು ವ್ಯವಸ್ಥೆಯಲ್ಲಿರುವ ನಿಯಮ. ಡಿ.ಕೆ.ಶಿವಕುಮಾರ್‌ ವಿರುದ್ಧ ತನಿಖೆಗೆ ನೀಡುವ ವೇಳೆ ಈ ನಿಯಮ ಪಾಲನೆ ಮಾಡಿಲ್ಲ ಎಂದು ಹೇಳಿದರು.